ಈ ನಾಡು ನನಗೆ ರಕ್ಷಣೆ ನೀಡೀತೇ ಅಲ್ಲ, ಕಲ್ಲೆಸೆದೀತೆ? – ಕ್ವಾರಂಟೈನ್ ನಲ್ಲಿರುವ ವೈದ್ಯರೊಬ್ಬರ ಕಣ್ಣು ತೆರೆಸುವ ಪತ್ರ ವೈರಲ್

0
854

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್, ಎ.17: ಆರೋಗ್ಯ ಕ್ಷೇತ್ರದಲ್ಲಿ ಪ್ರಾಣವನ್ನು ಪಣವಾಗಿಟ್ಟು ಕೆಲಸ ಮಾಡಿದರೂ ಕೆಲವರು ತೋರಿಸುತ್ತಿರುವ ಅಸಡ್ಡೆ, ಕಡೆಗಣನೆ ಮನೋಭಾವವನ್ನು ಡಾ. ಇದ್ರೀಸ್ ವಿವರಿಸಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ಸುಪರಿಚಿತರಾದ ಡಾ. ಇದ್ರೀಸ್ ಕೋಝಿಕ್ಕೋಡಿನಲ್ಲಿ ಕೊರೊನಾ ದೃಢಪಟ್ಟಿದ್ದ ವ್ಯಕ್ತಿಯ ಸಂಪರ್ಕದಿಂದ ಈಗ ಮನೆಯಲ್ಲಿ ಸ್ವಯಂ ಕ್ವಾರಂಟೈನ್ ಲ್ಲಿದ್ದಾರೆ. ನೀವು ಮನೆಯಲ್ಲಿ ಹದಿನಾಲ್ಕು ದಿವಸ ಕ್ವಾರಂಟೈನ್ ನಲ್ಲಿದ್ದರೆ ಸಾಕು ಎಂದು ಜಿಲ್ಲಾ ವೈದ್ಯಾಧಿಕಾರಿ ಸೂಚಿಸಿದ್ದರೂ ಅವರು ಸ್ವಯಂ 28 ದಿವಸ ಐಸೊಲೇಶನ್‍ನಲ್ಲಿರಲು ತೀರ್ಮಾನಿಸಿ ಮನೆಯಲ್ಲೇ ಉಳಿಯಲು ನಿರ್ಧರಿಸಿದರು. ಕ್ವಾರಂಟೈನ್ ಸಮಯ ಕಳೆದ ಬಳಿಕ ಇವರ ಮಗ ಮನೆಯ ಅಂಗಳದಲ್ಲಿ ಆಡುತ್ತಿರುವುದನ್ನು ನೋಡಿದ್ದೇವೆ ಎಂದು ಹೇಳಿ ಹತ್ತಿರದ ವಾರ್ಡಿನ ಕೌನ್ಸಿಲರ್ ಆಗಿರುವ ಜನಪ್ರತಿನಿಧಿ, ಒಬ್ಬ ಹೆಲ್ತ್ ಇನ್ಸೆಪೆಕ್ಟರ್, ಮೂರು ನಾಲ್ಕು ಅಧಿಕಾರಿಗಳು ಇವರನ್ನು ಬೈದು ಹೋಗಿದ್ದನ್ನು ಅವರು ತಮ್ಮ ಬರಹದಲ್ಲಿ ವಿವರಿಸಿದ್ದಾರೆ.

ಒಬ್ಬ ವೈದ್ಯನಾದ ತನಗೆ ಈ ಪರಿಸ್ಥಿತಿಯಾದರೆ ಊರಿನಲ್ಲಿ ಐಸೊಲೇಶನ್‍ನಲ್ಲಿರುವವರು ಮತ್ತು ಕ್ವಾರಂಟೈನ್ ಸಮಯ ಮುಗಿಸಿದ ಜನಸಾಮಾನ್ಯರೊಡನೆ ಜನಪ್ರತಿನಿಧಿಗಳು ಹೇಗೆ ವರ್ತಿಸಿಯಾರು ಎಂದು ಡಾ. ಇದ್ರೀಸ್ ಪ್ರಶ್ನಿಸಿದ್ದಾರೆ.

