ಸನ್ಮಾರ್ಗ ವಾರ್ತೆ
✍️ಅಮಾನ್ ಕೆ.
ಆರ್ ಎಸ್ ಎಸ್ ಮತ್ತು ಹಿಂದೂ ಧಾರ್ಮಿಕ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಮತ್ತೊಂದು ತಿರುವನ್ನು ಪಡೆದಿದೆ. ಬಾಹ್ಯ ನೋಟಕ್ಕೆ ಎಲ್ಲವೂ ಚೆನ್ನಾಗಿದೆ ಎಂದು ಅನಿಸಿದ್ರೂ ಒಳಗೊಳಗೆ ಸಂಘ ಪರಿವಾರ, ಸ್ವಾಮೀಜಿಗಳು ಮತ್ತು ಶಂಕರಾಚಾರ್ಯರ ನಡುವೆ ಅಸಹನೆ ಕುದಿಯುತ್ತಿದೆ ಅನ್ನುವುದು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಹೇಳಿಕೆಯಿಂದ ಗೊತ್ತಾಗುತ್ತಿದೆ.
ಆರ್ ಎಸ್ ಎಸ್ ಮುಖಂಡ ಭಾಗವತ್ ಅವರಿಗೆ ಹಿಂದುಗಳ ನೋವು ಗೊತ್ತಿಲ್ಲ. ಹಿಂದುಗಳ ದುಃಖ ಭಾಗವತ್ ಗೆ ಅರ್ಥವಾಗಿಲ್ಲ. ಅವರ ಹೇಳಿಕೆಯಿಂದಲೇ ಇದು ಗೊತ್ತಾಗುತ್ತದೆ ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.
ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ಸಿಟ್ಟು ತರಿಸಿದ್ದು ಭಾಗವತ್ ಅವರ ಇತ್ತೀಚಿನ ಹೇಳಿಕೆ. ಅಯೋಧ್ಯೆಯಂತಹ ವಿವಾದಗಳನ್ನು ಮತ್ತೆ ಮತ್ತೆ ಹುಟ್ಟು ಹಾಕಬೇಕಿಲ್ಲ ಎಂದವರು ಕಳೆದ ವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು. ಮಂದಿರಗಳ ಕುರಿತಂತೆ ಈ ಹಿಂದೆ ಏನು ನಡೆದಿದೆಯೋ ಅದಕ್ಕೆ ಈಗಿನ ಮುಸ್ಲಿಮರು ಹೊಣೆಯಲ್ಲ, ಮಸೀದಿಗಳ ಅಡಿಯಲ್ಲಿ ಮಂದಿರವನ್ನು ಹುಡುಕಬೇಕಾಗಿಲ್ಲ. ಸಂಘರ್ಷಕ್ಕೆ ಎಡೆ ಮಾಡುವಂತಹ ವಾತಾವರಣವನ್ನು ನಿರ್ಮಿಸಬಾರದು ಎಂಬ ಅರ್ಥದಲ್ಲಿ ಭಾಗವತ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಹಾಗಂತ ಭಾಗವತ್ ಅವರು ಹೀಗೆ ಹೇಳುವುದು ಇದೇ ಮೊದಲಲ್ಲ. 2022 ರಲ್ಲಿ ಕೂಡ ಅವರು ಇಂಥದ್ದೇ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು.
ಪ್ರತಿ ಮಸೀದಿ ಅಡಿಯಲ್ಲಿ ಶಿವಲಿಂಗವನ್ನು ಹುಡುಕುವುದು ಸಲ್ಲದು ಎಂದವರು ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಎರಡನೇ ಬಾರಿ ಅವರು ಈ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಿಗೆ ಹಿಂದೂ ಸಮುದಾಯದ ಸ್ವಾಮೀಜಿಗಳು ಮತ್ತು ಶಂಕರಾಚಾರ್ಯರು ರಂಗಕ್ಕಿಳಿದಿದ್ದಾರೆ..
