ಸನ್ಮಾರ್ಗ ವಾರ್ತೆ-
ಹೈದರಾಬಾದ್, ಡಿ. 7: ತೆಲಂಗಾಣದಲ್ಲಿ ಪೊಲೀಸರು ಎನ್ಕೌಂಟರ್ ನಡೆಸಿದ ನಾಲ್ವರು ಆರೋಪಿಗಳ ವಿರುದ್ಧ ಇತರ ಸಮಾನ ಅಪರಾಧಗಳ ಕೇಸುಗಳಿದ್ದವು ಎನ್ನಲಾಗುತ್ತಿದೆ. ತೆಲಂಗಾಣದ ಹೊರಗೆ ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಇವರು ಇದೇ ರೀತಿಯ ಅಪರಾಧ ಎಸಗಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ.
ಆರೋಪಿಗಳ ಡಿಎನ್ಎ ವಿವರಗಳನ್ನು ಸಂಗ್ರಹಿಸಲಾಗಿದೆ. ಕರ್ನಾಟಕ ತೆಲಂಗಾಣ ಆಂಧ್ರ ಪ್ರದೇಶಗಳಿಂದ ಕಾಣೆಯಾದ ಹೆಣ್ಣುಮಕ್ಕಳ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಇವರಲ್ಲಿ ಯಾರದ್ದಾದರೂ ಮೃತದೇಹ ಸುಟ್ಟುಹೋದ ಸ್ಥಿತಿಯಲ್ಲಿ ಕಂಡು ಬಂದಿದೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಸೈಬರಾಬಾದ್ ಪೊಲೀಸ್ ಕಮಿಶನರ್ ಸಜ್ಜನ್ ಕುಮಾರ್ ಹೇಳಿದ್ದಾರೆ.












