ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ‘ಅಪರಾಧ ಪಿತೂರಿ’ಯ ಮೂಲಕ ದೇಶವನ್ನು ‘ಹೈಜಾಕ್’ ಮಾಡಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅಲ್ಲದೆ, ಈ ವ್ಯಕ್ತಿಗಳನ್ನು ಖಂಡಿತ ನ್ಯಾಯದ ಕಟಕಟೆಗೆ ತರುತ್ತೇವೆ ಎಂದು ಅವರು ಹೇಳಿದರು.
‘ಈ ಜನರನ್ನು ಕಾನೂನಿನ ಮುಂದೆ ನಿಲ್ಲಿಸಲಾಗುತ್ತದೆ ಮತ್ತು ಇದು ‘ಇಂಡಿಯಾ’ ಮೈತ್ರಿಕೂಟದ ಗ್ಯಾರಂಟಿ’ಯಾಗಿದೆ ಎಂದು ರಾಜಘಾಟ್ ಕಡೆಗೆ ವಿರೋಧ ಪಕ್ಷದ ನಾಯಕರು ನಡೆಸಿದ ಜಾಥಕ್ಕೂ ಮುನ್ನ ಮಾತನಾಡುತ್ತಾ ಹೇಳಿದರು, ಸುಮಾರು 300ರಷ್ಟು ಸಂಸಂದರು ಶಾಂತಿಯುತ ಧರಣಿ ನಡೆಸಲು ಬಯಸಿದ್ದು ಆದರೆ ಅವರನ್ನು ಮುಂದೆ ಹೋಗದಂತೆ ತಡೆಯಲಾಗಿದೆ ಎಂದು ಆರೋಪಿಸಿದರು. ಪ್ರತಿಭಟನೆಯ ಮೊದಲ ದಿನ ತಮ್ಮನ್ನು ಚುನಾವಣಾ ಆಯೋಗದ ಕಚೇರಿಯ ಬಳಿ ತಡೆಯಲಾಯಿತು ಮತ್ತು ಎರಡನೇ ದಿನ ಜಂತರ್ ಮಂತರ್ ಪ್ರವೆಶಿಸಿದಂತೆ ತಡೆದು “ನಮ್ಮ ಜನರ ಮೇಲೆ ಹಲ್ಲೆ ನಡೆಸಲಾಗಿದೆ” ಎಂದು ಅವರು ದೂರಿದರು.
“ಸತ್ಯ ಏನೆಂದರೆ, ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್ ಮತ್ತು ಗ್ಯಾನೇಶ್ ಕುಮಾರ್ ಕ್ರಿಮಿನಲ್ ಪಿತೂರಿ ನಡೆಸಿ ದೇಶವನ್ನು ಹೈಜಾಕ್ ಮಾಡಿದ್ದಾರೆ. ಸಂವಿಧಾನವನ್ನು ನಾಶಪಡಿಸಿ ವೋಟು ಕಳ್ಳತನ ನಡೆಸಿದ್ದಾರೆೆ” ಎಂದು ರಾಹುಲ್ ಗಾಂಧಿ ಹೇಳಿದರು. “ಅವರನ್ನು ನ್ಯಾಯದ ಕಟಕಟೆಗೆ ತರಲಾಗುವುದು. ಇದು ನಮ್ಮ ಗ್ಯಾರಂಟಿ ಮತ್ತು ನೀವದನ್ನು ಖಂಡಿತಾ ನೋಡಲಿದ್ದೀರಿ” ಎಂದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಇಂಡಿಯಾ’ ಮೈತ್ರಿಕೂಟದ ಎಲ್ಲಾ ಸಂಸತ್ ಸದಸ್ಯರು ಗಾಂಧಿ ಸ್ಮಾರಕಕ್ಕೆ ತೆರಳುತ್ತಿದ್ದು, ಅಲ್ಲಿ ಧರಣಿ ನಡೆಸಿ ಮೋದಿ ಹಾಗೂ ಶಾ ಅವರಿಗೆ ಒಳ್ಳೆಯ ಬುದ್ಧಿ ಸಿಗಲಿ ಎಂದು ಶಾಂತಿಯುತವಾಗಿ ಪ್ರಾರ್ಥಿಸಲಿದ್ದಾರೆ ಎಂದರು. ಬಿಜೆಪಿ ಸರ್ಕಾರವು ಜನರಿಂದ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಖರ್ಗೆ ಆರೋಪಿಸಿದರು. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಂತಹ ಮಹಾನ್ ನಾಯಕರು ದೇಶಕ್ಕೆ ತಂದುಕೊಟ್ಟ ಸ್ವಾತಂತ್ರ್ಯವನ್ನು ಮೋದಿ ಮತ್ತು ಶಾ ಕಸಿದುಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.












