ಬಿಜೆಪಿಯ ಅಪಪ್ರಚಾರದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ: ಆಪ್ ಸಚಿವ ರಾಜೇಂದ್ರ ಪಾಲ್ ಗೌತಮ್ ಸ್ಪಷ್ಟನೆ

0
161

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಹಿಂದೂ ದೇವತೆಗಳನ್ನು ನಿಂದಿಸಲಾಗಿದೆ ಎನ್ನಲಾದ ಧಾರ್ಮಿಕ ಮತಾಂತರ ಸಮಾರಂಭದಲ್ಲಿ ತನ್ನ ಉಪಸ್ಥಿತಿಯ ಬಗ್ಗೆ ಅಸಮಾಧಾನವನ್ನು ಎದುರಿಸುತ್ತಿರುವ ದೆಹಲಿ ಸಚಿವ ರಾಜೇಂದ್ರ ಪಾಲ್ ಗೌತಮ್, ಬಿಜೆಪಿ ತನ್ನ ವಿರುದ್ಧ “ವದಂತಿಗಳನ್ನು” ಹರಡುತ್ತಿದೆ ಎಂದು ಆರೋಪಿಸಿದ್ದಾರೆ ಮತ್ತು “ಇಂತಹ ಪ್ರಚಾರದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ” ಎಂದಿದ್ದಾರೆ.

ವಿಜಯ ದಶಮಿಯಂದು ಹತ್ತು ಸಾವಿರ ಮಂದಿ ಬೌದ್ಧ ಧರ್ಮ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಾದಕ್ಕೀಡಾಗಿದ್ದ ದಿಲ್ಲಿ ಸಮಾಜ ಕಲ್ಯಾಣ ಸಚಿವ ಹಾಗೂ ಆಪ್ ಮುಖಂಡ ರಾಜೇಂದ್ರ ಪಾಲ್ ಗೌತಮ್ ವಿವಾದದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳು ಮತ್ತು ದೇವರುಗಳನ್ನು ಪೂಜಿಸುವುದಿಲ್ಲ ಮತ್ತು ಹಿಂದೂ ಸಂಪ್ರದಾಯಗಳನ್ನು ಅನುಸರಿಸುವುದಿಲ್ಲ ಎಂದು ಪ್ರತಿಜ್ಞೆ ತೆಗೆದುಕೊಳ್ಳುವಂತೆ ಜನರಿಂದ ಹೇಳಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿತ್ತು‌.

ಇಂತಹ ನಿರಾಧಾರ ಆರೋಪಗಳ ಹಿಂದೆ ಬಿಜೆಪಿ ಇದೆ ಎಂದು ಗೌತಂ ಆರೋಪಿಸಿದ್ದಾರೆ. ಕಾರ್ಯಕ್ರಮದಲ್ಲಿ ಯಾರದೇ ಧರ್ಮ ವಿಶ್ವಾಸಕ್ಕೆ ಹಾನಿ ಮಾಡಿದ್ದರೆ ಕ್ಷಮೆ ಯಾಚಿಸುತ್ತೇನೆ ಗೌತಮ್ ಹೇಳಿದರು.

ವೀಡಿಯೊ ಪ್ರಸಾರದೊಂದಿಗೆ ಕಾರ್ಯಕ್ರಮದಲ್ಲಿದ್ದ ಸಚಿವರು ಹಿಂದೂಗಳ ವಿಶ್ವಾಸಕ್ಕೆ ಹಾನಿಗೈದಿದ್ದಾರೆ‌. ಅವರನ್ನು ಸರಕಾರದಿಂದ ಹೊರಗಿಡಬೇಕೆಂದು ಬಿಜೆಪಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ರನ್ನು ಆಗ್ರಹಿಸಿತ್ತು.

ಬಿಜೆಪಿ ತನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ. ಇದನ್ನು ತಾನು ಸಾಮಾಜಿಕ ಮಾಧ್ಯಮಗಳ ಮೂಲಕ ಅರಿತೆ ಎಂದು ಗೌತಮ್ ಹೇಳಿದರು. ತಾನೊಬ್ಬ ಉತ್ತಮ ಧರ್ಮವಿಶ್ವಾಸಿ. ಎಲ್ಲ ಹಿಂದೂ ದೇವತೆ ದೇವರನ್ನು ಗೌರವಿಸುವ ವ್ಯಕ್ತಿ. ಮಾತಿನಿಂದಲೋ, ಪ್ರವೃತ್ತಿಯಿಂದಲೋ ದೇವರನ್ನು ಅಪಮಾನಿಸುವುದನ್ನು ಕನಸಿನಲ್ಲಿಯೂ ಬಯಸಿಲ್ಲ ಎಂದು ಸಚಿವರು ಹೇಳಿದರು.

ದಿಲ್ಲಿಯಲ್ಲಿ ಅಂಬೇಡ್ಕರ್ ಭವನದಲ್ಲಿ ಹತ್ತು ಸಾವಿರದಷ್ಟು ಜನರು ಬೌದ್ಧ ಧರ್ಮ ಸ್ವೀಕರಿಸುವ ಕಾರ್ಯಕ್ರಮದಲ್ಲಿ ರಾಜೇಂದ್ರ ಪಾಲ್ ಗೌತಂ ಪಾಲ್ಗೊಂಡಿದ್ದರು. ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಕಾರ್ಯಕ್ರಮ ಸಂಘಟಿಸಿತ್ತು. ಡಾ. ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ಬುದ್ಧಿಸ್ಟ್ ಸೊಸೈಟಿ ಅಧ್ಯಕ್ಷರಾಗಿದ್ದಾರೆ. ಹಲವಾರು ಬೌದ್ಧ ಸನ್ಯಾಸಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.