ನಮ್ಮ ಇತಿಹಾಸವನ್ನು ಯಾರು ಬರೆಯುತ್ತಾರೆ?

0
321

✍️ ಶಶಿ ತರೂರ್
ಖ್ಯಾತ ಬರಹಗಾರರು ಮತ್ತು ರಾಜಕಾರಣಿ

ಇಂಡಿಯನ್ ಹಿಸ್ಟರಿ ಫೋರಂ ವತಿಯಿಂದ 2026ರ ಏಪ್ರಿಲ್ 12 ಮತ್ತು 13 ರಂದು ದೆಹಲಿಯಲ್ಲಿ ಎರಡು ದಿನಗಳ ಇತಿಹಾಸ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಭಾರತದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಮುಸ್ಲಿಮರ ಪಾತ್ರದ ಐತಿಹಾಸಿಕ ಆಯಾಮಗಳ ಬಗ್ಗೆ ಇದರಲ್ಲಿ ಚರ್ಚಿಸಲಾಯಿತು. ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ದೇಶದ ಪ್ರಮುಖ ಮೇಧಾವಿ ಮತ್ತು ರಾಜಕಾರಣಿ ಡಾ. ಶಶಿ ತರೂರ್ ಅವರು ಮಂಡಿಸಿರುವ ವಿಶೇಷ ಪ್ರಬಂಧವನ್ನು ಇಲ್ಲಿ ಲೇಖನ ರೂಪಕ್ಕೆ ಇಳಿಸಲಾಗಿದೆ.

ಈಗ ಇತಿಹಾಸದ ಪ್ರಶ್ನೆಗಳು ಕೇವಲ ಶೈಕ್ಷಣಿಕ ವಲಯಗಳಿಗೆ ಸೀಮಿತವಾಗಿಲ್ಲ. ಈ ಪ್ರಶ್ನೆಗಳು ಸಾರ್ವಜನಿಕ ಚರ್ಚೆಗಳ ಭಾಗವಾಗಿ ಮಾರ್ಪಟ್ಟಿವೆ. ಅದು ಮಹತ್ವದ್ದೂ ಮತ್ತು ಅತ್ಯಂತ ಪ್ರಮುಖವೂ ಆಗಿವೆ. ಗತಕಾಲದ ಬಗೆಗಿನ ಚರ್ಚೆಗಳು ಈಗ ಕೇವಲ ಸೆಮಿನಾರ್‌ಗಳು, ಸಮ್ಮೇಳನಗಳು ಮತ್ತು ಇತಿಹಾಸದ ತರಗತಿಗಳಲ್ಲಿ ಮಾತ್ರವಲ್ಲದೆ, ಶೈಕ್ಷಣಿಕ ನಿಯತಕಾಲಿಕೆಗಳಲ್ಲಿ ಮತ್ತು ಅದಕ್ಕೂ ಮಿಗಿಲಾಗಿ ಅಸೆಂಬ್ಲಿಗಳು, ನ್ಯಾಯಾಲಯಗಳು, ದೂರದರ್ಶನ ಪರದೆಗಳು ಮತ್ತು ಸಹಜವಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಸಾಧನವಾಗಿರುವ ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಡೆಯುತ್ತಿವೆ. ಆದ್ದರಿಂದ, ‘ನಮ್ಮ ಇತಿಹಾಸವನ್ನು ಯಾರು ಬರೆಯುತ್ತಾರೆ’ ಎಂಬ ಪ್ರಶ್ನೆಯು ತರಗತಿಯ ಒಳಗೆ ಎಷ್ಟು ಮುಖ್ಯವೋ ತರಗತಿಯ ಹೊರಗೂ ಅಷ್ಟೇ ಮುಖ್ಯವಾಗಿದೆ.

ಆದ್ದರಿಂದ ನಾವು ಈ ಪ್ರಶ್ನೆಯನ್ನು ಕೇಳಿದಾಗ, ನಿಜವಾಗಿಯೂ ಒಂದು ಮೂಲಭೂತವಾದ ವಿಷಯವನ್ನು ಎತ್ತುತ್ತಿದ್ದೇವೆ. ಇತಿಹಾಸವನ್ನು ವ್ಯಾಖ್ಯಾನಿಸುವ ಅಧಿಕಾರ ಯಾರಿಗೆ ಇದೆ? ಆ ವ್ಯಾಖ್ಯಾನದಲ್ಲಿ ಯಾರ ಧ್ವನಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ? ಈ ವ್ಯಾಖ್ಯಾನಗಳು ನಮ್ಮ ರಾಷ್ಟ್ರವು ತನ್ನನ್ನು ತಾನು ಅರ್ಥಮಾಡಿಕೊಳ್ಳುವ ದೃಷ್ಟಿಕೋನವನ್ನು ಹೇಗೆ ರೂಪಿಸುತ್ತವೆ? ಇತಿಹಾಸವು ಒಂದು ರೀತಿಯ ಜ್ಞಾನದ ಅಂತಿಮ ಭಂಡಾರ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಆ ಭಂಡಾರ ತೆರೆಯಲು ಮತ್ತು ಪರೀಕ್ಷಿಸಲು ಕಾಯಲಾಗುತ್ತದೆ. ಬಹುಶಃ ಇದು ತುಂಬಾನೇ ಸರಳವಾದ ಕಲ್ಪನೆಯಾಗಿರಬಹುದು. ಆದರೆ, ವಾಸ್ತವವು ಇದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಇತಿಹಾಸವು ಕೇವಲ ಗತಕಾಲದ ಘಟನೆಗಳ ದಾಖಲೆಯಲ್ಲ, ಬದಲಿಗೆ ನಿರಂತರ ವಿಚಾರಣೆ ಮತ್ತು ವ್ಯಾಖ್ಯಾನದ ಕ್ಷೇತ್ರವಾಗಿದೆ.

ಪ್ರತಿಯೊಂದು ಹೊಸ ಪೀಳಿಗೆಯು ಅದಕ್ಕೆ ಮರಳುತ್ತದೆ, ಅದನ್ನು ಮರುಪರಿಶೀಲಿಸುತ್ತದೆ ಮತ್ತು ಒಂದು ಮಟ್ಟಿಗೆ ಅದನ್ನು ಮರುರೂಪಿಸುತ್ತದೆ. ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗುತ್ತದೆ, ಐತಿಹಾಸಿಕ ವ್ಯಕ್ತಿಗಳ ಹೊಸ ವ್ಯಾಖ್ಯಾನಗಳು ಹೊರಹೊಮ್ಮುತ್ತವೆ, ಘಟನೆಗಳನ್ನು ಹೊಸ ಕೋನಗಳಿಂದ ಪರೀಕ್ಷಿಸಲಾಗುತ್ತದೆ ಮತ್ತು ಸಾಂಪ್ರದಾಯಿಕ ನಿರೂಪಣೆಗಳನ್ನು ಒಪ್ಪಿಕೊಳ್ಳಲಾಗುತ್ತದೆ ಅಥವಾ ಸವಾಲು ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬದಲಾಗುವುದು ಇತಿಹಾಸವಲ್ಲ, ಬದಲಿಗೆ ಗತಕಾಲದಿಂದ ನಾವು ಪಡೆದುಕೊಳ್ಳುವ ಅರ್ಥಗಳು.

ಈ ಹಿನ್ನೆಲೆಯಲ್ಲಿ, ಗತಕಾಲವು ಎಂದಿಗೂ ಸಂಪೂರ್ಣವಾಗಿ ಗತಕಾಲವಾಗಿರುವುದಿಲ್ಲ. ಇತಿಹಾಸ, ವ್ಯಾಖ್ಯಾನ ಮತ್ತು ಆಧಿಕಾರಿಕತೆಯ ನಡುವಿನ ಈ ಸಂಬಂಧವನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.

ಗತಕಾಲದ ಮೇಲಿನ ನಮ್ಮ ಹೋರಾಟವನ್ನು ಅರ್ಥಮಾಡಿಕೊಳ್ಳಲು, ಸಾರ್ವಜನಿಕ ಚರ್ಚೆಯಲ್ಲಿ ಹೆಚ್ಚಾಗಿ ನಿರ್ಲಕ್ಷಿಸಲಾಗುವ ಒಂದು ವ್ಯತ್ಯಾಸವನ್ನು ಗುರುತಿಸುವುದು ಮುಖ್ಯವಾಗಿದೆ. ಇತಿಹಾಸ(ಹಿಸ್ಟರಿ) ಮತ್ತು ಇತಿಹಾಸ ರಚನೆಯ (ಹಿಸ್ಟೋರಿಯೋಗ್ರಫಿ) ನಡುವಿನ ವ್ಯತ್ಯಾಸ. ಇತಿಹಾಸವು ಅದರ ಸರಳ ಅರ್ಥದಲ್ಲಿ, ಏನಾಯಿತು, ನಡೆದ ಘಟನೆಗಳು, ಸಮಾಜಗಳನ್ನು ರೂಪಿಸಿದ ಪ್ರಕ್ರಿಯೆಗಳು, ಬದುಕಿದ ಜೀವನಗಳು, ಅದೆಲ್ಲವೂ ಆಗಿದೆ. ಆದರೆ, ಇತಿಹಾಸ ರಚನಾಶಾಸ್ತ್ರವು (ಹಿಸ್ಟೋರಿಯೋಗ್ರಫಿ) ಹೆಚ್ಚು ಪದರಗಳನ್ನು ಹೊಂದಿದೆ. ಈ ಘಟನೆಗಳನ್ನು ದಾಖಲಿಸುವ, ವ್ಯಾಖ್ಯಾನಿಸುವ, ಪ್ರಸ್ತುತಪಡಿಸುವ ವಿಧಾನವೇ ಹಿಸ್ಟೋರಿಯೋಗ್ರಫಿ.

ಇತಿಹಾಸವೇ ಗತಕಾಲವಾಗಿದ್ದರೆ, ಇತಿಹಾಸ ರಚನೆಯು ಆ ಗತಕಾಲದ ಬಗ್ಗೆ ನಾವು ಮಾಡುವ ಕಥೆಯಾಗಿದೆ. ಆ ಕಥೆಯು ಎಂದಿಗೂ ಸಂಪೂರ್ಣವಾಗಿ ತಟಸ್ಥವಾಗಿರುವುದಿಲ್ಲ. ಏಕೆಂದರೆ ಇತಿಹಾಸದ ಬರವಣಿಗೆಯು ಕೇವಲ ಪುರಾವೆಗಳಿಂದ ಮಾತ್ರ ರೂಪಿತವಾಗುವುದಿಲ್ಲ. ಬದಲಿಗೆ ದೃಷ್ಟಿಕೋನಗಳು, ನಾವು ಕೇಳುವ ಪ್ರಶ್ನೆಗಳು, ನಾವು ಆದ್ಯತೆ ನೀಡುವ ಮೂಲಗಳು ಮತ್ತು ಕೆಲವೊಮ್ಮೆ ನಾವು ಪರಂಪರೆಯಾಗಿ ಪಡೆಯುವ ಮೌನಗಳಿಂದಲೂ ರೂಪಿತವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಇದು ಅಧಿಕಾರದಿಂದ ರೂಪಿತವಾಗುತ್ತದೆ. ಇತಿಹಾಸದ ಮೇಲಿನ ಹೋರಾಟವು ಹಲವು ವಿಧಗಳಲ್ಲಿ ಅಸ್ಮಿತೆ ಮತ್ತು ಒಡೆತನದ ಮೇಲಿನ ಹೋರಾಟವಾಗಿದೆ. ಜನರು ತಮ್ಮನ್ನು ತಾವು ಹೇಗೆ ಅರ್ಥಮಾಡಿಕೊಳ್ಳುತ್ತಾರೆ, ಕಾಲದ ಚೌಕಟ್ಟಿನಲ್ಲಿ ತಮ್ಮನ್ನು ತಾವು ಹೇಗೆ ಗುರುತಿಸಿಕೊಳ್ಳುತ್ತಾರೆ ಮತ್ತು ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದರ ಮೇಲಿನ ಹೋರಾಟವಾಗಿದೆ.

ವಸಾಹತುಶಾಹಿ ನಿರೂಪಣೆ ಮತ್ತು ಸ್ವಾತಂತ್ರ್ಯದ ಪ್ರತಿಕ್ರಿಯೆ:

ವಸಾಹತುಶಾಹಿ ಇತಿಹಾಸ ರಚನೆಯಲ್ಲಿ ನಾವು ಇದನ್ನು ಸ್ಪಷ್ಟವಾಗಿ ಕಾಣುತ್ತೇವೆ. ಭಾರತದ ಬಗೆಗಿನ ಬ್ರಿಟಿಷ್ ವರದಿಗಳು ಕೇವಲ ಉಪಖಂಡವನ್ನು ದಾಖಲಿಸಲಿಲ್ಲ. ಹೆಚ್ಚಾಗಿ ಸಾಮ್ರಾಜ್ಯ ಮತ್ತು ಅದರ ಹಿತಾಸಕ್ತಿಗಳ ದೃಷ್ಟಿಕೋನದಿಂದ ಅವುಗಳನ್ನು ವ್ಯಾಖ್ಯಾನಿಸಿದವು. ನಮ್ಮ ಸಂಸ್ಕೃತಿಯ ನಿರಂತರತೆಗಿಂತ ಅವರು ನಮ್ಮ ವಿಭಜನೆಗೆ ಒತ್ತು ನೀಡಿದರು; ನಮ್ಮ ಚಲನಶೀಲತೆಯ ಯಾವುದೇ ಪುರಾವೆಗಳಿಗಿಂತ ನಮ್ಮ ನಿಶ್ಚಲತೆಗೆ ಒತ್ತು ನೀಡಿದರು. ಹಾಗೆ ಮಾಡುವ ಮೂಲಕ, ಅವರು ಸಾಮ್ರಾಜ್ಯಶಾಹಿ ಆಡಳಿತವನ್ನು ಅಗತ್ಯ ಮತ್ತು ಸಮರ್ಥನೀಯವಾಗಿ ತೋರುವಂತೆ ಮಾಡುವ ನಿರೂಪಣೆಯನ್ನು ನಿರ್ಮಿಸಿದರು. ಭಾರತವನ್ನು ‘ಸುಸಂಸ್ಕೃತ’ಗೊಳಿಸಬೇಕಾದ ಮತ್ತು ಆಳಬೇಕಾದ ಗೊಂದಲಮಯ ಅನಾಗರಿಕ ರಾಷ್ಟ್ರ ಎಂದು ಪ್ರಸ್ತುತಪಡಿಸಲಾಯಿತು. ವಾಸ್ತವವಾಗಿ, ಕೆಲವರು ನಮ್ಮನ್ನು ಸುಸಂಸ್ಕೃತರೆಂದು ಪ್ರಸ್ತುತಪಡಿಸಲೇ ಇಲ್ಲ. ಬದಲಿಗೆ, ತನ್ನದೇ ಆದ ಸುದೀರ್ಘ ಮತ್ತು ವಿಕಸನಗೊಳ್ಳುತ್ತಿರುವ ರಾಜಕೀಯ, ಸಾಮಾಜಿಕ ಮತ್ತು ಬೌದ್ಧಿಕ ಜೀವನದ ಸಂಪ್ರದಾಯವನ್ನು ಹೊಂದಿರುವ ನಾಗರಿಕತೆಯಾಗಿ ನೋಡುವ ಬದಲು, ನಾಗರಿಕರಾಗಬೇಕಾದ ಅನಾಗರಿಕರು ಎಂದು ಪ್ರಸ್ತುತಪಡಿಸಿದರು. ಈ ರೀತಿಯ ಸಾಮ್ರಾಜ್ಯಶಾಹಿ ನಿರೂಪಣೆಗಳು ವಸಾಹತುಶಾಹಿ ಯೋಜನೆಯ ಉದ್ದೇಶವನ್ನು ಪೂರೈಸಿದವು. ಬ್ರಿಟಿಷ್ ಪ್ರಾಬಲ್ಯವನ್ನು ಸಮರ್ಥಿಸಿದವು, ನಮ್ಮ ಅಧೀನತೆಯನ್ನು ತರ್ಕಬದ್ಧಗೊಳಿಸಿದವು. ಅಧೀನಕ್ಕೊಳಗಾದ ಮತ್ತು ವಸಾಹತುಶಾಹಿಗೆ ಒಳಗಾದ ಜನರಿಗೆ ತಮ್ಮ ಆಡಳಿತಗಾರರಿಂದ ಸೃಷ್ಟಿಸಲ್ಪಟ್ಟ ವರ್ಗಗಳಾಗಿ ತಮ್ಮನ್ನು ತಾವು ನೋಡಿಕೊಳ್ಳಲು ಕಲಿಸಿದವು. ಇದು ವಸಾಹತುಶಾಹಿ ಯುಗದ ಉಳಿದುಕೊಂಡಿರುವ ಪಾಠಗಳಲ್ಲಿ ಒಂದಾಗಿದೆ. ನಿರೂಪಣೆಯ ಪ್ರಾಬಲ್ಯದಿಂದ ರಾಜಕೀಯ ಪ್ರಾಬಲ್ಯವು ಬಲಗೊಳ್ಳುತ್ತದೆ.

ಈ ಎಲ್ಲವನ್ನೂ ನೋಡಿದಾಗ, ನಾವು ಸ್ವಾತಂತ್ರ್ಯಕ್ಕೆ ಹೇಗೆ ಪ್ರತಿಕ್ರಿಯಿಸಿದೆವು? ನಮ್ಮ ಸ್ವಾತಂತ್ರ್ಯ ಚಳುವಳಿಯ ಜೊತೆ ಜೊತೆಯಲ್ಲೇ, ನಮ್ಮ ನಾಗರಿಕತೆಯ ಮೇಲಿನ ಕಳೆದುಹೋಗಿದ್ದ ಆತ್ಮವಿಶ್ವಾಸದ ಭಾವನೆಯನ್ನು ಹೇಗಾದರೂ ಮಾಡಿ ಮರುಸ್ಥಾಪಿಸಬೇಕು ಎಂದು ಹಂಬಲಿಸಿದ ಎಷ್ಟೋ ಧ್ವನಿಗಳು ಆ ಕಾಲದಲ್ಲಿದ್ದವು. ಆಗ, ಇತಿಹಾಸ ಎನ್ನುವುದು ಕೇವಲ ‘ಹಿಂದೇನೋ ನಡೆದುಹೋದ ಘಟನೆಗಳ ಒಂದು ದಾಖಲೆ’ಯಾಗಿ ಮಾತ್ರ ಉಳಿಯಲಿಲ್ಲ. ಬದಲಿಗೆ, ‘ಮುಂದೆ ನಮ್ಮ ದೇಶದಲ್ಲಿ ಏನಾಗಬಹುದು’ ಎಂಬುದನ್ನು ಊಹಿಸುವ ಮತ್ತು ಕನಸು ಕಾಣುವ ಒಂದು ದೊಡ್ಡ ಸಾಧನವಾಗಿ ಮಾರ್ಪಟ್ಟಿತು.

