ಖದೀಜ ನುಸ್ರತ್, ಅಬು ಧಾಬಿ
ಇಂದು ನಮಗೆ ಮೊಬೈಲ್ ಫೋನ್ ಗಳು ಜೀವನದ ಬಹುಮುಖ್ಯ ಭಾಗವಾಗಿ ಮಾರ್ಪಟ್ಟಿದೆ. ಇದು ಇಲ್ಲದಂತಹ ಒಂದು ಜೀವನವನ್ನು ಊಹಿಸಲು ಸಾಧ್ಯವಿಲ್ಲ. ಮೊಬೈಲ್ ಗಳು ಕರೆ ಮಾಡಲು ಮಾತ್ರವಲ್ಲದೆ ಆಟ ಆಡಲು, ಸಂದೇಶ ರವಾನಿಸಲು, ಈ ಮೈಲ್,ಚಾಟಿಂಗ್ ಮಾಡಲು, ಛಾಯಾಚಿತ್ರ ತೆಗೆಯಲು, ವಿವಿಧ ರೀತಿಯ ಎಪ್ಲಿಕೇಶನ್ ಗಳನ್ನು ಉಪಯೋಗಿಸಲು ತುಂಬಾ ಉಪಕಾರಿಯಾಗಿದೆ.
ನಮ್ಮಲ್ಲಿ ಇಂದು ಮಕ್ಕಳು ಹಿರಿಯವರು ಎಂಬ ಬೇಧಬಾವವಿಲ್ಲದೆ ಎಲ್ಲರೂ ಸ್ಕ್ರೀನ್ (ಪರದೆ) ಚಟಕ್ಕೆ ಬಲಿಯಾಗಿದ್ದೇವೆ. ಮನಶ್ಶಾಸ್ತ್ರಜ್ಞರ ಪ್ರಕಾರ ಇದು ಸಿಗರೇಟ್, ಮದ್ಯ ಅಥವಾ ಲಹರಿ ಪದಾರ್ಥಗಳಿಗಿಂತಲೂ ತೀವ್ರ ಹಾಗೂ ವಿನಾಶಕಾರಿಯಾಗಿದೆ . ಇದನ್ನು ಡಿಜಿಟಲ್ ಹೆರೋಇನ್ ಎಂದು ಹೇಳಲಾಗುತ್ತದೆ. ವಸ್ತ್ರ, ಮನೆ, ಆಹಾರ, ಗಾಳಿ, ನೀರಿನಂತೆಯೇ ಮೊಬೈಲ್, ಕಂಪ್ಯೂಟರ್, ವೈಫೈ ಗಳೂ ಮುಂದಿನ ತಲೆಮಾರುಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಸೇರಬಹುದು ಎಂಬುದರಲ್ಲಿ ಸಂಶಯವಿಲ್ಲ.
ಹೊಸ ಹೊಸ ತಂತ್ರಜ್ಞಾನಗಳೆಲ್ಲವೂ ಅತ್ಯಂತ ದೊಡ್ಡ ಅನುಗ್ರಹಗಳಾಗಿರುತ್ತದೆ. ಆದರೆ ಅವುಗಳನ್ನು ಯಾವ ರೀತಿ ಉಪಯೋಗಿಸಬೇಕೆಂದು ನಾವು ಸರಿಯಾಗಿ ಅರಿತಿರಬೇಕು. ಇಲ್ಲವಾದರೆ ಅದು ನಮ್ಮ ನಾಶಕ್ಕೆ ಕಾರಣವಾಗಬಹುದು. ಚೂರಿಯಿಂದ ಇರಿದು ಕೊಲ್ಲಬಹುದೆಂಬ ಕಾರಣಕ್ಕೆ ಚೂರಿಯು ನಿಷ್ಪ್ರಯೋಜಕ ವಸ್ತು ಆಗಲಾರದು. ಚೂರಿಯಿಂದ ಹಲವಾರು ಪ್ರಯೋಜನಗಳೂ ಇವೆ. ಅದೇ ರೀತಿ ಮೊಬೈಲ್, ಕಂಪ್ಯೂಟರ್ ಗಳನ್ನು ಸಮಯದ ಇತಿಮಿತಿಯೊಂದಿಗೆ ನಮಗೂ ಸಮಾಜಕ್ಕೂ ಪ್ರಯೋಜನಕಾರಿಯಾಗುವ ರೀತಿಯಲ್ಲಿ, ಅದರಲ್ಲಿ ನಾವು ಕಳೆಯುವಂತಹ ಸಮಯ, ಕೆಲಸ ಸತ್ಕರ್ಮವಾಗುವಂತೆಯೇ ಉಪಯೋಗಿಸಬೇಕು. ಮೊಬೈಲ್ ನಲ್ಲಿ ನಾವು ಒಂಟಿಯಾಗಿ ಕುಳಿತು ಮಾಡುವ ಕೆಲಸವನ್ನು ಅಲ್ಲಾಹನು ನೋಡುತ್ತಿರುತ್ತಾನೆ ಎಂಬ ಬೋಧವಿರಬೇಕು. “ನೀವೆಲ್ಲಿದ್ದರೂ ಅವನು ನಿಮ್ಮ ಜೊತೆಗಿದ್ದಾನೆ. ನೀವು ಮಾಡುವುದೆಲ್ಲವನ್ನೂ ಅವನು ನೋಡುತ್ತಿದ್ದಾನೆ.” (ಅಲ್ ಹದೀದ್: 4)
