ಗುಂಡು ಹಾರಿಸಿ ಕೊಲ್ಲಲು ಜಾಗ ನಿಗದಿಗೊಳಿಸಿ, ನಾನು ಬರುತ್ತೇನೆ: ಅನುರಾಗ್ ಠಾಕೂರ್ ಗೆ ಉವೈಸಿ ಸವಾಲು

0
1409

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 29: ಗೋಲಿಮಾರೋ (ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿರಿ) ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಗೆ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಸವಾಲು ಹಾಕಿದ್ದು ನನ್ನನ್ನು ಗುಂಡಿಟ್ಟು ಕೊಲ್ಲುವುದಕ್ಕೆ ಒಂದು ಸ್ಥಳವನ್ನು ಭಾರತದಲ್ಲಿ ಆಯ್ಕೆ ಮಾಡಿಟ್ಟುಕೊಳ್ಳಿರಿ ಎಂದು ಗುಡುಗಿದ್ದಾರೆ. ನಿಮ್ಮ ಹೇಳಿಕೆ ನನ್ನ ಹೃದಯದಲ್ಲಿ ಭೀತಿ ಹುಟ್ಟು ಹಾಕುವುದಿಲ್ಲ. ನಿಮ್ಮ ತಾಯಂದಿರು, ಸಹೋದರಿಯರು ಧಾರಾಳ ರಸ್ತೆಗಿಳಿದಿದ್ದಾರೆ. ದೇಶವನ್ನು ರಕ್ಷಿಸಲು ಅವರು ತೀರ್ಮಾನಿಸಿದ್ದಾರೆ ಎಂದು ಉವೈಸಿ ಹೇಳಿದರು. ದಿಲ್ಲಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿ ಬುಧವಾರ ಚುನಾವಣಾ ಆಯೋಗ ಶೋಕಾಸು ನೋಟಿಸು ನೀಡಿತ್ತು. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾಗಿ ಚುನಾವಣಾ ಆಯೋಗ ತಿಳಿಸಿದ್ದು ಗುರುವಾರ ಮಧ್ಯಾಹ್ನದೊಳಗೆ ಉತ್ತರ ನೀಡಬೇಕೆಂದು ಆಯೋಗ ಆದೇಶಿಸಿದೆ.

ಈಶಾನ್ಯ ದಿಲ್ಲಿಯ ರಿತ್ತಾಲದಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರ ಮಾಡುವ ವೇಳೆ ಅನುರಾಗ್ ಠಾಕೂರ್ ಈ ಹೇಳಿಕೆ ನೀಡಿದ್ದರು. ಸಿಎಎ ವಿರುದ್ಧ ದಿಲ್ಲಿಯ ಶಾಹಿನ್ ಭಾಗ್‍ನಲ್ಲಿ ಪ್ರತಿಭಟನೆ ನಡೆಸುವವರನ್ನು ಉದ್ದೇಶಿಸಿ ಸಚಿವರು ಹೇಳಿಕೆ ನೀಡಿದ್ದರು.