ಸನ್ಮಾರ್ಗ ವಾರ್ತೆ-
ರಾಂಚಿ, ಡಿ. 9: ಭಾರತ ಮೂಲದ ಅಂದರೆ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ವಾಸಿಸುವವರಿಗಾಗಿ ಪೌರತ್ವ ತಿದ್ದುಪಡಿ ಮಸೂದೆ ತರಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜ್ನಾರ್ಥ ಸಿಂಗ್ ಹೇಳಿದ್ದಾರೆ. ಅವರು ಧಾರ್ಮಿಕ ಕಾರಣಗಳಿಂದ ಹಿಂಸೆ ಅನುಭವಿಸುತ್ತಿದ್ದರೆ ಅವರಿಗೆ ಭಾರತದ ಪೌರತ್ವ ನೀಡಲಾಗುವುದು ಎಂದು ರಾಜ್ನಾಥ್ ಸಿಂಗ್ ಹೇಳಿದರು. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಪ್ರಧಾನ ಧರ್ಮ ಇಸ್ಲಾಂ ಆಗಿದೆ. ಅಲ್ಲಿ ಭಾರತೀಯ ವಂಶಸ್ಥರು ಪೀಡನೆಗೆ ತುತ್ತಾದರೆ ಅವರಿಗೆ ಹೋಗಲು ಬೇರೆ ಜಾಗವಿಲ್ಲ. ಅವರಿಗೆ ನಾವು ಭಾರತದಲ್ಲಿ ಆಶ್ರಯ ನೀಡುತ್ತೇವೆ ಎಂದು ಅವರು ಹೇಳಿದರು.
ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಝಾರ್ಖಂಡಿಗೆ ಬಂದಿರುವ ಅವರು ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧಾರ್ಮಿಕವಲ್ಲದ ಸಮಸ್ಯೆಗಳು ಈ ಮೂರು ದೇಶಗಳಲ್ಲಿ ಮುಸ್ಲಿಮರು ಎದುರಿಸುತ್ತಿರಬಹುದು. ಆದರೆ, ಪೌರತ್ವ ಮಸೂದೆ ಧಾರ್ಮಿಕ ಹಿಂಸೆಗೊಳಗಾದವರಿಗೆ ಮಾತ್ರ ಇರುವುದಾಗಿದೆ. ಪೌರತ್ವ ನೀಡುವಾಗ ಯಾಕೆ ಇಲ್ಲಿಗೆ ಬಂದೆವೆಂದು ಪ್ರತಿಯೊಬ್ಬರನ್ನೂ ಪ್ರಶ್ನಿಸಲಾಗುವುದು ಎಂದು ಅವರು ತಿಳಿಸಿದರು.












