ಜೈಪುರ, ಆ. 6: ಗುಂಪು ಹತ್ಯೆ ಕೃತ್ಯಗಳು ಹೆಚ್ಚುತ್ತಿದ್ದು ಈ ನಡುವೆ ರಾಜಸ್ಥಾನ ಸರಕಾರವು ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಪಾಸು ಮಾಡಿದೆ. ಮಸೂದೆ ಪ್ರಕಾರ ಐದು ಲಕ್ಷ ರೂಪಾಯಿ ದಂಡ ಮತ್ತು ಜೀವಾವಧಿ ಶಿಕ್ಷೆ ನೀಡಲಾಗುವುದು. ದ ರಾಜಸ್ತಾನ್ ಪ್ರೊಟೆಕ್ಷನ್ ಫ್ರಂ ಲಿಂಚಿಂಗ್ ಬಿಲ್ -2019 ಎಂಬ ಹೆಸರಿನ ಮಸೂದೆಯನ್ನು ಪ್ರತಿಪಕ್ಷದ ತೀವ್ರ ವಿರೋಧದ ನಡುವೆ ಧ್ವನಿಮತದಿಂದ ರಾಜಸ್ತಾನದ ಅಶೋಕ್ ಗೆಹ್ಲೋಟ್ ಸರಕಾರ ಪಾಸು ಮಾಡಿದೆ.
ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದರೂ ಅದಕ್ಕೆ ಮಹತ್ವ ಸಿಗಲಿಲ್ಲ. ಪಾರ್ಲಿಮೆಂಟ್ ವಿಷಯಗಳ ಸಚಿವ ಶಾಂತಿ ಧರಿವಾಳ್ ಕಳೆದ ವಾರ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು. ಇಂಡಿಯನ್ ಪೀನಲ್ ಕೋಡ್ ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ನಲ್ಲಿ ಗುಂಪು ಹತ್ಯೆಯನ್ನು ನಿಭಾಯಿಸುವ ಸೆಕ್ಷನ್ಗಳು ಇದ್ದರೂ ಅದು ಸಾಲುವುದಿಲ್ಲ ಎಂದು ಮಸೂದೆಗೆ ಸಂಬಂಧಿಸಿದ ಚರ್ಚೆಯಲ್ಲಿ ಧರಿವಾಲ್ ಹೇಳಿದರು. ಇಂತಹ ಘಟನೆಗಳಲ್ಲಿ ಕಠಿಣ ಶಿಕ್ಷೆ ನೀಡುವುದಕ್ಕಾಗಿ ಹೊಸ ಮಸೂದೆಯನ್ನು ಮಂಡಿಸಲಾಗಿದೆ ಎಂದು ಅವರು ಹೇಳಿದರು. ಜುಲೈ 16ರಂದು ರಾಜ್ಯದ ಬಜೆಟ್ ವೇಳೆಯಲ್ಲಿ ಇಂತಹ ಒಂದು ಮಸೂದೆ ತರಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದರು.












