ಧರ್ಮ ಮತ್ತು ಸಂಘಟನೆ ಬೇರೆ ಬೇರೆ

0
360

ಸನ್ಮಾರ್ಗ ವಾರ್ತೆ

✍️ಅಬ್ದುಸ್ಸಲಾಮ್ ವಾಣಿಯಂಬಲಮ್

ಹಾಗೆಯೇ ಇಂತಹ ಸ್ವವಿಮರ್ಶೆಗಳು ಸಂಘಟನೆಯ ಶತ್ರುಗಳು ಸಂಘಟನೆಯಲ್ಲಿ ಅದರ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಲು ದುರುಪಯೋಗಪಡಿಸುತ್ತಾರೆಂದು ನಿರ್ಮಲ ಮನಸ್ಸಿನವರು ಆತಂಕ ಪಡುತ್ತಾರೆ. ಶತ್ರುಗಳು ಲೋಪಗಳನ್ನು ಸಂಗ್ರಹಿಸಿ ಸಂದರ್ಭಾನುಸಾರ ತೆಗೆದುಕೊಂಡು ಅವರ ನಿಲುವಿಗೆ ಪರಿವರ್ತಿಸಬಹುದು ಎಂಬ ಆತಂಕ ಅವರಿಗಿರುತ್ತದೆ. ನನಗೇ ಅದರ ಅನುಭವವಿದೆ. ಅಹ್ಲಲ್ ಇಸ್ಲಾಮೀ ಎಂಬ ಕೃತಿಯಲ್ಲಿ ಇಸ್ಲಾಮೀ ಸಂಘಟನೆಯ ಆಂತರಿಕ ಒತ್ತಡದ ಬಗ್ಗೆ ನಾನು ಬರೆದಿರುವುದನ್ನು ಕೆಲವು ಕಮ್ಯೂನಿಸ್ಟ್ ನಿಲುವಿನವರು ಕೆಲ ಭಾಗಗಳನ್ನು ಮರೆಮಾಚಿ ತುಂಡು ಮಾಡಿ ತಿದ್ದಿ ಉದ್ದರಿಸುತ್ತಿದ್ದರು.

ಯಾರಾದರೂ ದುರುಪಯೋಗ ಮಾಡಿ ದುರ್ವ್ಯಾಖ್ಯಾನ ಮಾಡಿದರೆ ಅದು ಎಂದಿಗೂ ಆತ್ಮಾರ್ಥವಾದ ವೈಚಾರಿಕವಾದ ವಿಮರ್ಶೆಗಳಿಗೆ ಬಾಧಕವಾಗದು. ಸುಳ್ಳು ಅಪಪ್ರಚಾರಗಳಿಗೆ ಹೆದರಿ ಸತ್ಯ ವಚನವನ್ನು ಅಡಗಿಸಿಡಲಾಗದು. ಜನರು ಯಾವಾಗಲೂ ಅಲ್ಲಾಹನ ವಚನವನ್ನು ಅದರ ಸ್ಥಾನದಲ್ಲಿ ಅಡಗಿಸಿಡಲು ನೋಡುತ್ತಾರೆ. ಆದರೂ ಅದು ಪ್ರಕಾಶಿಸಿ ಮಾರ್ಗದರ್ಶನ ನೀಡುತ್ತಾ ನೆಲೆ ನಿಂತಿದೆ. ನಮಗೆ ಅಲ್ಲಾಹನ ವಚನಗಳಿಗಿಂತ ಮಾನವರ ವಚನಗಳನ್ನು ಭದ್ರಪಡಿಸಿ ಸಂರಕ್ಷಿಸಬೇಕಾದ ಅಗತ್ಯವಿಲ್ಲ ಅಲ್ಲವೇ?

