ಜಾಮಿಯಾ ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪಷ್ಟ ಕಾಲಮಿತಿ ನಿಗದಿಪಡಿಸಿ: ಜಮಾಅತೆ ಇಸ್ಲಾಮೀ ಹಿಂದ್‌ ಆಗ್ರಹ

0
232

ಸನ್ಮಾರ್ಗ ವಾರ್ತೆ

ನವದೆಹಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸಲು ಸ್ಪಷ್ಟ ಕಾಲಮಿತಿ ನಿಗದಿಪಡಿಸಬೇಕು ಹಾಗೂ ವಿದ್ಯಾರ್ಥಿಗಳ ವಿರುದ್ಧ ಕೈಗೊಂಡಿರುವ ಎಲ್ಲಾ ಶಿಸ್ತುಕ್ರಮಗಳನ್ನು ಯಾವುದೇ ಷರತ್ತಿಲ್ಲದೆ ತಕ್ಷಣವೇ ಹಿಂಪಡೆಯಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ (JIH) ಉಪಾಧ್ಯಕ್ಷ ಪ್ರೊ. ಸಲೀಂ ಇಂಜಿನಿಯರ್ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ವಿದ್ಯಾರ್ಥಿ ಸಂಘದ ಸಂವಿಧಾನಕ್ಕೆ ಅನುಮೋದನೆ ದೊರೆತ 15 ದಿನಗಳೊಳಗೆ ಚುನಾವಣೆ ನಡೆಸುವ ನಿರ್ಧಾರ ವರದಿಯಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಆದರೆ, ಈ ಭರವಸೆಯೊಂದಿಗೆ ತಕ್ಷಣವೇ ಚುನಾವಣಾ ಅಧಿಸೂಚನೆ ಹೊರಡಿಸುವುದು, ಸಂವಿಧಾನ ರಚನೆಗೆ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸುವುದು ಹಾಗೂ ಚುನಾವಣೆಯ ದಿನಾಂಕವನ್ನು ಪ್ರಕಟಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಸಂವಿಧಾನ ರಚನೆಯ ಪ್ರಕ್ರಿಯೆಯನ್ನು ಯಾವುದೇ ಸ್ಪಷ್ಟ ಗಡುವಿಲ್ಲದೆ ಮುಂದುವರಿಸುವುದರಿಂದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಸಂಘದ (JMISU) ಪುನಃಸ್ಥಾಪನೆಯ ಪ್ರಮುಖ ಬೇಡಿಕೆ ಬಗೆಹರಿಯದೆ ಉಳಿಯುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿಲ್ಲ. ಆದ್ದರಿಂದ, ಅವರ ಬಾಕಿ ಉಳಿದಿರುವ ಬೇಡಿಕೆಗಳನ್ನು ಅರ್ಥಪೂರ್ಣ ಸಂವಾದ ಮತ್ತು ಸ್ಪಷ್ಟ ಭರವಸೆಗಳ ಮೂಲಕ ತುರ್ತಾಗಿ ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳ ಅಮಾನತು ಆದೇಶಗಳು ಮತ್ತು ಶೋಕಾಸ್‌ ನೋಟಿಸ್‌ಗಳನ್ನು ಹಿಂಪಡೆಯಲಾಗಿದೆ ಎಂಬ ವರದಿಯನ್ನು ಸ್ವಾಗತಿಸಿದ ಪ್ರೊ. ಸಲೀಂ ಇಂಜಿನಿಯರ್, ಪ್ರತಿಭಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ವಿರುದ್ಧ ಕೈಗೊಂಡಿರುವ ಎಲ್ಲಾ ಶಿಸ್ತುಕ್ರಮಗಳನ್ನು ಸಂಪೂರ್ಣವಾಗಿ ಮತ್ತು ಯಾವುದೇ ಷರತ್ತಿಲ್ಲದೆ ಹಿಂಪಡೆಯುವುದನ್ನು ವಿಶ್ವವಿದ್ಯಾಲಯದ ಆಡಳಿತ ಖಚಿತಪಡಿಸಬೇಕು ಎಂದು ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರಣಕ್ಕೆ ವಿದ್ಯಾರ್ಥಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಯಾವುದೇ ಶಿಸ್ತುಕ್ರಮ ಕೈಗೊಳ್ಳುವುದಿಲ್ಲ ಎಂಬ ಲಿಖಿತ ಭರವಸೆಯನ್ನೂ ನೀಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮರುಸ್ಥಾಪನೆಯಾಗಲು ಮತ್ತು ಕ್ಯಾಂಪಸ್‌ನ ಶೈಕ್ಷಣಿಕ ವಾತಾವರಣ ಸಹಜ ಸ್ಥಿತಿಗೆ ಮರಳಲು ನೆರವಾಗಲಿದೆ. ಸಂವಿಧಾನಕ್ಕೆ ಸಂಬಂಧಿಸಿದ ಔಪಚಾರಿಕ ಪ್ರಕ್ರಿಯೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಚುನಾವಣಾ ವೇಳಾಪಟ್ಟಿಯನ್ನು ಮತ್ತಷ್ಟು ವಿಳಂಬವಿಲ್ಲದೆ ಪ್ರಕಟಿಸಬೇಕು. ಚುನಾವಣಾ ಪ್ರಕ್ರಿಯೆಯು ಸಮಿತಿಯ ಹಂತದಲ್ಲೇ ಅನಿರ್ದಿಷ್ಟಾವಧಿಗೆ ಉಳಿಯದೆ, ನೈಜ ಚುನಾವಣೆಗಳಿಗೆ ದಾರಿ ಮಾಡಿಕೊಡಬೇಕು ಎಂದು ಅವರು ತಿಳಿಸಿದ್ದಾರೆ.