ಅದಕ್ಕಾಗಿಯೇ ದಾದಾಭಾಯಿ ನವರೋಜಿ ಮತ್ತು ಆರ್.ಸಿ. ದತ್ ಅವರಿಂದ ಹಿಡಿದು, ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಹಾಗೂ ಆಮೇಲೆ ಬಂದ ಅನೇಕ ಲೇಖಕರು ಮತ್ತು ಚಿಂತಕರು—ಅಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಾಜಕೀಯ ಸೈದ್ಧಾಂತಿಕ ವಲಯದ ಸಂಪೂರ್ಣ ವಿರುದ್ಧ ಧ್ರುವಗಳಲ್ಲಿದ್ದ ಗೋಖಲೆ ಮತ್ತು ತಿಲಕ್, ಆ ನಂತರ ಬಂದ ಗಾಂಧಿ, ನೆಹರು, ಜಿನ್ನಾ ಮತ್ತು ಇವರ ಜೊತೆಗೆ ಅಸಂಖ್ಯಾತ ಇತರ ಇತಿಹಾಸಕಾರರು ಹಾಗೂ ಚಿಂತಕರು—ಇವರೆಲ್ಲರೂ ಕೇವಲ ರಾಜಕೀಯ ರಂಗದಲ್ಲಿ ಮಾತ್ರ ಸಾಮ್ರಾಜ್ಯಶಾಹಿ ಆಡಳಿತವನ್ನು ಪ್ರತಿರೋಧಿಸುತ್ತಿರಲಿಲ್ಲ. ಅವರು ತಮ್ಮ ಬೌದ್ಧಿಕ ರಂಗದಲ್ಲಿ ಬ್ರಿಟಿಷರ ಸಾಮ್ರಾಜ್ಯಶಾಹಿ ವ್ಯಾಖ್ಯಾನಗಳನ್ನೂ ಅಷ್ಟೇ ಗಟ್ಟಿಯಾಗಿ ಪ್ರತಿರೋಧಿಸುತ್ತಿದ್ದರು. ಯಾಕೆಂದರೆ, ಒಂದು ರಾಷ್ಟ್ರದ ಸಾರ್ವಭೌಮತ್ವದ ಪ್ರಜ್ಞೆಯನ್ನು ನಾವು ಮರಳಿ ಪಡೆಯಬೇಕಾದರೆ, ಮೊದಲು ನಮ್ಮದೇ ಆದ ಐತಿಹಾಸಿಕ ಪ್ರತ್ಯೇಕತೆಯ ಪ್ರಜ್ಞೆಯನ್ನು ಮರುಸ್ಥಾಪಿಸುವುದು ಕೂಡ ಅಷ್ಟೇ ಅಗತ್ಯ ಎಂದು ಅವರೆಲ್ಲರೂ ಬಲವಾಗಿ ನಂಬಿದ್ದರು.

ವರ್ತಮಾನದಲ್ಲಿ ಇತಿಹಾಸದ ಬಳಕೆ ಮತ್ತು ರಾಷ್ಟ್ರೀಯ ನಿರೂಪಣೆ:

ಇಂದಿನ ಕಾಲಘಟ್ಟದಲ್ಲಿ ಇತಿಹಾಸವನ್ನು ಮತ್ತೆ ಮತ್ತೆ ನೋಡಲಾಗುತ್ತಿದೆ, ತಪ್ಪು ತಪ್ಪಾಗಿ ಅರ್ಥೈಸಲಾಗುತ್ತಿದೆ, ಮತ್ತು ಕೆಲವೊಮ್ಮೆ ಹೊಸ ಹುಮ್ಮಸ್ಸಿನಿಂದ ಅದರ ಬಗ್ಗೆ ವಾದ-ವಿವಾದಗಳೂ ನಡೆಯುತ್ತಿವೆ. ಈಗಿನ ರಾಜಕೀಯ ಉದ್ದೇಶಗಳಿಗಾಗಿ ಗತಕಾಲವನ್ನು ರಾಜಕೀಯ ಚರ್ಚೆಗಳಲ್ಲಿ, ಸಾಂಸ್ಕೃತಿಕ ಪ್ರವಚನಗಳಲ್ಲಿ ಹಾಗೂ ಸಾರ್ವಜನಿಕ ಜೀವನದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇತಿಹಾಸದ ಸತ್ಯಗಳ ಜೊತೆಗೇ ಇಂದಿನ ರಾಜಕೀಯದ ಕಳಕಳಿಗಳನ್ನು ಬೆರೆಸಿ, ಕೆಲವೊಮ್ಮೆ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಇಲ್ಲವೇ ಸರಳೀಕರಿಸಿ ಹೇಳಲಾಗುತ್ತಿದೆ. ಇದರಿಂದ ನಮಗೆ ಒಂದು ಮೂಲಭೂತ ವಿಷಯ ಅರ್ಥವಾಗುತ್ತದೆ: ಇತಿಹಾಸ ಎನ್ನುವುದು ಎಲ್ಲೋ ನಿಂತುಬಿಟ್ಟ ಪರಂಪರೆಯಲ್ಲ, ಅದು ನಿರಂತರವಾಗಿ ನಡೆಯುತ್ತಿರುವ ಒಂದು ಸಂವಾದ. ಆ ಸಂವಾದವನ್ನು ನಾವು ಹೇಗೆ ನಡೆಸುತ್ತೇವೆ ಎನ್ನುವುದು, ನಾವು ನಮ್ಮ ಇತಿಹಾಸವನ್ನು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಮಾತ್ರವಲ್ಲದೆ, ಇಂದಿನ ದಿನಗಳಲ್ಲಿ ನಮ್ಮನ್ನು ನಾವು ಹೇಗೆ ಗುರುತಿಸಿಕೊಳ್ಳುತ್ತೇವೆ ಎಂಬುದರ ಮೇಲೂ ಆಳವಾದ ಪರಿಣಾಮ ಬೀರುತ್ತದೆ.

ವ್ಯಾಖ್ಯಾನ, ತಿಳುವಳಿಕೆ ಮತ್ತು ನಮ್ಮ ಅಸ್ಮಿತೆಯ ನಡುವೆ ನಡೆಯುವ ಈ ಪರಸ್ಪರ ಸಂವಾದವೇ ನಮ್ಮನ್ನು ರಾಷ್ಟ್ರೀಯ ಇತಿಹಾಸದ ಪರಿಕಲ್ಪನೆಗೆ ಕರೆದೊಯ್ಯುತ್ತದೆ. ಇತಿಹಾಸ ರಚನೆ ಎನ್ನುವುದು ನಮಗೆ ಗತಕಾಲವನ್ನು ಕೇವಲ ದಾಖಲಿಸುವ ಬದಲು ವ್ಯಾಖ್ಯಾನಿಸಲಾಗಿದೆ ಎಂದು ತಿಳಿಸಿಕೊಟ್ಟರೆ, ರಾಷ್ಟ್ರೀಯ ಇತಿಹಾಸದ ಸಿದ್ಧಾಂತವು ಆ ವ್ಯಾಖ್ಯಾನಗಳು ನಮಗೆ ಏಕೆ ಅಷ್ಟು ಆಳವಾಗಿ ಮುಖ್ಯವಾಗಿವೆ ಎಂಬುದನ್ನು ಬಿಡಿಸಿ ವಿವರಿಸುತ್ತದೆ.

ಪ್ರತಿಯೊಂದು ರಾಷ್ಟ್ರವು, ಯಾವುದೋ ಒಂದು ರೀತಿಯಲ್ಲಿ, ತನ್ನ ಗತಕಾಲದ ಬಗ್ಗೆ ಒಂದು ನಿರೂಪಣೆಯನ್ನು ನಿರ್ಮಿಸುತ್ತದೆ. ಅದು ಕೇವಲ ನೆನಪಿಟ್ಟುಕೊಳ್ಳಲು ಹಾಗೆ ಮಾಡುವುದಿಲ್ಲ, ಬದಲಿಗೆ ನಿರಂತರತೆಯ ಪ್ರಜ್ಞೆಯನ್ನು ಸೃಷ್ಟಿಸಲು, ತಲೆಮಾರುಗಳನ್ನು ಸಂಪರ್ಕಿಸಲು, ಅಸ್ಮಿತೆಯನ್ನು ವ್ಯಾಖ್ಯಾನಿಸಲು ಮತ್ತು ವರ್ತಮಾನಕ್ಕೆ ಅರ್ಥವನ್ನು ನೀಡಲು ಹಾಗೆ ಮಾಡುತ್ತದೆ. ಆದ್ದರಿಂದ ರಾಷ್ಟ್ರೀಯ ಇತಿಹಾಸವು ಎಂದಿಗೂ ಕೇವಲ ಘಟನೆಗಳ ಅನುಕ್ರಮಣಿಕೆ ಆಗಿರುವುದಿಲ್ಲ. ಇದು ಒಂದು ಸಮಾಜವು ನಾವು ಯಾರು ಎಂಬುದರ ಬಗ್ಗೆ ತನಗೆ ತಾನೇ ಹೇಳಿಕೊಳ್ಳಲು ಆಯ್ಕೆ ಮಾಡಿಕೊಳ್ಳುವ ಕಥೆಯಾಗಿದೆ. ಆದರೆ ಇಂತಹ ಕಥೆಯನ್ನು ವಿಭಿನ್ನ ರೀತಿಯಲ್ಲಿ ಹೇಳಬಹುದು.

  • ಇದು ವಿಶಾಲವಾಗಿರಬಹುದು, ಸಂಕೀರ್ಣತೆಗೆ ಅವಕಾಶ ನೀಡಬಹುದು ಮತ್ತು ರಾಷ್ಟ್ರದ ವಿಕಸನಕ್ಕೆ ಕಾರಣವಾದ ವಿಭಿನ್ನ ಕೋನಗಳನ್ನು ಒಪ್ಪಿಕೊಳ್ಳಬಹುದು.
  • ಅಥವಾ ಅದು ಆಯ್ದುಕೊಂಡದ್ದಾಗಿರಬಹುದು, ಬೇರೆಲ್ಲಾ ಅನುಭವಗಳನ್ನು ನಿರ್ಲಕ್ಷಿಸಿ ಕೆಲವು ಅನುಭವಗಳಿಗೆ ಮಾತ್ರ ಆದ್ಯತೆ ನೀಡುವ ಒಂದು ಸರಳ ನಿರೂಪಣೆಯಾಗಿ ಇತಿಹಾಸವನ್ನು ಕುಗ್ಗಿಸಬಹುದು.

ಈ ಎರಡರ ನಡುವಿನ ವ್ಯತ್ಯಾಸ ಕೇವಲ ಶೈಕ್ಷಣಿಕವಾಗಿ ಉಳಿಯುವುದಿಲ್ಲ. ಇದು ನಾಗರಿಕರು ರಾಷ್ಟ್ರದೊಳಗೆ ತಮ್ಮ ಸ್ಥಾನವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ರೂಪಿಸುತ್ತದೆ. ಅಷ್ಟೇ ಅಲ್ಲ, ರಾಷ್ಟ್ರವನ್ನು ಎಲ್ಲರ ಹಂಚಿಕೆಯ ಪರಂಪರೆ ಎಂದು ಭಾವಿಸಲಾಗಿದೆಯೇ ಅಥವಾ ಕೆಲವು ವಿಶೇಷ ಹಕ್ಕುಗಳನ್ನು ಪಡೆದ ಕೆಲವರ ಆಸ್ತಿ ಎಂದು ಭಾವಿಸಲಾಗಿದೆಯೇ ಎಂಬುದರ ಮೇಲೆಯೂ ಇದು ಪ್ರಭಾವ ಬೀರುತ್ತದೆ.

ನಮ್ಮ ದೇಶದಲ್ಲಿ ಇದು ಏಕೆ ವಿಶೇಷವಾಗಿ ಮುಖ್ಯವಾಗಿದೆ ಎಂದರೆ ಭಾರತದ ಗತಕಾಲವು ಏಕರೂಪಿ ನಿರೂಪಣೆಗೆ ಸುಲಭವಾಗಿ ಹೊಂದುವುದಿಲ್ಲ. ಇದು ಕೇವಲ ಒಂದು ರಾಷ್ಟ್ರ, ಒಂದು ಭಾಷೆ ಅಥವಾ ಏಕಾಂತದಲ್ಲಿ ಬೆಳೆದ ಒಂದು ಧರ್ಮದ ಕಥೆಯಲ್ಲ. ಬದಲಿಗೆ, ಇದು ಶತಮಾನಗಳ ಕಾಲದ ಪರಸ್ಪರ ಕ್ರಿಯೆಗಳು, ಸಂವಹನಗಳು, ವಿನಿಮಯಗಳು ಮತ್ತು ರೂಪಾಂತರಗಳ ಮೂಲಕ ವಿಕಸನಗೊಂಡ ನಾಗರಿಕತೆಯ ಕಥೆಯಾಗಿದೆ.

ನಮ್ಮಲ್ಲಿ ಕೆಲವರಿಗೆ ಜವಾಹರಲಾಲ್ ನೆಹರು ಅವರ ‘ಪಾಲಿಂಪ್ಸೆಸ್ಟ್’ (ಒಂದರ ಮೇಲೊಂದರಂತೆ ಬರವಣಿಗೆಗಳನ್ನು ಬರೆದ ಫಲಕ) ರೂಪಕದ ಪರಿಚಯವಿಲ್ಲದಿರಬಹುದು. ಒಂದು ಪಾಲಿಂಪ್ಸೆಸ್ಟ್ ಎಂದರೆ; ಉದಾಹರಣೆಗೆ, ನಾನು ಈ ಗೋಡೆಯ ಮೇಲೆ ಏನನ್ನಾದರೂ ಬರೆದರೆ, ಬೇರೊಬ್ಬರು ಬಂದು ಅದರ ಮೇಲೆ ಬರೆಯುತ್ತಾರೆ, ನಂತರ ಲೇಖಕರು ಬರೆದದ್ದರ ಮೇಲೆ ತಮ್ಮದೇ ಆದ ಆಲೋಚನೆಗಳನ್ನು ಬರೆಯುತ್ತಾರೆ. ಚಕ್ರವು ಮುಂದುವರಿಯುತ್ತಲೇ ಇರುತ್ತದೆ. ಆದರೆ ಯಾವುದೇ ಹೊಸ ಬರವಣಿಗೆಯು ಹಿಂದಿನದನ್ನು ಸಂಪೂರ್ಣವಾಗಿ ಅಳಿಸಿಹಾಕುವುದಿಲ್ಲ. ಎಲ್ಲವೂ ಅಲ್ಲೇ ಇರುತ್ತದೆ, ಒಂದರೊಳಗೊಂದು ಸಂಯೋಜಿಸಲ್ಪಟ್ಟಿದೆ, ಪರಸ್ಪರರ ಭಾಗವಾಗಿದೆ. ಮೊದಲು ಬರೆದದ್ದು ಕೆಳಗಿನಿಂದ ಇಣುಕಿ ನೋಡುತ್ತಲೇ ಇರುತ್ತದೆ, ಹೊಸ ಬರವಣಿಗೆಗೆ ಬಣ್ಣ ಮತ್ತು ಅರ್ಥವನ್ನು ನೀಡುತ್ತದೆ. ಹಲವು ವಿಧಗಳಲ್ಲಿ, ಭಾರತೀಯ ಇತಿಹಾಸದ ಪರಿಸ್ಥಿತಿಯೂ ಇದೇ ಆಗಿದೆ. ಟಾಗೂರ್ ಅವರು ‘ಭಾರತದ ಪರಿಕಲ್ಪನೆ’ ಎಂದು ಕರೆದ ಮೂಲ ತಿಳುವಳಿಕೆ ಇದೇ ಆಗಿದೆ.

ಭಾರತವು ಏಕರೂಪತೆಯಿಂದಲ್ಲ, ಬದಲಿಗೆ ಭಿನ್ನತೆಗಳ ಸಹಬಾಳ್ವೆಯಿಂದ ವ್ಯಾಖ್ಯಾನಿಸಲ್ಪಟ್ಟಿದೆ ಎಂಬ ಕಲ್ಪನೆ ಇದು. ಇದು ಬಹುತ್ವವನ್ನು ಭಾರತದ ಗುರುತಿಗೆ ಇರುವ ಸವಾಲಾಗಿ ಅಥವಾ ಪರಿಹರಿಸಬೇಕಾದ ಸಮಸ್ಯೆಯಾಗಿ ನೋಡದೆ, ನಮ್ಮ ಅಸ್ತಿತ್ವದ ಸತ್ಯವಾಗಿ ಸ್ವೀಕರಿಸಬೇಕಾದ ಸ್ಥಿತಿಯಾಗಿ ಗುರುತಿಸುವ ಕಲ್ಪನೆಯಾಗಿದೆ. ಈ ಅರ್ಥದಲ್ಲಿ, ಭಾರತದ ಪರಿಕಲ್ಪನೆಯು ಎಂದಿಗೂ ಭಾವನಾತ್ಮಕ ಘೋಷಣೆಯಾಗಿರಲಿಲ್ಲ. ಅಪಾರ ವೈವಿಧ್ಯತೆಯ ನಾಗರಿಕತೆಯು ಹಂಚಿಕೆಯ ನಾಗರಿಕ ಜೀವನವನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದರ ಕುರಿತಾದ ಅತ್ಯಂತ ಗಂಭೀರವಾದ ಪ್ರಸ್ತಾಪವಾಗಿತ್ತು ಮತ್ತು ಆಗಿದೆ. ಇದಕ್ಕಾಗಿಯೇ ಭಾರತವನ್ನು ಏಕರೂಪಿ ಸಾಂಸ್ಕೃತಿಕ ಅಥವಾ ಧಾರ್ಮಿಕ ನಿರೂಪಣೆಗೆ ಇಳಿಸುವುದು ಕೇವಲ ಐತಿಹಾಸಿಕವಾಗಿ ಸಮಂಜಸವಲ್ಲ. ಆಧುನಿಕ ಯುಗದಲ್ಲಿ ಭಾರತವು ತನ್ನ ಪರಿಕಲ್ಪನೆಯನ್ನು ನಿರ್ಮಿಸಿಕೊಂಡಿರುವ ತಳಹದಿಯನ್ನೇ ತಪ್ಪಾಗಿ ಅರ್ಥಮಾಡಿಕೊಂಡಂತಾಗುತ್ತದೆ.