“ಅಲ್ಲಾಹನು ಎಲ್ಲಾ ಸಮುದಾಯಗಳು ದುರ್ಮಾರ್ಗದಲ್ಲಿ ಬೀಳದಿರಲು ಅವರ ಸಂರಕ್ಷಣೆಗಾಗಿ ಗುರಾಣಿ ನೀಡಿದ್ದಾನೆ. ಅದರಲ್ಲಿ ಯಾವುದಾದರೊಂದು ಸಂಘಟನೆಯನ್ನು ಲೋಪ ಸಂಭವಿಸುವುದರಿಂದ ಮುಕ್ತಗೊಳಿಸಿಲ್ಲ. ವಿಶೇಷವಾಗಿ ಇಜ್ತಿಹಾದ್‌ಗೆ ಸಂಭಂಧಿಸಿದ ವಿಷಯಗಳಲ್ಲಿ ನಿಲುವುಗಳು ವಿಭಿನ್ನವಾಗಲು ತಪ್ಪು ನಿರ್ಧಾರ ತಾಳಲು ಅಥವಾ ಸರಿಪಡಿಸಲು ಸಾಧ್ಯತೆಗಳಿವೆ.

ಪ್ರಮುಖ ಚಿಂತಕ ಇಂಟರ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇಸ್ಲಾಮಿಕ್ ಥಾಟ್ ಇದರ ಮೇಧಾವಿಯಾಗಿರುವ ಡಾಕ್ಟರ್ ತ್ವಾಹಾ ಜಾಬಿರ್ ಅಲ್ ಅಲವಾನಿ ಬರೆಯುತ್ತಾರೆ:
“ಪುನರ್ಚಿಂತನೆ, ವಿಮರ್ಶೆಗಳು ಸಂವಾದಗಳು ಇಂದು ಇಸ್ಲಾಮೀ ಸಂಘಟನೆಗಳಿಗೆ ಒಂದು ಹೊಸ ವಿಚಾರದಂತಾಗಿದೆ. ವಿಮರ್ಶೆ, ಟೀಕೆಗಳು ಕೆಲವರನ್ನು ಕಳವಳಗೊಳಿಸುತ್ತದೆ. ಅವರು ವಿಮರ್ಶೆಯನ್ನು ಆರೋಪ ಹೊರಿಸಿದಂತೆ, ಟೀಕಿಸಿದಂತೆ, ಅಪಕೀರ್ತಿಗೊಳಿಸಿದಂತೆ, ಇಸ್ಲಾಮಿನ ಶತ್ರುಗಳಿಗೆ ನೆರವಾದಂತೆ, ಮುಸ್ಲಿಮರ ಲೋಪ-ದೋಷಗಳನ್ನು ಬಹಿರಂಗಪಡಿಸಿದಂತೆ ಎಂದು ಭಾವಿಸುತ್ತಾರೆ.” (ಉಮರ್ ಉಬೈದ್ ಹಸನರವರ ಕೃತಿಯಲ್ಲಿ)

