ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿಯವರನ್ನು ಭೇಟಿಯಾದ ಕಾಂತಪುರಂ ಏ ಪಿ ಅಬೂಬಕರ್ ಮುಸ್ಲಿಯಾರ್ ನಿಯೋಗ

0
907

ಹೊಸದಿಲ್ಲಿ, ಜು.9: ಕೇಂದ್ರ ಅಲ್ಪಸಂಖ್ಯಾತರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿಯವರನ್ನು ಅಖಿಲಭಾರತ ಸುನ್ನಿ ಜಮ್‍ಇಯ್ಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ನೇತೃತ್ವದ ನಿಯೋಗ ಭೇಟಿಯಾಗಿ ಚರ್ಚಿಸಿದೆ. ಭಾರತದ ಮುಸ್ಲಿಮರ ಶಿಕ್ಷಣ, ಸಾಮಾಜಿಕ ಜೀವನ ಇತ್ಯಾದಿ ವಿಷಯಗಳಲ್ಲಿ ಚರ್ಚಿಸಲಾಯಿತು ಎಂದು ಕಾಂತಪುರಂರ ಕಚೇರಿ ಪತ್ರಿಕಾ ಹೇಳಿಕೆ ನೀಡಿದೆ.

ಅಬೂಬಕರ್ ಮುಸ್ಲಿಯಾರ್ ರ ಕೆಲಸ ಕಾರ್ಯಗಳು ನೈಜ ಇಸ್ಲಾಮೀ ವಿದ್ವಾಂಸರ ಹೊಣೆಗಾರಿಕೆಯನ್ನು ಪ್ರತಿಫಲನಗೊಳಿಸುತ್ತಿದೆ ಮತ್ತು ಅಲ್ಪಸಂಖ್ಯಾತರ ಜೀವನದ ಅಭಿವೃದ್ಧಿಗೆ ಆದ್ಯತೆ ನೀಡುವ ವಿವಿಧ ಯೋಜನೆಗಳನ್ನು ಸರಕಾರ ಜಾರಿಗೊಳಿಸಲಿದೆ ಎಂದು ಸಚಿವ ನಕ್ವಿ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಿವಿಲ್ ಸರ್ವಿಸ್, ಯುಪಿಎಸ್‍ಸಿ ಪರೀಕ್ಷೆಗಳಲ್ಲಿ ಅಲ್ಪಸಂಖ್ಯಾತರ ಪ್ರಾತನಿನಿಧ್ಯ ಹೆಚ್ಚಿಸಲು ಈ ವರ್ಷ ಹೆಚ್ಚಿನ ಹಣವನ್ನು ಕೇಂದ್ರ ಸರಕಾರ ತೆಗೆದಿರಿಸಿದ್ದು ಸ್ವಾಗತಾರ್ಹ ಎಂದು ಅಬೂಬಕರ್ ಮುಸ್ಲಿಯಾರ್ ಸಚಿವರಿಗೆ ತಿಳಿಸಿದರು. ಅಲ್ಪಸಂಖ್ಯಾತರ ಜೀವನ , ಆರೋಗ್ಯ ಸುರಕ್ಷೆ ನೀಡಲು ಸರಕಾರ ಕ್ರಿಯಾತ್ಮಕವಾದ ಯೋಜನೆ ಜಾರಿಗೊಳಿಸಬೇಕೆಂದು ಅವರು ಸಚಿವರನ್ನು ಆಗ್ರಹಿಸಿದರು. ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್‍ರಾಹೀಮುಲ್ ಖಲೀಲುಲ್ ಬುಕಾರಿ, ಸಮಸ್ತ ಕೇರಳ ಜಮ್‍ಇಯ್ಯತ್ತುಲ್ ಉಲಮಾ ಕಾರ್ಯದರ್ಶಿ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ, ಮರ್ಕಝ ಉಪಕುಲಪತಿ ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಮುಂತಾದವರು ಕಾಂತಪುರಂರ ನಿಯೋಗದಲ್ಲಿದ್ದರು.