ವೈದ್ಯರ ಬರಹ ಹೀಗಿದೆ-

ನಾಗರಿಕ ಸಮಾಜದೊಂದಿಗೆ ಗೌರವಪೂರ್ವಕವಾಗಿ:

ನಾನು ಡಾಕ್ಟರ್ ಇದ್ರಿಸ್. ಎಂಬಿಬಿಎಸ್, ಎಂಡಿ ಮುಗಿಸಿ ಈಗ ಕಾಯಿಲೆ ಪೀಡಿತರಿಗಾಗಿ ಕೆಲಸ ಮಾಡುತ್ತಿದ್ದೇನೆ. ಈ ಬರಹದಲ್ಲಿ ಕೆಲವು ವಿಷಯಗಳನ್ನು ಹೇಳುತ್ತಿದ್ದೇನೆ.

ಕೊರೊನಾ ಕಾಲದಲ್ಲಿ ನನಗೆ ಮನೆಯಲ್ಲಿ ಕೂರಬಹುದಾಗಿತ್ತು. ಆದರೂ ನಾನೊಬ್ಬ ವೈದ್ಯ ಎಂಬ ಪ್ರಜ್ಞೆಯಿಂದ ಸಾವಿರಾರು ಆರೋಗ್ಯ ಕಾರ್ಯಕರ್ತರಂತೆ ನಾನು ಕೂಡ ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯನಾದೆ. ರೋಗಿಗಳನ್ನು ಪರೀಕ್ಷಿಸುವುದು ನನ್ನ ಹೊಣೆಗಾರಿಕೆಯಾಗಿತ್ತು. ಪರಿಸ್ಥಿತಿಗೆ ಅನುಗುಣವಾಗಿ ಎಲ್ಲ ಮುನ್ನೆಚ್ಚರಿಕೆಗಳೊಂದಿಗೆ ರೋಗಿಗಳ ಸೇವೆಯಲ್ಲಿ ತೊಡಗಿಸಿದೆ.

ಕಳೆದ ಎಪ್ರಿಲ್ ಒಂದರಂದು ಒಬ್ಬ ರೋಗಿ ನನ್ನ ಕನ್ಸಲ್ ಟೆಂಟ್ ರೂಂಗೆ ಬಂದರು. ಎರಡು ಸಲ ಮೆಡಿಕಲ್ ಕಾಲೇಜಿಗೆ ಹೋಗಿದ್ದ ಆತನಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿತ್ತು. ಹನ್ನೊಂದು ಗಂಟೆಗೆ ಈತ ನನ್ನ ಹತ್ತಿರ ಬಂದರು. ಅವರನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಿದೆ. ಎಕ್ಸರೆ ತೆಗೆದುಕೊಂಡು ಮರಳಿ ಬಂದರು. ನಂತರ ಮೆಡಿಕಲ್ ಕಾಲೇಜಿಗೆ ಆ ಪ್ರಕರಣವನ್ನು ರೆಫರ್ ಮಾಡಿದೆ.