ಈ ಬೆಳಕಿನಲ್ಲಿ ನೋಡಿದಾಗ, ಇತಿಹಾಸ ಲೇಖನವು ಶೈಕ್ಷಣಿಕ ಪ್ರವಚನವನ್ನು ಮೀರಿ ಹೋಗುತ್ತದೆ. ನಾವು ನಮ್ಮದೇ ಆದ ರಾಷ್ಟ್ರವನ್ನು ಹೇಗೆ ಕಲ್ಪಿಸಿಕೊಳ್ಳುತ್ತೇವೆ ಎಂಬುದರ ಹೃದಯಭಾಗವನ್ನು ಅದು ತಲುಪುತ್ತದೆ. ಏಕೆಂದರೆ ನಾವು ನಮ್ಮ ಗತಕಾಲವನ್ನು ನಿರೂಪಿಸುವ ವಿಧಾನವು ವರ್ತಮಾನದಲ್ಲಿ ನಾವು ಎಳೆಯುವ ಗಡಿಗಳ ಮೇಲೆ, ಒಳಗೊಳ್ಳುವಿಕೆ ಮತ್ತು ಹೊರಗಿಡುವಿಕೆಯ ನಡುವಿನ ಗೆರೆಗಳ ಮೇಲೆ, ಒಡೆತನ ಮತ್ತು ಪರಕೀಯತೆಯ ನಡುವಿನ ಗೆರೆಗಳ ಮೇಲೆ ಪರಿಣಾಮ ಬೀರುತ್ತದೆ. ಗತಕಾಲವನ್ನು ಏಕೀಕೃತ ಮತ್ತು ಏಕರೂಪಿ ಎಂದು ಚಿತ್ರಿಸಿದರೆ, ರಾಷ್ಟ್ರವನ್ನು ಅದೇ ನಿಯಮಗಳಲ್ಲಿ ಕಲ್ಪಿಸಿಕೊಳ್ಳಲು ಪ್ರಾರಂಭಿಸಲಾಗುತ್ತದೆ. ಆದಾಗ್ಯೂ, ಗತಕಾಲವನ್ನು ಪದರಗಳನ್ನು ಹೊಂದಿರುವ ಮತ್ತು ವೈವಿಧ್ಯಮಯ ಎಂದು ಅರ್ಥಮಾಡಿಕೊಂಡರೆ, ರಾಷ್ಟ್ರವನ್ನು ಯಾವುದೇ ತೊಂದರೆಯಿಲ್ಲದೆ ಬಹು ಗುರುತುಗಳನ್ನು ಒಳಗೊಳ್ಳುವ ಸಾಮರ್ಥ್ಯವಿರುವ ವಿಶಾಲವಾದ ದೃಷ್ಟಿಕೋನದಲ್ಲಿ ನೋಡಬಹುದು. ಅದಕ್ಕಾಗಿಯೇ ರಾಷ್ಟ್ರದ ಇತಿಹಾಸ ರಚನೆ(ಹಿಸ್ಟಿರಿಯೋಗ್ರಫಿ) ತುಂಬಾ ಮುಖ್ಯವಾಗಿದೆ.

ಇತಿಹಾಸ ಬರೆಯುವುದು ಕೇವಲ ಏನನ್ನು ನೆನಪಿನಲ್ಲಿಡಬೇಕು ಎಂಬುದರ ಬಗ್ಗೆ ಮಾತ್ರವಲ್ಲ, ಆ ನೆನಪನ್ನು ಹೇಗೆ ಸಂಘಟಿಸಬೇಕು ಮತ್ತು ಯಾವ ಉದ್ದೇಶಕ್ಕಾಗಿ ಎಂಬುದರ ಬಗ್ಗೆಯೂ ಆಗಿದೆ. ಇದು ಹಂಚಿಕೆಯ ಪರಂಪರೆಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಆಳಗೊಳಿಸಬಹುದು, ಅಥವಾ ಸಮಕಾಲೀನ ರಾಜಕೀಯ ಮತ್ತು ಕಳಕಳಿಗಳಿಂದ ರೂಪಿತವಾದ ಕಿರಿದಾದ ನಿರೂಪಣೆಗೆ ಅದನ್ನು ಸೀಮಿತಗೊಳಿಸಬಹುದು. ಆದ್ದರಿಂದ ನಾವು ಒಂದು ರಾಷ್ಟ್ರೀಯ ಕಥೆಯನ್ನು ಹೇಳಲು ಪ್ರಯತ್ನಿಸುತ್ತೇವೆಯೇ ಅಥವಾ ಅನೇಕ ರಾಷ್ಟ್ರೀಯ ಕಥೆಗಳನ್ನು ಹೇಳಲು ಪ್ರಯತ್ನಿಸುತ್ತೇವೆಯೇ ಎಂಬುದು ಪ್ರಶ್ನೆಯಲ್ಲ. ಎಲ್ಲಾ ರಾಷ್ಟ್ರಗಳೂ ಕಥೆಗಳನ್ನು ಹೇಳುತ್ತವೆ. ನಾವು ಎಂತಹ ಕಥೆಯನ್ನು ಹೇಳಲು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದು ಪ್ರಮುಖ ಪ್ರಶ್ನೆ. ಆ ಪ್ರಶ್ನೆಗೆ ಉತ್ತರಿಸುವಾಗ, ಇತಿಹಾಸ ರಚನೆಯ ಆಳವಾದ ಪರಿಣಾಮಗಳು ಹೊರಹೊಮ್ಮುತ್ತವೆ. ಭಾರತದ ಪರಿಕಲ್ಪನೆಯು ಬಹುತ್ವದ ಮೇಲೆ ಆಧಾರಿತವಾಗಿದೆ ಎಂದು ನಾವು ಒಪ್ಪಿಕೊಂಡರೆ, ಅದರ ಇತಿಹಾಸವನ್ನು ಅದೇ ನಿಯಮಗಳಲ್ಲಿ ಅರ್ಥಮಾಡಿಕೊಳ್ಳಬೇಕು ಎಂಬುದು ತಿಳಿಯುತ್ತದೆ. ಅಂದರೆ, ಏಕರೂಪದ, ಅಡೆತಡೆಗಳಿಲ್ಲದ ನಿರೂಪಣೆಯಾಗಿ ಅಲ್ಲ. ಬದಲಿಗೆ, ಕಾಲಾನಂತರದಲ್ಲಿ ವಿಭಿನ್ನ ಪ್ರವೃತ್ತಿಗಳಿಂದ ರೂಪಿತವಾದ ಮುಂದುವರಿಕೆಯಾಗಿ ನೋಡಬೇಕು.

ಭಾರತದ ವಿಕಸನ: ಪ್ರತ್ಯೇಕತೆಯಲ್ಲ, ಪರಸ್ಪರ ಸಂವಾದ:

ಭಾರತವು ಐತಿಹಾಸಿಕವಾಗಿ ಎಂದಿಗೂ ಏಕರೂಪಿಯಾಗಿರಲಿಲ್ಲ. ಭಾರತದ ವಿಕಸನವು ಪ್ರತ್ಯೇಕತೆಯಿಂದಲ್ಲ, ಬದಲಿಗೆ ಪರಸ್ಪರ ಸಂವಾದದಿಂದ ಗುರುತಿಸಲ್ಪಟ್ಟಿದೆ. ಶತಮಾನಗಳ ಅವಧಿಯಲ್ಲಿ, ವಿಭಿನ್ನ ಸಂಪ್ರದಾಯಗಳು, ನಂಬಿಕೆ ವ್ಯವಸ್ಥೆಗಳು ಮತ್ತು ಸಾಂಸ್ಕೃತಿಕ ಆಚರಣೆಗಳು ಸಹಬಾಳ್ವೆ ನಡೆಸಿವೆ ಮತ್ತು ಅನೇಕ ಸಂದರ್ಭಗಳಲ್ಲಿ ಪ್ರತ್ಯೇಕಿಸಲು ಕಷ್ಟಕರವಾದ ರೀತಿಯಲ್ಲಿ ಪರಸ್ಪರ ಪ್ರಭಾವ ಬೀರಿವೆ.

ನಮ್ಮ ನಾಗರಿಕತೆಯ ಆರಂಭಿಕ ಪ್ರವೃತ್ತಿಗಳು ವೈದಿಕ ಚಿಂತನೆ ಮತ್ತು ಆಚರಣೆಯಿಂದ ರೂಪಿತವಾಗಿದ್ದವು. ಆದರೆ, ಇದು ಕೂಡ ಏಕರೂಪಿಯಾಗಿರಲಿಲ್ಲ. ಪುರಾಣ ಮತ್ತು ಉಪನಿಷದ್ ಸಂಪ್ರದಾಯಗಳ ಜೊತೆಗೆ ಹಿಂದೂ ತತ್ತ್ವಶಾಸ್ತ್ರದ ಆರು ಸ್ಪರ್ಧಾತ್ಮಕ ಶಾಖೆಗಳಿದ್ದವು. ನಂತರ ಇವುಗಳನ್ನು ಬೌದ್ಧ ಮತ್ತು ಜೈನ ತತ್ತ್ವಶಾಸ್ತ್ರಗಳ ಹೊರಹೊಮ್ಮುವಿಕೆಯಿಂದ ಪುಷ್ಠೀಕರಿಸಲಾಯಿತು ಮತ್ತು ಸವಾಲು ಮಾಡಲಾಯಿತು. ಇದು ಹೊಸ ನೈತಿಕ ಚೌಕಟ್ಟುಗಳನ್ನು ಮತ್ತು ವಿಚಾರಣೆಯ ಬಣ್ಣಗಳನ್ನು, ಹಾಗೂ ವಿಚಾರಣೆಯ ವಿಧಾನಗಳನ್ನು ಪರಿಚಯಿಸಿದವು. ನಂತರದ ಶತಮಾನಗಳು ಭಕ್ತಿ ಚಳುವಳಿಯ ಉದಯವನ್ನು ಕಂಡವು, ಇದು ಕಟ್ಟುನಿಟ್ಟಾದ ಮತ್ತು ವರ್ಗ ಶ್ರೇಣಿಗಳನ್ನು ಮೀರಿದ ವೈಯಕ್ತಿಕ ಭಕ್ತಿಗೆ ಒತ್ತು ನೀಡಿತು. ನಂತರ ಸಹಜವಾಗಿ, ಈ ಎಲ್ಲದರ ಜೊತೆಗೆ ಇತರ ಧಾರೆಗಳೂ ಬಂದವು.

ಇಸ್ಲಾಮ್‌ ಒಂದು ಕುತೂಹಲಕಾರಿ ಕಥೆಯಾಗಿದೆ. ಉತ್ತರ ಭಾರತದಲ್ಲಿ, ಮುಹಮ್ಮದ್ ಬಿನ್ ಕಾಸಿಮ್ ಮೂಲಕವಾಗಿ 712 ರಲ್ಲಿ ಕತ್ತಿಯ ಮೂಲಕ ಇಸ್ಲಾಮ್‌ ಬಂದಿತು ಎಂಬ ಅಭಿಪ್ರಾಯವಿದೆ. ದಕ್ಷಿಣದಲ್ಲಿ ನಮಗೆ ಇದಕ್ಕಿಂತ ಭಿನ್ನವಾದ ಸ್ಮರಣೆಯಿದೆ. ನಾನು ನನ್ನ ರಾಜ್ಯದ (ಕೇರಳ) ಬಗ್ಗೆ ಉಲ್ಲೇಖಿಸಲು ಬಯಸುತ್ತೇನೆ. ಈಗ ಅರಬರು ಎಂದು ಕರೆಯುವ ಜನರಿಗೆ ನಾವು ಮಲಯಾಳಿಗಳು ಪರಿಚಿತರಾಗಿದ್ದೆವು. ಇಸ್ಲಾಮ್‌ಗಿಂತ ಸಾವಿರ ವರ್ಷಗಳ ಮೊದಲೇ ಪ್ರತಿ ವರ್ಷ ಕೇರಳಕ್ಕೆ ಪ್ರಯಾಣಿಸುತ್ತಿದ್ದರು. ಅರೇಬಿಯನ್ ಸಮುದ್ರದಲ್ಲಿ ಗಾಳಿ ಅನುಕೂಲಕರವಾಗಿದ್ದಾಗ ಅವರು ಬರುತ್ತಿದ್ದರು. ಕೇರಳದ ಪಶ್ಚಿಮ ಕರಾವಳಿಯಲ್ಲಿ ನೆಲೆಸುತ್ತಿದ್ದರು, ವ್ಯಾಪಾರ ಮಾಡುತ್ತಿದ್ದರು, ಸ್ಥಳೀಯ ಸಮುದಾಯಗಳೊಂದಿಗೆ ವಿವಾಹವಾಗುತ್ತಿದ್ದರು, ಕೆಲವು ತಿಂಗಳುಗಳನ್ನು ಕಳೆಯುತ್ತಿದ್ದರು ಮತ್ತು ಗಾಳಿ ಬದಲಾದಾಗ ಹಿಂತಿರುಗುತ್ತಿದ್ದರು. ಈ ಚಟುವಟಿಕೆಯು ಪ್ರತಿ ವರ್ಷ, ವರ್ಷದಿಂದ ವರ್ಷಕ್ಕೆ, ಶತಮಾನಗಳವರೆಗೆ ಸಾಗಿದೆ.

ಹಾಗಾಗಿ, ಇಸ್ಲಾಮ್‌ ನಮ್ಮ ಬಳಿಗೆ ಕತ್ತಿಯ ಮೂಲಕ ಬರಲಿಲ್ಲ; ಬದಲಿಗೆ ಸುದ್ದಿಯಾಗಿ ಬಂದಿತು. ನಮ್ಮೆಡೆಗೆ ಪ್ರಯಾಣಿಸುತ್ತಿದ್ದ, ನಮಗೆ ಪರಿಚಿತರಾಗಿದ್ದ, ಸಾವಿರಾರು ವರ್ಷಗಳಿಂದ ಹಲವು ವಿಧಗಳಲ್ಲಿ ನಮ್ಮ ಭಾಗವಾಗಿದ್ದ ಜನರಿಂದ ಸುದ್ದಿಯಾಗಿ ಬಂದಿತು. ನಮ್ಮ ಬಳಿಗೆ ಬಂದವರು, ನಮಗೆ ತಿಳಿದಿರುವ, ನಮ್ಮೊಂದಿಗೆ ವ್ಯಾಪಾರ ಮಾಡುತ್ತಿದ್ದ, ನಮ್ಮೊಂದಿಗೆ ವಾಸಿಸುತ್ತಿದ್ದ ಜನರು ಹೇಳಿದರು, “ಹೇ, ನಮ್ಮ ದ್ವೀಪಸಮೂಹದಲ್ಲಿ ಏನಾಗುತ್ತಿದೆ ಎಂದು ನಿಮಗೆ ಗೊತ್ತಾ? ನಮ್ಮ ಬಳಿಗೆ ಒಬ್ಬ ಪ್ರವಾದಿ ಬಂದಿದ್ದಾರೆ ಮತ್ತು ಅವರು ನಮಗೆ ಇಂತಿಂತಹ ವಿಷಯಗಳನ್ನು ಹೇಳುತ್ತಿದ್ದಾರೆ.” ಸ್ಥಳೀಯ ಹಿಂದೂ ರಾಜರಾದ ಚೇರಮಾನ್ ಪೆರುಮಾಳ್ ರವರು ಪ್ರವಾದಿಯವರ ಬಗ್ಗೆ ಕೇಳಿ ಎಷ್ಟು ಉತ್ಸುಕರಾಗಿದ್ದರೆಂದರೆ, ಅರೇಬಿಯನ್ ಪರ್ಯಾಯ ದ್ವೀಪಕ್ಕೆ ಹೋಗಿ ಇಸ್ಲಾಮಿನ ಪ್ರವಾದಿಯನ್ನು ಭೇಟಿ ಮಾಡಲು 22 ಅಥವಾ 23 ಹಡಗುಗಳ ನೌಕಾಪಡೆಯನ್ನು ಸಿದ್ಧಪಡಿಸಿದರು. ಆದರೆ, ಬಹುತೇಕ ಹಡಗುಗಳು ಅರೇಬಿಯಾವನ್ನು ತಲುಪಲಿಲ್ಲ. ಇಂದು ನಾವು ಲಕ್ಷದ್ವೀಪ ಅಥವಾ ಮಾಲ್ಡೀವ್ಸ್ ಎಂದು ಕರೆಯುವ ಸ್ಥಳಗಳಲ್ಲಿ ಅವು ಸಿಲುಕಿಕೊಂಡವು. ಆದರೆ, ಕೆಲವು ಜನರು ಅರೇಬಿಯಾವನ್ನು ತಲುಪಿದರು. ಆಶ್ಚರ್ಯಕರ ಸಂಗತಿಯೆಂದರೆ ಇಂದು ಕೂಡ ಚೇರಮಾನ್ ಪೆರುಮಾಳ್ ಅವರ ಪ್ರಯಾಣದ ಪುರಾವೆಗಳನ್ನು ಗುರುತಿಸಬಹುದು. ಚೇರಮಾನ್ ಪೆರುಮಾಳ್ ತಮ್ಮೊಂದಿಗೆ ಕೊಂಡೊಯ್ದಿದ್ದ ತೆಂಗಿನಕಾಯಿಗಳಿಂದ ಒಮನ್‌ ದೇಶದ ದಕ್ಷಿಣ ಸಲಾಹ್‌ನಲ್ಲಿ ಕೇರಳದ ತೆಂಗಿನ ಮರಗಳು ಬೆಳೆಯುತ್ತಿವೆ. ಅರೇಬಿಯನ್ ಪರ್ಯಾಯ ದ್ವೀಪಕ್ಕೆ ಇವು ಸ್ಥಳೀಯ ಬೆಳೆ ಆಗಿರಲಿಲ್ಲ. ಈ ರೀತಿಯಾಗಿ ನಾವು ಇತಿಹಾಸಕ್ಕೆ ಸಂಪರ್ಕ ಹೊಂದಿದ್ದೇವೆ.