ನಾವು ಇಂದು ವಾಟ್ಸಾಪ್, ಫೇಸ್ ಬುಕ್ ನ ಕಾಲದಲ್ಲಿ ವಾಸಿಸುತ್ತಿದ್ದೇವೆ. ಇದರಿಂದ ಹಲವಾರು ಪ್ರಯೋಜನಗಳಾಗಿವೆ. ಜಗತ್ತಿನ ಮೂಲೆಯಲ್ಲಿರುವ ಹಳೆ ಮಿತ್ರರನ್ನು, ಸಂಬಂಧಿಕರನ್ನು ಒಂದುಗೂಡಿಸಿದೆ. ಆದರೆ ಅದನ್ನು ನಾವು ಒಂದು ಮಿತಿಯೊಂದಿಗೇ ಬಳಸಬೇಕು. ಫೇಸ್ ಬುಕ್, ವಾಟ್ಸಾಪ್ ಗಳು ನಿಜವಾದ ಜೀವನವಲ್ಲ. ಅದು ನಮಗರಿವಿಲ್ಲದಂತೆಯೇ ನಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದೆ. ಅದರಾಚೆಗೂ ನಾವು ಮಾಡಬೇಕಾದ ಅನೇಕ ಕಾರ್ಯಗಳಿವೆ. ನಮಾಝ್, ಕುರ್ ಆನ್ ಪಾರಾಯಣ, ದೇವಸ್ಮರಣೆ, ಪತಿಪತ್ನಿ ಮಾತಾಪಿತರು ಮಕ್ಕಳ ಸಹಜೀವಿಗಳ ಹಕ್ಕುಬಾಧ್ಯತೆಗಳಿವೆ.
ಇಂದು ನಾವು ಲೈಕ್ ನ ಕಾಲಘಟ್ಟದಲ್ಲಿ ಜೀವಿಸುತ್ತಿದ್ದೇವೆ. ಒಂಟಿಯಾಗಿ ಕುಳಿತು ರಹಸ್ಯವಾಗಿ ಸೃಷ್ಟಿಕರ್ತನನ್ನು ಆರಾಧಿಸುವ/ಪ್ರಾರ್ಥಿಸುವ ಜೀವನ ಕಣ್ಮರೆಯಾಗುತ್ತಿದೆ. ಬದಲಾಗಿ ಮನೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ, ತಯಾರಿಸುವ ಎಲ್ಲಾ ತಿಂಡಿ ತಿನಿಸುಗಳ, ಮನೆಗೆ ಬರುವ ಅಥಿತಿಗಳ , ಹೊಸ ಕಾರು, ವಸ್ತುಗಳ, ಮಕ್ಕಳ ಎಲ್ಲ ಸಾಧನೆಗಳ, ಪ್ರತಿಭೆಗಳ, ಪತಿ ಪತ್ನಿಯ ಒಡನಾಟ, ಪ್ರವಾಸ ಹೋಗುವುದನ್ನೂ, ಹೋಟೇಲಿಗೆ ಹೋಗಿ ತಿನ್ನುವುದರ, ಆರಾಧನೆಗಳ ಛಾಯಾಚಿತ್ರಗಳನ್ನು ತೆಗೆದು ಸಾಮಾಜಿಕ ತಾಣಗಳಲ್ಲಿ ಹಾಕುವುದು ಸರ್ವೇಸಾಮಾನ್ಯವಾಗಿದೆ. ನೋಡಿದವರೆಲ್ಲರೂ ಲೈಕ್ ಹಾಕಬೇಕೆಂದು ಮತ್ತು ವಾವ್, ನೈಸ್, ಕನ್’ಗ್ರಾಟ್ಸ್ ಎಂದು ಅಭಿನಂದಿಸಬೇಕೆಂದು ಬಯಸುತ್ತಾರೆ.
