ಸಲ್ಲಲ್ಲಾಹು ಅಲೈಹಿ ವ ಸಲ್ಲಮ್

0
219

ಸನ್ಮಾರ್ಗ ಸಂಪಾದಕೀಯ

ಯಾವುದೇ ಜೀವಂತ ಸಿದ್ಧಾಂತದ ಲಕ್ಷಣ ಏನೆಂದರೆ, ಸದಾ ಚರ್ಚೆಯಲ್ಲಿರುವುದು. ಪ್ರತಿದಿನ ಆ ಸಿದ್ಧಾಂತದ ಸುತ್ತ ಚರ್ಚೆಗಳನ್ನು ನಡೆಸುವ ವಾತಾವರಣ ನಾಗರಿಕ ಸಮಾಜದಲ್ಲಿ ಅಸ್ತಿತ್ವದಲ್ಲಿರುವುದು.

ಮೃತ ಸಿದ್ಧಾಂತಕ್ಕೆ ಈ ಲಕ್ಷಣ ಇರುವುದಿಲ್ಲ. ಆ ಸಿದ್ಧಾಂತಕ್ಕೂ ಅದರ ಅನುಯಾಯಿಗಳೆಂದು ಹೇಳಿಕೊಳ್ಳುವವರಿಗೂ ಬಹುತೇಕ ಸಂಪರ್ಕ ಕಡಿದು ಹೋಗಿರುತ್ತದೆ. ಅವರು ತನ್ನಿಚ್ಛೆಯನ್ನು ಅ ನುಸರಿಸುತ್ತಿರುತ್ತಾರೆ. ಸಿದ್ಧಾಂತದಲ್ಲಿ ತಮಗೆ ಅನುಕೂಲಕರವೆಂದು ಅನಿಸಿದ್ದನ್ನು ಮಾತ್ರ ಪಾಲಿಸುತ್ತಾ, ಉಳಿದವುಗಳನ್ನು ತಿರಸ್ಕರಿಸುತ್ತಾ ಬದುಕುತ್ತಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಸಿದ್ಧಾಂತಕ್ಕಿಂತ ಅದರ ಅನುಯಾಯಿಗಳ ನಡವಳಿಕೆಗಳೇ ಚರ್ಚೆಗೊಳಗಾಗುವುದು ಹೆಚ್ಚು. ಹೀಗೆ ತಾವು ನಿರ್ದಿಷ್ಟ ಸಿದ್ಧಾಂತವನ್ನು ಅನುಸರಿಸುವವರು ಎಂದು ಹೇಳಿಕೊಳ್ಳುತ್ತಲೇ ಆ ಸಿದ್ಧಾಂತದ ಬಹು ಅಂಶವನ್ನು ಕೈಬಿಟ್ಟು ಬದುಕುತ್ತಿರುವವರು ಒಂದು ಕಡೆಯಾದರೆ, ತಮ್ಮ ಸಿದ್ಧಾಂತವೇ ಪರಮ ಸತ್ಯ ಮತ್ತು ಅದರ ಅನುಸರಣೆಯೇ ಇಹ-ಪರ ಯಶಸ್ಸಿನ ಹಾದಿ ಎಂದು ನಂಬಿ ಬದುಕುತ್ತಿರುವವರು ಇನ್ನೊಂದು ಕಡೆ. ಪ್ರವಾದಿ ಮುಹಮ್ಮದ್(ಸ-ಸಲ್ಲಲ್ಲಾಹು ಅಲೈಹಿ ವ ಸಲ್ಲಮ್- ಅವರ ಮೇಲೆ ಅಲ್ಲಾಹನ ಕರುಣೆ ಇರಲಿ) ಮತ್ತು ಅವರ ಅನುಯಾಯಿಗಳು ಈ ಎರಡನೇ ಗುಂಪಿನಲ್ಲಿದ್ದಾರೆ.