ಈ ದೇಶದಲ್ಲಿ ಅಸಂಖ್ಯ ಮಂದಿರಗಳನ್ನು ಕೆಡವಲಾಗಿದೆ. ಭಾಗವತ್ ಗೆ ಹಿಂದುಗಳ ದುಃಖ ಅರ್ಥವಾಗಿಲ್ಲ. ಅವರ ನೋವು ಗೊತ್ತಾಗಿಲ್ಲ ಎಂದು ಶಂಕರಾಚಾರ್ಯ ಸ್ವಾಮಿ ಅಭಿಮುಕ್ತೇಶ್ವರಾನಂದ ಸರಸ್ವತಿ ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ವಿಷಯದಲ್ಲಿ ಕೂಡ ಶಂಕರಾಚಾರ್ಯರು ಬೇರೆಯದೆ ನಿಲುವನ್ನ ತಳೆದಿದ್ದರು. ರಾಮಮಂದಿರ ಉದ್ಘಾಟನೆಯ ಪರ ಆರ್ ಎಸ್ ಎಸ್ ನಿಂತಿದ್ದರೆ ಅದಕ್ಕೆ ವಿರುದ್ಧವಾಗಿ ಶಂಕರಾಚಾರ್ಯ ಮಠಗಳು ನಿಂತಿದ್ದುವು. ಮುಖ್ಯವಾಗಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಪುರಿ ಮತ್ತು ಉತ್ತರಾಖಂಡದ ಶಂಕರಾಚಾರ್ಯ ಮಠಗಳು ಕೂಡ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿತ್ತು. ಮಾತ್ರವಲ್ಲ ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಿರುಸಿನ ಚರ್ಚೆಗಳಾಗಿತ್ತು.
ಬಹಿರಂಗಕ್ಕೆ ಸಂಘ ಪರಿವಾರಗಳೆಲ್ಲ ಒಗ್ಗಟ್ಟಿನಿಂದ ಇರುವಂತೆ ಕಂಡರೂ ಪರಿವಾರದ ಇತರ ಸಂಘಟನೆಗಳ ಮೇಲೆ ಆರ್ ಎಸ್ ಎಸ್ ನ ಹಿಡಿತ ದುರ್ಬಲವಾಗುತ್ತಿದೆ ಅನ್ನುವುದು ಸ್ಪಷ್ಟವಾಗುತ್ತಿದೆ. ಈ ಹಿಂದೆ ಎರಡೆರಡು ಬಾರಿ ಮುಸ್ಲಿಂ ಸಂಘಟನೆಗಳ ನಾಯಕರ ಜೊತೆ ಆರ್ಎಸ್ ಎಸ್ ಮಾತುಕತೆ ನಡೆಸಿತ್ತು. ಆದರೆ ಆರ್ ಎಸ್ ಎಸ್ ನ ಈ ಮಾತುಕತೆಯ ಮದ್ಯೆಯೇ ಈ ದೇಶದಲ್ಲಿ ಮುಸ್ಲಿಮರ ವಿರುದ್ಧ ದಾಳಿ ದ್ವೇಷ ಭಾಷಣ ಹತ್ಯೆ ಇತ್ಯಾದಿಗಳು ನಿರಂತರ ನಡೆದಿದ್ದುವು ಮತ್ತು ನಡೀತಾ ಇದೆ. ಆರ್ ಎಸ್ ಎಸ್ ಒಂದು ಹೇಳಿಕೆಯನ್ನು ಕೊಡುವಾಗ ಅದಕ್ಕೆ ತದ್ವಿರುದ್ಧ ವರ್ತನೆಗಳನ್ನು ಅದರ ಪರಿವಾರದ ಸಂಘಟನೆಗಳು ಮಾಡುತ್ತಿವೆ ಮುಸ್ಲಿಮರನ್ನು ದ್ವೇಷಿಸುವ ವಿಷಯದಲ್ಲಿ ಆರ್ ಎಸ್ ಎಸ್ ಮೃದುವಾದರೆ ಆರ್ಎಸ್ಎಸ್ ಅನ್ನೇ ನಿರಾಕರಿಸುವ ಮತ್ತು ನಿರ್ಲಕ್ಷಿಸುವ ಸಂದೇಶವನ್ನು ಸಂಘ ಪರಿವಾರಗಳು ಈ ಮೂಲಕ ನೀಡುತ್ತಿವೆ ಎಂದೇ ಹೇಳಬೇಕಾಗಿದೆ. ಇದೀಗ ಆರ್ ಎಸ್ ಎಸ್ ಮುಖಂಡರ ಹೇಳಿಕೆಯನ್ನೇ ವಿವಿಧ ಸ್ವಾಮೀಜಿಗಳು ಮತ್ತು ಧಾರ್ಮಿಕ ಮುಖಂಡರು ಪ್ರಶ್ನಿಸುವುದನ್ನು ನೋಡಿದರೆ ಆರ್ ಎಸ್ ಎಸ್ ನ ಹಿಡಿತ ದುರ್ಬಲವಾಗುತ್ತಿದೆ ಎಂದೇ ಅನಿಸುತ್ತಿದೆ.