ಹಾಗಾಗಿ, ಕ್ಯಾಲಿಕಟ್ ಮತ್ತು ಕೊಚ್ಚಿಯಲ್ಲಿ, ಮುಖ್ಯವಾಗಿ ಪಶ್ಚಿಮ ಕರಾವಳಿಯ ಪ್ರದೇಶದಲ್ಲಿ, ಮುಸ್ಲಿಂ ಸಮುದಾಯವು ಎಷ್ಟು ದೊಡ್ಡದಾಗಿ ಬೆಳೆಯಿತೆಂದರೆ ಅವರಿಗೆ ಪ್ರಾರ್ಥನೆ ಮಾಡಲು ಒಂದು ಸ್ಥಳ ಬೇಕಾಗಿತ್ತು. ಮುಸ್ಲಿಮರು ಸ್ಥಳೀಯ ರಾಜನಾದ ಝಾಮೋರಿನ್(Zamorin) ಬಳಿ ತಮ್ಮ ಬೇಡಿಕೆಯಿಟ್ಟರು. ರಾಜನು ಹೇಳಿದನು, “ಯಾವುದೇ ತೊಂದರೆಯಿಲ್ಲ. ಪಾಲುಬಿದ್ದಿರುವ ಒಂದು ದೇವಸ್ಥಾನವಿದೆ. ನೀವು ಅದನ್ನು ತೆಗೆದುಕೊಳ್ಳಬಹುದು.” ಹಾಗೆ, ಅರಬ್ ಪ್ರಪಂಚದ ಹೊರಗಿನ ಅತ್ಯಂತ ಹಳೆಯ ಮಸೀದಿ ಕೇರಳದ ಕೊಡುಂಗಲ್ಲೂರಿನಲ್ಲಿದೆ. ಈ ಮಸೀದಿಯ ಹೊರಗೆ ಇಂದಿಗೂ ಪ್ರಾಚೀನ ಹಿಂದೂ ದೀಪ ಉರಿಯುತ್ತಿದೆ. ಶತಮಾನಗಳ ಅವಧಿಯಲ್ಲಿ ಈ ಮಸೀದಿಯು ಐದು ಅಥವಾ ಆರು ಪ್ರಮುಖ ನವೀಕರಣಗಳಿಗೆ ಒಳಗಾಗಿದೆ. ಆದರೆ, ಇಸ್ಲಾಮಿನ ಪ್ರವಾದಿಯವರ ಜೀವನ ಕಾಲಕ್ಕೆ ಸಂಬಂಧಿಸಿದ ಮಸೀದಿಯೊಂದು ಭಾರತದಲ್ಲಿದೆ ಎಂಬುವುದನ್ನು ನೀವು ಊಹಿಸಬಲ್ಲಿರಾ? ಬಹುಶಃ ಇವು ಉತ್ತರದಲ್ಲಿ ಜನರಿಗೆ ಹೇಳದ ಚರಿತ್ರೆಗಳಾಗಿರಬಹುದು, ಅಥವಾ ಅವರಿಗೆ ತಿಳಿದಿಲ್ಲದಿರಬಹುದು, ಅಥವಾ ಅವರು ನೆನಪಿನಲ್ಲಿಟ್ಟುಕೊಳ್ಳದಿರಲು ಆಯ್ಕೆ ಮಾಡಿಕೊಂಡಿರಬಹುದು. ಆದರೆ ಅದಕ್ಕಾಗಿಯೇ ನಾವು ಬಹು ಇತಿಹಾಸಗಳ ಬಗ್ಗೆ ಮಾತನಾಡುವಾಗ ಅರ್ಥಮಾಡಿಕೊಳ್ಳಬೇಕಾದ ವಿಷಯ ಏನೆಂದರೆ, ಬಹು ಇತಿಹಾಸಗಳು ಮತ್ತು ಅದನ್ನು ಹೇಳಲು ಬಹು ಮಾರ್ಗಗಳಿವೆ. ಭಾರತದಲ್ಲಿ ಇಸ್ಲಾಮಿನ ಕಥೆಯ ಬಗ್ಗೆ ಹಲವಾರು ಗ್ರಹಿಕೆಗಳು ಇವೆ.

ಸಾಂಸ್ಕೃತಿಕ ಸಮನ್ವಯ ಮತ್ತು ವಾಸ್ತುಶಿಲ್ಪ:

ಸಹಜವಾಗಿ, ಭಾರತವು ಐತಿಹಾಸಿಕವಾಗಿ ಎಂದಿಗೂ ಏಕರೂಪಿ ಆಗಿರಲಿಲ್ಲ. ನಾನು ಹೇಳಿದಂತೆ ಅದರ ವಿಕಸನವು, ಅನೇಕ ರೀತಿಯ ಪರಸ್ಪರ ಸಮನ್ವಯಗಳಾಗಿವೆ. ಇಸ್ಲಾಮಿಕ್ ಪರಂಪರೆಯ ಆಗಮನ ಮತ್ತು ಹರಡುವಿಕೆಯು ತಮ್ಮೊಂದಿಗೆ ತತ್ತ್ವಶಾಸ್ತ್ರ, ಚಿಂತನೆ, ರಾಜಕೀಯ ಸಂಘಟನೆ, ಕಲಾತ್ಮಕ ಅಭಿವ್ಯಕ್ತಿ ಮತ್ತು ಬೌದ್ಧಿಕ ವಿನಿಮಯದ ಹೊಸ ರೂಪಗಳನ್ನು ತಂದವು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕಾಲಾನಂತರದಲ್ಲಿ, ಈ ಪ್ರಭಾವಗಳು ಪ್ರತ್ಯೇಕವಾಗಿ ಉಳಿಯಲಿಲ್ಲ. ಅವು ಸ್ಪಷ್ಟವಾಗಿ ಭಾರತೀಯವಾಗಿರುವ ರೂಪಗಳನ್ನು ಸೃಷ್ಟಿಸಲು ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಸಂಪ್ರದಾಯಗಳೊಂದಿಗೆ ಪರಸ್ಪರ ಸಂವಹನ ನಡೆಸಿದವು. ಅಸ್ತಿತ್ವದಲ್ಲಿದ್ದವುಗಳಲ್ಲಿ ಯಾವುದೂ ಏಕರೂಪಿಯಾಗಿರಲಿಲ್ಲ. ವೈದಿಕ ಚಿಂತನೆಯಲ್ಲಿ, ಬೌದ್ಧ ಚಿಂತನೆಯಲ್ಲಿ, ಜೈನ ಚಿಂತನೆಯಲ್ಲಿ, ಪುರಾಣ ಚಿಂತನೆಯಲ್ಲಿ ವೈವಿಧ್ಯತೆ ಮತ್ತು ಬಹುತ್ವವಿತ್ತು. ಹಿಂದೂ ತತ್ತ್ವಶಾಸ್ತ್ರದ ಆರು ಶಾಖೆಗಳ ನಡುವೆ ಚರ್ಚೆಗಳಿದ್ದವು. ಅದೇ ರೀತಿ, ವಿವಿಧ ಇಸ್ಲಾಮಿಕ್ ವಿದ್ವಾಂಸರು ಮತ್ತು ಗುರುಗಳ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಸಾಂಸ್ಕೃತಿಕವಾಗಿ ನಾವು ಅದನ್ನು ಸ್ಪಷ್ಟವಾಗಿ ಕಾಣುತ್ತೇವೆ.

ಉದಾಹರಣೆಗೆ ಕಬೀರರ ಕಾವ್ಯವನ್ನೇ ತಗೊಳ್ಳಿ; ಅದು ಭಕ್ತಿ ಮತ್ತು ಸೂಫಿ ಎರಡೂ ಸಂಪ್ರದಾಯಗಳಿಂದ ಪ್ರೇರಿತವಾಗಿತ್ತು. ವಿಶೇಷ ಅಂದರೆ, ಈ ಎರಡೂ ಸಂಪ್ರದಾಯಗಳು ಅಂದಿನ ಸಾಮಾಜಿಕ ವರ್ಗ ವ್ಯವಸ್ಥೆಯ ವಿರುದ್ಧದ ಪ್ರತಿರೋಧವಾಗಿದ್ದವು. ನಿಜಾಮುದ್ದೀನ್ ಔಲಿಯಾ ಅವರಂತಹ ಮಹನೀಯರ ಆಧ್ಯಾತ್ಮಿಕ ಪರಂಪರೆಯನ್ನು ನೋಡಿದರೂ ಅಷ್ಟೇ, ಅವರು ವಿಶಾಲವಾದ ಬೇರೆ ಬೇರೆ ಸಂಪ್ರದಾಯಗಳಿಂದ ಪ್ರಭಾವ ಪಡೆದಿದ್ದರೂ ಸಹ, ಅವರ ವಿಚಾರಗಳು ನಮ್ಮ ಸ್ಥಳೀಯ ಮಣ್ಣಿನಲ್ಲಿ ಆಳವಾಗಿ ಬೇರೂರಿದ್ದವು. ಇದೇ ವಾತಾವರಣದಲ್ಲೇ ನಮ್ಮ ಭಾಷೆಯೂ ಬೆಳೆಯಿತು. ನಿಜ ಹೇಳಬೇಕೆಂದರೆ, ಜನರ ನಡುವಿನ ಈ ಒಡನಾಟದಿಂದಲೇ ಮೂಡಿಬಂದ ಭಾರತೀಯ ಭಾಷೆಯು ಸಂಸ್ಕೃತ ಮತ್ತು ಪರ್ಷಿಯನ್ ಪ್ರಭಾವಗಳಿಂದಷ್ಟೇ ಅಲ್ಲದೆ, ಉತ್ತರ ಭಾರತದ ಸೈನಿಕ ಶಿಬಿರಗಳಲ್ಲಿದ್ದ ಅರೇಬಿಕ್ ಮತ್ತು ಟರ್ಕಿಶ್ ಭಾಷೆಗಳ ಸಮ್ಮಿಲನದಿಂದಲೂ ರೂಪಪಡೆದುಕೊಂಡಿತು. ಕೊನೆಗೆ ಸಂಗೀತದ ವಿಷಯಕ್ಕೆ ಬಂದರೂ ಅಷ್ಟೇ, ಕವ್ವಾಲಿ ಸಂಪ್ರದಾಯದಿಂದ ಹಿಡಿದು ಇವತ್ತಿನ ಭಾರತೀಯ ಶಾಸ್ತ್ರೀಯ ಸಂಗೀತದ ವಿಕಸನದವರೆಗೂ ನಮಗೆ ಕಾಣಿಸುವುದು ಒಂಟಿತನ ಅಥವಾ ಪ್ರತ್ಯೇಕತೆಯಲ್ಲ, ಬದಲಿಗೆ ಸುಂದರವಾದ ಸಮನ್ವಯತೆ ಮಾತ್ರ.

ಈ ಸಮನ್ವಯತೆಗೆ ವಾಸ್ತುಶಿಲ್ಪವು ಮತ್ತೊಂದು ಉದಾಹರಣೆಯನ್ನು ಕೊಡುತ್ತದೆ. ನಾವು ಇಂದು ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ ಎಂದು ಯಾವುದನ್ನು ಬಣ್ಣಿಸುತ್ತೇವೆಯೋ, ಅದು ಈಗಾಗಲೇ ಇದ್ದದ್ದನ್ನು ಸ್ಥಾನಪಲ್ಲಟಗೊಳಿಸಲಿಲ್ಲ, ಬದಲಿಗೆ ಅದರೊಂದಿಗೆ ಹೊಸದನ್ನು ನಿರ್ಮಿಸಿತು. ಭಾರತದಲ್ಲಿ ಈಗಾಗಲೇ ಇದ್ದ ವಾಸ್ತುಶಿಲ್ಪಿಗಳು ಮತ್ತು ಶಿಲ್ಪಿಗಳು ಸ್ಥಳೀಯ ಸಾಮಾಗ್ರಿಗಳನ್ನು, ತಂತ್ರಜ್ಞಾನಗಳನ್ನು ಹಾಗೂ ಸೌಂದರ್ಯಪ್ರಜ್ಞೆಯನ್ನು ಮರುರೂಪಿಸಿದರು. ಪರಿಣಾಮವಾಗಿ ಹೊರಹೊಮ್ಮಿದ್ದು ವಿನಾಶವಲ್ಲ, ಬದಲಾಗಿ ಭಾರತೀಯ ವಾಸ್ತುಶಿಲ್ಪದ ಒಂದು ಹೊಸ ಪದರ. ನಾವು ಕುತುಬ್ ಮಿನಾರ್‌, ಫತೇಪುರ್ ಸಿಕ್ರಿ, ಹುಮಾಯೂನ್ ಸಮಾಧಿ ಮತ್ತು ತಾಜ್ ಮಹಲ್ ಅನ್ನು ಕೇವಲ ವಿವಿಧ ರಾಜವಂಶಗಳ ಸ್ಮಾರಕಗಳಾಗಿ ನೋಡಬೇಕಾಗಿಲ್ಲ, ಬದಲಿಗೆ ತನ್ನೊಂದಿಗೆ ತಾನೇ ಆಳವಾದ ಸಂವಾದದಲ್ಲಿ ತೊಡಗಿದ್ದ ಒಂದು ಮಹಾನ್ ನಾಗರಿಕತೆಯ ಪುರಾವೆಯಾಗಿ ನೋಡಬೇಕಿದೆ.

ಪರಸ್ಪರ ಒಡನಾಟದ ಈ ವಿಶಿಷ್ಟ ಮಾದರಿಯು ವಸಾಹತುಶಾಹಿ ಕಾಲದಲ್ಲೂ ಮುಂದುವರಿಯಿತು. ಕಾನೂನು, ಆಡಳಿತ ಮತ್ತು ಆಧುನಿಕ ರಾಜಕೀಯ ಸಂಘಟನೆಯ ಹೊಸ ಪರಿಕಲ್ಪನೆಗಳು ಈ ಉಪಖಂಡವನ್ನು ಪ್ರವೇಶಿಸಿದಾಗಲೂ ಇದೇ ಸ್ಥಿತಿ ಇತ್ತು. ಇವುಗಳನ್ನೂ ಸಹ ಬಲವಂತವಾಗಿ ಹೇರಲಾಗಲಿಲ್ಲ ಅಥವಾ ನಾವು ಹಾಗೆಯೇ ಒಪ್ಪಿಕೊಳ್ಳಲೂ ಇಲ್ಲ. ಬದಲಿಗೆ, ಈಗಾಗಲೇ ಅಸ್ತಿತ್ವದಲ್ಲಿದ್ದ ನಾಗರಿಕತೆಯ ಚೌಕಟ್ಟಿನೊಳಗೇ ಇವುಗಳನ್ನು ನಮ್ಮದಾಗಿಸಿಕೊಳ್ಳಲಾಯಿತು, ಪ್ರಶ್ನಿಸಲಾಯಿತು ಮತ್ತು ಮರುವ್ಯಾಖ್ಯಾನಕ್ಕೆ ಒಳಪಡಿಸಲಾಯಿತು.

ಈ ಸುದೀರ್ಘ ಇತಿಹಾಸದಿಂದ ಹೊರಹೊಮ್ಮುವುದು ಸಮಾಂತರವಾಗಿ ಸಾಗಿದ ಪ್ರತ್ಯೇಕ ಧಾರೆಗಳ ಕಥೆಯಲ್ಲ, ಬದಲಿಗೆ ನಿರಂತರ ಸಂವಾದದ ಕಥೆಯಾಗಿದೆ. ಸಂಪ್ರದಾಯಗಳು ಇಲ್ಲಿ ಕೇವಲ ಜೊತೆಜೊತೆಯಾಗಿ ಅಸ್ತಿತ್ವದಲ್ಲಿರಲಿಲ್ಲ, ಅವು ಒಂದನ್ನೊಂದು ರೂಪಿಸಿದವು. ಪ್ರಭಾವಗಳನ್ನು ಕೇವಲ ಮೇಲ್ನೋಟಕ್ಕೆ ಸೇರಿಸಲಾಗಲಿಲ್ಲ, ಅವುಗಳನ್ನು ಹೀರಿಕೊಳ್ಳಲಾಯಿತು, ಮಾರ್ಪಡಿಸಲಾಯಿತು ಮತ್ತು ಒಂದು ವಿಶಾಲ ಸಮಗ್ರತೆಯ ಭಾಗವಾಗಿಸಲಾಯಿತು. ಇದಕ್ಕಾಗಿಯೇ ಭಾರತದ ಗತಕಾಲವನ್ನು ಸಾಂಸ್ಕೃತಿಕ, ಧಾರ್ಮಿಕ ಅಥವಾ ರಾಜಕೀಯವಾಗಿರಲಿ ಒಂದೇ ಒಂದು ನಿರೂಪಣೆಗೆ ಇಳಿಸುವ ಯಾವುದೇ ಪ್ರಯತ್ನವು ಅನಿವಾರ್ಯವಾಗಿ ವಿಫಲವಾಗುತ್ತದೆ. ಈ ನಾಗರಿಕತೆಯು ಬೆಳೆದ ಅನುಕ್ರಮಗಳನ್ನೇ ಅದು ನಿರ್ಲಕ್ಷಿಸುತ್ತದೆ. ಭಾರತವು ಪರಸ್ಪರ ಪ್ರಭಾವಗಳನ್ನು ಹೊರಗಿಡುವುದರಿಂದ ಬೆಳೆಯಲಿಲ್ಲ, ಬದಲಿಗೆ ಅವುಗಳನ್ನು ಹೀರಿಕೊಳ್ಳುವುದರಿಂದ ಬೆಳೆಯಿತು. ಇದನ್ನು ಗುರುತಿಸುವುದು ಸಂಘರ್ಷವನ್ನು ನಿರಾಕರಿಸುವುದಲ್ಲ, ಅಥವಾ ಗತಕಾಲವನ್ನು ರೋಮ್ಯಾಂಟಿಕ್ ಮಾಡುವುದಲ್ಲ. ಇದು ಕೇವಲ ಸಂಕೀರ್ಣತೆಯು ಭಾರತದ ಐತಿಹಾಸಿಕ ಅನುಭವದ ಅಂತರ್ಗತ ಭಾಗವಾಗಿದೆ ಎಂದು ಒಪ್ಪಿಕೊಳ್ಳುವುದಾಗಿದೆ. ವರ್ತಮಾನದಲ್ಲಿ ಇತಿಹಾಸವನ್ನು ಆಯ್ದುಕೊಂಡು ವ್ಯಾಖ್ಯಾನಿಸಿದಾಗ ಹೆಚ್ಚಾಗಿ ಸರಳೀಕರಿಸಲ್ಪಡುವುದು ಇದೇ ಸಂಕೀರ್ಣತೆಯಾಗಿದೆ.

