✍️ ಎಸ್.ಎಚ್. ನದಾಫ
ನಿವೃತ್ತ ಠಾಣಾಧಿಕಾರಿ, ಅಗ್ನಿಶಾಮಕ ದಳ, ಬಿಜಾಪುರ
“ಓ ಸತ್ಯ ವಿಶ್ವಾಸಿಗಳೇ ಸಹನೆ ಮತ್ತು ನಮಾಝಿನಿಂದ ಸಹಾಯ ಪಡೆಯಿರಿ. ನಿಶ್ಚಯವಾಗಿಯೂ ಅಲ್ಲಾಹ್ ಸಹನಶೀಲರೊಂದಿಗೆ ಇದ್ದಾನೆ.” ( 2:153)
“ನಮ್ಮ ಪ್ರಭು ಅಲ್ಲಾಹ್ ಎಂದು ಹೇಳಿ ಆ ಬಳಿಕ ಅದರಲ್ಲೇ ಸ್ಥಿರವಾಗಿ ನಿಂತು ಬಿಟ್ಟವರ ಮೇಲೆ ಖಂಡಿತವಾಗಿಯೂ ದೇವಚರರು ಇಳಿಯುತ್ತಾರೆ. ಮತ್ತು ಹೇಳುತ್ತಾರೆ ಹೆದರಬೇಡಿರಿ ಖೇದಿಸಬೇಡಿರಿ ನಿಮಗೆ ವಾಗ್ದಾನ ಮಾಡಲಾಗಿರುವ ಸ್ವರ್ಗದ ಸುವಾರ್ತೆಯಿಂದ ಸಂತಸಗೊಳ್ಳಿರಿ.” (41:30)
ಪವಿತ್ರ ಕುರ್ಆನಿನ ಈ ಮೇಲಿನ ವಚನಗಳಲ್ಲಿ ಸಹನೆ ಹಾಗೂ ದೃಢಚಿತ್ತತೆಯಿಂದ ಸ್ಥಿರವಾಗಿ ನಿಂತವರ ಜೊತೆಗೆ ಅಲ್ಲಾಹನಿದ್ದಾನೆ ಮತ್ತು ಅವರಿಗೆ ಸ್ವರ್ಗದ ಸುವಾರ್ತೆ ನೀಡುವ ಸಂದೇಶವನ್ನು ಕಾಣಬಹುದಾಗಿದೆ. ಹಾಗೆಯೇ ಕುರ್ಆನಿನ ಸಾಕಷ್ಟು ವಚನಗಳಲ್ಲಿ ಸಹನೆ ವಹಿಸುವ ಆದೇಶಗಳನ್ನು ನೀಡಲಾಗಿದೆ. ಇದನ್ನು ಉರ್ದು ಭಾಷೆಯಲ್ಲಿ “ಸಬ್ರ್ ವ ಇಸ್ತಿಕಾಮತ್” ಎಂದು ಹೇಳುತ್ತಾರೆ.
ನಮಾಝಿನಿಂದ ಸ್ಥಿರಚಿತ್ತತೆ ದೊರಕುತ್ತದೆ. ಧೈರ್ಯ-ಸ್ಥೈರ್ಯಗಳು ಪ್ರಾಪ್ತವಾಗುತ್ತವೆ. ಎಲ್ಲ ರೀತಿಯ ಸಂಕಷ್ಟ ಮತ್ತು ಸತ್ವಪರೀಕ್ಷೆಯ ವೇಳೆ ವಿಚಲಿತರಾಗದೆ ಅಲ್ಲಾಹನ ಮೇಲೆ ವಿಶ್ವಾಸವಿಟ್ಟು ಸನ್ಮಾರ್ಗದಲ್ಲಿ ಸಾಗಬೇಕು. ಈ ವಿಶೇಷ ಗುಣವನ್ನು ಉಂಟು ಮಾಡುವ ಮಾಧ್ಯಮವು ನಮಾಝ್ ಆಗಿದೆ. ನಮಾಝ್ ನಿಂದ ಎಲ್ಲ ಪರಿಸ್ಥಿತಿಯಲ್ಲೂ ಸಹನೆ ಮತ್ತು ಸ್ಥೈರ್ಯದ ಸಾಮರ್ಥ್ಯ ಉಂಟಾಗುತ್ತದೆ. ಇದರ ಪುರಾವೆಯು ಪವಿತ್ರ ಕುರ್ಆನಿನ ಬೋಧನೆ ಮತ್ತು ಇಸ್ಲಾಮಿ ಇತಿಹಾಸದಲ್ಲಿ ಸಿಗುತ್ತದೆ.