ನಮಗೆ ಇಂದು ಖಾಸಗೀ ಜೀವನದ ಅಗತ್ಯವಿದೆ. ಅದು ದಿನದಿಂದ ದಿನಕ್ಕೆ ಮರೀಚಿಕೆಯಾಗುತ್ತಿದೆ. ಅಲ್ಲಾಹನು ನೀಡಿದ ಅನುಗ್ರಹಗಳನ್ನು ಜಗತ್ತಿಡೀ ತೋರಿಸುತ್ತಾ ಹೋದರೆ ಅದು ಇಲ್ಲದವರ ಮನಸ್ಸಿನಲ್ಲಿ ಆಸೆ ಹುಟ್ಟಬಹುದು. ನಮ್ಮ ವೈಯಕ್ತಿಕ ವಿಷಯಗಳನ್ನು ಮತ್ತು ಅಲ್ಲಾಹನು ನೀಡಿದ ಅನುಗ್ರಹಗಳನ್ನು ಹತ್ತಿರದ ಸಂಬಂಧಿಕರು, ಗೆಳೆಯರು ಮತ್ತು ನಮ್ಮನ್ನು ಇಷ್ಟಪಡುವವರಿಗೆ ಮಾತ್ರ ತಿಳಿಸಿದರೆ ಸಾಕು. ಅನ್ಯಥಾ ನಮ್ಮ ಮೇಲೆ ದ್ವೇಷ ಇರುವವರು ನಮ್ಮ ಬಗ್ಗೆ ಅಸೂಯೆ ಪಡುವರು . ಯೂಸುಫ್(ಅ) ತಮ್ಮ ಸ್ವಪ್ನವನ್ನು ಯಅ’ಕೂಬ್(ಅ) ರಿಗೆ ತಿಳಿಸಿದಾಗ ಅವರು ಹೇಳಿದ ಮಾತು, “ಮಗನೇ, ನಿನ್ನ ಈ ಸ್ವಪ್ನವನ್ನು ನಿನ್ನ ಸಹೋದರರೊಡನೆ ಹೇಳಬೇಡ. ಅನ್ಯಥಾ ಅವರು ನಿನ್ನ ವಿರುದ್ಧ ಒಳಸಂಚು ನಡೆಸುವರು.”( ಆ ಸಹೋದರರೆಲ್ಲರೂ ಓರ್ವ ಪ್ರವಾದಿಯ ಮಕ್ಕಳಾಗಿದ್ದರು.)
ನಾವು ಇಂದು ವಾಟ್ಸಾಪ್, ಫೇಸ್ ಬುಕ್ ನಲ್ಲಿ ಶೇರ್ ಮಾಡುವ ವಿಷಯಗಳೇನು? ಯಾವುದೇ ಸಂದೇಶಗಳಿಲ್ಲದ ವ್ಯರ್ಥ ವೀಡಿಯೋ, ಅನಗತ್ಯ ವಾಯ್ಸ್, ಚರ್ಚೆ,ಲೇಖನ ಅಥವಾ ಫೋಟೋಗಳೇ? ಸಮಾಜದಲ್ಲಿ ನಡೆಯುವ ವಿವಾಹಗಳು, ವಸ್ತ್ರಾಭರಣ, ಮದುಮಗ ಮದುಮಗಳ ಛಾಯಾಚಿತ್ರಗಳು , ಶ್ರಿಮಂತರ ಮನೆಗಳ ಅಲಂಕಾರಗಳು . ಈ ಫೋಟೋ ಗಳು ವೈರಲ್ ಆಗುತ್ತಿದೆ ಆದರೆ ಇದರಿಂದ ಅನ್ಯಾಯ, ಅಕ್ರಮ, ಅಸಮಾನತೆ ಬಡತನವಿಲ್ಲದ ಒಂದು ಸಮಾಜವನ್ನು ನಿರ್ಮಿಸಲು ಸಾದ್ಯವಿಲ್ಲ.