ಸರಳೀಕರಣದ ಅಪಾಯಗಳು ಮತ್ತು ಇತಿಹಾಸದ ವ್ಯಾಖ್ಯಾನ:

ಭಾರತದ ಇತಿಹಾಸವು ಪರಸ್ಪರ ಸಂಬಂಧ ಹೊಂದಿರುವ ಹಲವಾರು ಧಾರೆಯ ಪ್ರಭಾವಗಳಿಂದ ರೂಪಿತಗೊಂಡಿದೆ ಎಂದಾದರೆ, ಆ ಗತಕಾಲದ ಯಾವುದೇ ಗಂಭೀರವಾದ ವಿವರಣೆಯು ಅದಕ್ಕೆ ಕಾರಣವಾದ ಈ ವಿಶಾಲ ವ್ಯಾಪ್ತಿಯ ಪ್ರಭಾವಿ ಶಕ್ತಿಗಳನ್ನು ಖಂಡಿತವಾಗಿಯೂ ಒಪ್ಪಿಕೊಳ್ಳಲೇಬೇಕು. ಇವುಗಳ ಪೈಕಿ, ಈ ಸಮ್ಮೇಳನದ ಪ್ರಮುಖ ವಿಷಯವಾಗಿರುವ ಇಸ್ಲಾಮಿಕ್ ಸಂಪ್ರದಾಯಗಳು ಮತ್ತು ಮುಸ್ಲಿಮರ ಪಾತ್ರವು ಖಂಡಿತವಾಗಿಯೂ ಪ್ರಾಸಂಗಿಕವಾದದ್ದೂ ಅಲ್ಲ ಅಥವಾ ದ್ವಿತೀಯ ದರ್ಜೆಯದ್ದೂ ಅಲ್ಲ. ಶತಮಾನಗಳಿಂದಲೂ ಮುಸ್ಲಿಮರು ಭಾರತದ ರಾಜಕೀಯ ರಚನೆ, ಸಾಂಸ್ಕೃತಿಕ ಜೀವನ, ನಗರಾಭಿವೃದ್ಧಿ ಹಾಗೂ ಅಧಿಕಾರ ಮತ್ತು ವಿನಿಮಯದ ಕೇಂದ್ರಗಳಾಗಿ ಹೊರಹೊಮ್ಮಿದ ದೆಹಲಿ, ಆಗ್ರಾ, ಲಾಹೋರ್‌ನಂತಹ ನಗರಗಳಲ್ಲಿ ಪರಿಷ್ಕರಿಸಲ್ಪಟ್ಟ ಆಡಳಿತ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಭಾರತದ ಸಾಂಸ್ಕೃತಿಕ ಭೂಮಿಕೆಯ ಅವಿಭಾಜ್ಯ ಅಂಗವಾಗಿ ಇಂದಿಗೂ ಉಳಿದುಕೊಂಡಿರುವ ಸಂಗೀತ, ವಾಸ್ತುಶಿಲ್ಪ ಮತ್ತು ಸಾಹಿತ್ಯದ ಸಂಪ್ರದಾಯಗಳು ಸಮೃದ್ಧವಾಗಿ ಬೆಳೆಯುವಲ್ಲೂ ಅವರು ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಇದು ಕೂಡ ವೈವಿಧ್ಯತೆಯಿಂದ ಕೂಡಿತ್ತು. ಹಿಂದಿ ಮತ್ತು ಉರ್ದುವಿನಂತಹ ಭಾಷೆಗಳ ವಿಕಸನವೇ ಸಮುದಾಯಗಳ ನಡುವೆ ನಿರಂತರವಾಗಿ ನಡೆದ ಈ ಪರಸ್ಪರ ಸಂವಾದಕ್ಕೆ ಸಾಕ್ಷಿಯಾಗಿದೆ.

ನಾವು ಆಳವಾಗಿ ಯೋಚಿಸಬೇಕಾದ ಸಂಗತಿಯೆಂದರೆ, ಈ ಬೆಳವಣಿಗೆಯು ಪ್ರತ್ಯೇಕವಾಗಿ ಉಳಿಯಲಿಲ್ಲ ಅಥವಾ ಹೊರಗಿನಿಂದ ನಮ್ಮ ಮೇಲೆ ಹೇರಲ್ಪಟ್ಟ ಅಂಶಗಳಿಂದ ಪ್ರೇರಿತವಾಗಲೂ ಇಲ್ಲ. ಇದು ನಮ್ಮದೇ ದೇಶದ ಮಣ್ಣಿನಲ್ಲಿ, ನಮ್ಮ ಉಪಖಂಡದೊಳಗೇ ಹುಟ್ಟಿ ಬೆಳೆದು, ಇಲ್ಲಿನ ಜೀವಂತ ಅನುಭವದ ಅವಿಭಾಜ್ಯ ಭಾಗವಾಯಿತು. ಅದರ ಪರಿಣಾಮವಾಗಿಯೇ ಇಂದು ನಮ್ಮೆದುರು ಸಮಾಂತರವಾದ ಇತಿಹಾಸಗಳ ಸರಣಿಯಿಲ್ಲ. ಬದಲಿಗೆ ನಾವೆಲ್ಲರೂ ಪರಸ್ಪರ ಹಂಚಿಕೊಂಡ, ಹೆಣೆದುಕೊಂಡ ಇತಿಹಾಸವಿದೆ. ಇದು ನಾವು ಗ್ರಹಿಸಬೇಕಾದ ಒಂದು ಪ್ರಮುಖ ವ್ಯತ್ಯಾಸ. ಏಕೆಂದರೆ, ಕೇವಲ ಆಧಿಪತ್ಯವನ್ನು ಗುರುತಿಸುವುದು ಒಂದು ಇತಿಹಾಸವಾದರೆ, ಇಡೀ ಕಾಲಘಟ್ಟವನ್ನು ಬರೀ ಆಧಿಪತ್ಯ ಎಂದು ಕರೆಯುವುದರ ನಡುವೆ ಅಜಗಜಾಂತರ ವ್ಯತ್ಯಾಸವಿದೆ; ಹಾಗೆಯೇ ಸಂಘರ್ಷದ ಕೆಲವು ಘಟನೆಗಳನ್ನು ನೆನಪಿನಲ್ಲಿಡುವುದು ಬೇರೆ, ಆದರೆ ಶತಮಾನಗಳ ಕಾಲ ಜೊತೆಯಾಗಿ ಸಾಗಿದ ಸಾಮಾಜಿಕ, ಕಲಾತ್ಮಕ, ಭಾಷಾ ಮತ್ತು ಆಡಳಿತಾತ್ಮಕ ಪರಸ್ಪರ ಸಂವಾದಗಳನ್ನು ಹಾಗೂ ಬದಲಾವಣೆಗಳನ್ನು ಕೇವಲ ಆ ಸಂಘರ್ಷಕ್ಕೆ ಮಾತ್ರ ಸೀಮಿತಗೊಳಿಸಿ ನೋಡುವುದು ಬೇರೆ, ಇವೆರಡರ ನಡುವೆ ಸ್ಪಷ್ಟ ವ್ಯತ್ಯಾಸವಿದೆ. ಇದರೊಂದಿಗೆ, ನಮ್ಮ ಗತಕಾಲವನ್ನು ಮುಕ್ತ ಮನಸ್ಸಿನ ಸ್ಪಷ್ಟತೆಯಿಂದ ನೋಡುವುದು ಕೂಡ ನಮಗೆ ಇಂದಿನ ಅಗತ್ಯವಾಗಿದೆ. ಇತಿಹಾಸದ ಪ್ರತಿಯೊಂದು ಕಾಲಘಟ್ಟದಲ್ಲೂ ಇರುವಂತೆ ಸಂಘರ್ಷದ ಅವಧಿಗಳು ಖಂಡಿತವಾಗಿಯೂ ಇರಬಹುದು. ಆದರೆ, ಇಡೀ ಕಾಲಘಟ್ಟವನ್ನು ಕೇವಲ ಆ ಸಂಘರ್ಷದ ಕಣ್ಣುಗಳಿಂದಲೇ ನೋಡುವುದು ಎಂದರೆ, ಶತಮಾನಗಳಿಂದ ಇಡೀ ಸಮಾಜವನ್ನು ಪ್ರೀತಿಯಿಂದ ರೂಪಿಸಿದ ಇನ್ನೂ ದೊಡ್ಡ ಅಂಶಗಳನ್ನು ನಾವು ನಿರ್ಲಕ್ಷಿಸಿದ ಹಾಗೆ ಆಗುತ್ತದೆ. ಇದೇ ರೀತಿ, ಸ್ವಾತಂತ್ರ್ಯ ಚಳುವಳಿಯ ಅವಧಿಯಲ್ಲಿ ಮುಸ್ಲಿಂ ರಾಜಕಾರಣವನ್ನು ಕೇವಲ ಮುಸ್ಲಿಂ ಲೀಗ್‌ನ ದೃಷ್ಟಿಕೋನದಿಂದ ಮಾತ್ರ ನೋಡುವುದು ಮುಸ್ಲಿಮರೇ ಸ್ವತಃ ಮಾಡಿಕೊಂಡ ಇತಿಹಾಸದ ವಿಭಿನ್ನ ವ್ಯಾಖ್ಯಾನಗಳನ್ನು ನಿರ್ಲಕ್ಷಿಸಿದಂತಾಗುತ್ತದೆ.

ಈ ಸತ್ಯವನ್ನು ಮುಕ್ತವಾಗಿ ಒಪ್ಪಿಕೊಳ್ಳೋಣ. ಇಸ್ಲಾಮ್‌ ಎನ್ನುವುದು ಎಲ್ಲೂ ಒಂದೇ ತರಹದ ಧರ್ಮವಾಗಿರಲಿಲ್ಲ ಮತ್ತು ಇಸ್ಲಾಮಿಕ್ ಚಿಂತನೆ ಎನ್ನುವುದು ಎಲ್ಲರಿಗೂ ಒಂದೇ ಆಗಿರಲಿಲ್ಲ ಎಂಬುದು ನಾವೆಲ್ಲರೂ ಬಲ್ಲ ವಿಷಯವೇ. ದೇಶ ವಿಭಜನೆಯಾಗುವ ಆ ಕಟು ಕ್ಷಣದವರೆಗೂ ನಮ್ಮ ನಡುವೆ ನಾನಾ ರೀತಿಯ ಪರಸ್ಪರ ಸಂಬಂಧಗಳಿದ್ದವು. ಇಸ್ಲಾಮ್‌ ಧರ್ಮದ ಬಗ್ಗೆ ಮತ್ತು ಭಾರತದ ಇತಿಹಾಸದಲ್ಲಿ ಅದರ ಪಾತ್ರದ ಬಗ್ಗೆ ಜಿನ್ನಾ ಅವರಿಗಿದ್ದ ಆಲೋಚನೆಗಳು ಮೌಲಾನಾ ಆಜಾದ್ ಅವರಂತೆಯೇ ಇದ್ದವು ಎಂದು ನೀವು ಅಂದುಕೊಳ್ಳುತ್ತೀರಾ? ಅಥವಾ ಇವತ್ತು ನಮ್ಮ ನೆನಪಿನಿಂದಲೇ ಮಾಸಿಹೋಗಿರುವ ಸಿಂಧ್‌ನ ಮುಖ್ಯಮಂತ್ರಿ ಅಲ್ಲಾ ಬಕ್ಷ್ ಅವರ ವ್ಯಕ್ತಿತ್ವ ನಮಗೆ ನೆನಪಿದೆಯೇ? 1943 ರಲ್ಲಿ ಅವರು ದೆಹಲಿಯಲ್ಲಿ ನಿಂತು ಮಾತನಾಡಿದಾಗ ಜಿನ್ನಾಗಿಂತ ಮೂರು ಪಟ್ಟು ದೊಡ್ಡ ಜನಸ್ತೋಮ ಅವರ ಮುಂದಿತ್ತಲ್ಲವೇ? ಪ್ರತಿಯೊಂದು ಸಮುದಾಯದ ಒಳಗೂ ಬೇರೆ ಬೇರೆ ದೃಷ್ಟಿಕೋನಗಳು ಇರುತ್ತವೆ ಎಂಬುದನ್ನು ಇವತ್ತು ಜನರು ಮರೆತುಬಿಡುತ್ತಾರೆ. ಹೀಗೆ ಇತಿಹಾಸವನ್ನು ತಮಗೆ ಬೇಕಾದಂತೆ ಆಯ್ದು ವ್ಯಾಖ್ಯಾನಿಸುವುದು ಈಗ ನಮ್ಮ ಇತಿಹಾಸ ಬರವಣಿಗೆಯಲ್ಲಿ ದೊಡ್ಡ ಸಮಸ್ಯೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಂತೂ ಭಾರತದ ಗತಕಾಲದ ಈ ಭಾಗವನ್ನು ತುಂಬಾ ಕಿರಿದಾದ ಬೆಳಕಿನಲ್ಲಿ ತೋರಿಸಲಾಗುತ್ತಿದೆ. ಮುಸ್ಲಿಂ ಯುಗ ಎಂದು ಕರೆಯಲಾಗುವ ಕಾಲಘಟ್ಟದ ಕೇವಲ ಯುದ್ಧ, ವಿಜಯ ಅಥವಾ ವಿನಾಶದ ಘಟನೆಗಳನ್ನು ಮಾತ್ರ ಎದ್ದು ಕಾಣುವಂತೆ ಇವತ್ತು ಮಾಡಲಾಗುತ್ತಿದೆ; ಆದರೆ ನಮ್ಮ ನಡುವಿನ ಪರಸ್ಪರ ಸಂವಾದ, ರೂಪಾಂತರ ಮತ್ತು ಸುದೀರ್ಘ ಸಹಬಾಳ್ವೆಯ ಇತಿಹಾಸಕ್ಕೆ ತೀರಾ ಕಡಿಮೆ ಗಮನ ಕೊಡಲಾಗುತ್ತಿದೆ. ನಮ್ಮ ನಾಗರಿಕತೆ ಬೆಳೆದು ಬಂದ ಆ ಸಂಕೀರ್ಣ ಪ್ರಕ್ರಿಯೆಯನ್ನು ಕೇವಲ ಕೆಲವು ಪ್ರತ್ಯೇಕ ಘಟನೆಗಳ ಸರಣಿಯನ್ನಾಗಿ ಸಣ್ಣದಾಗಿಸಿಬಿಡಲಾಗಿದೆ. ಒಂದು ಕಾಲದಲ್ಲಿ ನೂರಾರು ಪದರಗಳನ್ನು ಹೊಂದಿದ್ದ ಇತಿಹಾಸ ಎಂದು ಗೌರವಿಸಲ್ಪಟ್ಟಿದ್ದು ಇವತ್ತು ಕೇವಲ ಸರಳ ಕಥೆಯಾಗಿ ಇಳಿಯುವ ಅಪಾಯದಲ್ಲಿದೆ. “ಅವರು ಬಂದರು, ನಮ್ಮನ್ನು ತುಳಿದರು, ನಾವು ನಮ್ಮ ಶ್ರೇಷ್ಠತೆಯನ್ನು ಕಂಡುಕೊಂಡೆವು”—ಇಷ್ಟೇನಾ? ಇದು ಖಂಡಿತಾ ಸಾಲದು. ಇದು ಇತಿಹಾಸದ ಯಾವುದೋ ಒಂದು ಭಾಗಕ್ಕೆ ಒತ್ತು ಕೊಡುವ ಪ್ರಶ್ನೆಯಷ್ಟೇ ಅಲ್ಲ; ಇದು ನಾವು ನಮ್ಮ ಗತಕಾಲವನ್ನು ಗ್ರಹಿಸುವ ಮತ್ತು ಅರ್ಥಮಾಡಿಕೊಳ್ಳುವ ವಿಧಾನವನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಡುತ್ತದೆ.

