ಸನ್ಮಾರ್ಗ ವಾರ್ತೆ-
ಕೇರಳ,ನ. 28: ತನ್ನ ಸೈಕಲ್ ರಿಪೇರಿ ಮಾಡಿಕೊಟ್ಟಿಲ್ಲ ಎಂದು ಐದನೆ ತರಗತಿಯ ವಿದ್ಯಾರ್ಥಿ ಆಬಿರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ. ಹುಡುಗನ ದೂರನ್ನು ಗಂಭೀರವಾಗಿ ಪರಿಗಣಿಸಿದ ಸಿ ಐ ಜಿ. ಅನೂಪ್ ಕ್ರಮ ಜರಗಿಸಿದ್ದಾರೆ. ಮೇಪ್ಪುರ್ ಪೊಲೀಸ್ ಠಾಣೆಯಲ್ಲಿ ಹತ್ತು ವರ್ಷದ ಬಾಲಕ ದೂರು ನೀಡಿದ್ದು ಈತ ವಿಳಯಾಟ್ಟೂರ್ ಎಂಯುಪಿ ಸ್ಕೂಲಿನ ಐದನೆ ತರಗತಿ ವಿದ್ಯಾರ್ಥಿ.
ಸ್ಕೂಲ್ ನೋಟು ಬುಕ್ನಿಂದ ಕಾಗದ ತೆಗೆದು ಅದರಲ್ಲಿ ತನ್ನ ಸೈಕಲ್ ರಿಪೇರಿ ಮಾಡಿಕೊಡುತ್ತಿಲ್ಲ. ಅಂಗಡಿಗೆ ಹೋಗಿ ನೋಡಿದರೆ ಅಂಗಡಿ ಬಂದ್ ಆಗಿದೆ. ಫೋನ್ ಕರೆ ಮಾಡಿದರೆ ತೆಗೆಯುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾನೆ. ರಿಪೇರಿ ಅಂಗಡಿ ಮಾಲಕನನ್ನು ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದರು. ತನ್ನ ಅನಾರೋಗ್ಯ ಮತ್ತು ಪುತ್ರನ ಮಗನ ಮದುವೆಯ ಬ್ಯೂಸಿಯಿಂದಾಗಿ ಅಂಗಡಿ ತೆರೆಯಲು ಆಗಿಲ್ಲ. ಆದ್ದರಿಂದ ರಿಪೇರಿ ಮಾಡಿಕೊಡಲು ತಡವಾಗಿದೆ ಎಂದು ರಿಪೇರಿಯಂಗಡಿಯವನು ಪೊಲೀಸರಿಗೆ ತಿಳಿಸಿದ್ದಾನೆ.
ಗುರುವಾರದಂದು ಸೈಕಲ್ ರಿಪೇರಿ ಮಾಡಿಕೊಡುವುದಾಗಿ ಸೈಕಲ್ ರಿಪೇರಿ ಅಂಗಡಿಯವನು ಸಿಐಗೆ ಭರವಸೆ ಕೊಟ್ಟಿದ್ದಾನೆ. ಆಬಿರ್ ಮತ್ತು ಆತನ ತಮ್ಮ ಶಿಫಾದ್ನ ಸೈಕಲ್ ರಿಪೇರಿಗೆ ಕೊಡಲಾಗಿತ್ತು. ಅಂಗಡಿಯವನು ಮುಂಗಡವಾಗಿ ಇನ್ನೂರು ರೂಪಾಯಿಯನ್ನೂ ಪಡೆದುಕೊಂಡಿದ್ದ. ಹಲವು ಸಲ ಆಬಿರ್ ಅಂಗಡಿಗೆ ಹೋಗಿ ನೋಡಿದ್ದ. ಆಗಲೆಲ್ಲ ಅಂಗಡಿ ಬಂದ್ ಆಗಿತ್ತು. ನಿರ್ವಾಹವಿಲ್ಲದೆ ಪೋರ ಪೊಲೀಸರಿಗೆ ದೂರು ಕೊಟ್ಟಿದಾನೆ. ದೂರು ಕೊಟ್ಟಿರುವುದು ಅಧ್ಯಾಪಕರಿಗೋ, ಶಾಲೆಯ ಅಧಿಕಾರಿಗಳಿಗೋ ಗೊತ್ತಿರಲಿಲ್ಲ.