ಮೆಡಿಕಲ್ ಕಾಲೇಜಿಗೆ ಹೋಗುವ ಬದಲು ರೋಗಿ ಖಾಸಗಿ ಆಸ್ಪತ್ರೆಗೆ ಹೋದರು. ಅಲ್ಲಿನ ಮೊದಲ ಪರೀಕ್ಷಾ ಫಲಿತಾಂಶದಲ್ಲಿ ರೋಗ ನೆಗೆಟಿವ್ ಎಂದು ವರದಿ ಬಂತು. ನಂತರ ಒಂಬತ್ತನೇ ತಾರೀಕಿಗೆ ಪರೀಕ್ಷೆ ಮಾಡಿದಾಗ ಪಾಸಿಟಿವ್ ಫಲಿತಾಂಶ ಬಂತು. ಇದಾದ ಬಳಿಕ ಜಿಲ್ಲಾ ವೈದ್ಯಾಧಿಕಾರಿ ಕಚೇರಿಯಿಂದ ನನಗೆ ಕರೆ ಬಂತು. ನಿಮ್ಮನ್ನೂ ಟೆಸ್ಟ್ ಮಾಡಿಸಿಕೊಳ್ಳಬೇಕಿದೆ. ಹದಿನಾಲ್ಕು ತಾರೀಕಿನವರೆಗೆ ದೂರ ಉಳಿಯಬೇಕು ಎಂದು ಹೇಳಿದರು. ಹನ್ನೆರಡನೆ ತಾರೀಕಿಗೆ ನನ್ನ ಫಲಿತಾಂಶ ನೆಗೆಟಿವ್ ಎಂದು ಬಂತು. ಆದರೆ ಹದಿನಾಲ್ಕು ತಾರೀಕಿನವರೆಗೆ ಮನೆಯಲ್ಲಿರಿ. ಹದಿನೈದು ತಾರೀಕು ಬೆಳಗ್ಗಿನಿಂದ ಕ್ಲಿನಿಕ್‍ಗೆ ಹೋಗಿ ಎಂದು ವೈದ್ಯಾಧಿಕಾರಿ ತಿಳಿಸಿದರು.

ಒಂದನೇ ತಾರೀಕಿನಿಂದ ಆ ರೋಗಿಯ ಭೇಟಿಯಾದ ನಂತರ ಹದಿನಾಲ್ಕು ತಾರೀಕಿನವರೆಗೆ ಕೊರೊಂಟೈನ್ ಅವಧಿಯಾಗಿದೆ. ಆರಂಭದಿಂದಲೇ ಸುರಕ್ಷಾ ಮುನ್ನೆಚ್ಚರಿಕೆ ವಹಿಸಿದ್ದರಿಂದ ಅವಧಿ ಮುಗಿದ ಮೇಲೆ ಮೊದಲಿನಂತೆ ಹೊರಗೆ ಹೋಗಬಹುದು ಎಂದು ವೈದ್ಯಾಧಿಕಾರಿ ಕಚೇರಿ ತಿಳಿಸಿದ್ದರೂ ಇಪ್ಪತ್ತೆಂಟು ದಿವಸ ಮನೆಯಲ್ಲೇ ಉಳಿಯಲು ನಾನು ತೀರ್ಮಾನಿಸಿದೆ.

