ಪಿ.ಎಚ್.ಡಿ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಕಡಿತ: ಆದೇಶ ಹಿಂಪಡೆಯುವಂತೆ ಎಸ್.ಐ.ಓ ಕರ್ನಾಟಕ ಆಗ್ರಹ

0
575

ಸನ್ಮಾರ್ಗ ವಾರ್ತೆ

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯವು ದಿನಾಂಕ 09/11/2020 ರಂದು ಅಲ್ಪಸಂಖ್ಯಾತ ವರ್ಗದ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿ ತಿದ್ದುಪಡಿ ಆದೇಶವನ್ನು ಹೊರಡಿಸಿದೆ. ಸರ್ಕಾರದ ಈ ಕ್ರಮವು ಖಂಡನೀಯವಾದದ್ದು. ಕೊರೋನಾ ಬಿಕ್ಕಟ್ಟನ್ನು ಕಾರಣವಾಗಿಸಿಕೊಂಡು ಕೆಲವು ಷರತ್ತುಗಳೊಂದಿಗೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಘಾತ ನೀಡಿದೆ.

ಅಲ್ಪಸಂಖ್ಯಾತರ ಸಮುದಾಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗದ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ಈ ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ಈ ಯೋಜನೆಯು ಸಮರ್ಪಕವಾಗಿ ಇನ್ನೂ ತಲುಪುತ್ತಿಲ್ಲ. ಕಳೆದ ಹತ್ತು ತಿಂಗಳಿನಿಂದ ಫೆಲೋಶಿಪ್ ಸರಿಯಾಗಿ ನೀಡುತ್ತಿಲ್ಲ ಎಂಬ ಆರೋಪವಿದೆ ಈಗ ಇದ್ದಕ್ಕಿದ್ದಂತೆ ಆರ್ಥಿಕ ಬಿಕ್ಕಟ್ಟು ನೆಪದಲ್ಲಿ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಲಾಗಿದೆ. ಆದರೆ ಆರ್ಥಿಕ ಬಿಕ್ಕಟ್ಟು ಕೇವಲ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಎಂಬುದು ಪ್ರಶ್ನೆಯಾಗಿದೆ?

ಇದರೊಂದಿಗೆ ಪಿ.ಎಚ್.ಡಿ ಮತ್ತು ಎಂ.ಫಿಲ್ ಮಾಡುವವರಿಗೆ ವಾರ್ಷಿಕವಾಗಿ ನೀಡುತ್ತಿದ್ದ 10 ಸಾವಿರ ರೂಗಳ ನಿರ್ವಹಣಾ ವೆಚ್ಚವನ್ನು ಕೂಡಾ ಹಿಂತೆಗೆದುಕೊಂಡಿದೆ. ಸರ್ಕಾರವು ಫೆಲೋಶಿಪ್ ತಿದ್ದುಪಡಿ ಮಾಡಿರುವುದು ವಿದ್ಯಾರ್ಥಿಗಳ ಭವಿಷ್ಯವನ್ನೇ ಮಂಕಾಗಿಸಿದೆ.

ಕೆಲವು ವಿದ್ಯಾರ್ಥಿಗಳು ತಾವು ಮಾಡುತ್ತಿದ್ದ ಉದ್ಯೋಗ ಬಿಟ್ಟು ಸಂಶೋಧನೆಯಲ್ಲಿ ತೊಡಗಿದ್ದಾರೆ. ಫೆಲೋಶಿಪ್ ಮೊತ್ತದಿಂದಲೇ ಶುಲ್ಕ ಪಾವತಿ ಮಾಡುವುದಲ್ಲದೆ ಪುಸ್ತಕಗಳನ್ನು ಕೊಳ್ಳುತ್ತಿದ್ದು ಜೀವನ ನಿರ್ವಹಣೆಯೂ ಇದೇ ಹಣದಿಂದ ಮಾಡುತ್ತಿದ್ದಾರೆ. ರಾಜ್ಯದಲ್ಲಿ 150 ರಿಂದ 160 ಜನ ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಿದ್ದಾರೆ ಅವರೆಲ್ಲರೂ ಈಗ ಸಂಶೋಧನೆಯನ್ನು ಹೇಗೆ ಮುಂದುವರೆಸಿಕೊಂಡು ಹೋಗಬೇಕು ಎಂಬ ಆತಂಕಕ್ಕೆ ಒಳಗಾಗಿದ್ದಾರೆ.

2020-21 ನೇ ಸಾಲಿನಲ್ಲಿಯೇ ಶೇ 44%ರಷ್ಟು ಅನುದಾನ ಕಡಿತಗೊಳಿಸಲಾಗಿದೆ, ಈಗ ಉನ್ನತ ಶಿಕ್ಷಣಕ್ಕೆ ನೀಡುವ ನೆರವನ್ನು ಸಹ ಕಡಿತ ಮಾಡಲಾಗಿದೆ. ಇದು ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಮೇಲಿನ ನಿರ್ಲಕ್ಷ್ಯತನದ ಧೋರಣೆಯಾಗಿದೆ. ಜನರು ಕೊರೋನಾ ಸಂಕಷ್ಟದಲ್ಲಿ ಇರುವಾಗ ವಿದ್ಯಾರ್ಥಿಗಳಿಗೆ ನೆರವಾಗುವುದನ್ನು ಬಿಟ್ಟು ಸರ್ಕಾರ ಗಾಯದ ಮೇಲೆ ಬರೆ ಎಳೆಯಲು ಹೊರಟಿರುವುದು ವಿಷಾದನೀಯ.

ಪಿ.ಎಚ್.ಡಿ ಮಾಡುವ ವಿದ್ಯಾರ್ಥಿಗಳು ಈ ಯೋಜನೆಯ ಅವಧಿಯನ್ನು 3 ರಿಂದ 5 ವರ್ಷಕ್ಕೆ ಏರಿಸಬೇಕು ಎಂಬ ಒತ್ತಾಯ ಮಾಡುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಈ ಆದೇಶ ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದ್ದು ತೀರಾ ಆರ್ಥಿಕವಾಗಿ ಹಿಂದುಳಿದವರಿಗೆ ಇನ್ನೂ ಮಂದೆ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರೆಯುವುದು ಕಷ್ಟಕರವಾಗಿದೆ.

ಬಾಕಿ ಉಳಿದಿರುವ ಫೆಲೋಶಿಪ್ ಹಣ ನೀಡುವುದರ ಜೊತೆಗೆ ಎಂದಿನಂತೆ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆರ್ಥಿಕ ಸಹಾಯ ಮಂದುವರೆಸಬೇಕು. ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಫೆಲೋಶಿಪ್‌ಅನ್ನು ಕಡಿತಗೊಳಿಸಿರುವ ಆದೇಶವನ್ನು ಹಿಂಪಡೆದು ಇನ್ನೂ ಹೆಚ್ಚಿನ ನೆರವನ್ನು ಸರ್ಕಾರ ನೀಡಬೇಕು.

ಸರ್ಕಾರವು ಆದಷ್ಟೂ ಬೇಗ ತನ್ನ ನಿರ್ಧಾರವನ್ನು ಬದಲಿಸಬೇಕು ಹಾಗೂ ತಿದ್ದುಪಡಿ ಆದೇಶವನ್ನು ಹಿಂಪಡೆದು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.