ಧರಣಿ ನಿರತ ಸಂಸದರಿಗೆ ಬೆಳಿಗ್ಗೆ ಚಾ, ಉಪಾಹಾರ ತಂದ ರಾಜ್ಯಸಭಾ ಉಪಾಧ್ಯಕ್ಷರು

0
391

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.22: ಕೃಷಿ ಮಸೂದೆಯ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಸದನದಿಂದ ಹೊರಹಾಕಲ್ಪಟ್ಟು ಧರಣಿ ನಿರತರಾದ ಸಂಸದರಿಗೆ ಚಾ, ಮತ್ತು ಬೆಳಗ್ಗಿನ ಉಪಾಹಾರವನ್ನು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಪೂರೈಸಿದರು.

ಘೋಷಣೆಯನ್ನು ಕೂಗಿ, ಹಾಡು ಹಾಡಿ ರಾತ್ರೆಯ ವೇಳೆಯೂ ಪಾರ್ಲಿಮೆಂಟ್ ಸಮುಚ್ಚಯದ ಮಹಾತ್ಮಾ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಿದ ಸದಸ್ಯರಿಗೆ ಬೆಳಗ್ಗೆ ಹರಿವಂಶ್ ಚಾ ಹಾಗೂ ತಿಂಡಿಯನ್ನು ತಂದು ಕೊಟ್ಟರು. ಅವರೇ ಗ್ಲಾಸುಗಳಿಗೆ ಸುರಿದು ಚಹಾವನ್ನು ಪ್ರತಿಭಟನಾ ನಿರತರಿಗೆ ಕೊಟ್ಟರು. ಬೆಳಗ್ಗಿನ ಉಪಾಹಾರವನ್ನು ಬಡಿಸಿದರು. ಇವರೊಂದಿಗೆ ಮಾತಾನಾಡಿದ ನಂತರವೇ ಉಪಾಧ್ಯಕ್ಷರು ರಾಜ್ಯಸಭೆಗೆ ಮರಳಿದರು.

ರಾಜ್ಯಸಭೆಯಲ್ಲಿ ಹರಿವಂಶ್‍ರ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ರಾಜ್ಯಸಭಾಧ್ಯಕ್ಷರಾದ ವೆಂಕಯ್ಯ ನಾಯಿಡು ಸಂಸದರನ್ನು ಅಮಾನತುಗೊಳಿಸಿದ್ದರು. ಹರಿವಂಶರನ್ನು ಅಪಮಾನಿಸಿದವರಿಗೆ ಅವರೇ ಬೆಳಗ್ಗಿನ ಉಪಾಹಾರ ತಂದು ಕೊಟ್ಟದ್ದನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ್ದಾರೆ.

ಒಂದು ದಿವಸ ಮೊದಲು ತನ್ನನ್ನು ಆಕ್ರಮಿಸಿ, ಸಭೆಯಲ್ಲಿ ಅಪಮಾನಿಸಿದವರು ಧರಣಿ ಕೂತಾಗ ಅವರಿಗೆ ಚಾ ತಂದು ಕೊಟ್ಟದ್ದು ಉಪಸಭಾಧ್ಯಕ್ಷರ ಹೃದಯ ವೈಶಾಲ್ಯತೆಯನ್ನು, ಮಹಾ ಮನಸ್ಸನ್ನು ತೋರಿಸುತ್ತಿದೆ. ಅದು ಅವರ ಮಹತ್ವವನ್ನು ತೋರಿಸಿಕೊಡುತ್ತದೆ. ಹರಿವಂಶ್‍ರನ್ನು ಅಭಿನಂದಿಸುವುದರಲ್ಲಿ ತಾನು ಕೂಡ ಜನರೊಂದಿಗೆ ಸೇರುತ್ತೇನೆ ಎಂಬುದಾಗಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.