ಸನ್ಮಾರ್ಗ ವಾರ್ತೆ
ದೆಹಲಿ: ಕಳೆದ ತಿಂಗಳು ಕೊರೋನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಪರಿಚಿತರಾಗಿದ್ದ ಅಹ್ಮದ್ ಪಟೇಲ್ ಅವರು ಬುಧವಾರ ಮುಂಜಾನೆ 3.30ರ ಸುಮಾರಿಗೆ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.
71 ವರ್ಷ ವಯಸ್ಸಿನ ಅಹ್ಮದ್ ಪಟೇಲ್ ಅವರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರಾದರೂ, ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಪಟೇಲ್ ನಿಧನರಾಗಿರುವ ಬಗ್ಗೆ ಅವರ ಪುತ್ರ ಫೈಸಲ್ ಪಟೇಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ತಾವು ಮಾಡಿರುವ ಟ್ವೀಟ್ನಲ್ಲಿ ಫೈಸಲ್ ಅವರು, ‘ನನ್ನ ತಂದೆ ಶ್ರೀ ಅಹ್ಮದ್ ಪಟೇಲ್ರವರು 25/11/2020ರ ಮುಂಜಾನೆ 3.30ರ ಸುಮಾರಿಗೆ ಅಕಾಲಿಕ ನಿಧನ ಹೊಂದಿದರೆಂದು ತಿಳಿಸಲು ವಿಷಾದಿಸುತ್ತೇನೆ. ಒಂದು ತಿಂಗಳ ಹಿಂದೆಯೇ ಅವರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತಾದರೂ, ಬಹು ಅಂಗಾಂಗ ವೈಫಲ್ಯದಿಂದ ಅವರ ಆರೋಗ್ಯವು ಇನ್ನಷ್ಟು ಕ್ಷೀಣಿಸಿತು. ಅಲ್ಲಾಹನು ನನ್ನ ತಂದೆಯವರಿಗೆ ಸದ್ಗತಿ ನೀಡಲಿ. ಯಾವುದೇ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವಾಗ ಕೋವಿಡ್ ನಿಯಮಗಳನ್ನು ಪಾಲಿಸಿ ಮತ್ತು ದೈಹಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇನೆ’ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಹತ್ತು ದಿನಗಳ ಹಿಂದೆ ಗುರುಗ್ರಾಮ್ನ ಮೆಡಂತಾ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಹ್ಮದ್ ಪಟೇಲ್ ಅವರು, ಸದ್ಯ ಗುಜರಾತ್ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಒಟ್ಟು ಎಂಟು ಬಾರಿ ಸಂಸದರಾಗಿರೋ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅತ್ಯಾಪ್ತರಲ್ಲಿ ಒಬ್ಬರಾಗಿದ್ದರು.