“ಮತ್ತೊಂದೆಡೆ ಪುನರ್ಚಿಂತನೆ ಮಾಡುವ ಮಹತ್ವವನ್ನು ಅರಿತಿರುವರೆಂದು ಭಾವಿಸುವ ಕೆಲವರಿದ್ದಾರೆ. ಅವರು ಲೋಪ ದೋಷಗಳನ್ನು ಹೇಳುವವರನ್ನು ಪ್ರಶಂಸಿಸುತ್ತಾರೆ. ಲೋಪ-ದೋಷಗಳನ್ನು ಎತ್ತಿ ತೋರಿಸದೆ ಇರುವವರಲ್ಲಿ ಒಳಿತಿಲ್ಲ ಎಂದು ಅವರು ಹೇಳುತ್ತಾರೆ. ಅದೇ ವೇಳೆ ಅವರ ಮಾತು ಮತ್ತು ಕೃತಿ, ಚಟುವಟಿಕೆಯಲ್ಲಿ ವ್ಯತ್ಯಾಸವಿರುತ್ತದೆ. ಯಾವುದಾದರೂ ಪ್ರಶ್ನೆ ಅಥವಾ ವಿಮರ್ಶೆಗಳು ಎದುರಾದರೆ ಅದು ಆಂತರಿಕವಾಗಲಿ ಹೊರಗಿನಿಂದ ಬರಲಿ ಅವರು ಅದರಲ್ಲಿ ಭಾಗಿಯಾಗಲು ಅಥವಾ ಆ ಬಗ್ಗೆ ಮರು ಚಿಂತನೆಗೆ ಮುಂದಾಗುವುದಿಲ್ಲ. ಅದನ್ನು ತಿರಸ್ಕರಿಸಲು ಅವರು ಶ್ರಮಿಸುತ್ತಾರೆ. ವಿಮರ್ಶೆ ಮಾಡುವವನ ಉದ್ದೇಶದ ಕುರಿತು ಅವರು ಕೆಲವೊಮ್ಮೆ ಪ್ರಶ್ನಿಸುತ್ತಾರೆ. ಆ ಮೂಲಕ ಅವರು ತಮ್ಮನ್ನೂ ತಮ್ಮ ಸಮುದಾಯವನ್ನೂ ಗತ ಕಾಲದ ಕೆಲವು ಘಟನೆಗಳಿಂದ ಸಮಕಾಲೀನ ಕೆಲವು ಅನುಭವಗಳಿಂದ ಪಾಠ ಕಲಿಯುವುದರಿಂದ ಅದು ತಡೆಯುತ್ತದೆ. ಇತರರು ಕೊನೆಗೊಳಿಸಿದ್ದಲ್ಲಿಂದ ಹೊಸ ನಿರ್ಮಾಣದ ಪ್ರಯತ್ನಗಳನ್ನು ಅವರು ತಡೆಯುತ್ತಾರೆ.”

ಡಾ. ಯೂಸುಫುಲ್ ಕರ್ಝಾವಿ ಮುಂದುವರಿದು ಹೇಳುತ್ತಾರೆ: “ಇಸ್ಲಾಮೀ ಸಂಘಟನೆಗೆ ಹಡಗನ್ನು ಅದು ಬಯಸಿದ ತೀರಕ್ಕೆ ತಲುಪಿಸಲು ಸಾಧ್ಯವಾಗಿಲ್ಲ. ಸಂಘಟನೆಯ ಕುರಿತು ಜನರು ಇರಿಸಿದ ಮಹಾ ನಿರೀಕ್ಷೆಗಳನ್ನು ಸಾಕ್ಷಾತ್ಕಾರಗೊಳಿಸಲು ಸಾಧ್ಯವಾಗಿಲ್ಲ.”

ಈ ಸೋಲಿನ ಬಗ್ಗೆ ಸಂಘಟನೆಯ ವಕ್ತಾರರು ವಿರೋಧಿಗಳು ಕೂಡಾ ಬಹಳಷ್ಟು ಹೇಳಿದ್ದಾರೆ. ಆ ಕಾರಣಗಳು ಬಾಹ್ಯವೇ? ಅಂದರೆ ಸಮುದ್ರದ ಗಾಳಿ ಸುಳಿಯ ಹಾಗೆಯೇ ಶತ್ರುಗಳ ಶಸ್ತ್ರ ಸಜ್ಜಿತ ಪಡೆಗಳು ಮುಳುಗು ಹಡಗುಗಳ ಕಾರಣ ಮುಂದೆ ಸಾಗಲು ಸಾಧ್ಯವಾಗದಿರುವುದೇಕೆ? ಸಂಘಟನೆಯ ಶಕ್ತಿ ಮೀರಿದ ಅನಿರೀಕ್ಷಿತ ದಿಗ್ಬಂಧಗಳು ಕಾರಣವಾಗಿದೆಯೇ? ಅಥವಾ ಅದೆಂದಿಗೂ ಯಾವುದೇ ಪೂರ್ವ ಸಿದ್ದತೆಯಿರದ ಒತ್ತಡಗಳು ಸಂಭವಿಸಿದ ಕಾರಣಕ್ಕಾಗಿಯೇ?
ಅಲ್ಲ. ಸೋಲಿಗೆ ಆಂತರಿಕ ಸಮಸ್ಯೆಗಳು ಕಾರಣವೇ? ಅಥವಾ ಹಡಗಿನೊಳಗಡೆಯೇ ಸಮಸ್ಯೆಗಳಿವೆಯೇ? ಬಿರುಗಾಳಿಯನ್ನು ಎದುರಿಸಲು ಪೂರ್ವ ಸಿದ್ದತೆ ಮಾಡಿಲ್ಲವೇ? ಅಥವಾ ನಾಯಕತ್ವದ ವೈಫಲ್ಯವೇ?
ನ್ಯಾಯೋಚಿತವಾಗಿ ಹೇಳಬೇಕೆಂದರೆ ಎರಡು ಕಾರಣಗಳಿವೆ.

