ಕಾಸರಗೋಡು, ಫೆ. 22: ಕಾಸರಗೋಡಿ ಪೆರಿಯದಲ್ಲಿ ಯುವಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಹಲವು ಸಲ ಹೇಳಿಕೆ ಬದಲಾಯಿಸಿದ್ದಾನೆ. ಯುವಕಾಂಗ್ರೆಸ್ ಕಾರ್ಯಕರ್ತರಾದ ಶರತ್ಲಾಲ್ ಮತ್ತು ಕೃಪೇಶ್ ಕೊಲೆ ಪ್ರಕರಣದಲ್ಲಿ ಬಂಧಿಸಲಾದ ಸಿಪಿಎಂನ ಸ್ಥಳೀಯ ಸಮಿತಿ ಸದಸ್ಯನಾಗಿದ್ದ ಪೀತಾಂಬರನ್ ಎಂಬಾತ ಹಲವು ಸಲ ಹೇಳಿಕೆಯನ್ನು ಬದಲಿಸಿ ನೀಡಿದ್ದಾನೆ.
ಫೀತಾಂಬರನ್ ಮೊದಲು ಶರತ್ಲಾಲ್ ಮತ್ತು ಕೃಪೇಶ್ರನ್ನು ಕಲ್ಲಿನಿಂದ ಹೊಡೆದು ಕೊಲೆಮಾಡಲು ಯತ್ನಿಸಿದ್ದೇನೆ ಎಂದು ಹೇಳಿದ್ದಾರೆ. ನಂತರ ತಾನೇ ತಲವಾರಿನಿಂದ ಹಲ್ಲೆ ನಡೆಸಿದ್ದೇನೆ ಎಂದು ಹೇಳಿದ್ದಾನೆ. ಇದಾದ ಬಳಿಕ ತನ್ನೊಂದಿಗಿದ್ದವರು ಇಬ್ಬರನ್ನು ಮಾರಕಾಯುಧಗಳಿಂದ ಹಲ್ಲೆ ಮಾಡಿದರು ಎಂದಿದ್ದಾನೆ. ಪದೇ ಪದೇ ಹೇಳಿಕೆ ಬದಲಾಯಿಸುತ್ತಿರುವ ಪೀತಾಂಬರನ್ನ ಹೇಳಿಕೆಯ ಬಗ್ಗೆ ಪೊಲೀಸರಿಗಿನ್ನೂ ಸ್ಪಷ್ಟ ಚಿತ್ರಣ ದೊರಕಿಲ್ಲ. ಅವನ ಮಾತನ್ನು ಪೊಲೀಸರು ನಂಬುವ ಸ್ಥಿತಿಯಲ್ಲಿಲ್ಲ. ಎಲ್ಲರೂ ಒಟ್ಟಾಗಿ ಕೃಪೇಶ್, ಶರತ್ರನ್ನು ಹತ್ಯೆಗೈದಿದ್ದಾರೆಂದು ಪೊಲೀಸರು ಪರಿಗಣಿಸಿದ್ದಾರೆ. ಇದೇ ವೇಳೆ ಪೀತಾಂಬರನ್ ಹೊರಗಿನ ವ್ಯಕ್ತಿಗಳಿಗೆ ಹೆದರುತ್ತಿರುವಂತೆ ವ್ಯಕ್ತವಾಗುತ್ತಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.. ಕೊಲೆಗೆ ರಾಜಕೀಯ ದ್ವೇಷ ಕಾರಣವಾಗಿದೆ ಎಂದು ಪೊಲೀಸ್ ರಿಮಾಂಡ್ ವರದಿಯಲ್ಲಿ ಸೂಚಿಸಲಾಗಿದೆ. ಕೊಲೆಯ ಹಿಂದೆ ಸಿಪಿಎಂ ಕಾರ್ಯಕರ್ತರಿದ್ದಾರೆ ಮತ್ತು ಕೊಲ್ಲುವ ಉದ್ದೇಶದಿಂದಲೇ ಅವರು ಶರತ್ ಮತ್ತು ಕೃಪೇಶ್ರ ಮೇಲೆ ದಾಳಿ ಮಾಡಿದ್ದಾರೆಂದು ಪೊಲೀಸರು ವರದಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಇನ್ನಷ್ಟು ಬಂಧನ ನಡೆಯಬಹುದು.