ಬದಲಾಗಿ ಕುರ್ ಆನ್ ಸೂಕ್ತಗಳು ಅಥವಾ ಪ್ರವಾದಿ ವಚನದಂತಹ ಅತುತ್ತಮ ಸಂದೇಶಗಳನ್ನುಅತ್ಯಾಕರ್ಷಕವಾಗಿ ಜನರಿಗೆ ಮನಮುಟ್ಟುವಂತೆ ಕಳುಹಿಸಿದರೆ ನಮಗೆ ಅರಿವಿಲ್ಲದಂತೆ ಇಹ ಮತ್ತು ಪರಲೋಕದಲ್ಲಿ ಪುಣ್ಯ ಸಿಗುತ್ತದೆ. ಮಾತ್ರವಲ್ಲ ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಕೂಡಿದ, ಯಶಸ್ವೀ ಜೀವನ ನಡೆಸಲು ಎಲ್ಲರಿಗೂ ಸಾಧ್ಯವಾಗುತ್ತದೆ. ಇಂತಹ ಸಂದೇಶಗಳನ್ನು ಯಾಕೆ ನಮಗೆ ವೈರಲ್ ಮಾಡಲು ಸಾಧ್ಯವಾಗುತ್ತಿಲ್ಲ? ಇಂದು ಎಲ್ಲರ ಮೊಬೈಲ್ ನಲ್ಲೂ ಕುರ್ ಆನ್ ಆಪ್ ಇದೆ. ಅದರೆ ನಾವು ಅದರಿಂದ ಎಷ್ಟು ಪ್ರಯೋಜನ ಪಡೆಯುತ್ತಿದ್ದೇವೆ ಎಂದು ಆಲೋಚಿಸಬೇಕಾಗಿದೆ.
ದಿನದಲ್ಲಿ ಇಪ್ಪತ್ತೈದು ಗಂಟೆಗಳಿದ್ದರೂ ನೋಡಿ ಮುಗಿಯದಷ್ಟು ಮೆಸೇಜ್ ಗಳಿರುವ ಗ್ರೂಪ್ ಗಳಿವೆ. ಕೆಲವು ಸಮಯದ ಹಿಂದೆ ನಮ್ಮ ಮೊಬೈಲ್ ನಲ್ಲಿ ನಾಲ್ಕೈದು ಗ್ರೂಪ್ ಗಳಿದ್ದರೆ ಇಂದು ಕೆಲವರ ಮೊಬೈಲ್ ಗಳಲ್ಲಿ ನಲ್ವತ್ತು, ಐವತ್ತು ಅಥವಾ ಅರ್ವತ್ತಕ್ಕೆ ಏರಿರಬಹುದು. ಪ್ರತಿಯೊಂದು ಗ್ರೂಪ್ ಗೆ ಬೇರೆ ಬೇರೆ ರೀತಿಯ ಉದ್ದೇಶ, ಆಶಯಗಳಿರಬಹುದು. ಎಲ್ಲವನ್ನೂ ಅರ್ಥ ಮಾಡಿಕೊಂಡು ಅಗತ್ಯವಿರುವ ಮೆಸೇಜ್ ಗಳನ್ನು ಮಾತ್ರ ಕಳುಹಿಸುತ್ತಾ ಮುಂದುವರೆಯಬೇಕು. ಉತ್ತಮ ಲೇಖನ, ವಾರ್ತೆಗಳನ್ನು ಓದುವುದು, ಆರೋಗ್ಯಪೂರ್ಣ ಶರೀರಕ್ಕೆ ಯಾವಾಗಲಾದರೊಮ್ಮೆ ಲಘು ಹಾಸ್ಯ ಕೂಡ ಬೇಕು. ನಮ್ಮಲ್ಲಿ ಪ್ರತಿಯೊಬ್ಬರ ಸಮಯವೂ ಅತ್ಯಂತ ಅಮೂಲ್ಯವಾದುದು. ಎಲ್ಲರೂ ತಾವು ಕಳೆದ ಸಮಯದ ಬಗ್ಗೆ ಅಲ್ಲಾಹನಲ್ಲಿ ಉತ್ತರ ನೀಡಲು ಜವಾಬ್ದಾರರಾಗಿದ್ದೇವೆ.
