ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಚರ್ಚೆಗೆ ಪ್ರಿಯಾಂಕಾ ಗೈರು ಹಾಜರು; ಏನಂದ್ರು?

0
840

ಸನ್ಮಾರ್ಗ ವಾರ್ತೆ

ಕಾಂಗ್ರೆಸ್ ಸಂಸದೆಯಾದ ಪ್ರಿಯಾಂಕಾ ಗಾಂಧಿ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಚರ್ಚೆಗೆ ಹಾಜರಾಗದ ಬಗ್ಗೆ ಸ್ಪಷ್ಟನೆ ನೀಡಿದ್ದು, ಕುಟುಂಬದ ಸದಸ್ಯರೊಬ್ಬರ ಚಿಕಿತ್ಸಾ ಅವಶ್ಯಕತೆಯ ಕಾರಣ ವಿದೇಶದಲ್ಲಿ ಇದ್ದೇನು ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಮಸೂದೆ ಮಂಡನೆಯಾದ ದಿನ ಪ್ರಿಯಾಂಕಾ ಗೈರುಹಾಜರಿದ್ದನ್ನು ಪ್ರಶ್ನಿಸಿ, ಸಿಪಿಐಎಂ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಅವರು ಈ ಸ್ಪಷ್ಟನೆ ನೀಡಿದ್ದಾರೆ. ವಿದೇಶ ಪ್ರಯಾಣಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷರಿಗೂ ಲೋಕಸಭಾ ಸ್ಪೀಕರ್‌ಗೂ ತಾನು ಎರಡು ದಿನ ಸದನಕ್ಕೆ ಹಾಜರಾಗಲಾರೆ ಎಂಬ ಮಾಹಿತಿ ನೀಡಿದ್ದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇರುವುದಾಗಿ ರಜೆ ಮಂಜೂರಾಗುವಾಗ ಯಾವುದೇ ಸೂಚನೆ ಇರಲಿಲ್ಲ ಎಂಬುದೂ ಅನೌಪಚಾರಿಕವಾಗಿ ತಿಳಿಸಲಾಗಿದೆ. ಇದೇ ವೇಳೆ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡಾ ಚರ್ಚೆಯಲ್ಲಿ ಮಾತನಾಡದೇ, ಕೇವಲ ಎಕ್ಸ್ (ಮಾಜಿ ಟ್ವಿಟರ್) ಮೂಲಕ ಪ್ರತಿಕ್ರಿಯೆ ನೀಡಿದುದು ಆಕ್ಷೇಪಕ್ಕೆ ಕಾರಣವಾಗಿದೆ.

ಬುಧವಾರ ಮಧ್ಯರಾತ್ರಿ 12 ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯ ಬಳಿಕ 232 ವಿರೋಧದ ಮತಗಳ ನಡುವೆಯೂ 288 ಮಂದಿ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಈ ಮಸೂದೆಗೆ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಬೆಂಬಲ ದೊರಕಿದ್ದು, ತೆಲುಗು ದೇಶಂ, ಜನತಾದಳ (ಯು) ಮತ್ತು ಎಲ್‌ಜೆಪಿ ಕೂಡಾ ಮಸೂದೆ ಪರ ನಿಂತವು.

ಇಂಡಿಯಾ ಮೈತ್ರಿಕೂಟ ತೀವ್ರ ವಿರೋಧ ವ್ಯಕ್ತಪಡಿಸಿದರೂ, ವಿವಾದಾಸ್ಪದ ನಿರ್ಧಾರಗಳನ್ನು ಮುಂದುವರಿಸಿಕೊಂಡು ಈ ಮಸೂದೆ ಅಂಗೀಕರಿಸಲಾಗಿದೆ.