ಪಿಎಫ್ಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಕೆ‌.ಎಂ. ಶರೀಫ್ ನಿಧನ

0
649

ಸನ್ಮಾರ್ಗ ವಾರ್ತೆ

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ) ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದ ಕೆ.ಎಂ. ಶರೀಫ್ ಇಂದು ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.

ಶ್ವಾಸಕೋಶ, ರಕ್ತದೊತ್ತಡ, ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನದ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ಪಿ.ಎಫ್.ಐ. ರಾಷ್ಟ್ರೀಯ ಕಾರ್ಯದರ್ಶಿ ಅನಿಸ್‌ ಅಹ್ಮದ್‌ ತಿಳಿಸಿದ್ದಾರೆ. ಖ್ಯಾತ ಧಾರ್ಮಿಕ ವಿದ್ವಾಂಸ ದಿವಂಗತ ಮಿತ್ತಬೈಲ್ ಅಬ್ದುಲ್ ಹಾಜಿ ಮತ್ತು ನಫೀಸಾ ದಂಪತಿಯ ಪುತ್ರರಾದ ಕೆ.ಎಂ.ಶರೀಫ್ 1964 ಸೆಪ್ಟಂಬರ್ 1ರಂದು ಜನಿಸಿದ್ದರು.

ಕರ್ನಾಟಕದಲ್ಲಿ ಕೆ.ಎಫ್.ಡಿ, ಸಂಘಟನೆಯ ಆರಂಭದಲ್ಲೇ ಸದಸ್ಯತ್ವ ಪಡೆದ ಅವರು ಬಳಿಕ ಕೆ.ಎಫ್.ಡಿ. ರಾಜ್ಯಾಧ್ಯಕ್ಷರೂ ಆಗಿದ್ದರು. ಆ ಬಳಿಕ ಕೆ.ಎಫ್.ಡಿ. ಸಂಘಟನೆ ಪಿ.ಎಫ್.ಐ.ಯೊಂದಿಗೆ ವಿಲೀನ ಆದ ಬಳಿಕ ಪಿ.ಎಫ್.ಐ. ರಾಜ್ಯಾಧ್ಯಕ್ಷರಾಗಿದ್ದರು. ಬಳಿಕ ಅವರು ಪಿ.ಎಫ್.ಐ. ರಾಷ್ಟ್ರಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಉತ್ತಮ ವಾಗ್ಮಿಯೂ ಆಗಿದ್ದ ಇವರು, ಅವರು ಪ್ರಸಕ್ತ ಪಿ.ಎಫ್.ಐ, ರಾಷ್ಟ್ರೀಯ ಕೋಶಾಧಿಕಾರಿಯೂ, ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿದ್ದರು.

ಅಲ್ಪಸಂಖ್ಯಾತ ಸಮುದಾಯಗಳ ಮತ್ತು ದಲಿತ ಸಮುದಾಯದ ಒಗ್ಗಟ್ಟು, ರಾಜಕೀಯ ಅಸ್ತಿತ್ವದ ಬಗ್ಗೆ ತನ್ನದೇ ಪರಿಕಲ್ಪನೆಯನ್ನು ಹೊಂದಿದ್ದ ಕೆ.ಎಂ.ಶರೀಫ್, ರಾಜಕೀಯ ಪಕ್ಷವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.)ದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಪಿ.ಎಫ್.ಐ.ಯನ್ನು ಉತ್ತರ ಭಾರತದಾದ್ಯಂತ ವಿಸ್ತರಿಸಲು ಕೆ.ಎಂ.ಶರೀಫ್ ನಾಯಕತ್ವ ವಹಿಸಿದ್ದ ತಂಡದ ಪಾತ್ರ ಅತೀ ದೊಡ್ಡದು ಎಂದು ಪಿ.ಎಫ್.ಐ. ತಿಳಿಸಿವೆ.

ಉಪ್ಪಿನಂಗಡಿಯ ಪ್ರತಿಷ್ಠಿತ ಕುಟುಂಬದ ಸಿ.ಎಚ್.ಉಮರ್ ಎಂಬವರ ಪುತ್ರಿ ಫಾತಿಮಾ ಎಂಬವರನ್ನು ವಿವಾಹವಾಗಿದ್ದ ಕೆ.ಎಂ.ಶರೀಫ್ ಅವರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್ ಸಂತಾಪ:
ಪಿಎಫ್ಐ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಕೆ.ಎಂ. ಶರೀಫ್ ರವರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ , ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯಾಧ್ಯಕ್ಷ ಅಬ್ದುಸ್ಸಲಾಮ್ ಉಪ್ಪಿನಂಗಡಿ, ದ.ಕ. ಜಿಲ್ಲಾಧ್ಯಕ್ಷ ಸಯೀದ್ ಇಸ್ಮಾಯೀಲ್ ಸಂತಾಪ ಸೂಚಿಸಿದ್ದಾರೆ‌.