ಉತ್ತರ ಪ್ರದೇಶದಿಂದ ಸಿಎಎಯ ಅಡಿಯಲ್ಲಿ ಮುಸ್ಲಿಮೇತರ ವಲಸಿಗರ ಪಟ್ಟಿ ರವಾನೆ

0
1744

ಸನ್ಮಾರ್ಗ ವಾರ್ತೆ-

ಲಕ್ನೊ, ಜ. 14: ಸಿ ಎ ಎ ಅಡಿಯಲ್ಲಿ ಮುಸ್ಲಿಮೇತರ ವಲಸಿಗರ ಪಟ್ಟಿಯನ್ನು ಉತ್ತರ ಪ್ರದೇಶ ಸರಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ. ಈ ರೀತಿ ಸಿಎಎಯ ಅಡಿಯಲ್ಲಿ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿದ ಮೊದಲ ರಾಜ್ಯ ಉತ್ತರ ಪ್ರದೇಶವಾಗಿದ್ದು ಈ ಪಟ್ಟಿಯಲ್ಲಿ ಹತ್ತೊಂಬತ್ತು ಜಿಲ್ಲೆಗಳು ಒಳಗೊಂಡಿವೆ.

ಪಿಲಿಬಿತ್ ಜಿಲ್ಲೆಯಲ್ಲಿ ಅತಿಹೆಚ್ಚು ವಲಸಿಗರು ಇದ್ದಾರೆ. ಉತ್ತರ ಪ್ರದೇಶದಲ್ಲಿ ಬಾಂಗ್ಲದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಬಂದ 32 ಸಾವಿರಕ್ಕೂ ಹೆಚ್ಚು ನಿರಾಶ್ರಿತರನ್ನು ಗುರುತಿಸಲಾಗಿದೆ. ಉತ್ತರ ಪ್ರದೇಶ ಸರಕಾರ ಮೊದಲ ಹಂತದಲ್ಲಿ ವಲಸಿಗರಿಗೆ ನಾಗರಿಕತೆ ನೀಡುವ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿದ್ದು ಹಿಂದೂ, ಬುದ್ಧ, ಸಿಖ್, ಕ್ರೈಸ್ತ , ಪಾರ್ಸಿಗಳು ಸೇರಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರದ ವಕ್ತಾರ ಇಂಧನ ಸಚಿವ ಶ್ರೀಕಾಂತ್ ಶರ್ಮ ಸೋಮವಾರ ತಿಳಿಸಿದರು. ಸಿಎಎ ಅಡಿಯಲ್ಲಿ ಬರುವ ವಲಸಿಗರಿಗೆ ಪೌರತ್ವ ನೀಡಬೇಕಾಗಿದೆ. ಜಿಲ್ಲೆಗಳಿಂದ ಸಿಕ್ಕಿದ ವರದಿಗಳ ಆಧಾರದಲ್ಲಿ ಮೊದಲ ಹಂತದಲ್ಲಿ 21 ಜಿಲ್ಲೆಗಳಲ್ಲಿ 32 ಸಾವಿರಕ್ಕೂ ಹೆಚ್ಚು ವಲಸಿಗರನ್ನು ಗುರುತಿಸಲಾಗಿದ್ದು ಜಿಲ್ಲಾಧಿಕಾರಿಗಳಿಗೆ ವಲಸಿಗರನ್ನು ಗುರುತಿಸುವ ಹೊಣೆಗಾರಿಕೆ ನೀಡಲಾಗಿತ್ತು. ಉಳಿದ ಜಿಲ್ಲೆಗಳ ಪಟ್ಟಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಚಿವ ಶರ್ಮ ಹೇಳಿದರು.