ಇತಿಹಾಸವನ್ನು ಹೀಗೆ ನಮಗೆ ಬೇಕಾದಂತೆ ಆಯ್ದುಕೊಂಡು ಪ್ರಸ್ತುತಪಡಿಸಿದಾಗ, ಇಂದಿನ ನಮ್ಮ ಬದುಕಿನಲ್ಲಿ ಗೋಡೆಗಳನ್ನು ಕಟ್ಟುವುದು ತುಂಬಾ ಸುಲಭವಾಗಿಬಿಡುತ್ತದೆ. ಒಂದು ಕಾಲದಲ್ಲಿ ಜೊತೆಯಾಗಿ ಸಹಬಾಳ್ವೆ ನಡೆಸುತ್ತಿದ್ದ ಸಮುದಾಯಗಳು ಈಗ ಪರಸ್ಪರ ದೂರ ನಿಂತಿರುವುದನ್ನು ನಾವು ಕಣ್ಣಾರೆ ಕಾಣಬಹುದು. ಆಗ ನಾವೆಲ್ಲರೂ ಹಂಚಿಕೊಂಡ ನಮ್ಮ ಗತಕಾಲವು, ಪರಸ್ಪರ ಪೈಪೋಟಿ ನಡೆಸುವ ಗತಕಾಲವಾಗಿ ರೂಪಾಂತರಗೊಳ್ಳುತ್ತದೆ. ಕೊನೆಗೆ ಸಿಗುವ ಫಲಿತಾಂಶ ಇತಿಹಾಸದ ಸ್ಪಷ್ಟತೆಯಲ್ಲ, ಬದಲಿಗೆ ನಮ್ಮ ದೃಷ್ಟಿಕೋನದ ಸಣ್ಣತನ ಅಷ್ಟೇ. ಅಂತಿಮವಾಗಿ ನಾವು ಯಾವುದೇ ಸೂಕ್ಷ್ಮ ವ್ಯತ್ಯಾಸಗಳಿಲ್ಲದ ಗತಕಾಲ ಮತ್ತು ಯಾವುದೇ ವಿಸ್ತಾರವಿಲ್ಲದ ಇಂದಿನ ಪ್ರಸ್ತುತ ಬದುಕಿನೊಂದಿಗೆ ಒಂಟಿಯಾಗಿ ಉಳಿಯಬೇಕಾಗುತ್ತದೆ. ಉದಾಹರಣೆಗೆ, ಹಳದಿ ಘಾಟಿ ಕದನವನ್ನು ಹೆಚ್ಚಾಗಿ ದುಷ್ಟ ಮೊಘಲ್ ಆಕ್ರಮಣಕಾರರು ಮತ್ತು ಕೆಚ್ಚೆದೆಯ ರಜಪೂತ ಪ್ರತಿರೋಧದ ನಡುವಿನ ಯುದ್ಧ ಎಂದು ಚಿತ್ರಿಸಲಾಗುತ್ತದೆ. ಆದರೆ ವಾಸ್ತವದಲ್ಲಿ, ಅಕ್ಬರ್ ಅಲ್ಲಿ ಇರಲೇ ಇಲ್ಲ. ಮೊಘಲ್ ಪಡೆಗಳನ್ನು ರಜಪೂತನಾದ ರಾಜಾ ಮಾನ್ ಸಿಂಗ್ ಮುನ್ನಡೆಸಿದ್ದನು. ಮಹಾರಾಣಾ ಪ್ರತಾಪ್ ವೈಯಕ್ತಿಕವಾಗಿ ತನ್ನ ಸೈನ್ಯವನ್ನು ಮುನ್ನಡೆಸಿದ್ದರೂ, ಆತನ ಸೈನ್ಯದಲ್ಲಿ ಹಕೀಮ್ ಖಾನ್ ಸೂರಿಯಂತಹ ಕಮಾಂಡರ್‌ಗಳು ಇದ್ದರು.

ಭಾರತವನ್ನು ರೂಪಿಸಿದ ಎಲ್ಲಾ ಪ್ರಭಾವಗಳನ್ನು ಒಪ್ಪಿಕೊಳ್ಳುವುದು ಇತಿಹಾಸವನ್ನು ರೋಮ್ಯಾಂಟಿಕ್ ಮಾಡುವುದಲ್ಲ, ಅಥವಾ ಅದರ ಸಂಘರ್ಷಗಳನ್ನು ನಿರಾಕರಿಸುವುದಲ್ಲ. ಅದು ನಮ್ಮ ಇತಿಹಾಸವನ್ನು ವೈಭವವಾಗಿ ನೋಡುವ ಪ್ರಲೋಭನೆಯನ್ನು ಪ್ರತಿರೋಧಿಸುವುದಾಗಿದೆ. ಇತಿಹಾಸದ ಗಂಭೀರ ಅಧ್ಯಯನಕ್ಕೆ ನಾವು ಅದರ ವಿರೋಧಾಭಾಸಗಳನ್ನು ಸಂಯೋಜಿಸುವುದು ಮತ್ತು ಅದನ್ನು ಪ್ರತ್ಯೇಕ ಘಟನೆಗಳ ಸರಣಿಯಾಗಿ ನೋಡುವ ಬದಲು ಪರಸ್ಪರ ಸಂವಾದಗಳ ನಿರಂತರ ಪ್ರಕ್ರಿಯೆಯಾಗಿ ನೋಡುವುದು ಅಗತ್ಯವಾಗಿರುತ್ತದೆ. ಈ ನಿರಂತರತೆಯನ್ನು ನಿರ್ಲಕ್ಷಿಸಿದಾಗ ಇತಿಹಾಸವು ವರ್ತಮಾನದ ರಾಜಕೀಯ ಉದ್ದೇಶಗಳಿಗಾಗಿ ವ್ಯಾಖ್ಯಾನ ಅಥವಾ ಮರುವ್ಯಾಖ್ಯಾನಕ್ಕೆ ಹೆಚ್ಚು ಒಳಗಾಗುತ್ತದೆ. ಇತಿಹಾಸವು ವ್ಯಾಖ್ಯಾನದಿಂದ ರೂಪಿತವಾದರೆ ಮತ್ತು ವ್ಯಾಖ್ಯಾನವು ಅಧಿಕಾರದಿಂದ ರೂಪಿತವಾದರೆ, ಈ ಸಂಬಂಧವು ವರ್ತಮಾನದಲ್ಲಿ ಅತ್ಯಂತ ಸ್ಪಷ್ಟವಾಗಿದೆ.

ವರ್ತಮಾನದ ಮಸೂರದಲ್ಲಿ ಗತಕಾಲ – ಸವಾಲುಗಳು ಮತ್ತು ಜವಾಬ್ದಾರಿ:

ಇತಿಹಾಸವು ಆರ್ಕೈವ್‌ಗಳಿಂದ ಹೊರಬಂದು ನಿರ್ಣಾಯಕವಾಗಿ ಸಾರ್ವಜನಿಕ ವಲಯಕ್ಕೆ ಪ್ರವೇಶಿಸಿರುವ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ನನ್ನ ಮಾತಿನ ಆರಂಭದಲ್ಲೇ ಹೇಳಿದಂತೆ, ಇತಿಹಾಸವನ್ನು ಈಗ ಪ್ರಮುಖವಾಗಿ ಇತಿಹಾಸಕಾರರು ಬಳಸುತ್ತಿಲ್ಲ. ಬದಲಿಗೆ ಬೇರೆ ಬೇರೆ ಘಟಕಗಳು, ರಾಜಕೀಯ ಸಂಸ್ಥೆಗಳು, ನ್ಯಾಯಾಲಯಗಳು, ಮಾಧ್ಯಮ ವೇದಿಕೆಗಳು ಮತ್ತು ಹೆಚ್ಚಾಗಿ ಸಾರ್ವಜನಿಕ ಅಭಿಪ್ರಾಯ ಎಂದು ಕರೆಯಲ್ಪಡುವ ವ್ಯವಸ್ಥೆಗಳು ಬಳಸುತ್ತಿವೆ. ಈ ವಾತಾವರಣದಲ್ಲಿ, ಗತಕಾಲವನ್ನು ಕೇವಲ ಅಧ್ಯಯನ ಮಾಡಲಾಗುತ್ತಿಲ್ಲ, ಬದಲಿಗೆ ಸಕ್ರಿಯವಾಗಿ ಬಳಸಲಾಗುತ್ತಿದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಇತಿಹಾಸವು ಸಂಘರ್ಷದ ಸಾಧನವಾಗಿದೆ. ಈ ಸಂಘರ್ಷಗಳಲ್ಲಿ ಪಣಕ್ಕಿಟ್ಟಿರುವುದು ಕೇವಲ ಐತಿಹಾಸಿಕ ವಿವರಗಳ ನಿಖರತೆಯಲ್ಲ, ಬದಲಿಗೆ ವ್ಯಾಖ್ಯಾನವನ್ನು ನಿರ್ಧರಿಸುವ ಅಧಿಕಾರ. ಗತಕಾಲದ ಸ್ಪರ್ಧಾತ್ಮಕ ನಿರೂಪಣೆಗಳನ್ನು ಕೇವಲ ಘಟನೆಗಳನ್ನು ವ್ಯಾಖ್ಯಾನಿಸಲು ಪ್ರಸ್ತುತಪಡಿಸಲಾಗುತ್ತಿಲ್ಲ. ಬದಲಿಗೆ, ವರ್ತಮಾನದಲ್ಲಿ ಮಾನ್ಯತೆಗಳನ್ನು ಸ್ಥಾಪಿಸಲು ಪ್ರಸ್ತುತಪಡಿಸಲಾಗುತ್ತಿದೆ.

ಈಗಿನ ಪ್ರಶ್ನೆ ಕೇವಲ ‘ಹಿಂದೇನು ನಡೆಯಿತು’ ಎಂಬುದು ಮಾತ್ರವಲ್ಲ, ಬದಲಿಗೆ ಇವತ್ತಿನ ದಿನಗಳಲ್ಲಿ ಆ ಗತಕಾಲಕ್ಕೆ ಎಂತಹ ಅರ್ಥವನ್ನು ನೀಡಲಾಗುತ್ತಿದೆ ಎಂಬುದಾಗಿದೆ. ವಿವರಣೆಯಿಂದ ಅರ್ಥದ ಕಡೆಗೆ ಆಗಿರುವ ಈ ಬದಲಾವಣೆಯೇನೂ ತನ್ನಷ್ಟಕ್ಕೆ ತಾನೇ ಅಸಹಜವಾದದ್ದಲ್ಲ. ಸಮಾಜಗಳು ಯಾವಾಗಲೂ ವರ್ತಮಾನದ ಕಳಕಳಿಗಳ ಬೆಳಕಿನಲ್ಲೇ ತಮ್ಮ ಗತಕಾಲವನ್ನು ವ್ಯಾಖ್ಯಾನಿಸುತ್ತಾ ಬಂದಿವೆ.

ಆದರೆ ಇವತ್ತಿನ ದಿನಗಳಲ್ಲಿ ನಿಜವಾದ ಸಮಸ್ಯೆಯೇ ಬೇರೆ ಇದೆ. ಈ ರೀತಿಯ ತಪ್ಪು-ಒಪ್ಪುಗಳ ವ್ಯಾಖ್ಯಾನಗಳು ಹರಡುತ್ತಿರುವ ವೇಗ ಮತ್ತು ಅದರ ಪ್ರಮಾಣ ನಿಜಕ್ಕೂ ತಲ್ಲಣ ಮೂಡಿಸುವಂತಿದೆ. ಇತಿಹಾಸವನ್ನು ತೂಗಿ ನೋಡುವ ಸರಿಯಾದ ವೈಜ್ಞಾನಿಕ ವಿಧಾನಗಳ ಯಾವುದೇ ಹತೋಟಿಯಿಲ್ಲದೆ, ಇಷ್ಟಬಂದಂತೆ ಇವುಗಳನ್ನು ದೊಡ್ಡದು ಮಾಡಿ ಸೃಷ್ಟಿಸಲಾಗುತ್ತಿದೆ. ತಾರ್ಕಿಕವಾದ ವಾದಗಳಿಗಿಂತ ಹೆಚ್ಚಾಗಿ, ಯಾರು ಯಾರೋ ಮಾಡುವ ಬರೀ ಮೇಲ್ನೋಟದ ಸಮರ್ಥನೆಗಳೇ ಅತಿ ವೇಗವಾಗಿ ಓಡುತ್ತಿವೆ. ವಿಷಯದ ಒಳಗಿರುವ ಸೂಕ್ಷ್ಮ ವಿವರಗಳಿಗಿಂತ ಹೆಚ್ಚಾಗಿ, ಜನಪ್ರಿಯತೆಗಾಗಿ ನೀಡಲಾಗುವ ಅತಿ ಸರಳ ಮಾತುಗಳೇ ಬೇಗ ಜನರನ್ನು ತಲುಪುತ್ತಿವೆ. ಇಂತಹದೊಂದು ಕೆಟ್ಟ ವಾತಾವರಣದಲ್ಲಿ, ಇತಿಹಾಸದ ಆಳವನ್ನು ಬಲ್ಲ ಒಬ್ಬ ತಜ್ಞನ ಆಧಿಕಾರಿಕತೆಗೆ ಸವಾಲು ಎದುರಾಗುತ್ತಿರುವುದು ಅದಕ್ಕಿಂತ ಉತ್ತಮವಾದ ಸಾಕ್ಷ್ಯ-ಆಧಾರಗಳಿಂದಲ್ಲ; ಬದಲಿಗೆ ಅತ್ಯಂತ ಗಟ್ಟಿಯಾಗಿ ಧ್ವನಿಸುವ ನಂಬಿಕೆಯಿಂದ ಮಾತ್ರ.

ಈ ಪ್ರವೃತ್ತಿಯು ಒಂದು ವಿಚಿತ್ರವಾದ ತಲೆಕೆಳಗು ಪರಿಸ್ಥಿತಿಯನ್ನು ಸೃಷ್ಟಿಸಿದೆ. ಗತಕಾಲದ ಇತಿಹಾಸವು ನಮ್ಮ ಇವತ್ತಿನ ಬದುಕಿಗೆ ಒಂದು ಒಳನೋಟವನ್ನು ನೀಡಬೇಕಾಗಿತ್ತು. ಆದರೆ ಅದಕ್ಕೆ ಉಲ್ಟಾ ಆಗಿ, ಇವತ್ತಿನ ನಮ್ಮ ಕಾಲವೇ ಆ ಗತಕಾಲದ ಮೇಲೆ ಪ್ರಭಾವ ಬೀರಲು ಆರಂಭಿಸಿದೆ; ಇತಿಹಾಸಕ್ಕೆ ತನಗೆ ಬೇಕಾದ ದಾರಿ ತೋರಿಸಲು ಮತ್ತು ಇಂದಿನ ನಮ್ಮ ಕಳಕಳಿ ಹಾಗೂ ಆಸೆಗಳಿಗೆ ತಕ್ಕಂತೆ ಅದನ್ನು ಮರುರೂಪಿಸಲು ಹೊರಟಿದೆ! ಹೀಗೆ ಮಾಡುವುದರಿಂದ, ಇತಿಹಾಸದ ನಿಜವಾದ ತಿಳುವಳಿಕೆಯ ಜಾಗದಲ್ಲಿ ಬರೀ ಇತಿಹಾಸದ ವಾದಗಳು ಅಥವಾ ಮೇಲ್ನೋಟದ ಪ್ರತಿಪಾದನೆಗಳೇ ಬಂದು ಕುಳಿತುಕೊಳ್ಳುವ ಅಪಾಯ ಎದುರಾಗಿದೆ. ಇವತ್ತಿನ ದಿನಗಳಲ್ಲಿ ಇತಿಹಾಸದ ಕುರಿತಾದ ಚರ್ಚೆಗಳು ಇಷ್ಟೊಂದು ತೀವ್ರವಾದ ಮತ್ತು ವಿಭಿನ್ನವಾದ ಕಾವು ಪಡೆದುಕೊಳ್ಳಲು ಅಸಲಿ ಕಾರಣವೇ ಇದು. ಇವೆಲ್ಲವೂ ಇವತ್ತು ಹೆಚ್ಚಾಗಿ ಗತಕಾಲದಲ್ಲಿ ಆದ ಅನ್ಯಾಯಕ್ಕೆ ನ್ಯಾಯ ಕೇಳುವ, ಹಳೆಯ ತಪ್ಪುಗಳನ್ನು ಒಪ್ಪಿಕೊಳ್ಳುವ ಮತ್ತು ಇತಿಹಾಸಕ್ಕೆ ನ್ಯಾಯ ಒದಗಿಸುವ ಚೌಕಟ್ಟಿನಲ್ಲೇ ಮೂಡಿಬರುತ್ತಿವೆ. ಗತಕಾಲಕ್ಕೆ ಮತ್ತೊಮ್ಮೆ ಭೇಟಿ ನೀಡಬೇಕು, ನಮಗೆ ಪರಂಪರೆಯಿಂದ ಬಂದಿರುವ ನಿರೂಪಣೆಗಳನ್ನು ಮರುಪರಿಶೀಲಿಸಬೇಕು ಮತ್ತು ಬರೀ ಮೇಲ್ನೋಟದ ವ್ಯಾಖ್ಯಾನಗಳನ್ನು ಪ್ರಶ್ನಿಸಬೇಕು ಎಂಬ ಅರ್ಥೈಸಬಹುದಾದ ಒಂದು ಹಂಬಲ ಇವತ್ತಿನ ನಮ್ಮ ಸಮಾಜದಲ್ಲಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಇಂತಹ ಮರುಪರಿಶೀಲನೆಯು ಇತಿಹಾಸದೊಂದಿಗಿನ ಯಾವುದೇ ಗಂಭೀರ ತೊಡಗಿಸಿಕೊಳ್ಳುವಿಕೆಯ ಅಗತ್ಯ ಭಾಗವಾಗಿದೆ. ಆದರೆ ಅಪಾಯವೂ ಇದೆ. ಗತಕಾಲವನ್ನು ಪ್ರಮುಖವಾಗಿ ವರ್ತಮಾನ ಮತ್ತು ವರ್ತಮಾನದ ಕುಂದುಕೊರತೆಗಳ ಮಸೂರದ ಮೂಲಕ ತಲುಪಿದಾಗ, ಅದನ್ನು ಹಿಂದಿಗಿಂತಲೂ ಹೆಚ್ಚು ಏಕರೂಪಿಯಾಗಿ ಮತ್ತು ಸರಳ ನಿರೂಪಣೆಯಾಗಿ ಮರುರೂಪಿಸಬಹುದು. ಸಂಕೀರ್ಣ ಐತಿಹಾಸಿಕ ಪ್ರಕ್ರಿಯೆಗಳನ್ನು ನೈತಿಕ ಮತ್ತು ಹೆಚ್ಚಾಗಿ ರಾಜಕೀಯ ದ್ವಂದ್ವಗಳಿಗೆ ಇಳಿಸಲಾಗುತ್ತದೆ. ಪರಸ್ಪರ ಸಂವಾದದ ದೀರ್ಘ ಅವಧಿಗಳನ್ನು ಸಂಘರ್ಷದ ಪ್ರತ್ಯೇಕ ಕ್ಷಣಗಳಾಗಿ ಕುಗ್ಗಿಸಲಾಗುತ್ತದೆ.