ಒಳಿತನ್ನು ಆಜ್ಞಾಪಿಸುವ ಮತ್ತು ಕೆಡುಕನ್ನು ವಿರೊಧಿಸುವ ಅತ್ಯುತ್ತಮ ಸಮುದಾಯವಾಗಿ ಅಲ್ಲಾಹನು ನಮ್ಮನ್ನು ಆಯ್ಕೆ ಮಾಡಿದ್ದಾನೆ. ನಾವು ನಿರರ್ಥಕ ಕೆಲಸ ಮಾಡುವವರಲ್ಲ. ಸುಳ್ಳು ವರದಿ ಹರಡುವವರಲ್ಲ. ನಮಗೆ ಸಿಕ್ಕಿದಂತಹ ಸುದ್ದಿಯು ಅಧಿಕೃತ ಮತ್ತು ಸತ್ಯವಾಗಿದೆಯೇ ಎಂದು ಪರೀಕ್ಷಿಸಬೇಕು. ಬದಲಾಗಿ ಸಿಕ್ಕಿದ್ದೆಲ್ಲವನ್ನೂ ಎಲ್ಲ ಗ್ರೂಪ್ ಗಳಲ್ಲೂ ಶೇರ್ ಮಾಡಬೇಕೆಂಬ ಅಭ್ಯಾಸವನ್ನು ಬಿಟ್ಟು ಬಿಡಬೇಕು. . ನೀವು ಕಳುಹಿಸಿದಂತಹ ಸಂದೇಶಗಳು ಸುಳ್ಳಾಗಿದ್ದರೆ ಸಮಾಜದಲ್ಲಿ ಅನಾಹುತಗಳನ್ನು ಉಂಟುಮಾಡಬಹುದು. ನಮಗೆ ಅಗತ್ಯವಾಗಿ ಸಿಗಬೇಕಾದಂತಹ ಅನಾರೊಗ್ಯ ಅಥವಾ ಮರಣದಂತಹ ಅನೇಕ ತುರ್ತು ಸಂದೇಶಗಳು, ಮೆಸೇಜ್ ಗಳ ರಾಶಿಯಿಂದಾಗಿ ಮೊಬೈಲ್ ನಿಷ್ಕ್ರಿಯವಾಗಿ ಸಮಯಕ್ಕೆ ಸರಿಯಾಗಿ ಸಿಗದೇ ಇರುವ ಸಾಧ್ಯತೆಗಳಿವೆ.
ಮೊಬೈಲ್ ಗಳ ಅತಿಯಾದ ಬಳಕೆಯಿಂದ ನಮ್ಮಲ್ಲಿ ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆ. ಹಿಂದೆ ಹತ್ತಿರದ ಸಂಬಂಧಿಕರ ಎಲ್ಲರ ಫೋನ್ ನಂಬರ್ ನೆನಪಿನಲ್ಲಿಟ್ಟುಕೊಳ್ಳುತ್ತಿದೆವು. ಇಂದು ಸ್ವಂತ ಮೊಬೈಲ್ ನಂಬರ್ ಕೂಡ ನೆನಪಿಲ್ಲದವರಿದ್ದಾರೆ. ಹಿಂದೆ ನಾವು ಶಾಂತವಾಗಿ ಕುಳಿತು ಪುಸ್ತಕಗಳನ್ನು ಓದುತ್ತಿದ್ದೆವು. ಮೊಬೈಲ್ ಬಂದ ನಂತರ ಆ ಅಭ್ಯಾಸವು ದೂರವಾಗತೊಡಗಿತು. ಎಲ್ಲರ ಸಂಬಂಧಗಳು ದೂರವಾಗುತ್ತಾ ಫ್ಯಾಮಿಲಿ ಗ್ರೂಪ್ ಗೆ ಸೀಮಿತವಾಗತೊಡಗಿತು. ಮಕ್ಕಳು ಮಾತಾಪಿತರನ್ನು ಕಡೆಗಣಿಸುವುದು, ಮಾತಾಪಿತರು ಮಕ್ಕಳನ್ನು ಕಡೆಗಣಿಸುವುದು. ಮೊಬೈಲ್ ಎಷ್ಟೋ ಕುಟುಂಬಗಳಲ್ಲಿ ಸಮಸ್ಯೆಗಳಿಗೆ, ಪತಿಪತ್ನಿಯರ ಮಧ್ಯೆ ಒಡಕಿಗೆ ಕೊನೆಗೆ ವಿಚ್ಛೇಧನಕ್ಕೂ ಕಾರಣವಾಗಿದೆ. ಮಕ್ಕಳಿಗೆ ಮೊಬೈಲ್ ಕೊಡುವ ಮಾತಾಪಿತರು ಮಕ್ಕಳ ಗುಲಾಮರಾಗುತ್ತಿದ್ದಾರೆ. ಮಕ್ಕಳು ಮೊಬೈಲ್ ನ ಗುಲಾಮರಾಗುತ್ತಾರೆ. ದಿನದಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಜಗತ್ತಿಗೆ ಆನ್ ಲೈನ್ ಇರುವವರು, ಮನೆಯವರೊಂದಿಗೆ ಆಫ್ ಲೈನ್ ಆಗಿರುತ್ತಾರೆಂದು ಮರೆಯುತ್ತಾರೆ. ಮೊಬೈಲ್ ನಲ್ಲಿ ಕುಳಿತುಕೊಳ್ಳುವ ಮಾತಾಪಿತರು ಮಕ್ಕಳಿಂದ ಅದನ್ನು ಕಸಿದುಕೊಳ್ಳುವ, ಅವರಿಗೆ ಉಪದೇಶಿಸುವ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ.