63 ವರ್ಷಗಳ ವರೆಗೆ ಬದುಕಿದ ಪ್ರವಾದಿ(ಸ), ಎಲ್ಲೂ ತನ್ನ ಚಿತ್ರವನ್ನು ಬಿಡಿಸಲು ಅನುಮತಿಸಿಲ್ಲ. ಎಲ್ಲಿ ಆರಾಧನೆಗೆ ಒಳಪಡುತ್ತೇನೋ ಎಂಬ ಭೀತಿಯೇ ಇದಕ್ಕೆ ಕಾರಣ ಇರಬೇಕು. ಹೀಗೆ ತನ್ನ ಚಿತ್ರವನ್ನು ಬಿಡಿಸಲು ಒಪ್ಪದ ಪ್ರವಾದಿಯ ಚಿತ್ರವನ್ನು ಅವರು ಕಾಲವಾಗಿ 1500 ವರ್ಷಗಳೇ ಸಂದ ಬಳಿಕವೂ ಅವರ ಅನುಯಾಯಿಗಳು ಅವರ ಚಿತ್ರವನ್ನು ಬಿಡಿಸದೇ ಅನುಸರಿಸುತ್ತಿದ್ದಾರೆ. ಅವರು ಕಲಿಸಿದ ನಮಾಝï, ಉಪವಾಸ, ಹಜ್ಜ್, ಝಕಾತ್ ಇತ್ಯಾದಿ ಮೂಲಭೂತ ಆರಾಧನಾ ರೀತಿಯನ್ನು ಅವರು ಕಲಿಸಿದಂತೆಯೇ ಇವತ್ತೂ ಅ ನುಸರಿಸುತ್ತಿದ್ದಾರೆ. ಅವರು ಕರಿಯ ಮತ್ತು ಬಿಳಿಯರನ್ನು, ಶ್ರೀಮಂತ ಮತ್ತು ಬಡವರನ್ನು, ರಾಜ ಮತ್ತು ಪ್ರಜೆಯನ್ನು, ಗುರು ಮತ್ತು ಶಿಷ್ಯನನ್ನು, ವಿದ್ವಾಂಸ ಮತ್ತು ಸಾಮಾನ್ಯನನ್ನು ಭುಜಕ್ಕೆ ಭುಜ ತಾಗಿಸಿ ನಮಾಝï‌ನಲ್ಲಿ ಸರತಿಯಲ್ಲಿ ನಿಲ್ಲಬೇಕೆಂದು ಕಲಿಸಿದ್ದನ್ನು ಅವರ ಅನುಯಾಯಿಗಳು ಇವತ್ತಿಗೂ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅವರು ಕಲಿಸಿದ ಅದೇ ರೀತಿಯಲ್ಲಿ ಉಪವಾಸವನ್ನು ಆಚರಿಸುತ್ತಿದ್ದಾರೆ. ಚಾಂದ್ರಮಾನ ಕ್ಯಾಲೆಂಡರಿನ 9ನೇ ತಿಂಗಳಾದ ರಮಝಾನಿನಲ್ಲಿಯೇ ಮತ್ತು ಅದೂ ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ಈಗಲೂ ಅವರು ಉಪವಾಸ ಆಚರಿಸುತ್ತಿದ್ದಾರೆ. ಹಜ್ಜ್ ಕರ್ಮವನ್ನು ಕೂಡ ಚಾಂದ್ರಮಾನ ಕ್ಯಾಲೆಂಡರಿನ 12ನೇ ತಿಂಗಳಲ್ಲೇ ನಿರ್ವಹಿಸುತ್ತಾರೆ ಮತ್ತು ಪ್ರವಾಹ, ಸಾಂಕ್ರಾಮಿಕ ರೋಗ, ಆರ್ಥಿಕ ಹಿಂಜರಿತ, ಯುದ್ಧ ಇತ್ಯಾದಿ ಸಹಜ ಕಾರಣಗಳನ್ನು ಮುಂದೊಡ್ಡಿ 10ನೇ ತಿಂಗಳಲ್ಲೋ ಅಥವಾ 5ನೇ ತಿಂಗಳಲ್ಲೋ ಹಜ್ಜ್ ನಿರ್ವಹಿಸುವುದಿಲ್ಲ. ಉಪವಾಸಕ್ಕೆ ಸಂಬಂಧಿಸಿಯೂ ಇವೇ ಮಾತುಗಳು ಅನ್ವಯಿಸುತ್ತವೆ.