ಈ ನಡುವೆ ಅಧಿಕಾರಿಗಳು ಕೇಳಿದ್ದರಿಂದ ನನ್ನ ಕುರಿತ ವಿವರಗಳನ್ನು ಹೇಳುತ್ತಿದ್ದೆ. ಆದರೆ ಹದಿನಾರನೇ ದಿವಸ ಅಥವಾ ನನ್ನ ಕೊರೊಂಟೈನ್ ಅವಧಿ ಮುಗಿದು ಎರಡು ದಿನದ ಬಳಿಕ ಹತ್ತಿರದ ವಾರ್ಡಿನ ಕೌನ್ಸಿಲರ್, ಒಬ್ಬ ಹೆಲ್ತ್ ಇನ್ಸ್ ಪೆಕ್ಟರ್ ಅವರ ಜೊತೆ ಮೂರು ನಾಲ್ಕು ಅಧಿಕಾರಿಗಳು ನನ್ನ ಮನೆಗೆ ಬಂದರು. ನಿಮ್ಮ ಮಗ ಮನೆಯಂಗಳದಲ್ಲಿ ಸೈಕಲ್‍ನಲ್ಲಿ ಆಟವಾಡುತ್ತಿದ್ದಾನೆ. ಎಂದು ದೂರು ಸಿಕ್ಕಿದೆ. ನಿಮ್ಮ ಚಾಲಕ ಊಟ ಮಾಡಲು ನಿಮ್ಮ ಮನೆಗೆ ಬರುತ್ತಿದ್ದಾನೆ. ನಿಮಗೆ ಈ ಅವಧಿ ಐಸೋಲೇಶನ್ ಅವಧಿಯಲ್ಲವೇ ಎಂದು ಅವರು ಕೇಳಿದರು. (ನನ್ನ ಕೊರೊಂಟೈನ್ ಅವಧಿ ಮುಗಿದ ಮರುದಿನ ಮಹಿಳೆಯೊಬ್ಬರು ಮನೆಗೆ ಬಂದಾಗ ಅವರನ್ನೂ ತಡೆಯಲಾಗಿತ್ತು. ಇನ್ನು ನನ್ನ ಮನೆಗೆ ಕೌನ್ಸಿಲರ್ ಮತ್ತು ಆರೋಗ್ಯ ಇನ್ಸೆಪೆಕ್ಟರ್ ಬಂದಿದ್ದು ನನ್ನ ಮಗ ನನ್ನ ಮನೆಯ ಅಂಗಳದಲ್ಲಿ ಸೈಕಲ್ ಓಡಿಸಿದ್ದಕ್ಕಾಗಿತ್ತು. ಗೊತ್ತಿರಲಿ ಮನೆಯ ಅಂಗಳದಲ್ಲಿ, ಗೇಟಿನ ಹೊರಗೆ ಅಲ್ಲ.)

ಇಷ್ಟಕ್ಕೇ ವಿಷಯ ಮುಗೀಲಿಲ್ಲ. ಜನಪ್ರತಿನಿಧಿ ಮತ್ತು ಹೆಲ್ತ್ ಇನ್ಸ್ ಪೆಕ್ಟರ್ ಸಹಿತ ಬಂದವರ ಗತ್ತು ಜಾಗತಿಕ ಅಧಿಕಾರ ಹೊಣೆಗಾರಿಕೆ ಇದ್ದವರಂತಿತ್ತು. ಯಾಕೆ ನಮಗೆ ನೀವು ಕೊರೊಂಟೈನ್ ಆಗಿದ್ದು ತಿಳಿಸಿಲ್ಲ ಎಂದು ಜನಪ್ರತಿನಿಧಿಯಾದ ಸಹೋದರಿ ಜೋರು ಮಾಡತೊಡಗಿದರು. ಜನಪ್ರತಿನಿಧಿ ಎಂಬ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಪ್ರಿಯ ಸಹೋದರಿ… ಪ್ರಿಯ ಹೆಲ್ತ್ ಇನ್ಸ್ ಪೆಕ್ಟರ್… ಈ ಸಮಯದಲ್ಲಿ ಶರೀರದಿಂದ ಮಾತ್ರವಲ್ಲ. ಮನಸ್ಸಿನಿಂದಲೂ ದೂರವಿಡಬೇಕೆಂದು ನಿಮಗೆ ಯಾರು ಕಲಿಸಿದ್ದು..? ಒಬ್ಬ ವೈದ್ಯ ಎಂಬ ನೆಲೆಯಲ್ಲಿ ಈ ಸಮಯದಲ್ಲಿ ಸ್ವಂತಕ್ಕಿಂತಲೂ ರೋಗಿಯಾದ ಸಹೋದರರಿಗೆ ಮಹತ್ವ ಕೊಟ್ಟು ಅವರ ಆರೋಗ್ಯ ತಪಾಸಣೆ ಮಾಡಿದ್ದು ನನ್ನ ತಪ್ಪೇ?

