ಪ್ರಧಾನಿ ಮೋದಿಗೆ ಗುಜರಾತ್‌ನಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ಓಕೆ, ಇತರೆಡೆ ಮಾತ್ರ ಎಲರ್ಜಿ ಏಕೆ?

0
806

ಸನ್ಮಾರ್ಗ ವಾರ್ತೆ

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಮುಸ್ಲಿಂ ಮೀಸಲಾತಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯು ಈಗ ಫಾಕ್ಟ್‌ಚೆಕ್‌ಗೆ ಒಳಗಾಗುತ್ತಿದೆ. ಆದರೆ ಈಗ ಮೋದಿಯವರು ಗುಜರಾತ್‌ನಲ್ಲಿ ತನ್ನ ಅವಧಿಯಲ್ಲೇ ಮುಸ್ಲಿಂ ಒಬಿಸಿ ಮೀಸಲಾತಿ ಇದ್ದ ಬಗ್ಗೆ ಪ್ರಸ್ತಾಪ ಮಾಡಿರುವ ವಿಡಿಯೋ ಕೂಡಾ ವೈರಲ್ ಆಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಚುನಾವಣಾ ಪ್ರಚಾರದಲ್ಲಿ ಮಾತನಾಡಿ “ಕರ್ನಾಟಕದಲ್ಲಿ ಒಬಿಸಿ ಕೋಟಾಕ್ಕೆ ಮುಸ್ಲಿಮರನ್ನು ಸೇರಿಸುವ ಮೂಲಕ ಹಿಂದುಳಿದ ವರ್ಗದಿಂದ ದೊಡ್ಡ ಪಾಲನ್ನು ಕಿತ್ತುಕೊಳ್ಳಲಾಗಿದೆ. ಈ ವಿಧಾನವನ್ನು ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಮುಂದಾಗಿದೆ” ಎಂದು ಆರೋಪಿಸಿದ್ದರು.

ಇದಾದ ಬಳಿಕ ಮೀಸಲಾತಿ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಪ್ರಧಾನಿ ಮೋದಿ ಅವರ ಡಬಲ್ ಸ್ಟ್ಯಾಂಡ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ತನ್ನ ಎಕ್ಸ್‌ ಪೋಸ್ಟ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ್ದ ಪ್ರಧಾನಿ ಮೋದಿ ಅವರು, “ಬೇರೆ ಧರ್ಮಗಳಲ್ಲಿಯೂ ಜಾತಿ ವ್ಯವಸ್ಥೆ ಇಲ್ಲವೇ? ಮೇಲೆ ಕೆಳಗೆ ಎಂಬ ಭಾವನೆಗಳು ಇಲ್ಲವೇ? ಗುಜರಾತ್‌ನಲ್ಲಿ ಮುಸ್ಲಿಂ ಸಂಪ್ರದಾಯದಲ್ಲಿ 70 ಜಾತಿಗಳು ಒಬಿಸಿ ಆಗಿದೆ. ನಾನು ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಈ ಮುಸ್ಲಿಮರಿಗೆ ಒಬಿಸಿ ವರ್ಗದಡಿ ಸವಲತ್ತು ಲಭ್ಯವಾಗುತ್ತಿತ್ತು” ಎಂದು ಹೇಳಿದ್ದಾರೆ.

ಈ ವಿಡಿಯೋ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ ಅವರು, “ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಮುಸ್ಲಿಮರು ಒಬಿಸಿ ಮೀಸಲಾತಿಯಡಿಯಲ್ಲಿದ್ದಾರೆ ಎಂದು ಹೆಮ್ಮೆ ಪಡುತ್ತಾರೆ. ಆದರೆ ಬೇರೆಲ್ಲಾದರೂ ಮುಸ್ಲಿಮರಿಗೆ ಒಬಿಸಿ ಮೀಸಲಾತಿ ಇದ್ದರೆ ಅದು ಪ್ರಧಾನಿಗೆ ಸಮಸ್ಯೆಯಾಗುತ್ತದೆ” ಎಂದು ಟೀಕಿಸಿದ್ದಾರೆ.

“ಗುಜರಾತಿನಲ್ಲಿ ಯಾವುದೇ ಯೋಜನೆ, ವ್ಯವಸ್ಥೆ ಜಾರಿಗೆ ತಂದರೂ ಅದು ಮಾಸ್ಟರ್ ಸ್ಟ್ರೋಕ್. ಪ್ರಧಾನಿ ತಮ್ಮ ಅಧಿಕಾರಾವಧಿಯ ಬಗ್ಗೆ ಬಹಿರಂಗ ಪತ್ರಿಕಾಗೋಷ್ಠಿ ನಡೆಸಲು ನಿರ್ಧರಿಸಿದ ದಿನವೇ ರಾಜಕಾರಣಿಯಾಗಿ ಅವರ ಕೊನೆಯ ದಿನವಾಗಿರುತ್ತದೆ” ಎಂದು ಹೇಳಿದರು.

ಇನ್ನು 1995 ರಲ್ಲಿ, ಎಚ್‌ಡಿ ದೇವೇಗೌಡ ಸರ್ಕಾರವು ಕರ್ನಾಟಕದಲ್ಲಿ ಒಬಿಸಿ ಕೋಟಾದಲ್ಲಿ 2ಬಿ ಎಂಬ ವಿಶಿಷ್ಟ ವರ್ಗೀಕರಣದ ಅಡಿಯಲ್ಲಿ ಮುಸ್ಲಿಮರಿಗೆ ನಾಲ್ಕು ಶೇಕಡಾ ಮೀಸಲಾತಿಯನ್ನು ನೀಡಿತ್ತು. ಆದರೆ ಪ್ರಧಾನಿ ಮೋದಿ ಕಾಂಗ್ರೆಸ್ ನೀಡಿರುವಂತೆ ಪ್ರಸ್ತಾಪಿಸಿದ್ದಾರೆ.

LEAVE A REPLY

Please enter your comment!
Please enter your name here