ಖಾಸಗಿತನ ನೀತಿಯಲ್ಲಿ ತಾರತಮ್ಯ: ವಾಟ್ಸಪ್, ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

0
287

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮ ವಾಟ್ಸಪ್ ಖಾಸಗಿತನದ ನೀತಿಯಲ್ಲಿ ತಾರತಮ್ಯ ಇದೆಯೆಂದು ಆರೋಪಿಸುವ ಅರ್ಜಿಯಲ್ಲಿ ವಾಟ್ಸಪ್ ಮತ್ತು ಕೇಂದ್ರ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಫೇಸ್‍ಬುಕ್ ಮಾಲಕತ್ವದ ಕಂಪೆನಿ ಯುರೋಪಿನಲ್ಲಿ ಬಲವಾದ ಖಾಸಗಿತನದ ನೀತಿ ಸ್ವೀಕರಿಸುವಾಗ ಭಾರತದಲ್ಲಿ ಅದೇ ರೀತಿಯನ್ನು ಅಳವಡಿಸುತ್ತಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಖಾಸಗಿತನ ಹರಣದಿಂದ ವಾಟ್ಸಪ್ ಬಳಕೆದಾರರು ತೀರ ಆತಂಕಿತರಾಗಿದ್ದಾರೆ ಎಂದು ತಿಳಿಸಿರುವ ಕೋರ್ಟ್, ವ್ಯಕ್ತಿಯ ಖಾಸಗಿತ್ವ ಸಂರಕ್ಷಿಸಲು ಕಾನೂನು ವ್ಯವಸ್ಥೆಯ ಹೊಣೆಯಾಗಿದೆ ಎಂದು ಬೆಟ್ಟು ಮಾಡಿದೆ. ನೀವು ಎರಡು ಮೂರು ಲಕ್ಷವೋ ಕೋಟಿ ಬಳಕೆದಾರರು ಇರುವ ಕಂಪೆನಿ ಆಗಿರಬಹುದು ಇದೇ ವೇಳೆ ಜನರು ಅವರ ಖಾಸಗಿತ್ವವನ್ನು ಹಣಕ್ಕಿಂತಲೂ ಹೆಚ್ಚು ಬೆಲೆ ನೀಡುತ್ತಾರೆ. ಯುರೋಪಿನಲ್ಲಿ ಭಾರತಕ್ಕಿಂತ ಶಕ್ತಿಶಾಲಿ ಖಾಸಗಿತನದ ಕಾನೂನು ಇದೆ ಎಂದು ವಾದಿಸಿದರೂ ತಾರತಮ್ಯವನ್ನು ಸಮರ್ಥಿಸಲು ಆಗುವುದಿಲ್ಲ ಎಂದು ಚೀಫ್ ಜಸ್ಟಿಸ್ ಎಸ್‍ಎ ಬೊಬ್ಡೆ, ಜಸ್ಟಿಸ್ ಎಎಸ್ ಬೋಪಣ್ಣ, ವಿ.ರಾಮಸುಬ್ರಮಣ್ಯಂ ಸದಸ್ಯರ ಪೀಠವು ಹೇಳಿತು. 2017ರಲ್ಲಿ ಕರ್ಮಣ್ಯ ಸಿಂಗ್ ಸರೀನ್, ಶ್ರೇಯ ಸೇಠಿ ಸುಪ್ರೀಂ ಕೋರ್ಟಿಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.

ವಾಟ್ಸಪ್‍ನಲ್ಲಿ ಲಭಿಸುವ ವೈಯಕ್ತಿಕ ವಿವರಗಳು ಫೇಸ್‍ಬುಕ್‍ನಲ್ಲಿ ಹಂಚಿಕೆ ಮಾಡುವ ಕಂಪೆನಿಯ ರೀತಿ ಹಕ್ಕುಚ್ಯುತಿ ಎಂದು ಅರ್ಜಿದಾರರ ವಕೀಲ ಶ್ಯಾಂ ದಿವಾನ್ ವಾದಿಸಿದರು. ಯುರೋಪಿನಲಿ ವಿಶೇಷ ಕಾನೂನು ಇದೆ. ಆ ಕಾನೂನು ಇಲ್ಲಿದ್ದರೆ ಅದೇ ರೀತಿ ಕಂಪೆನಿ ಅನುಸರಿಸಲಿದೆ ಎಂದು ವಾಟ್ಸಪ್ ಪರ ವಕೀಲ ಕಪಿಲ್ ಸಿಬಲ್ ಹೇಳಿದರು.

ಶ್ಯಾಂ ದಿವಾನ ವಾದ ಪ್ರಸಕ್ತವೆಂದು ಹೇಳಿದ ಕೋರ್ಟ್ ವ್ಯಕ್ತಿ ವಿವರ ಸಂರಕ್ಷಿಸಲು ಹೆಚ್ಚಿನ ಕಾನೂನು ಬೇಕೆಂದು ಇದರಲ್ಲಿ ಮನವರಿಕೆಯಾಗುತ್ತಿದೆ ಎಂದು ಕೋರ್ಟ್ ಹೇಳಿತು. ಸಾಮಾಜಿಕ ಮಾಧ್ಯಮ ಕಂಪೆನಿಗಳು ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವುದಿಲ್ಲ ಎಂದು ಕೇಂದ್ರ ಸರಕಾರದ ವಾದ ಆಗಿತ್ತು.