ಬೈಕ್ ಹಾಗೂ ಕಾರ್ ರೇಸ್ ನಂತಹ ಆಟಗಳು ಮಕ್ಕಳ ಮನಸ್ಸಿನಿಂದ ಕರುಣೆ, ಮಾನವೀಯ ಮೌಲ್ಯಗಳನ್ನು ಕಿತ್ತು ಸಹನೆಯಿಲ್ಲದ ಜೀವನದೆಡೆಗೆ ಪ್ರೇರೇಪಿಸುತ್ತದೆ. ಮನುಷ್ಯರನ್ನು, ಇತರ ಜೀವಿ, ಎಲ್ಲವನ್ನೂ ಹೊಡೆದು ಬಡಿದು ಶೂಟ್ ಮಾಡಿ ಹೇಗಾದರೂ ಗೆಲ್ಲಬೇಕೆಂಬ ಭಾವನೆ ಅವರ ಮನಸ್ಸಿನಲ್ಲಿ ತೀವ್ರವಾದವನ್ನು ಬೆಳೆಸುತ್ತದೆ. ಮಕ್ಕಳಲ್ಲಿ ಮರೆವು ಉಂಟು ಮಾಡುತ್ತಿದೆ, ಅವರಿಗೆ ಲೆಕ್ಕ ಮಾಡಲು ಸಾಧ್ಯವಾಗದು, ಕಲಿಯುವುದರಲ್ಲಿ ಏಕಾಗ್ರತೆ ಇರದು, ನಿದ್ರಾಹೀನತೆ, ಅಪಸ್ಮಾರ, ಮೂರ್ಛೆ ರೋಗ, ಗಂಟೆಗಟ್ಟಲೆ ಕುಳಿತುಕೊಳ್ಳುವುದರಿಂದ ಸ್ಥೂಲಕಾಯದಂತಹ ರೋಗಗಳಿಗೆ ಕಾರಣವಾಗುತ್ತದೆ. ಮಕ್ಕಳು ಮೊಬೈಲ್, ಕಂಪ್ಯೂಟರ್ ನಿಂದ ಸಾಂಕಲ್ಪಿಕ ಲೋಕವನ್ನು ಪ್ರವೇಶಿಸುತ್ತಾರೆ. ನನಗೆ ಫೇಸ್ ಬುಕ್ ನಲ್ಲಿ ಸಾವಿರ ಫ್ರೆಂಡ್ಸ್, ವಾಟ್ಸಾಪ್ ನಲ್ಲಿ ನೂರು ಗ್ರೂಪ್ ಗಳಿವೆ ಎಂಬ ಹೆಮ್ಮೆ ಅವರಲ್ಲಿ ಉಂಟಾಗಬಹುದು. ಆದರೆ ರೋಗ ಬಂದಾಗ ಅವರನ್ನು ನೋಡಿಕೊಳ್ಳಲು ತಂದೆ ತಾಯಿ ಅಥವಾ ಹತ್ತಿರದ ಸಂಬಂಧಿಕರು ಮಾತ್ರ ಇರುತ್ತಾರೆ. ಕಾರ್ಟೂನ್ ಗಳಲ್ಲಿ ಅನ್ಯಾಯವಾಗುವುದನ್ನು ನೋಡುತ್ತಾ ಕುಳಿತುಕೊಳ್ಳುವ ಮಕ್ಕಳಿಗೆ ಮುಂದೆ ನಿಜ ಜೀವನದಲ್ಲಿ ಅಂತಹ ಸಂದರ್ಭ ಬಂದಾಗ ಅದನ್ನು ನೋಡುತ್ತಲೇ ನಿಲ್ಲುತ್ತಾರೆ. ಎದುರಿಸುವ, ಪ್ರತಿಭಟಿಸುವ ಧೈರ್ಯ ಬರುವುದಿಲ್ಲ.