ಸಂಘಟನಾ ವಿಮರ್ಶೆಯನ್ನು ತಡೆದು ನಿಲ್ಲಿಸುವುದರ ಬಗ್ಗೆ ಪ್ರಸಿದ್ಧ ಕುವೈಟ್ ಚಿಂತಕ ಡಾ. ಅಬ್ದುಲ್ಲಾ ನಫೀಸಿ ಹೀಗೆ ವಿಮರ್ಶಿಸಿದ್ದಾರೆ; ಧರ್ಮ ಮತ್ತು ಸಂಘಟನೆಯನ್ನು ಪ್ರತ್ಯೇಕವಾಗಿ ಗುರುತಿಸಬೇಕು.

ಧರ್ಮವು ಆದರ್ಶ ಮತ್ತು ಗುರಿಯಾಗಿದೆ. ಸಂಘಟನೆ ಮಾರ್ಗದರ್ಶಕವಾಗಿದೆ. ಅಲ್ ಇಖ್ವಾನುಲ್ ಮುಸ್ಲಿಮೂನ್ ಕೆಲವೊಮ್ಮೆ ಈ ಎರಡನ್ನೂ ಬೆರಸಿ ಆ ಮೂಲಕ ಸಂಘಟನೆ ಗುರಿಯಾಗಿ ಧರ್ಮವು ಸಂಘಟನೆಯನ್ನು ಸಂರಕ್ಷಿಸುವ ಮಾರ್ಗವಾಗಿ ಬದಲಾಗುವ ಸ್ಥಿತಿ ಉಂಟಾಯಿತು. ಇಲ್ಲಿ ಧರ್ಮಕ್ಕೆ ಮತ್ತು ಸಂಘಟನೆಗೆ ಅಪಾಯ ಸಂಭವಿಸುತ್ತದೆ. ಧರ್ಮ ವಿಮರ್ಶೆಗೆ ಅತೀತವಾಗಿದೆ. ಆದರೆ ಧರ್ಮ ಮತ್ತು ಸಂಘಟನೆ ಬೆರೆತಾಗ ಸಂಘಟನೆಯನ್ನು ವಿಮರ್ಶಿಸಬಾರದು ಎಂಬ ಧೋರಣೆ ಬಂತು. ಸಂಘಟನೆಯಲ್ಲಿ ಸ್ವವಿಮರ್ಶೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಸಹಜವಾಗಿ ತಮ್ಮ ಅಭಿಪ್ರಾಯ ಮಂಡಿಸಲು ಎಲ್ಲರ ಮುಂದೆ ಬಾಗಿಲನ್ನು ತೆರೆದಿಡಬೇಕು. ಇದು ಪ್ರಸಕ್ತ ಕಾಲದಲ್ಲಿ ಎಲ್ಲ ಸಂಘಟನೆಗಳು ಒಪ್ಪಿಕೊಂಡ ವಿಚಾರವಾಗಿದೆ.