ನಮ್ಮೆಲ್ಲರ ಪ್ರೀತಿಯ ಪ್ರವಾದಿ ಮುಹಮ್ಮದ್(ಸ) ರವರು ಇಡೀ ಜೀವನದಲ್ಲಿ ಪಾಲಿಸಿದ ಸಹನೆ, ತಾಳ್ಮೆ ಪರಿಶ್ರಮ ಹಾಗೂ ದೃಢಚಿತ್ತತೆಯು ನಮಗೆಲ್ಲರಿಗೂ ಮಾದರಿಯಾಗಿದೆ. ಇಸ್ಲಾಮ್ ಪ್ರಚಾರದ ಮಕ್ಕಾದ ಕಾಲಘಟ್ಟವು ಸಹನೆ – ಸ್ಥೈರ್ಯದ ಕಾಲಘಟ್ಟವಾಗಿತ್ತು. ಈ ಅವಧಿಯಲ್ಲಿ ಪ್ರವಾದಿ ಮುಹಮ್ಮದ್(ಸ) ಅವರಂತಹ ನಿಸ್ವಾರ್ಥಿ, ಸದ್ಗುಣ, ಸಜ್ಜನ ವ್ಯಕ್ತಿಗೆ ಎಷ್ಟೊಂದು ಕಿರುಕುಳ ನೀಡಿದರು.
- ಅವರನ್ನು ಮಕ್ಕಾದ ಬೀದಿಗಳಲ್ಲಿ ಕಲ್ಲುಗಳಿಂದ ಹೊಡೆಯಲಾಯಿತು.
- ಅವರು ಬರುವ ರಸ್ತೆಯಲ್ಲಿ ಮುಳ್ಳುಗಳನ್ನು ಹರಡಲಾಯಿತು ಮತ್ತು ಅವರನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಯಿತು.
- ಅವರಿಗೆ ಹುಚ್ಚನೆಂದೂ ಧರ್ಮಭ್ರಷ್ಟನೆಂದೂ ಕತೆಗಾರನೆಂದೂ ನಿಂದನೆಯಿಂದ ಅಪಹಾಸ್ಯ ಮಾಡಲಾಯಿತು.
ಈ ಆಧಾರರಹಿತ ಆರೋಪ ಮತ್ತು ಅಪವಾದಗಳ ಬಗ್ಗೆ ಪ್ರವಾದಿ(ಸ) ರವರು ಎಂದೂ ಕೆರಳಲಿಲ್ಲ. ಬದಲಾಗಿ ತಾಳ್ಮೆ ಮತ್ತು ಸಹನೆಯೊಂದಿಗೆ ಅಲ್ಲಾಹನ ಧರ್ಮ ಪ್ರಚಾರದ ಕಾರ್ಯವನ್ನು ಮುಂದುವರಿಸಿದರು. ವಿರೋಧಿಸುವವರ ಅಂತಃಕರಣವನ್ನು ಬಡಿದೆಬ್ಬಿಸಿ ಆಲೋಚನೆಗೆ ಹಚ್ಚಿದರು. ಮೂಢ ನಂಬಿಕೆಯ ಕುರಿತು ಅವರನ್ನು ಎಚ್ಚರಿಸಿದರು. ಈ ರೀತಿ ದ್ವೇಷ ಮತ್ತು ಶತ್ರುತ್ವದ ಆ ಪರಿಸರದಲ್ಲಿ ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸಿದರು.