ಇತಿಹಾಸದ ಪಾತ್ರಗಳನ್ನು ಆ ಕಾಲದ ಹಿನ್ನೆಲೆಯಲ್ಲಿ ನೋಡುವ ಬದಲು, ಇವತ್ತಿನ ನಮ್ಮ ಕಾಲದ ನಿರೀಕ್ಷೆಗಳ ಮಸೂರದ ಮೂಲಕ ಅಳೆಯಲಾಗುತ್ತಿದೆ. ಇಂದಿನ ದಿನಗಳಲ್ಲಿ ನಮಗೆ ಬೇಕಿರುವ ನೈತಿಕ ಸ್ಪಷ್ಟತೆಯ ಹಂಬಲವೇ ಗತಕಾಲವನ್ನು ಹಿಂತಿರುಗಿ ನೋಡುವಾಗ ಇತಿಹಾಸವನ್ನು ತಿರುಚುವಂತೆ ಮಾಡುತ್ತದೆ. ಇಂತಹದೊಂದು ಚೌಕಟ್ಟಿನಲ್ಲಿ, ಇತಿಹಾಸವು ಮುಕ್ತ ಅನ್ವೇಷಣೆಯ ಹಾದಿಯನ್ನು ಬಿಟ್ಟು ಕೇವಲ ಹಕ್ಕುಗಳನ್ನು ಸಾಧಿಸುವ ಹಠವಾಗಿ ಬದಲಾಗಲು ಶುರುವಾಗುತ್ತದೆ. ಐತಿಹಾಸಿಕ ಪ್ರಾಮುಖ್ಯತೆ ಇರುವ ಚಿಹ್ನೆಗಳು ಮತ್ತು ಸ್ಥಳಗಳನ್ನು ಇವತ್ತು ನಡೆಸಿಕೊಳ್ಳುತ್ತಿರುವ ರೀತಿಯಲ್ಲೇ ಇದು ಪ್ರಮುಖವಾಗಿ ಎದ್ದುಕಾಣುತ್ತಿದೆ. ಸ್ಮಾರಕಗಳು, ಆರಾಧನಾ ಸ್ಥಳಗಳು ಮತ್ತು ಸಾರ್ವಜನಿಕರ ನೆನಪುಗಳೇ ಇಂದಿನ ಚರ್ಚೆಗಳ ಮುಖ್ಯ ಕೇಂದ್ರಬಿಂದುಗಳಾಗುತ್ತಿವೆ. ಇವೆಲ್ಲವೂ ಏನನ್ನು ಪ್ರತಿನಿಧಿಸುತ್ತವೆಯೋ, ಅದು ಕೇವಲ ಗತಕಾಲದ ದಾಖಲೆಯಾಗಿ ಉಳಿಯುತ್ತಿಲ್ಲ; ಬದಲಿಗೆ ವರ್ತಮಾನದ ಕುರಿತಾದ ಒಂದು ಹಕ್ಕಿನ ಪ್ರತಿಪಾದನೆಯಾಗುತ್ತಿದೆ. ಇವುಗಳನ್ನು ಮರುವ್ಯಾಖ್ಯಾನ ಮಾಡುವ ಅಥವಾ ಮರಳಿ ಪಡೆಯುವ ಪ್ರಯತ್ನಗಳೆಲ್ಲವೂ ಹೆಚ್ಚಾಗಿ, ಗತಕಾಲಕ್ಕೆ ಹಿಂತಿರುಗುವುದರಿಂದಲೇ ಇತಿಹಾಸವನ್ನು ಬಗೆಹರಿಸಿ ಮುಗಿಸಬಹುದು ಎಂಬ ಊಹೆಯ ಮೇಲೆಯೇ ನಿಂತಿರುತ್ತವೆ. ಆದರೆ, ಇತಿಹಾಸವು ಅಷ್ಟು ಸುಲಭವಾಗಿ ಇಂತಹದೊಂದು ಮುಕ್ತಾಯವನ್ನು ಒಪ್ಪಿಕೊಳ್ಳುವುದಿಲ್ಲ. ಅದು ಹಾಗೆ ಸಮ ಮಾಡಬಹುದಾದ ಲೆಕ್ಕಾಚಾರವೂ ಅಲ್ಲ. ಒಂದು ರಿವ್ಯೂ ಬೆಂಚ್ ಯಾವುದೇ ಪರಿಣಾಮಗಳ ಯೋಚನೆಯಿಲ್ಲದೆ ಮರುಪರಿಶೀಲಿಸಿ ತೀರ್ಪು ಕೊಡುವಂತಹ ನಿರ್ಧಾರವೂ ಇದಲ್ಲ. ಇತಿಹಾಸದ ಆಳವಾದ ಸಂಕೀರ್ಣತೆಯನ್ನು ಪರಿಗಣಿಸದೆ ಗತಕಾಲವನ್ನು ಸರಿಪಡಿಸಲು ಹೊರಡುವ ಇಂತಹ ಪ್ರಯತ್ನಗಳು, ಹಳೆಯ ಉದ್ವಿಗ್ನತೆಗಳನ್ನು ಬಗೆಹರಿಸಬಹುದು. ಆದರೆ, ಹೊಸ ಉದ್ವಿಗ್ನತೆಗಳನ್ನು ಸೃಷ್ಟಿಸಬಲ್ಲವು. ಈ ಇಡೀ ಪ್ರಕ್ರಿಯೆಯಲ್ಲಿ, ನಾವು ಇತಿಹಾಸವನ್ನು ತಿಳುವಳಿಕೆಯ ಸಾಧನವಾಗಿ ನೋಡುವ ಬದಲು, ಕೇವಲ ದೂರು-ದುಮ್ಮಾನಗಳ ಒಂದು ನಿಘಂಟನ್ನಾಗಿ ಬದಲಾಯಿಸಿಬಿಡುವ ಅಪಾಯವಿದೆ.

ಇನ್ನೂ ಆಳವಾಗಿ ನೋಡುವುದಾದರೆ, ನಮ್ಮ ಕಣ್ಣೆದುರೇ ಒಂದು ದೊಡ್ಡ ಬದಲಾವಣೆ ನಡೆಯುತ್ತಿದೆ. ಇತಿಹಾಸದ ಅಸಲಿ ಕೆಲಸವೇ ಇವತ್ತು ಸಂಪೂರ್ಣವಾಗಿ ಬದಲಾಗುತ್ತಿರುವುದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ನಮ್ಮ ಸಮಾಜವು ಹೇಗೆ ವಿಕಸನಗೊಂಡಿತು ಎಂಬುದನ್ನು ಅರ್ಥಮಾಡಿಕೊಳ್ಳುವ ಸಾಧನವಾಗಿ ಇತಿಹಾಸ ಇರಬೇಕಾಗಿತ್ತು; ಆದರೆ ಅದಕ್ಕೆ ಬದಲಾಗಿ, ಅಸ್ಮಿತೆ ಅಥವಾ ಐಡೆಂಟಿಟಿಯನ್ನು ವ್ಯಾಖ್ಯಾನಿಸುವ ಕೆಲಸಕ್ಕೆ ನಮ್ಮ ಇತಿಹಾಸವನ್ನು ಹೆಚ್ಚೆಚ್ಚು ಬಳಸಿಕೊಳ್ಳಲಾಗುತ್ತಿದೆ. ಗಡಿಗಳನ್ನು ಗುರುತಿಸಲು, ಸಮುದಾಯಗಳನ್ನು ಪರಸ್ಪರ ಬೇರ್ಪಡಿಸಲು, ನಿರೂಪಣೆಗಳನ್ನು ಸೀಮಿತಗೊಳಿಸಲು ಮತ್ತು ರಾಷ್ಟ್ರೀಯತೆಯ ಭಿನ್ನ ಸ್ಪರ್ಧಾತ್ಮಕ ಕಲ್ಪನೆಗಳನ್ನು ಪ್ರತ್ಯೇಕಿಸಲು ಇದನ್ನು ಬಳಸಲಾಗುತ್ತಿದೆ. ಹೀಗೆ ಮಾಡುವುದರಿಂದ, ವಾಸ್ತವದಲ್ಲಿ ಎಷ್ಟೋ ವಿಸ್ತಾರವಾದ ಮತ್ತು ಎಲ್ಲರನ್ನೂ ಒಳಗೊಳ್ಳುವ ಗುಣ ಹೊಂದಿರುವ ಗತಕಾಲವನ್ನು ನಾವು ಕಿರಿದುಗೊಳಿಸುವ ಅಪಾಯವನ್ನು ತಂದೊಡ್ಡುತ್ತಿದ್ದೇವೆ. ಇದರ ಅಂತಿಮ ಫಲಿತಾಂಶ ಕೇವಲ ವ್ಯಾಖ್ಯಾನಗಳಲ್ಲಿನ ವ್ಯತ್ಯಾಸ ಮಾತ್ರವಲ್ಲ, ಬದಲಿಗೆ ನಾವು ಗತಕಾಲದೊಂದಿಗೆ ಒಡನಾಡುವ ರೀತಿಯೇ ಇವತ್ತು ಬದಲಾಗಿಹೋಗಿದೆ. ಇತಿಹಾಸವು ಹೊಸ ಅನ್ವೇಷಣೆಗಳನ್ನು ಮಾಡುವ ಕ್ಷೇತ್ರವಾಗಿ ಉಳಿಯುವ ಬದಲು, ಕೇವಲ ಪ್ರಚೋದನೆ ಮತ್ತು ಉದ್ರೇಕಿಸುವ ಸಾಧನವಾಗಿ ಮಾರ್ಪಡುತ್ತಿದೆ. ಯಾವಾಗ ಹೀಗಾಗುತ್ತದೆಯೋ, ಆಗ ನಾವು ಕೇವಲ ಗತಕಾಲವನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವ ಅಪಾಯ ಮಾತ್ರ ಇರುವುದಿಲ್ಲ; ಅದರೊಂದಿಗೆ ಇವತ್ತಿನ ನಮ್ಮ ವರ್ತಮಾನದ ಸಾಧ್ಯತೆಗಳನ್ನೂ ನಾವೇ ಮಿತಿಗೊಳಿಸಿ, ಕಟ್ಟಿಹಾಕಿದಂತಾಗುತ್ತದೆ.

ಜವಾಬ್ದಾರಿಯುತ ಇತಿಹಾಸ ರಚನೆ ಹೇಗೆ:

ಹಾಗಾದರೆ, ಒಂದು ಜವಾಬ್ದಾರಿಯುತ ಇತಿಹಾಸ ರಚನೆಗೆ ನಿಜವಾಗಿಯೂ ಏನು ಬೇಕು? ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಬೌದ್ಧಿಕ ಗಾಂಭೀರ್ಯ. ಅದರೊಂದಿಗೆ ಸಿಕ್ಕ ಸಾಕ್ಷ್ಯ-ಆಧಾರಗಳಿಗೆ ನಿಷ್ಠೆಯನ್ನು ತೋರುವುದು, ಆಯಾ ಕಾಲದ ಹಿನ್ನೆಲೆ ಅಥವಾ ಸಂದರ್ಭಕ್ಕೆ ಗೌರವ ಕೊಡುವುದು ಮತ್ತು ವರ್ತಮಾನದ ಪ್ರೂರ್ವಾಗ್ರಹಗಳು ಹಾಗೂ ಯೋಜನೆಗಳಿಗೆ ತಕ್ಕಂತೆ ಗತಕಾಲವನ್ನು ದಾಸನನ್ನಾಗಿ ಮಾಡಲು ನಿರಾಕರಿಸುವುದು ಅತ್ಯಗತ್ಯವಾಗಿದೆ.

ಇದು ಸಂಶೋಧನೆ ಮತ್ತು ವಕಾಲತ್ತು ವಹಿಸುವುದರ ನಡುವೆ, ವ್ಯಾಖ್ಯಾನ ಮತ್ತು ಸ್ವಾರ್ಥದ ಬಳಕೆಯ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಕಾಯ್ದುಕೊಳ್ಳುವುದನ್ನು ಅಪೇಕ್ಷಿಸುತ್ತದೆ. ಇದರೊಂದಿಗೆ ಬೌದ್ಧಿಕ ವಿನಮ್ರತೆಯೂ ಅಗತ್ಯ. ಏಕೆಂದರೆ, ನಾವು ನಿರ್ಮಿಸುವ ನಿರೂಪಣೆಗಳಿಗಿಂತ ಗತಕಾಲವು ಸದಾ ವಿಸ್ತಾರವಾದದ್ದು. ಭಾರತೀಯ ಸಂದರ್ಭದಲ್ಲಿ, ಜವಾಬ್ದಾರಿಯುತ ಇತಿಹಾಸ ರಚನೆಯು ತಾನು ನಿರೂಪಿಸಲು ಹೊರಟಿರುವ ಮಹಾನ್ ನಾಗರಿಕತೆಯ ವಿಸ್ತಾರ ಮತ್ತು ವೈವಿಧ್ಯತೆಗೆ ತಕ್ಕಂತೆ ಭವ್ಯವಾಗಿರಬೇಕು. ಯಾವುದೇ ಹಿಂಜರಿಕೆಯಿಲ್ಲದೆ ಇತಿಹಾಸದ ಬಹುಮುಖಿ ಎಳೆಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ, ಪರಸ್ಪರ ವಿರೋಧಾಭಾಸಗಳನ್ನು ಅಳಿಸಿಹಾಕದೆಯೇ ನಿರಂತರತೆಯನ್ನು ಗುರುತಿಸುವ ಮತ್ತು ನಿರಂತರತೆಯನ್ನು ನಿರಾಕರಿಸದೆಯೇ ವಿರೋಧಾಭಾಸಗಳನ್ನು ಒಪ್ಪಿಕೊಳ್ಳುವ ಸಾಮರ್ಥ್ಯ ಅದಕ್ಕೆ ಇರಬೇಕು. ಅದು ಅತಿಯಾದ ಭಾವುಕತೆಯ ಗತಕಾಲದ ಹಂಬಲ ಮತ್ತು ಕೋಮು ಆಧಾರಿತ ಸರಳೀಕರಣ ಎರಡನ್ನೂ ದೃಢವಾಗಿ ವಿರೋಧಿಸಬೇಕು. ಭಾರತೀಯ ಚಿಂತನೆಯ ಅತ್ಯುತ್ತಮ ಪರಂಪರೆಗಳು ನಮ್ಮಿಂದ ಅಪೇಕ್ಷಿಸಿರುವುದು ಇದನ್ನೇ. ನೆಹರೂಜಿಯವರು ಭಾರತವನ್ನು ಹಂತ ಹಂತವಾಗಿ ಬೆಳೆದು ಬಂದ ಶೇಖರಿಸಲ್ಪಟ್ಟ(ಪಾಲಿಂಪ್ಸೆಸ್ಟ್) ನಾಗರಿಕತೆಯಾಗಿ ಕಂಡಿದ್ದರು; ಅದು ಒಂದೇ ಒಂದು ಸಾರಾಂಶವಾಗಿರದೆ ಒಂದರ ಮೇಲೊಂದರಂತೆ ಸತತವಾಗಿ ಸೇರ್ಪಡೆಯಾಗುತ್ತಾ ಬಂದ ಭವ್ಯ ರಚನೆಯಾಗಿತ್ತು. ಗಾಂಧೀಜಿಯವರ ನೈತಿಕ ದೃಷ್ಟಿಕೋನವು ಸಹಬಾಳ್ವೆಯನ್ನೇ ಒಂದು ಪರಮ ನೈತಿಕ ತತ್ವವಾಗಿ ಪ್ರತಿಪಾದಿಸಿತು. ಭಾರತವನ್ನು ಹೊರಗಿಡುವ ಮೂಲಕ ರಕ್ಷಿಸಬೇಕಾದ ದುರ್ಬಲ ಅಸ್ಮಿತೆಯಾಗಿ ನೋಡಲಿಲ್ಲ, ಬದಲಿಗೆ ಎಲ್ಲರಿಗೂ ಅವಕಾಶ ಕಲ್ಪಿಸಿಕೊಡುವ ಮೂಲಕ ಮೂಡಿಬಂದ ಹಂಚಿಕೆಯ ಪರಂಪರೆಯಾಗಿ ನೋಡಿದರು. ಆತ್ಮವಿಶ್ವಾಸವುಳ್ಳ ರಾಷ್ಟ್ರವು ತನ್ನ ಗತಕಾಲದ ಸಂಕೀರ್ಣತೆಗಳಿಗೆ ಎಂದಿಗೂ ಮಣಿಯುವುದಿಲ್ಲ. ಇತಿಹಾಸವನ್ನು ಅದರ ಸಂಪೂರ್ಣತೆಯಲ್ಲಿ ನೋಡುವ ನೈತಿಕ ಧೈರ್ಯ ಅದಕ್ಕಿರುತ್ತದೆ; ಅಲ್ಲಿ ಇತಿಹಾಸವನ್ನು ಕೃತಕವಾಗಿ ಶುದ್ಧೀಕರಿಸುವುದೂ ಇಲ್ಲ ಅಥವಾ ಅಸ್ತ್ರವನ್ನಾಗಿ ಬಳಸಿ ಧ್ವಂಸಗೊಳಿಸುವುದೂ ಇಲ್ಲ. ಅದು ಇತಿಹಾಸದಿಂದ ಕೇವಲ ಒಮ್ಮತದ ಆರಾಮವನ್ನು ಅಪೇಕ್ಷಿಸುವುದಿಲ್ಲ, ಬದಲಾಗಿ ಸತ್ಯವನ್ನು ಗ್ರಹಿಸುವ ಮತ್ತು ಅರ್ಥಮಾಡಿಕೊಳ್ಳುವ ವೈಚಾರಿಕ ಶಿಸ್ತನ್ನು ಕೋರುತ್ತದೆ.

ನಾವು ಎಲ್ಲಿಂದ ಆರಂಭಿಸಿದ್ದೆವೋ ಈಗ ಪುನಃ ಅದೇ ಮೂಲ ಪ್ರಶ್ನೆಗೆ ಮರಳುತ್ತಾ ನನ್ನ ಮಾತುಗಳನ್ನು ಮುಗಿಸಬೇಕಿದೆ. ನಮ್ಮ ಇತಿಹಾಸವನ್ನು ಯಾರು ಬರೆಯುತ್ತಾರೆ? ಇದರ ಉತ್ತರ ಕೇವಲ ಇತಿಹಾಸಕಾರರಿಗೆ ಮಾತ್ರ ಸೀಮಿತವಾಗಿಲ್ಲ.

