ರಾಜಕೀಯ ಪಕ್ಷಗಳು ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಿ; ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಆಗ್ರಹ

0
71

ಸನ್ಮಾರ್ಗ ವಾರ್ತೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಕ್ಕಲಿಗರು ದೊಡ್ಡ ಸಂಖ್ಯೆಯಲ್ಲಿದ್ದರೂ, ಸಮುದಾಯದ ನಾಯಕರಿಗೆ ರಾಜಕೀಯ ಪಕ್ಷಗಳಲ್ಲಿ ಉನ್ನತ ಹುದ್ದೆಗಳನ್ನು ನೀಡಲಾಗುತ್ತಿಲ್ಲ. ಮುಂಬರುವ ಚುನಾವಣೆಗಳಲ್ಲಿ ಸಮುದಾಯದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ಆಗ್ರಹಿಸಿದೆ.

ಮಂಗಳೂರು ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಾಲಕೃಷ್ಣ ಡಿ .ಬಿ. ಅವರು 6.50 ಲಕ್ಷಕ್ಕೂ ಅಧಿಕ ಒಕ್ಕಲಿಗರು ವಾಸಿಸುವ ಜಿಲ್ಲೆಯಲ್ಲಿ ಈ ಸಮುದಾಯದ 3.80ಲಕ್ಷಕ್ಕೂ ಮತದಾರರು ಇದ್ದಾರೆ. ದೊಡ್ಡ ಸಮುದಾಯವಾದರೂ ಯಾವುದೇ ರಾಜಕೀಯ ಪಕ್ಷಗಳಲ್ಲಿ ಉನ್ನತ ಹುದ್ದಗಳನ್ನು ನೀಡದೆ ಕಡೆಗಣಿಸಲಾಗುತ್ತದೆ ಎಂದರು.

ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಆದ್ಯತೆಯನ್ನು ರಾಜಕೀಯ ಪಕ್ಷಗಳು ನೀಡುವುದರೊಂದಿಗೆ ಸಾಮಾಜಿಕ ಸಮತೋಲನವನ್ನು ಕಾಪಾಡಿಕೊಳ್ಳಬೇಕೆಂದು ಸಂಘ ಒತ್ತಾಯಿಸುತ್ತದೆ. ಕರ್ನಾಟಕ ರಾಜ್ಯಾದ್ಯಂತ ಪ್ರಬಲ ಸಮುದಾಯವಾಗಿದೆ. ಸತ್ಯ, ಧರ್ಮ, ನಿಷ್ಠೆಯಲ್ಲಿ ನಡೆಯುವ ಒಕ್ಕಲಿಗ ಸಮುದಾಯ ರಾಜಪರಂಪರೆಯ ಹಿನ್ನೆಲೆಯ ಸಮುದಾಯವಾಗಿದ್ದು ಕೇವಲ ಕೃಷಿಕರಾಗಿ ಮಾತ್ರ ಗುರುತಿಸಿಕೊಂಡಿಲ್ಲ ಶೈಕ್ಷಣಿಕ, ವೈದ್ಯಕೀಯ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿಯೂ ಇತರೆ ಸಮುದಾಯಕ್ಕೆ ಸಮಾನವಾಗಿ ಬಹಳಷ್ಟು ಕೊಡುಗೆ ನೀಡಿದೆ. ಅದಲ್ಲದೆ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ಗೌಡ ಸಮುದಾಯದ ನಾಯಕರು ಕೊಡುಗೆ ನೀಡಿದ್ದಾರೆ ಅಂದರು.