ಎಂಟು ಲಕ್ಷ ಖರ್ಚಿನಲ್ಲಿ ಮುಹಲ್ಲಿಂ ಮಂಝಿಲ್ ಗೆ ಶಿಲಾನ್ಯಾಸ ನೂತನ ಸ್ಪೀಕರ್ ಯುಟಿ ಖಾದರ್ ಗೆ ಸನ್ಮಾನ
ಸನ್ಮಾರ್ಗ ವಾರ್ತೆ
ಉಪ್ಪಿನಂಗಡಿ: ಧಾರ್ಮಿಕ ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆದ ಸಮಸ್ತ ಇಸ್ಲಾಮಿಕ್ ಮತ ವಿಧ್ಯಾಬ್ಯಾಸ ಬೋರ್ಡ್ ಅಧೀನದ ಜಂಹಿಯ್ಯತ್ತುಲ್ ಮುಹಲ್ಲಿಮೀನ್ ದಕ ಜಿಲ್ಲಾ ಸಮಿತಿಯ ಆಶ್ರಯಲ್ಲಿ ಮದ್ರಸ ಕ್ಷೇತ್ರಕ್ಕೆ ಶಕ್ತಿ ತುಂಬುವ ಸಲುವಾಗಿ ಸದರ್ ಮುಹಲ್ಲಿಂ ಸಂಗಮ ಜೂನ್ ಹನ್ನೆರಡು ಸೋಮವಾರ ಉಪ್ಪಿನಂಗಡಿಯ ಎಚ್ ಎಂ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದುವಾಶಿರ್ವಚನದ ಮೂಲಕ ಬೆಳ್ತಂಗಡಿ ಜಿಫ್ರೀ ತಂಙಳ್ ಉದ್ಘಾಟಿಸಿ ಮುಹಲ್ಲಿಮರು ಮಾದರಿ ಯೋಗ್ಯರಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಕೇಂದ್ರೀಯ ಸಂಪನ್ನೂಲ ವ್ಯಕ್ತಿಗಳಾಗಿ ವಿಚಾರ ಮಂಡಿಸಿ ಮಾತನಾಡಿದ ಕೊಡಗು ಅಬ್ದುರ್ಹ್ಮಾನ್ ಮುಸ್ಲಿಯಾರ್ ಮುಹಲ್ಲಿಮರ ಜವಾಬ್ದಾರಿ ಯನ್ನು ನೆನಪಿಸಿದರು. ಇನ್ನೋರ್ವ ಭಾಷಣಗಾರ ಅಸ್ಲಮ್ ಅಝ್ಹರಿ ಮಾತನಾಡಿ ತಮ್ಮ ಸ್ವಂತ ಜೀವನ ಬದಲಾದರೆ ಸಮಾಜವನ್ನು ಬದಲಾಯಿಸಲು ಸಾಧ್ಯ ಎಂದರು.
ಸಮಸ್ತ ಮುಶಾವರ ಸದಸ್ಯ ಉಸ್ಮಾನುಲ್ ಪೈಝಿ ಮಾತನಾಡಿ ಉಲಮಾಗಳು ವಸ್ತ್ರ ಸಂಹಿತೆಯಲ್ಲಿ ಕೂಡಾ ಇತರರಿಗೆ ಮಾದರಿಯಾಗಬೇಕು ಎಂದರು.
ರಾಜ್ಯ ದಾರಿಮಿ ಒಕ್ಕೂಟದ ಎಸ್ ಬಿ ದಾರಿಮಿಯವರು ಆಗಲೇ ಆಗಮಿಸಿದ ಸ್ಪೀಕರ್ ಯುಟಿ ಖಾದರ್ರನ್ನು ಸ್ವಾಗತಿಸಿ ಮಾತನಾಡಿ ಮುಹಲ್ಲಿಮರ ಬವಣೆ ನೀಗಿಸಲು ಸಮಾಜ ಮತ್ತು ಸರಕಾರ ಮುಂದೆ ಬರಬೇಕು.
ಲಕ್ಷಾಂತರ ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಕೊಡುವಾಗ ಕೆಲವೊಂದಿಷ್ಟು ಮದ್ರಸ ಅಧ್ಯಾಪಕರಿಗೆ ವಕ್ಫ್ ಬೋರ್ಡ್ ಮೂಲಕ ಅನುದಾನ ಬಿಡುಗಡೆ ಗೊಳಿಸಿದರೆ ಅದು ದೊಡ್ಡ ಹೊರೆಯಾಗದು ಎಂದರು.