ಪ್ರವಾದಿವರ್ಯರ(ಸ) ಸಂಗಾತಿಗಳು ಅಂದರೆ ಸಹಾಬಿಗಳು ಕೂಡಾ ಇದೇ ಮಾದರಿಯನ್ನು ಅನುಸರಿಸಿದರು. ಮರಣವನ್ನು ಲೆಕ್ಕಿಸದೇ ತಾಳ್ಮೆ ಹಾಗೂ ಸಂಯಮದಿಂದ ದೃಢಚಿತ್ತತೆಯಿಂದ ವಿರೋಧದ ಬಿರುಗಾಳಿಯೆದುರು ಸಹನೆಯ ಪರ್ವತದಂತೆ ನಿಂತರು. ಅನ್ಯಾಯ, ಅತ್ಯಾಚಾರಗಳ ವಿರುದ್ಧ ದುರ್ವರ್ತನೆ ತೋರಲಿಲ್ಲ. ಖಡ್ಗಕ್ಕೆ ಎದುರಾಗಿ ಖಡ್ಗ ಎತ್ತಲಿಲ್ಲ. ಸಹನೆಯ ಈ ಅಸಾಮಾನ್ಯ ಗುಣವು ನಮಾಝಿನಿಂದ ಉಂಟಾಗುತ್ತದೆ. ಆದ್ದರಿಂದಲೇ ಕುರ್ಆನಿನಲ್ಲಿ ಎಲ್ಲೆಲ್ಲ ಸಹನೆಯ ಆಜ್ಞೆ ನೀಡಲಾಗಿದೆಯೋ ಸಾಮಾನ್ಯವಾಗಿ ಅಲ್ಲೆಲ್ಲ ನಮಾಝಿನ ಆದೇಶ ನೀಡಲಾಗಿದೆ.
ಇಂದು ಸಮಾಜದಲ್ಲಿ ಅಸಹನೆ ಹೆಚ್ಚಾಗಿದೆ. ಸಣ್ಣಪುಟ್ಟ ವಿಷಯಗಳಿಗೂ ನಾವು ಕೋಪಗೊಳ್ಳುತ್ತೇವೆ. ಕೋಪದ ಬಗ್ಗೆ ಪ್ರವಾದಿ(ಸ) ರವರು ಹೀಗೆ ಹೇಳಿದ್ದಾರೆ. “ಮಲ್ಲ ಯುದ್ಧದಲ್ಲಿ ತನ್ನ ಎದುರಾಳಿಯನ್ನು ಸೋಲಿಸುವವನು ಶಕ್ತಿಶಾಲಿಯಲ್ಲ, ಬದಲಾಗಿ ಕೋಪ ಬಂದಾಗ ಅದನ್ನು ತನ್ನ ನಿಯಂತ್ರಣದಲ್ಲಿರಿಸುವವನೇ ನಿಜವಾದ ಶಕ್ತಿಶಾಲಿ ಹಾಗೂ ಬಲಾಢ್ಯ.”
ಕೋಪಕ್ಕೆ ಮದ್ದನ್ನೂ ಕೂಡಾ ಪ್ರವಾದಿ(ಸ) ರವರು ಹೇಳಿದ್ದಾರೆ. “ಕೋಪವು ಶೈತಾನಿನ ಪ್ರಭಾವದಿಂದಾಗಿರುತ್ತದೆ. ಶೈತಾನನನ್ನು ಅಗ್ನಿಯಿಂದ ಸೃಷ್ಟಿಸಲಾಗಿದೆ. ಅಗ್ನಿಯು ನೀರಿನಿಂದಲೇ ನಂದುತ್ತದೆ. ಆದುದರಿಂದ ನಿಮ್ಮ ಪೈಕಿ ಯಾರಿಗಾದರೂ ಕೋಪ ಬಂದರೆ ಅವನು ವುಝೂ ಮಾಡಬೇಕು.” (ಹದೀಸ್ – ಅಬೂದಾವುದ್)
ಜೀವನವು ಹೂವಿನ ಹಾಸಿಗೆಯಲ್ಲ, ಆದರೆ ಅದು ವಿವಿಧ ರೀತಿಯ ಏರಿಳಿತಗಳು ಮತ್ತು ಪರೀಕ್ಷೆಗಳ ಸರಣಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯನ್ನು ಚದುರಿ ಹೋಗದಂತೆ ರಕ್ಷಿಸುವ ಮತ್ತು ಯಶಸ್ಸಿನ ಗುರಿಯತ್ತ ಕೊಂಡೊಯ್ಯುವ ಗುಣಗಳನ್ನು ತಾಳ್ಮೆ ಮತ್ತು ಪರಿಶ್ರಮವೆಂದು ಕರೆಯಲಾಗುತ್ತದೆ.