ಗ್ಯಾಜೆಟ್ ಗಳ ಅತಿಯಾದ ಬಳಕೆಯಿಂದ ಕಣ್ಣಿಗೆ ಸಂಬಂಧಿಸಿದ ರೋಗ, ಟೆಕ್ಸ್ಟ್ ನೆಕ್, ಕುಳಿತುಕೊಳ್ಳುವುದರಿಂದ ಸ್ಥೂಲಕಾಯ, ಬೆನ್ನು ನೋವುಗಳಂತಹ ರೋಗಗಳು, ಮೊಬೈಲ್ ಹಾಗೂ ರೌಟರ್ ಗಳಂತಹ ಎಲೆಕ್ಟ್ರೋನಿಕ್ ವಸ್ತುಗಳ ವಿಕಿರಣದಿಂದ ಬಂಜೆತನ, ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳು ಇಂದು ಹೆಚ್ಚಾಗುತ್ತಿದೆ .ಅತಿಯಾಗಿ ಇಯರ್ ಫೋನ್ ಗಳನ್ನು ಉಪಯೋಗಿಸುವುದರಿಂದ ಕೇಳ್ವಿ ಶಕ್ತಿಯು ಕಡಿಮೆಯಾಗುತ್ತದೆ. ಬಿಡುವಿನ ಸಮಯದಲ್ಲಿ ಮೊಬೈಲ್ ನಲ್ಲಿ ಕಾಲಕಳೆಯುವುದು ಪರಿಹಾರವಲ್ಲ. 24 ನಾಲ್ಕು ಗಂಟೆಗಳಲ್ಲಿ ಅರ್ಧ ಅಥವಾ ಒಂದು ಗಂಟೆ ಹೀಗೆ ಮೊಬೈಲ್ ಗೆ ಸಮಯವನ್ನು ನಿಗದಿಪಡಿಸುವ. ಅಗತ್ಯವಿಲ್ಲದಾಗ ವೈಫೈ ಅಥವಾ ಡಾಟಾವನ್ನು ನಿಷ್ಕ್ರಿಯಗೊಳಿಸಿ ಗ್ಯಾಜೆಟ್ ಫ್ರೀ ಜಗತ್ತಿನ ಕುರಿತು ಆಲೋಚಿಸುವ ಕಾಲ ಸನ್ನಿಹಿತವಾಗಿದೆ.
ಮೊಬೈಲ್ ಚಟದಿಂದ ಪಾರಾಗಲು ಅದಕ್ಕೆ ಒಂದು ಪರ್ಯಾಯ ಮಾರ್ಗ ಬೇಕು. ಪವಿತ್ರ ಕುರ್ ಆನ್ ಅವತೀರ್ಣದ ಪ್ರಥಮ ಸೂಕ್ತ “ಓದಿರಿ” ಎಂಬ ಪದದಿಂದ ಆರಂಭಿಸಲಾಗಿದೆ. ಆದ್ದರಿಂದ ಕುರ್ ಆನ್ ವ್ಯಾಖ್ಯಾನ, ಹದೀಸ್ ಗ್ರಂಥ, ಪತ್ರಿಕೆ, ಒಳ್ಳೆಯ ಪುಸ್ತಕ, ನೀತಿ ಕಥೆ, ಲೇಖನಗಳನ್ನು ಓದುವ ಅಭ್ಯಾಸವನ್ನು ನಾವೂ ಬೆಳೆಸುವ ಮತ್ತು ನಮ್ಮ ಮಕ್ಕಳಿಗೂ ಮಾದರಿಯಾಗಿ ಉತ್ತಮ ಸಮಾಜವನ್ನು ನಿರ್ಮಿಸೋಣ.












