ಹೊಸದಿಲ್ಲಿ, ಜು. 9: ಮುಸ್ಲಿಂ ಮಹಿಳೆಯರಿಗೆ ಮಸೀದಿ ಪ್ರವೇಶಿಸಲು ಅವಕಾಶ ಕಲ್ಪಿಸಬೇಕೆಂದು ಕೋರಿ ಕೇರಳ ಹಿಂದೂ ಮಹಾಸಭಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟು ತಳ್ಳಿಹಾಕಿದೆ. ಚೀಫ್ ಜಸ್ಟಿಸ್ ರಂಜನ್ ಗೊಗೊಯ್ ಅಧ್ಯಕ್ಷತೆಯ ಸುಪ್ರೀಂಕೋರ್ಟು ಪೀಠ ಈ ಬೇಡಿಕೆಯೊಂದಿಗೆ ಮುಸ್ಲಿಂ ಮಹಿಳೆಯರು ಬರಲಿ ಆಗ ನೋಡೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಹಿಂದೆ ಇಂತಹದೇ ಅರ್ಜಿಯನ್ನು ಹೈಕೋರ್ಟು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಅಖಿಲಭಾರತ ಹಿಂದೂ ಮಹಾಸಭಾದ ರಾಜ್ಯ ಅಧ್ಯಕ್ಷ ಸ್ವಾಮಿ ದತ್ತಾತ್ರೇಯ ಸಾಯ್ ಸ್ವರೂಪ್ ನಾಥ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಪರ್ದಾ ನಿಷೇಧಿಸಬೇಕೆಂದು ಕೂಡ ಅರ್ಜಿಯಲ್ಲಿ ಆಗ್ರಹಿಸಲಾಗಿತ್ತು. ಈ ಬೇಡಿಕೆಯನ್ನು ಕೂಡ ಸುಪ್ರೀಂಕೋರ್ಟು ತಿರಸ್ಕರಿಸಿದೆ. ಮುಸ್ಲಿಂ ಮಸೀದಿಯಲ್ಲಿ ಪರಂಪರಾಗತ ಆಚಾರ ಎಂಬ ನೆಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಸಾಬೀತು ಪಡಿಸಲು ಅರ್ಜಿದಾರನಿಗೆ ಸಾಧ್ಯವಾಗಿಲ್ಲ ಎಂದು ಹೈಕೋರ್ಟು ತೀರ್ಪಿನಲ್ಲಿ ತಿಳಿಸಿತ್ತು. ಮುಸ್ಲಿಂ ಮಹಿಳೆಯರಿಗಾಗಿ ಕೋರ್ಟನ್ನು ಸಂಪರ್ಕಿಸಲು ಅಖಿಲಭಾರತ ಹಿಂದೂ ಮಹಾಸಭಾಕ್ಕೆ ಹಕ್ಕಿಲ್ಲ ಎಂದು ಹೈಕೋರ್ಟು ಆಭಿಪ್ರಾಯ ವ್ಯಕ್ತಪಡಿಸಿತ್ತು.