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಆಸೆ ಆಕಾಂಕ್ಷೆ ಎಲ್ಲರಲ್ಲೂ ಇರುವುದು ಸಹಜ. ಅದಕ್ಕೆ ತಕ್ಕಂತೆ ವ್ಯಕ್ತಿಯ ಗುಣ ನಡತೆ ಕೂಡಾ ಮುಖ್ಯವಾಗುತ್ತದೆ. ಯಾವುದೇ ದುರಾಭ್ಯಾಸಗಳಿಗೆ ಬಲಿಯಾಗದೆ ಆರೋಗ್ಯವನ್ನು ಕಾಪಾಡಿಕೊಂಡು ವಿದ್ಯಾರ್ಜನೆ ಮಾಡಬೇಕಾಗುತ್ತದೆ.
ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನೂ ಪಡೆಯುತ್ತ ಸನ್ಮಾರ್ಗದಲ್ಲಿ ಸಾಗಿದರೆ ಯಶಸ್ಸಿನ ಶಿಖರವೇರಬಹುದು. ನಮಾಝಿಗೆ ಧರ್ಮದಲ್ಲಿ ಅತ್ಯಧಿಕ ಮಹತ್ವವಿದೆ. ನಮಾಝ್ ಅಲ್ಲಾಹನೊಂದಿಗೆ ಸಂಬಂಧ ಸ್ಥಾಪಿಸುವ ಮತ್ತು ಬಲಪಡಿಸುವ ಬಹಳ ಪ್ರಬಲ ಮಾಧ್ಯಮವಾಗಿದೆ ಎಂಬ ಅರಿವು ನಮ್ಮಲ್ಲಿರಬೇಕು.
ನಮಾಝಿನಿಂದ ಆತ್ಮ ಸಂಸ್ಕರಣೆಯಾಗುತ್ತದೆ. ಗುಣ ನಡತೆಯಲ್ಲಿ ಸುಧಾರಣೆಯಾಗುತ್ತದೆ. ಎಲ್ಲ ವ್ಯವಹಾರಗಳು ದುರಸ್ತಿಯಾಗುತ್ತವೆ. ಕ್ಷಮಾ ಯಾಚನೆಯ ಸೌಭಾಗ್ಯ ಲಭಿಸುತ್ತದೆ. ಸಾಗಬೇಕಿರುವ ಸನ್ಮಾರ್ಗ ಸ್ಪಷ್ಟವಾಗುತ್ತದೆ ಮತ್ತು ಅದರಲ್ಲಿ ಸಾಗುವುದೂ ಸುಲಭವಾಗುತ್ತದೆ. ನಮಾಝ್ ದೇವಭಕ್ತ ಮತ್ತು ಧರ್ಮನಿಷ್ಠ ಮುಸ್ಲಿಮನ ಅತಿ ದೊಡ್ಡ ಗುರುತಾಗಿದೆ. ಈ ದಿಶೆಯಲ್ಲಿ ಸಾಗುವ ಸೌಭಾಗ್ಯವನ್ನು ಅಲ್ಲಾಹನು ನಮಗೆಲ್ಲರಿಗೂ ಕರುಣಿಸಲಿ.












