ಸೌದಿ ಅರೇಬಿಯಾ: ಅನಧಿಕೃತ ನಿವಾಸಿಗಳ ಮಕ್ಕಳಿಗೂ ಶಾಲಾ ಪ್ರವೇಶಾತಿಗೆ ಅನುಮತಿ ನೀಡಲು ನಿರ್ಧಾರ

0
41

ಸನ್ಮಾರ್ಗ ವಾರ್ತೆ

ಬುರೈದ: ಸೌದಿ ಅರೇಬಿಯದಲ್ಲಿ ಅನಧಿಕೃತವಾಗಿ ವಾಸವಿರುವ ವಿದೇಶಿಯರ ಮಕ್ಕಳಿಗೆ ಹೊಸ ಅಧ್ಯಯನ ವರ್ಷದಲ್ಲಿ ಶಾಲೆಗೆ ಪ್ರವೇಶ ನೀಡಲು ಶಿಕ್ಷಣ ಸಚಿವಾಲಯ ನಿರ್ಧರಿಸಿದೆ.

ದೇಶದಲ್ಲಿ ಈಗ ಕೆಲಸ, ವಾಸ್ತವ್ಯದ ದಾಖಲೆ ಇಲ್ಲದೆ ಇರುವ ಹೆತ್ತವರು ಕೇಳಿದರೂ ಅವರ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲಾಗುವುದು. ಅಂತಹವರಿಗೆ ಅರ್ಜಿ‌ಗಳನ್ನು ನೀಡಬೇಕು. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ತಿಗೊಳಿಸಲು ಅವರು ವಾಸಿಸುವ ಪ್ರದೇಶದ ಗವರ್ನರ್ ಕಚೇರಿಗಳನ್ನು ಸಂಪರ್ಕಿಸುವಂತೆ ಸಚಿವಾಲಯ ಸೂಚನೆ ನೀಡಿದೆ.

ಗವರ್ನರೇಟಿನ ಅಂಗೀಕಾರ ದೊರಕಿದ ಬಳಿಕ ಸರಿಯಾಗಿ ಭರ್ತಿ ಮಾಡಲಾದ ಫಾರ್ಮಗಳನ್ನು ದಾಖಲಾತಿ ಕ್ರಮ ಪೂರ್ತಿಗೊಳಿಸಲು ಸಂಬಂಧಪಟ್ಟ ಶಾಲೆಯ ಅಧಿಕಾರಿಗಳಿಗೆ ನೀಡಬೇಕು. ಪ್ರತಿಯೊಂದು ಶೈಕ್ಷಣಿಕ ಜಿಲ್ಲೆಯಲ್ಲಿಯೂ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆಯ ಕುರಿತು ಪ್ರತೀ ತಿಂಗಳು ಜನರಲ್ ಅಡ್ಮಿಸ್ಟ್ರೇಶನ್ ಆಫ್ ಇವ್ಯಾಲುವೇಷನ್ ಆಂಡ್ ಅಡ್ಮಿಶನ್‌ಗೆ ಮಾಹಿತಿ ನೀಡಲು ಸಚಿವಾಲಯ  ಶಿಕ್ಷಣ ಇಲಾಖೆ ಕಚೇರಿಗೆ ನಿರ್ದೇಶನ ನೀಡಿದೆ.

ದಾಖಲೆಗಳನ್ನು ಸರಿಪಡಿಸಲು ಆಗದೇ ದೇಶದಲ್ಲಿ ವಾಸಿಸುವವರ ಅರ್ಜಿ ಫಾರ್ಮ್‌ಗಳ ಜೊತೆಗೆ ತಮ್ಮ ಪಾಸ್‍ಪೋರ್ಟ್, ನವೀಕರಣ ಸಾಧ್ಯವಾಗದ ಇಖಾಮ ಇರುವ ವಿದ್ಯಾರ್ಥಿಗಳು ಮತ್ತು ತಂದೆ ತಾಯಿಯರ ವಿವರಗಳನ್ನು ಒದಗಿಸಬೇಕು. ಖಾಯಂ ವಿಳಾಸ, ಫೋನ್ ನಂಬರ್ ನಮೂದಿಸಬೇಕು. ಅಧ್ಯಯನ ವರ್ಷದಲ್ಲಿ ದಾಖಲೆ ಸರಿಪಡಿಸಲಾಗುವುದು ಎಂಬ ಹೆತ್ತವರ ಭರವಸೆಯೊಂದಿಗೆ ಮಕ್ಕಳಿಗೆ ಶಾಲೆಗಳಿಗೆ ಪ್ರವೇಶ ಸಿಗಲಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.