ಜಿಲ್ಲೆಯ ಬಹುತೇಕ ಮದ್ರಸ ಗಳು ಸಮಸ್ತದ ಆದರ್ಶದಂತೆ ನಡೆಯುತ್ತಿದೆ. ಆದರೆ ವಕ್ಫ್, ಹಜ್ ಮೊದಲಾದ ಧಾರ್ಮಿಕ ಮಂಡಳಿಗೆ ಆಯ್ಕೆ ಮಾಡುವಾಗ ಸಮಸ್ತದ ಪ್ರತಿನಿಧಿಗಳನ್ನು ಕಡೆಗಣಿಸುವುದು ಇನ್ನು ಮುಂದೆ ಸಹಿಸಲಾಗದು ಎಂದರಲ್ಲದೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟ ಪಕ್ಷದ ಬೆನ್ನೆಲುಬಾಗಿ ನಿಲ್ಲಲು ಸಮಸ್ತದ ಅಭಿಮಾನಿಗಳು ಸದಾ ಮುಂಚೂಣಿಯಲ್ಲಿದ್ದರು. ಕೋಮುವಾದಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿದ ಇತಿಹಾಸ ಸಮಸ್ತದ ಕಾರ್ಯಕರ್ತರಿಗೆ ಇಲ್ಲ ಎಂದು ನೆನಪಿಸಿದರು.

ಇದೇ ಸಂಧರ್ಭದಲ್ಲಿ ಸರಕಾರದ ನೂತನ ಸ್ಪೀಕರ್ ಯುಟಿ ಖಾದರ್ ನ್ನು ಸನ್ಮಾನಿಸಲಾಯಿತು. ನಂತರ ಭಾಷಣ ಮಾಡಿದ ಸ್ಪೀಕರ್ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಾನು ಸದಾ ಬದ್ದನಾಗಿದ್ದೇನೆ. ಸಮುದಾಯದ ರಾಯಬಾರಿಗಳೆಂದರೆ ಅದು ಉಲಮಾಗಳು ಮಾತ್ರ.
ಅವರ ಮಾರ್ಗದರ್ಶನ ಪಡೆದು ಮುಂದೆ ಸಾಗಿದರೆ ಇಲ್ಲಿ ಅಶಾಂತಿ ಅವ್ಯವಸ್ಥೆ ಉಂಟಾಗುವುದಿಲ್ಲ. ನನ್ನ ಇತಿಮಿತಿಯಲ್ಲಿ ಸಮಸ್ತದ ಕಾರ್ಯಕರ್ತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಮಾರೋಪ ಭಾಷಣ ಮಾಡಿದ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಮಾತನಾಡಿ ಕುರ್ಆನ್ ಕಲಿಕೆಯಲ್ಲಿ ಉಂಟಾಗುವ ಲೋಪದೋಷಗಳನ್ನು ಸರಿಪಡಿಸಲು ಅಧ್ಯಾಪಕರು ಶ್ರದ್ಧೆವಹಿಸಬೇಕೆಂದು ಕರೆ ನೀಡಿದರು.
ಹಾಜಿ ಕೆಂಪಿ ಮುಸ್ತಪ ಶುಭ ಹಾರೈಸಿದರು.
ಜಿಲ್ಲಾ ಜಂಯಿತ್ತುಲ್ ಮುಹಲ್ಲಿಮೀನ್ ಅಧ್ಯಕ್ಷ ಹಾಜಿ ಶಂಸುದ್ದಿನ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.
ಕಡಬ ಇಬ್ರಾಹಿಂ ದಾರಿಮಿ ಕಿರಾಅತ್ ಪಠಿಸಿದರು.ಸಿದ್ದೀಖ್ ಪೈಝಿ ಕರಾಯ ಸ್ವಾಗತಿಸಿ ರೆಂಜಾಡಿ ದಾರಿಮಿ ವಂದಿಸಿದರು.
ಬೆಳಗ್ಗೆ ನಡೆದ ಸರಳ ಸಮಾರಂಭದಲ್ಲಿ ಕೇಂದ್ರಿಯ ಘಟಕದ ವತಿಯಿಂದ ಪ್ರತೀ ಜಿಲ್ಲೆಗೆ ಒಂದರಂತೆ ನೀಡಲಾಗುವ ಎಂಟು ಲಕ್ಷ ವೆಚ್ಚದ ಮುಹಲ್ಲಿಂ ಮಂಝಿಲ್ ಗೆ ಸಯ್ಯಿದ್ ಅನಸ್ ತಂಙಳ್ ಶಿಲಾನ್ಯಾಸ ಗೈದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಮನವಿ ವಾಚಿಸಿದರು.












