ಸಿಪಿಐಎಂ ಹಿರಿಯ ನೇತಾರ ಸೀತಾರಾಮ್ ಯೆಚೂರಿ ಇನ್ನಿಲ್ಲ

0
146

ಸನ್ಮಾರ್ಗ ವಾರ್ತೆ

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಹಿರಿಯ ನೇತಾರ, ಸಿಪಿಐಎಂನ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಮ್ ಯೆಚೂರಿ ಗುರುವಾರ ನಿಧನರಾಗಿದ್ದಾರೆ. ಅವರ ಕುಟುಂಬವು ಪಾರ್ಥಿವ ಶರೀರವನ್ನು ಏಮ್ಸ್ ಆಸ್ಪತ್ರೆಗೆ ದಾನ ಮಾಡಿದೆ ಎಂದು ಸಿಪಿಐಎಂ ತಿಳಿಸಿದೆ.

ನ್ಯುಮೋನಿಯಾ ರೀತಿಯ ಸೋಂಕಿನ ಚಿಕಿತ್ಸೆಗಾಗಿ ಯೆಚೂರಿ ಅವರನ್ನು ಆಗಸ್ಟ್ 19ರಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಗೆ ದಾಖಲಿಸಲಾಗಿತ್ತು.

72 ವರ್ಷದ ಯೆಚೂರಿ ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ದೆಹಲಿಯ ಏಮ್ಸ್‌ನಲ್ಲಿ ಆಕ್ಸಿಜನ್ ಬೆಂಬಲದಲ್ಲಿದ್ದಾರೆ ಎಂದು ಸಿಪಿಐಎಂ ಮಂಗಳವಾರ ತಿಳಿಸಿತ್ತು.

1952ರ ಆಗಸ್ಟ್ 12ರಂದು ಚೆನ್ನೈನಲ್ಲಿ ಜನಿಸಿದ ಯೆಚೂರಿ, ಬಳಿಕ 1969ರ ತೆಲಂಗಾಣ ಆಂದೋಲನದ ಬಳಿಕ ದೆಹಲಿಗೆ ತೆರಳಿದರು. ಯೆಚೂರಿ ಹತ್ತನೇ ತರಗತಿಯವರೆಗೆ ಹೈದರಾಬಾದ್‌ನ ಆಲ್ ಸೇಂಟ್ಸ್ ಹೈಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ್ದು, ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದರು.

ಬಳಿಕ ಯೆಚೂರಿ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಲು ಜೆಎನ್‌ಯು ಸೇರಿದ್ದು ತುರ್ತುಪರಿಸ್ಥಿತಿಯ ಸಮಯದಲ್ಲಿ ಅವರ ಬಂಧನವಾದ ಬಳಿಕ ವಿದ್ಯಾಭ್ಯಾಸ ಮೊಟಕುಗೊಳಿಸಿದರು. ಕಮ್ಯೂನಿಸ್ಟ್ ನಾಯಕ ಪ್ರಕಾಶ್ ಕಾರಟ್ ಜೊತೆ ಸೇರಿ ಜೆಎನ್‌ಯುವಿನಲ್ಲಿ ಎಡಪಂಥೀಯ ಭದ್ರಕೋಟೆಯನ್ನು ರಚಿಸುವಲ್ಲಿ ಯೆಚೂರಿ ಪ್ರಮುಖ ಪಾತ್ರ ವಹಿಸಿದ್ದರು.

1974ರಲ್ಲಿ ಎಸ್‌ಎಫ್‌ಐ ಮೂಲಕ ವಿದ್ಯಾರ್ಥಿ ಚಳುವಳಿಗೆ ಧುಮುಕಿದ ಯೆಚೂರಿ ಅವರ ರಾಜಕೀಯ ಜೀವನವು ಇದಾದ ಒಂದೇ ವರ್ಷದಲ್ಲಿ ಆರಂಭವಾಗಿದೆ.

2005ರಿಂದ 2017ರವರೆಗೆ ಪಶ್ಚಿಮ ಬಂಗಾಳದಲ್ಲಿ ಸಂಸದ ಮತ್ತು ರಾಜ್ಯಸಭಾ ಸದಸ್ಯರಾಗಿದ್ದರು. 2022ರಲ್ಲಿ ಸತತ ಮೂರನೇ ಬಾರಿಗೆ ಸಿಪಿಐಎಂ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು.

ಮೋದಿ ಗವರ್ನ್‌ಮೆಂಟ್: ನ್ಯೂ ಸರ್ಜ್ ಆಫ್ ಕಮ್ಯೂನಲಿಸಂ, ಗ್ಲೋಬಲ್ ಎಕಾನಮಿಕ್ ಕ್ರೈಸಿಸ್: ಮಾರ್ಕ್ಸಿಸ್ಟ್ ಪರ್ಸ್‌ಪೆಕ್ಟಿವ್, ವಾಟ್ ಇಸ್ ಹಿಂದೂ ರಾಷ್ಟ್ರ ಸೇರಿದಂತೆ ಹಲವಾರು ಪುಸ್ತಕಗಳನ್ನು ಕಾಮ್ರೇಡ್ ಸೀತಾರಾಮ್ ಯೆಚೂರಿ ಬರೆದಿದ್ದಾರೆ.