ನಾನು ಈ ಪರಿಸ್ಥಿತಿಯನ್ನು ಕೇಳಿ ಪಡೆದುಕೊಂಡಿಲ್ಲ. ಒಬ್ಬರೋಗಿಯನ್ನು, ಒಂದಷ್ಟು ರೋಗಿಗಳನ್ನು ರಕ್ಷಿಸಲು ಶ್ರಮಿಸಿದ್ದುದರಿಂದ ನನಗೆ ಈ ಸ್ಥಿತಿ ಬಂದಿದೆ. ನಾಳೆ ಜಗತ್ತಿನಲ್ಲಿ ವಿಶೇಷತಃ ಕೇರಳದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯರ್ತರು ಮತ್ತು ನಿಮ್ಮಂತಹ ಜನಪ್ರತಿನಿಧಿಗಳು, ಅಧಿಕಾರಿಗಳ ಅಸಡ್ಡೆಯ ವರ್ತನೆಯನ್ನು ಸಹಿಸಬೇಕಾದವರೇ ನಾವು?

ಒಬ್ಬ ವೈದ್ಯನಾದ ನನಗೆ ಈ ಪರಿಸ್ಥಿತಿಯಾದರೆ ಊರಿನಲ್ಲಿ ಐಸೊಲೇಶನ್‍ನಲ್ಲಿರುವವರು ಆ ಅವಧಿ ಮುಗಿಸಿಕೊಂಡ ಸಾಮಾನ್ಯ ಜನರೊಡನೆ ನಿಮ್ಮ ಮಾತಿನ ಧಾಟಿ ಹೇಗಿರಬಹುದು? ಮಾನ್ಯ ಮುಖ್ಯಮಂತ್ರಿ ಒಗ್ಗಟ್ಟಿನ ಕುರಿತು, ಆರೋಗ್ಯ ಕಾರ್ಯಕರ್ತರ ಕೆಲಸಗ ಕುರಿತು ಹೇಳುತ್ತಲಿದ್ದಾರೆ. ರೋಗದಿಂದ ಮುಕ್ತಗೊಳ್ಳುತ್ತಿರುವ ಈ ಸಮಯದಲ್ಲಿ ಜನಸೇವೆ ಎಂಬುದು ಕೇವಲ ಬಾಯಿಮಾತಲ್ಲ ಎಂದು ನೆನಪಿಸುವೆನು. ಜೊತೆಗೆ ಒಬ್ಬ ವೈದ್ಯ ಎಂಬ ನೆಲೆಯಲ್ಲಿ ಸದಾ ಸಮಯ ಅಗತ್ಯವಿರುವವರಿಗೆ ಬಾಗಿಲು ತೆರೆದಿಟ್ಟ ನನಗೆ , ನನ್ನ ಮನೆಯವರಿಗೆ ಕೆಲವು ಪ್ರಶ್ನೆ ಕೇಳಬೇಕಾಗಿದೆ. ನಾನು ಮತ್ತೆ ಚಿಕಿತ್ಸೆ ನೀಡಲು ಹೊರಡುತಿದ್ದೇನೆ. ಕೆಲವೊಮ್ಮೆ ಇದೇ ಸ್ಥಿತಿ ಇನ್ನೊಮ್ಮೆ ಬರಲಾರದು ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಅಂದು ಈ ನಾಡು ನನಗೆ ಕಾವಲಿರಬಹುದೇ (ರಕ್ಷಣೆ ನೀಡಬಹುದೇ)? ಅಲ್ಲ, ಕಲ್ಲೆಸೆಯಲಿದೆಯೇ?

ಆರೋಗ್ಯ ಕ್ಷೇತ್ರದಲ್ಲಿ ಪ್ರಾಣ ಪಣವಾಗಿಟ್ಟು ಕೆಲಸ ಮಾಡುತ್ತಿರುವ ಸಾವಿರಾರು ಮಂದಿಗಾಗಿ ..

ಡಾಕ್ಟರ್ ಇದ್ರೀಸ್ ಪಯ್ಯೋಳಿ

ಓದುಗರೇ, sanmaraga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.