ಸನ್ಮಾರ್ಗ ವಾರ್ತೆ
ಲಕ್ನೊ,ಆ.27: ಬುಲಂದ್ ಶಹರ್ ಕೊಲೆ ಪ್ರಕರಣದ ಆರೋಪಿಗಳನ್ನು ಪುನಃ ಜೈಲಿಗಟ್ಟಬೇಕೆಂದು ಕೊಲೆಯಾದ ಪೊಲೀಸ್ ಇನ್ಸ್ಪೆಕ್ಟರ್ರ ಕುಟುಂಬ ಆಗ್ರಹಿಸಿದೆ. ಉತ್ತರಪ್ರದೇಶದ ಗ್ರಾಮದಲ್ಲಿ ದನದ ಶವ ಸಿಕ್ಕಿದ ನೆಪದಲ್ಲಿ ಗೋರಕ್ಷಕ ಗೂಂಡಾಗಳು ನಡೆಸಿದ ಗಲಭೆ ನಿಯಂತ್ರಿಸಲು ಯತ್ನಿಸುವ ವೇಳೆ ಇನ್ಸ್ಪೆಕ್ಟರ್ ಸುಭೋಧ್ ಕುಮಾರ್ ಸಿಂಗ್ರನ್ನು ಜನರ ತಂಡ ಕ್ರೂರವಾಗಿ ಕೊಲೆ ಮಾಡಿತ್ತು. ಘಟನೆಯಲ್ಲಿ ಬಿಜೆಪಿ ಯುವ ಮೋರ್ಚದ ನಾಯಕನ ಸಹಿತ ಆರು ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಆದರೆ ಆರೋಪಿಗಳನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಆರೋಪಿಗಳಿಗೆ ಬಿಜೆಪಿ ಕಾರ್ಯಕರ್ತರು ಉತ್ಸವದ ರೀತಿಯಲ್ಲಿ ಅದ್ದೂರಿ ಸ್ವಾಗತವನ್ನು ನೀಡಿದ್ದಾರೆ.
ಸಮಾಜದ ಹಿತಾಸಕ್ತಿ ಮುಂದಿಟ್ಟು ಈ ಆರೋಪಿಗಳನ್ನು ಜೈಲಿನೊಳಗೆ ಹಾಕಬೇಕೆಂದು ಯೋಗಿ ಆದಿತ್ಯನಾಥ್ರನ್ನು ಕೊಲೆಯಾದ ಇನ್ಸ್ಪೆಕ್ಟರ್ ಸುಭೋದ್ರ ಪುತ್ರ ಶ್ರೇಯ್ ಪ್ರತಾಪ್ ಮನವಿ ಮಾಡಿದ್ದಾರೆ. ಆರು ತಿಂಗಳಲ್ಲಿ ಜಾಮೀನು ನೀಡಿದ್ದನ್ನು ಸುಭೋದ್ ಕುಮಾರ್ ಪತ್ನಿ ಕೂಡ ಪ್ರಶ್ನಿಸಿದ್ದಾರೆ. ಇಂತಹ ರೀತಿಯಲ್ಲಿ ಯಾರಾದರೂ ಮಾಡಿದರೆ ತನ್ನ ಸರಕಾರ ಮತ್ತು ಪಾರ್ಟಿಗೆ ಏನೂ ಮಾಡಲು ಸಾದ್ಯವಿಲ್ಲ ಎಂದು ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಪ್ರತಿಕ್ರಿಯಿಸಿದ್ದಾರೆ.












