ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 26: ದಿಲ್ಲಿಯಲ್ಲಿ ಪೌರತ್ವ ಕಾನೂನು ಪ್ರತಿಭಟನಾಕಾರರ ಮೇಲೆ ನಡೆದ ದಾಳಿಯ ವೇಳೆ ಕೊಲ್ಲಲ್ಪಟ್ಟಿರುವ ಪೊಲೀಸ್ ಹೆಡ್‍ಕಾನ್ಸ್ ಟೇಬಲ್ ರತನ್ ಲಾಲ್‍ರನ್ನು ಹುತಾತ್ಮರನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಊರವರು ಮತ್ತು ಸಂಬಂಧಿಕರು ಸೇರಿ ರಸ್ತೆ ತಡೆಯೊಡ್ಡಿದ್ದಾರೆ. ರಾಜಸ್ಥಾನದ ರತನ್‍ಲಾಲ್‍ರ ಗ್ರಾಮದಲ್ಲಿ ರಸ್ತೆ ತಡೆಯೊಡ್ಡಿ ಪ್ರತಿಭಟನೆ ನಡೆದಿದೆ. ಹುತಾತ್ಮನೆಂದು ಘೋಷಿಸದೆ ರತನ್‍ಲಾಲ್‍ರ ಮೃತದೇಹ ಸಂಸ್ಕಾರ ನಡೆಸುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. ರಾಜಸ್ತಾನದ ಸಿಕರ್ ಜಿಲ್ಲೆಯ ಸದಿನ್‍ಸರ್ ಗ್ರಾಮದ ರಸ್ತೆಯಲ್ಲಿ ರಸ್ತೆತಡೆ ನಿರ್ಮಿಸಿದ್ದಾರೆ. ಜಿಲ್ಲಾಡಳಿತ ಕುಟುಂಬ ಮತ್ತು ಊರವರನ್ನು ಸಮಾಧಾನಿಸಲು ಯತ್ನಿಸುತ್ತಿದ್ದರೂ ತಮ್ಮ ಬೇಡಿಕೆ ಅಂಗೀಕರಿಸದೆ ಹಿಂದೆ ಸರಿಯುವುದಿಲ್ಲ ಎಂದು ಇವರು ಹೇಳಿದರು.
ಚಾಂದ್ ಬಾಗಿನಲ್ಲಿ ನಡೆದ ಹಿಂಸಾಚಾರದ ವೇಳೆ ಕಲ್ಲೆಸೆತದಿಂದ ಗಾಯಗೊಂಡ 42 ವರ್ಷದ ರತನ್‍ಲಾಲ್ ಮೃತಪಟ್ಟಿದ್ದರು. ಮೂರು ಮಕ್ಕಳು ಮತ್ತು ಪತ್ನಿಯನ್ನು ಇವರು ಅಗಲಿದ್ದಾರೆ. ಮಂಗಳವಾರ ರತನ್ ಲಾಲ್‍ರ ದಿಲ್ಲಿಯ ಮನೆಗೆ ಬಂದಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ರ ವಿರುದ್ಧ ಕೂಡ ಪ್ರತಿಭಟನೆ ನಡೆದಿತ್ತು.












