ನಾಳೆಯ ಜಂತರ್ ಮಂತರ್ ಪ್ರತಿಭಟನೆ ತಡೆಯಲು ಬೃಹತ್ ಭದ್ರತಾ ಪ್ಲಾನ್: ದೆಹಲಿಗೆ ಹೋಗುವ ಪ್ರಮುಖ ರೈಲುಗಳು ರದ್ದು, ಮಾರ್ಗ ಬದಲು; ಇಂಟರ್ನೆಟ್, ಆನ್‌ಲೈನ್ ಟ್ಯಾಕ್ಸಿ ಸೇವೆ ಸ್ಥಗಿತ ಸಾಧ್ಯತೆ

0
150

ಸನ್ಮಾರ್ಗ ವಾರ್ತೆ

ನವದೆಹಲಿ: ನವದೆಹಲಿಯ ಐತಿಹಾಸಿಕ ಜಂತರ್ ಮಂತರ್‌ನಲ್ಲಿ ನಾಳೆ (ಅಕ್ಟೋಬರ್ 10) ಕಾಕ್ರೋಚ್ ಜನತಾ ಪಾರ್ಟಿಯ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರ ಸಂಚಾರ ದಟ್ಟಣೆಯನ್ನು ತಪ್ಪಿಸಲು ಕೇಂದ್ರ ರೈಲ್ವೇ ಸಚಿವಾಲಯ ಹಾಗೂ ದೆಹಲಿ ಪೊಲೀಸರು ಅಭೂತಪೂರ್ವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಅಕ್ಟೋಬರ್ 10ರ ಶನಿವಾರ ಮುಂಜಾನೆ 4 ರಿಂದ ಮಧ್ಯಾಹ್ನ 2 ವರೆಗೆ (10 ಗಂಟೆಗಳ ಕಾಲ) ನವದೆಹಲಿ ಮತ್ತು ಹಝ್ರರತ್ ನಿಝಾಮುದ್ದೀನ್ ರೈಲು ನಿಲ್ದಾಣಗಳಿಗೆ ತಲುಪುವ ಹಾಗೂ ಅಲ್ಲಿಂದ ಹೊರಡುವ ಎಲ್ಲಾ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಅಕ್ಟೋಬರ್ 9 ರಂದು ಮಧ್ಯಾಹ್ನ 2 ಗಂಟೆಯ ನಂತರ ಹೊರಟು, ಅಕ್ಟೋಬರ್ 10 ರ ಬೆಳಿಗ್ಗೆ ದೆಹಲಿಗೆ ತಲುಪಬೇಕಿದ್ದ Train No. 12301 (Howrah-New Delhi Rajdhani Express) ಹಾಗೂ Train No. 12313 (Sealdah-New Delhi Rajdhani Express) ಸೇರಿದಂತೆ ರಾಜಸ್ಥಾನ, ಸಿರ್ಸಾ, ಉದಯಪುರ (Train No. 12964/12963) ಹಾಗೂ ಶ್ರೀ ಗಂಗಾನಗರ ಮಾರ್ಗದ ಹಲವು ರೈಲುಗಳನ್ನು ಅವುಗಳ ಆರಂಭಿಕ ನಿಲ್ದಾಣಗಳಲ್ಲೇ ರದ್ದುಗೊಳಿಸಲಾಗಿದೆ. ಈ ನಿರ್ಧಾರದಿಂದ ಸುಮಾರು 5,000ಕ್ಕೂ ಹೆಚ್ಚು ಪ್ರಯಾಣಿಕರಿಗೆ ತೊಂದರೆಯಾಗಲಿದೆಯಾದರೂ, ಭದ್ರತಾ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.

ದೆಹಲಿಯ ಗಡಿ ಭಾಗಗಳು ಮತ್ತು ಜಂತರ್ ಮಂತರ್ ಸುತ್ತಮುತ್ತ ಸೇರಿ ರಾಜಧಾನಿಯಾದ್ಯಂತ ಬಿಗಿ ಭದ್ರತೆ ಒದಗಿಸಲು ದೆಹಲಿ ಪೊಲೀಸ್, CRPF ಮತ್ತು ಅರೆಸೇನಾ ಪಡೆಗಳ ಸುಮಾರು 23,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೆಹಲಿ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿಯೊಂದು ವಾಹನವನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಇಂಟರ್ನೆಟ್ ಹಾಗೂ ಓಲಾ-ಊಬರ್ ಸೇವೆ ಸ್ಥಗಿತ ಸಾಧ್ಯತೆ

ಪ್ರತಿಭಟನಾಕಾರರು ಸಾಮಾಜಿಕ ಜಾಲತಾಣಗಳ ಮೂಲಕ ಸಂಘಟಿತರಾಗುವುದನ್ನು ಮತ್ತು ವದಂತಿ ಹರಡುವುದನ್ನು ತಡೆಯಲು ಕೇಂದ್ರ ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ಪ್ರದರ್ಶನಕಾರರ ಸಂಚಾರಕ್ಕೆ ಕಡಿವಾಣ ಹಾಕಲು ಓಲಾ, ಊಬರ್ ನಂತಹ ಆನ್‌ಲೈನ್ ಟ್ಯಾಕ್ಸಿ ಸೇವೆಗಳಿಗೆ ನಿರ್ಬಂಧ ಹೇರಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ದೆಹಲಿಯ ಗಡಿಗಳಲ್ಲಿ ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ಅನಗತ್ಯ ಪ್ರಯಾಣ ಮಾಡದೇ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಆಡಳಿತ ಮಂಡಳಿ ವಿನಂತಿಸಿದೆ.