ಆವರೆಗೆ ಮಕ್ಕಾದ ಕಾಬಾ ಭವನಕ್ಕೆ ಪ್ರವೇಶ ನಿಷಿದ್ಧಗೊಂಡಿದ್ದ ಕರಿಯರನ್ನು ಸಮಾನತೆಯ ದಾರದಲ್ಲಿ ಪೋಣಿಸುವ ಕ್ರಾಂತಿಕಾರಿ ಘೋಷಣೆಯ ದ್ಯೋತಕವಾಗಿ ಅವರು ಬಿಲಾಲ್ ಎಂಬ ಆಫ್ರಿಕನ್ ನೀಗ್ರೋವನ್ನು ಕಾಬಾ ಭವನದ ಮೇಲ್ಛಾವಣಿಗೆ ಹತ್ತಿಸಿ ಪ್ರಾರ್ಥನಾ ಕರೆಯನ್ನು ಮೊಳಗಿಸಿದರು. ಅರಬರಿಗೆ ಅರಬೇತರರಿಗಿಂತ, ಬಿಳಿಯರಿಗೆ ಕರಿಯರಿಗಿಂತ, ವಿದ್ವಾಂಸರಿಗೆ ಸಾಮಾನ್ಯರಿಗಿಂತ, ಶ್ರೀಮಂತರಿಗೆ ಬಡವರಿಗಿಂತ ಮನುಷ್ಯರೆಂಬ ನೆಲೆಯಲ್ಲಿ ಯಾವುದೇ ಮೇಲ್ಮೆಯಾಗಲಿ, ಹೆಚ್ಚುಗಾರಿಕೆಯಾಗಲಿ ಇಲ್ಲ ಎಂದು ಸಾರಿದರು. ಇವತ್ತಿಗೂ ಈ ಸಮಾನತೆಯ ಸಿದ್ಧಾಂತವನ್ನು ಚಾಚೂ ತಪ್ಪದೇ ಮುಸ್ಲಿಮರು ಪಾಲಿಸುತ್ತಿದ್ದಾರೆ. ಹೆಣ್ಣಿಗೆ ಆಸ್ತಿಯಲ್ಲಿ ಪಾಲು, ವಧುವಿಗೆ ವಿವಾಹ ಧನ, ವಿಧವೆಗೆ ವಿವಾಹ, ಹೆಣ್ಣು-ಗಂಡಿಗಿಬ್ಬರಿಗೂ ವಿಚ್ಛೇದನ ಸ್ವಾತಂತ್ರ‍್ಯ, ಹೆತ್ತವರನ್ನು ಆರೈಕೆ ಮಾಡುವ ಮಕ್ಕಳಿಗೆ ಸ್ವರ್ಗವಿದೆ ಎಂಬ ಬೋಧನೆಯ ಅನುಸರಣೆ, ಮದ್ಯಪಾನ ಮತ್ತು ಬಡ್ಡಿಯ ಬಗ್ಗೆ ತಿರಸ್ಕಾರ.. ಇತ್ಯಾದಿ ಪ್ರವಾದಿ ಮೌಲ್ಯಗಳನ್ನು 1500 ವರ್ಷಗಳ ಬಳಿಕ ಇವತ್ತೂ ಮುಸ್ಲಿಮರು ಸಣ್ಣ-ಪುಟ್ಟ ಲೋಪಗಳ ಹೊರತಾಗಿಯೂ ನಿಷ್ಠೆಯಿಂದ ಪಾಲಿಸುತ್ತಿದ್ದಾರೆ. ನಿಜವಾಗಿ,

ಸಿದ್ಧಾಂತಕ್ಕೆ ಬದ್ಧವಾದ ಮತ್ತು ಪ್ರವಾದಿಗೆ ನಿಷ್ಠವಾದ ಇಂಥದ್ದೊಂದು ಅನುಯಾಯಿ ವರ್ಗ ಈ ಜಗತ್ತಿನ ಇನ್ನಾವ ಸಿದ್ಧಾಂತಕ್ಕಾಗಲಿ, ವ್ಯಕ್ತಿಗಳಿಗಾಗಲಿ ಇಲ್ಲ. ಈ ಜಗತ್ತಿನಲ್ಲಿ ಪ್ರವಾದಿ ಮುಹಮ್ಮದರ(ಸ) ಹೊರತಾಗಿ ಅನೇಕ ಸಮಾಜ ಸುಧಾರಕರು, ಮಹಾನ್ ವ್ಯಕ್ತಿಗಳು ಬಂದು ಹೋಗಿದ್ದಾರೆ. ಅವರೆಲ್ಲರನ್ನೂ ಪ್ರೀತಿಸುವ ಮತ್ತು ಸ್ಮರಿಸುವ ವ್ಯಕ್ತಿಗಳು ಇವತ್ತಿಗೂ ಇದ್ದಾರೆ. ಆದರೆ, ಅವರು ಮಂಡಿಸಿದ ವಿಚಾರಧಾರೆಯನ್ನು ಅನುಸರಿಸುವ ವಿಷಯಕ್ಕೆ ಬಂದರೆ, ಇವರಲ್ಲಿ ಹೆಚ್ಚಿನವರು ಅನುತ್ತೀರ್ಣರಾಗುತ್ತಾರೆ. ಆದ್ದರಿಂದಲೇ,

ಪ್ರವಾದಿ(ಸ) ಮುಖ್ಯವಾಗುತ್ತಾರೆ. ಅವರು ಮತ್ತು ಅವರು ಮಂಡಿಸಿದ ವಿಚಾರಧಾರೆಗಳು ಈ ಸಮಾಜದಲ್ಲಿ ಪ್ರತಿನಿತ್ಯ ವಿಮರ್ಶೆ, ಟೀಕೆ, ಪ್ರಶ್ನೆ, ಮೆಚ್ಚುವಿಕೆಗೆ ಪಾತ್ರವಾಗುತ್ತಿರುವುದೇ ಅದು ಜೀವಂತ ಸಿದ್ಧಾಂತ ಎಂಬುದಕ್ಕೆ ಸಾಕ್ಷಿ. ಸಲ್ಲಲ್ಲಾಹು ಅಲೈಹಿ ವ ಸಲ್ಲಮ್.