ನ್ಯಾಯಾಂಗ ನಿಂದನೆ ಆರೋಪ: ಕಾಮಿಡಿಯನ್ ಕುನಾಲ್ ಕಮ್ರಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲು ಸುಪ್ರೀಂ ಕೋರ್ಟ್ ಅನುಮತಿ

0
423

ಸನ್ಮಾರ್ಗ ವಾರ್ತೆ

ನವದೆಹಲಿ: ಸುಪ್ರೀಂ ಕೋರ್ಟ್ ವಿರುದ್ಧದ ತಮ್ಮ ವಿವಾದಾತ್ಮಕ ಟ್ವೀಟ್‌ಗಳನ್ನು ಡಿಲೀಟ್ ಮಾಡುವುದಿಲ್ಲ ಎಂಬುದಾಗಿ ಹೊಸ ಟ್ವೀಟ್‌ ಮಾಡಿದ್ದಕ್ಕೆ ಸಂಬಂಧಿಸಿದಂತೆ ಕಾಮಿಡಿಯನ್ ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರು ಶುಕ್ರವಾರ ಅನುಮತಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ಕೀಳಾಗಿ ತೋರಿಸುವ ಉದ್ದೇಶ ಹೊಂದಿದ್ದು, ನ್ಯಾಯಾಂಗದ ಮೇಲೆ ನಿಂದನೆ ಮಾಡುವವರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.

ಕಳೆದ ವಾರ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಜಾಮೀನು ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶವನ್ನು ಟೀಕಿಸಿದ್ದಕ್ಕಾಗಿ ಕಮ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಒಪ್ಪಿಗೆ ನೀಡಿದ್ದರು. ಈಗ ಹೊಸ ಟ್ವೀಟ್‌ಗೆ ಸಂಬಂಧಿಸಿದಂತೆ ಮತ್ತೊಂದು ಕೇಸ್ ದಾಖಲಿಸಲು ಅನುಮತಿ ನೀಡಿದ್ದಾರೆ.