ಜಾಮೀನಿಗೆ ಅರ್ಜಿ ಸಲ್ಲಿಸಿದ ಚಂದ್ರಶೇಖರ್ ಆಝಾದ್

0
1031

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಜ. 14: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ದಿಲ್ಲಿ ಪೊಲೀಸರು ಬಂಧಿಸಿದ ಭೀಮ್ ಆರ್ಮಿ ನಾಯಕ ಚಂದ್ರಶೇಖರ್ ಆಝಾದ್ ಜಾಮೀನು ಕೋರಿ ದಿಲ್ಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜಾಮಾ ಮಸೀದಿಯಿಂದ ದಿಲ್ಲಿಗೇಟ್‍ಗೆ ಜಾಥಾ ನಡೆಸಲು ಮತ್ತು ಹಿಂಸೆಗೆ ಪ್ರೇರೇಪಿಸಿದ್ದಾರೆ ಎಂಬ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಅದಕ್ಕೆ ಸಾಕ್ಷ್ಯಗಳಿಲ್ಲ ಎಂದು ಆಝಾದ್ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ. ಅರ್ಜಿ ನಾಳೆ ವಿಚಾರಣೆಗೆ ಬರಲಿದೆ.

ಪೌರತ್ವ ಕಾನೂನು ವಿರುದ್ಧ ಜಾಮಾ ಮಸೀದಿಯಿಂದ ಜಂತರ್ ಮಂತರ್ ವರೆಗೆ ಮಾರ್ಚ್ ನಡೆಸಲು ತೀರ್ಮಾನಿಸಲಾಗಿತ್ತು ಎಂದು ಆರೋಪಿಸಿ ಡಿಸೆಂಬರ್ 20ಕ್ಕೆ ಆಝಾದ್‍ರನ್ನು ಬಂಧಿಸಲಾಗಿತ್ತು. ಅನುಮತಿಯಿಲ್ಲದೆ ಮಾರ್ಚ್ ನಡೆಸಲು ಶ್ರಮಿಸಿದ್ದಾರೆ ಎಂದು ಅವರನ್ನು 21ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಇದೇ ವೇಳೆ ಸೋಮವಾರ ಆಝಾದ್‍ರನ್ನು ಚಿಕಿತ್ಸೆಗಾಗಿ ದಿಲ್ಲಿ ಏಮ್ಸ್ ಗೆ ಕರೆತರಲಾಗಿದೆ. ರಕ್ತದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚುವ ಪೊಲಿಸೈಟೇಮಿಯ ಎಂಬ ರೋಗಕ್ಕೆ ತುರ್ತು ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ಕೆಲವು ವೈದ್ಯರು ಹೇಳಿದ್ದರು. ನಂತರ ದಿಲ್ಲಿ ಕೋರ್ಟು ಜನವರಿ ಒಂಬತ್ತರಂದು ಆಝಾದ್‍ರಿಗೆ ಚಿಕಿತ್ಸೆ ಕೊಡಿಸಲು ತಿಹಾರ್ ಜೈಲು ಅಧಿಕಾರಿಗಳಿಗೆ ಆದೇಶಿಸಿತ್ತು. ಹೆಮೊಟಾಲಜಿ ಇಲಾಖೆಯ ಈಗಿನ ಚಿಕಿತ್ಸೆಯ ನಂತರ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಏಮ್ಸ್ ಮೂಲಗಳು ತಿಳಿಸಿವೆ.