ಅಕ್ಟೋಬರ್ 17ರಂದು ಮುಂಜಾನೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಲು ಯತ್ನಿಸಲಾಗಿದೆ ಎಂಬ ಆರೋಪಗಳ ಕುರಿತು ಮಾತನಾಡಿದ ಅವರು, ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ವರ್ತನೆಯ ಬಗ್ಗೆ ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

“ಈ ಆರೋಪಗಳನ್ನು ಗಂಭೀರವಾಗಿ ಪರಿಶೀಲಿಸಬೇಕು. ಯಾವುದೇ ವ್ಯಕ್ತಿಯ ಸ್ಥಾನಮಾನ ಏನೇ ಇರಲಿ, ಅವರನ್ನು ಹೊಣೆಗಾರಿಕೆಯಿಂದ ರಕ್ಷಿಸಬಾರದು. ಶಿಸ್ತುಕ್ರಮಗಳನ್ನು ಹಿಂಪಡೆಯುವುದು ಮತ್ತು ತನಿಖೆ ಆರಂಭಿಸುವುದು ಸ್ವಾಗತಾರ್ಹ ಹೆಜ್ಜೆಗಳಾಗಿವೆ. ಆದರೆ, ಈ ಕ್ರಮಗಳನ್ನು ಎಷ್ಟು ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಜಾರಿಗೊಳಿಸಲಾಗುತ್ತದೆ ಎಂಬುದರ ಮೇಲೆ ಸಾರ್ವಜನಿಕರ ವಿಶ್ವಾಸ ಅವಲಂಬಿತವಾಗಿದೆ. ಸಾಮೂಹಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಪರಿಹಾರಕ್ಕಾಗಿ ಅಲೆಯುವ ಪರಿಸ್ಥಿತಿ ಇರಬಾರದು,” ಎಂದು ಅವರು ಹೇಳಿದ್ದಾರೆ.

ವಿಶ್ವವಿದ್ಯಾಲಯಗಳು ಪ್ರಜಾಸತ್ತಾತ್ಮಕ ಭಾಗವಹಿಸುವಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ಜವಾಬ್ದಾರಿಯುತ ನಾಯಕತ್ವವನ್ನು ಬೆಳೆಸುವ ಹೊಣೆಗಾರಿಕೆಯನ್ನು ಹೊಂದಿವೆ ಎಂದು ಪ್ರತಿಪಾದಿಸಿದ ಪ್ರೊ. ಸಲೀಂ ಇಂಜಿನಿಯರ್, ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಪರಂಪರೆ ಹೊಂದಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಅನ್ವಯವಾಗುವ ನಿಯಮಾವಳಿಗಳು ಮತ್ತು ಲಿಂಗ್ದೋ ಸಮಿತಿಯ ಸಂಬಂಧಿತ ಶಿಫಾರಸುಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ನ್ಯಾಯಯುತ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯ ದೊರೆಯುವುದನ್ನು ಖಚಿತಪಡಿಸಬೇಕು ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಆಡಳಿತವು ನೀಡಿರುವ ಭರವಸೆಗಳನ್ನು ಸ್ಪಷ್ಟ ಕಾಲಮಿತಿಯೊಳಗಿನ ಕಾರ್ಯರೂಪಕ್ಕೆ ತರಬೇಕು ಹಾಗೂ ಭದ್ರತಾ ಸಿಬ್ಬಂದಿಯ ಆಪಾದಿತ ವರ್ತನೆಗೆ ಸಂಬಂಧಿಸಿದಂತೆ ವಿಶ್ವಾಸಾರ್ಹ ಹೊಣೆಗಾರಿಕೆಯನ್ನು ಖಚಿತಪಡಿಸಬೇಕು. ಈ ಸಮಸ್ಯೆಗಳನ್ನು ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಪರಿಹರಿಸುವುದರಿಂದ ವಿಶ್ವಾಸವನ್ನು ಮರುಸ್ಥಾಪಿಸಲು, ಶೈಕ್ಷಣಿಕ ವಾತಾವರಣವನ್ನು ಕಾಪಾಡಲು ಮತ್ತು ವಿಶ್ವವಿದ್ಯಾಲಯದ ಪ್ರಜಾಸತ್ತಾತ್ಮಕ ಸಂಸ್ಕೃತಿಯನ್ನು ಬಲಪಡಿಸಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.