ಇದು ನಮ್ಮ ಸಂಸ್ಥೆಗಳು, ರಾಜಕಾರಣಿಗಳು, ಶೈಕ್ಷಣಿಕ ತಜ್ಞರು, ಸಾರ್ವಜನಿಕ ನಿರೂಪಣೆಗಳನ್ನು ನಿರ್ಣಯಿಸುವವರು ಮತ್ತು ಹೆಚ್ಚು ವಿಶಾಲವಾಗಿ ಹೇಳುವುದಾದರೆ ನಮ್ಮೆಲ್ಲರ ಒಳಗೂ ಅಡಗಿದೆ. ಏಕೆಂದರೆ ಒಂದು ಸಮಾಜವು ತನ್ನ ಗತಕಾಲವನ್ನು ಸ್ಮರಿಸುವ ವಿಧಾನವು, ವರ್ತಮಾನದಲ್ಲಿ ಅದು ತನ್ನನ್ನು ತಾನು ಗ್ರಹಿಸುವ ವಿಧಾನದಿಂದ ಎಂದಿಗೂ ಬೇರೆಯಾಗಿರುವುದಿಲ್ಲ. ಇತಿಹಾಸವು ಕೇವಲ ಬಳುವಳಿಯಾಗಿ ಲಭಿಸುವುದಿಲ್ಲ; ಅದನ್ನು ವ್ಯಾಖ್ಯಾನಿಸಲಾಗುತ್ತದೆ, ಚರ್ಚಿಸಲಾಗುತ್ತದೆ ಮತ್ತು ಕೆಲವು ಬಾರಿ ಶೈಕ್ಷಣಿಕವಾಗಿ ಸವಾಲಿಗೆ ಒಡ್ಡಲಾಗುತ್ತದೆ. ಆದರೆ ನಾವು ಅದರೊಂದಿಗೆ ತೊಡಗಿಸಿಕೊಳ್ಳುವ ಕ್ರಮಕ್ಕೆ ಸುದೀರ್ಘ ಪರಿಣಾಮಗಳಿರುತ್ತವೆ. ಕಿರಿದುಗೊಳಿಸಿದ ಗತಕಾಲವು ನಮಗೆ ನೀಡಬೇಕಾದದ್ದು ಕೇವಲ ತುಂಡುತುಂಡಾದ ವರ್ತಮಾನವನ್ನು ಮಾತ್ರ. ಆದರೆ ಮುಕ್ತ ಮನಸ್ಸಿನಿಂದ ಸ್ವೀಕರಿಸಿದ ಗತಕಾಲವು ನಮ್ಮ ವರ್ತಮಾನದ ಪ್ರಸ್ತುತತೆಯ ಬಗೆಗಿನ ವಿಶಾಲ ತಿಳುವಳಿಕೆಯನ್ನು ಜಾಗೃತಗೊಳಿಸಲು ಶಕ್ತವಾಗಿರುತ್ತದೆ. ಭಾರತದಂತಹ ಪದರ ಪದರಗಳ ಭವ್ಯ ನಾಗರಿಕತೆಯಲ್ಲಿ, ಈ ಆಯ್ಕೆಯು ಅತ್ಯಂತ ಆಳವಾದ ನಿರ್ಣಾಯಕ ಮಹತ್ವವನ್ನು ಪಡೆದುಕೊಳ್ಳುತ್ತದೆ.

ಬಹುಮುಖಿ ಇತಿಹಾಸಗಳ ಸಹಬಾಳ್ವೆ ಮತ್ತು ನಾಗರಿಕ ಜವಾಬ್ದಾರಿ:

ಭಾರತದ ವಿಶಿಷ್ಟತೆಗೆ ಕಾರಣವಾಗಿರುವುದನ್ನು ಕಣ್ಣಿನಿಂದ ಮರೆ ಮಾಡದೇ, ಅದರ ಕಥೆಯನ್ನು ಕೇವಲ ಒಂದೇ ಒಂದು ಎಳೆಗೆ ಕುಗ್ಗಿಸಲು ಸಾಧ್ಯವೇ ಇಲ್ಲ. ಇದು ಯಾವಾಗಲೂ ಪ್ರಭಾವಗಳ ಒಂದು ಸಂಗಮವೇ ಆಗಿತ್ತು ಮತ್ತು ಇಂದಿಗೂ ಆಗಿದೆ; ಅಷ್ಟೇ ಅಲ್ಲದೆ, ನಮ್ಮೆಲ್ಲರಿಗೂ ಸೇರಿರುವ ಒಂದು ಸಾಮಾನ್ಯ ಹಾಗೂ ಸಂಕೀರ್ಣವಾದ ಪರಂಪರೆಯನ್ನು ರೂಪಿಸಿದ ಪರಸ್ಪರ ಸಂವಾದಗಳ ದಾಖಲೆಯೂ ಹೌದು. ಇದನ್ನು ಒಪ್ಪಿಕೊಳ್ಳುವುದು ಎಂದರೆ ಭಿನ್ನತೆಗಳನ್ನು ನಿರಾಕರಿಸುವುದು ಎಂದಲ್ಲ, ಬದಲಿಗೆ ಆ ಭಿನ್ನತೆಗಳನ್ನು ಒಂದು ದೊಡ್ಡ ನಿರಂತರತೆಯ ಭಾಗವಾಗಿ ಇಟ್ಟು ನೋಡುವುದಷ್ಟೇ ಆಗಿದೆ.

ಆದ್ದರಿಂದ, ನಮ್ಮ ಮುಂದಿರುವ ನಿಜವಾದ ಕೆಲಸ ಗತಕಾಲದ ಒಂದೇ ಒಂದು ನಿರ್ಣಾಯಕ ಕಥೆಯನ್ನು ತಲುಪುವುದಲ್ಲ, ಬದಲಿಗೆ ಹತ್ತಾರು ಕಥೆಗಳು ಜೊತೆಜೊತೆಯಾಗಿ ಸಹಬಾಳ್ವೆ ನಡೆಸಬಲ್ಲ ಪೂರಕ ವಾತಾವರಣವನ್ನು ಕಾಪಾಡಿಕೊಳ್ಳುವುದು.

ನಿಮ್ಮ ಇತಿಹಾಸ, ನನ್ನ ಇತಿಹಾಸ, ಅವನ ಇತಿಹಾಸ—ಅದರಲ್ಲೇನು ವ್ಯತ್ಯಾಸವಿದೆ? ಅವೆಲ್ಲವೂ ಅಸ್ತಿತ್ವದಲ್ಲಿರಲಿ ಮತ್ತು ಅವೆಲ್ಲವನ್ನೂ ಪರಿಶೀಲಿಸೋಣ ಹಾಗೂ ಎಲ್ಲಿ ಅಗತ್ಯವಿದೆಯೋ ಅಲ್ಲಿ ಅವುಗಳನ್ನು ಪ್ರಶ್ನಿಸೋಣ.

ಆದರೆ ಇತಿಹಾಸವನ್ನು ಗಂಭೀರವಾಗಿ ಮುಟ್ಟಿದಾಗ, ಅದು ಯಾವುದೇ ಕಾರಣಕ್ಕೂ ನಮಗೆ ಅಂತಿಮವಾದ ಭರವಸೆಗಳನ್ನು ನೀಡುವುದಿಲ್ಲ. ಅದು ನಮಗೆ ನೀಡುವುದು ಕೇವಲ ತಿಳುವಳಿಕೆಯನ್ನು ಮಾತ್ರ. ಅದು ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳುವುದಿಲ್ಲ, ಬದಲಿಗೆ ಪ್ರಶ್ನೆಗಳನ್ನು ಇನ್ನಷ್ಟು ಚೂಪಾಗಿಸುತ್ತದೆ.

ಈ ನಿಟ್ಟಿನಲ್ಲಿ ನೋಡಿದರೆ, ಇತಿಹಾಸವನ್ನು ಬರೆಯುವುದು ಬರೀ ಒಂದು ಬೌದ್ಧಿಕ ಕಸರತ್ತು ಮಾತ್ರವಲ್ಲ. ಅದು ಒಂದು ನಾಗರಿಕ ಜವಾಬ್ದಾರಿಯ ಅಥವಾ ಸಾಮಾಜಿಕ ಕರ್ತವ್ಯದ ಕೆಲಸವೂ ಹೌದು. ನಾವು ಪರಸ್ಪರ ಹೇಗೆ ಸಂಬಂಧ ಹೊಂದಿರಬೇಕು ಎಂಬ ನಿಯಮಗಳನ್ನು, ನಾವು ಹಾಕಿಕೊಳ್ಳುವ ಗಡಿಗಳನ್ನು ಮತ್ತು ಒಂದು ಸಮಾಜವಾಗಿ ನಮ್ಮ ಬಗ್ಗೆ ನಾವೇ ಊಹಿಸಿಕೊಳ್ಳುವ ಸಾಧ್ಯತೆಗಳನ್ನು ಇದು ರೂಪಿಸುತ್ತದೆ. ಬಹುಶಃ ಇತಿಹಾಸದ ಅತ್ಯಂತ ಆಳವಾದ ಜವಾಬ್ದಾರಿ ಇರುವುದೇ ಇಲ್ಲಿ, ಕೇವಲ ಗತಕಾಲವನ್ನು ತಿದ್ದಿ ಸರಿಪಡಿಸುವುದರಲ್ಲಿ ಮಾತ್ರವಲ್ಲ; ಏಕೆಂದರೆ ಇತಿಹಾಸದಲ್ಲಿ ಒಂದೇ ಸರಿ ಎಂಬುದೇ ಇರುವುದಿಲ್ಲ. ಅನೇಕ ಸಂಕೀರ್ಣ ವ್ಯಾಖ್ಯಾನಗಳು ಇರಬಹುದು.

ಮಾಪ್ಲಾ ದಂಗೆಯ ಉದಾಹರಣೆ ಮತ್ತು ಭಿನ್ನ ದೃಷ್ಟಿಕೋನಗಳು:

ನನಗೆ ಒಂದು ಉದಾಹರಣೆ ನೆನಪಿದೆ. 1920 ರ ದಶಕದಲ್ಲಿ ಕೇರಳದಲ್ಲಿ ನಡೆದ ಮಾಪ್ಲಾ ದಂಗೆ. ಈ ವಿಚಾರವಾಗಿ ಎಷ್ಟೊಂದು ತೀವ್ರವಾಗಿ ಪರಸ್ಪರ ಸಂಘರ್ಷಕ್ಕೀಡಾಗುವ ನಿರೂಪಣೆಗಳಿವೆ ಗೊತ್ತಾ?

  • ಉದಾರವಾದಿ ಮುಸ್ಲಿಂ ವ್ಯಾಖ್ಯಾನ: ವಸಾಹತುಶಾಹಿ ವಿರೋಧಿಯಾಗಿ ನಡೆದ ಒಂದು ಜಾತ್ಯತೀತ ಮುಸ್ಲಿಂ ದಂಗೆ ಎಂಬ ನೋಟ.
  • ಮಾರ್ಕ್ಸ್‌ವಾದಿ ಅಥವಾ ವರ್ಗ ಆಧಾರಿತ ವ್ಯಾಖ್ಯಾನ: ಜಮೀನ್ದಾರರ ವಿರುದ್ಧ ರೈತರು ನಡೆಸಿದ ದಂಗೆ. ಇಲ್ಲಿ ಜಮೀನ್ದಾರರು ಕಾಕತಾಳೀಯವಾಗಿ ಹಿಂದೂಗಳಾಗಿದ್ದರು, ರೈತರು ಕಾಕತಾಳೀಯವಾಗಿ ಮುಸ್ಲಿಮರಾಗಿದ್ದರು, ಹಾಗಾಗಿ ಮಾರ್ಕ್ಸ್‌ವಾದಿಗಳ ಪ್ರಕಾರ ಈ ಸಂಘರ್ಷ ಕೋಮು ಆಧಾರಿತವಾಗಿರಲಿಲ್ಲ.
  • ಹಿಂದೂ ರಾಷ್ಟ್ರವಾದಿ ವ್ಯಾಖ್ಯಾನ: ಇದನ್ನು ಸಂಪೂರ್ಣವಾಗಿ ಕೋಮು ಆಧಾರಿತ ದೃಷ್ಟಿಕೋನದಲ್ಲೇ ನೋಡುವ ಹೊಸದೊಂದು ನೋಟ.
  • ಸಂಕೀರ್ಣ ವ್ಯಾಖ್ಯಾನಗಳು: ನಡೆದ ಘಟನೆಯಲ್ಲಿ ಇವೆಲ್ಲವುಗಳ ಅಂಶಗಳೂ ಇದ್ದವು ಎಂದು ನೋಡುವ ಇನ್ನು ಕೆಲವು ವಿವರಣೆಗಳು.

ವಿಶೇಷವೇನೆಂದರೆ, ಪ್ರತಿಯೊಂದು ವ್ಯಾಖ್ಯಾನವನ್ನು ಬೆಂಬಲಿಸುವುದಕ್ಕೂ ಸಾಕ್ಷ್ಯಗಳಿವೆ. ಹಾಗಾದರೆ ನೀವು ಈ ಚರಿತ್ರೆಯನ್ನು ಹೇಗೆ ಹೇಳುತ್ತೀರಿ? ನೀವು ಇದನ್ನು ಹೇಗೆ ಬಗೆಹರಿಸುತ್ತೀರಿ? ಅಸಲಿ ವಿಷಯವೇ ಇದು. ಈ ಎಲ್ಲಾ ಆಯಾಮಗಳನ್ನು ಒಟ್ಟಿಗೆ ಒಂದೇ ಬಾರಿಗೆ ನೋಡುವುದು ಒಂದು ಸಮಾಜವಾಗಿ ನಮಗಾಗಿ ನಾವು ಕಲ್ಪಿಸಿಕೊಳ್ಳುವ ಸಾಧ್ಯತೆಗಳ ಭಾಗವಾಗಿದೆ.

ಬೌದ್ಧಿಕ ಪ್ರಾಮಾಣಿಕತೆ ಮತ್ತು ಭವಿಷ್ಯದ ದೃಷ್ಟಿಕೋನ:

ಹಾಗಾಗಿ, ನಾನು ಮೊದಲೇ ಹೇಳಿದಂತೆ, ಇದು ಬರೀ ಗತಕಾಲವನ್ನು ತಿದ್ದಿ ಸರಿಪಡಿಸುವ ವಿಷಯ ಮಾತ್ರವಲ್ಲ. ಇತಿಹಾಸದ ಜೊತೆಗಿನ ನಮ್ಮ ಒಡನಾಟವು ಇವತ್ತಿನ ನಮ್ಮ ವರ್ತಮಾನದ ದಿಗಂತಗಳನ್ನು ಕಿರಿದುಗೊಳಿಸುವ ಬದಲು, ಇನ್ನಷ್ಟು ವಿಸ್ತಾರಗೊಳಿಸುವುದನ್ನು ಖಚಿತಪಡಿಸಿಕೊಳ್ಳುವ ವಿಷಯ ಇದಾಗಿದೆ.

ಏಕೆಂದರೆ, ಒಂದು ರಾಷ್ಟ್ರಕ್ಕೆ ತನ್ನ ಇತಿಹಾಸದೊಂದಿಗೆ ಇರುವ ಸಂಬಂಧವು ಅಂತಿಮವಾಗಿ ಅದರ ಆತ್ಮವಿಶ್ವಾಸದ ಪ್ರತಿಬಿಂಬವೇ ಆಗಿರುತ್ತದೆ. ತನ್ನ ಬಗ್ಗೆ ತನಗೆ ನಂಬಿಕೆಯಿರುವ, ತನ್ನ ಅಸ್ಮಿತೆಯ ಬಗ್ಗೆ ಸುರಕ್ಷಿತ ಭಾವ ಹೊಂದಿರುವ ಸಮಾಜವು ಇತಿಹಾಸದ ಸಂಕೀರ್ಣತೆಗಳನ್ನು ಸಹಿಸಿಕೊಳ್ಳಬಲ್ಲದು. ಆದರೆ ಅಂತಹ ಸುರಕ್ಷಿತ ಭಾವವಿಲ್ಲದ ಸಮಾಜಗಳು ಅತಿ ಸರಳೀಕರಣದ ಆಶ್ರಯವನ್ನು ಹುಡುಕುತ್ತವೆ.

ಹಾಗಾಗಿ, ಇಲ್ಲಿರುವ ಪ್ರಶ್ನೆ ಕೇವಲ ನಮ್ಮ ಇತಿಹಾಸವನ್ನು ಯಾರು ಬರೆಯುತ್ತಾರೆ ಎಂಬುದು ಮಾತ್ರವಲ್ಲ; ಬದಲಿಗೆ ಆ ಗತಕಾಲವು ವಾಸ್ತವದಲ್ಲಿ ಎಷ್ಟು ಶ್ರೀಮಂತವೋ, ಎಷ್ಟು ಪದರಗಳಿಂದ ಕೂಡಿದೆಯೋ ಮತ್ತು ಎಷ್ಟು ಮುಕ್ತವಾಗಿದೆಯೋ, ಅದನ್ನು ಹಾಗೆಯೇ ಇರಲು ಬಿಡುವ ಬೌದ್ಧಿಕ ಪ್ರಾಮಾಣಿಕತೆ ಮತ್ತು ನಾಗರಿಕ ಧೈರ್ಯ ನಮ್ಮಲ್ಲಿದೆಯೋ ಎಂಬುದು ಕೂಡ ಆಗಿದೆ. ತನ್ನ ಇತಿಹಾಸದ ಸಂಕೀರ್ಣತೆಗಳೊಂದಿಗೆ ನೆಮ್ಮದಿಯಿಂದ ಇರುವ ಒಂದು ರಾಷ್ಟ್ರವು, ತನ್ನ ಇಂದಿನ ವರ್ತಮಾನದ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದಷ್ಟೇ ಅಲ್ಲದೆ, ಆ ಭವ್ಯ ಪರಂಪರೆಗೆ ತಕ್ಕದಾದ ಭವಿಷ್ಯವನ್ನು ಕಲ್ಪಿಸಿಕೊಳ್ಳುವುದಕ್ಕೂ ಅತ್ಯಂತ ಯೋಗ್ಯವಾದ ಸ್ಥಾನದಲ್ಲಿ ನಿಲ್ಲುತ್ತದೆ.