ಯುದ್ಧಸಿದ್ಧತೆಯಲ್ಲಿ ಅಮೆರಿಕ: ಪಶ್ಚಿಮ ಏಷ್ಯಾದಲ್ಲಿ ಆತಂಕ

0
284

✍️ ಅಮಾನ್

ಪಶ್ಚಿಮ ಏಷ್ಯಾದಲ್ಲಿ ಮತ್ತೆ ಆತಂಕದ ಕಾರ್ಮೋಡ ಕವಿದಿದೆ.

​ನವೆಂಬರ್ 3 ರ ಮಧ್ಯಂತರ ಚುನಾವಣೆಯ ನಂತರ ಇರಾನ್ ವಿರುದ್ಧ ‘ಹೃಸ್ವ ಮತ್ತು ತೀವ್ರವಾದ’ ಕಾರ್ಯಾಚರಣೆಗೆ ಅಮೇರಿಕಾ ಸಿದ್ಧವಾಗಿದೆ. ಈ ಕಾರ್ಯಾಚರಣೆಗೆ ಸಿದ್ಧತೆ ನಡೆಸುವಂತೆ ಗಲ್ಫ್ ಅರಬ್ ದೇಶಗಳಿಗೆ ಅಮೆರಿಕ ಎಚ್ಚರಿಕೆ ನೀಡಿದೆ ಎಂದು ಅಮೆರಿಕಾದ ದಿ ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ವರದಿ ಮಾಡಿದೆ.

​ಇರಾನನ್ನು ದುರ್ಬಲಗೊಳಿಸಲು ಮತ್ತು ಮಾತುಕತೆಗೆ ಒಪ್ಪಿಸಲು ಅಮೆರಿಕ ಹಾಗೂ ಇಸ್ರೇಲ್ ಜತೆಗೂಡಿ ಹೊಸ ಹಂತದ ಹೋರಾಟಕ್ಕೆ ಸಜ್ಜಾಗುತ್ತಿವೆ ಎಂಬ ಮಾಹಿತಿಗಳು ಹೊರ ಬರುತ್ತಿವೆ. ಈ ಬಗ್ಗೆ ರಾಜತಾಂತ್ರಿಕ ಹಾಗೂ ಸೈನಿಕ ಚಾನೆಲ್‌ಗಳ ಮೂಲಕ ಸುದ್ದಿಗಳು ಬಹಿರಂಗವಾಗುತ್ತಿವೆ

ಈ ಯುದ್ಧ ಕಾರ್ಯಾಚರಣೆಗಾಗಿ ಅಮೆರಿಕಾದ ​ಟೆಕ್ಸಾಸ್‌ನಿಂದ ‘ಪ್ಯಾಟ್ರಿಯಾಟ್’ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಲಾಗಿದೆ. ಸಂಭಾವ್ಯ ದಾಳಿಗಳ ಗುರಿಯಾಗಬಹುದಾದ ಗಲ್ಫ್ ರಾಷ್ಟ್ರಗಳ ನೆಲೆಗಳಿಂದ ಅಮೇರಿಕಾ ತನ್ನ ಸೈನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಅಮೆರಿಕನ್ ಪಡೆಗಳು ತಮ್ಮ ಆಯುಧಗಳ ಸಂಗ್ರಹವನ್ನು ಹೆಚ್ಚಿಸುತ್ತಿದ್ದು, ಬಾಂಬರ್‌ಗಳು ಹಾಗೂ ಯುದ್ಧವಿಮಾನಗಳನ್ನು ಸಿದ್ಧಪಡಿಸುತ್ತಿವೆ.

​ಮುಂದಿನ ತಿಂಗಳು ಮಧ್ಯಪ್ರಾಚ್ಯದಲ್ಲಿರುವ ಸುಮಾರು 20 ಅಮೆರಿಕನ್ ಯುದ್ಧನೌಕೆಗಳೊಂದಿಗೆ ಹೆಚ್ಚುವರಿಯಾಗಿ ಒಂದು ಏರ್‌ಕ್ರಾಫ್ಟ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಮತ್ತು ಮೆರೈನ್ ಎಕ್ಸ್‌ಪೆಡಿಷನರಿ ಯೂನಿಟ್ ಕೂಡ ಸೇರಿಕೊಳ್ಳುವ ನಿರೀಕ್ಷೆಯಿದೆ. ಅಂತಿಮ ನಿರ್ಧಾರ ಕೈಗೊಂಡಿಲ್ಲದಿದ್ದರೂ, ಇರಾನ್‌ನ ಮೂಲಸೌಕರ್ಯಗಳು ಮತ್ತು ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿಕೊಂಡು ‘ಚುನಾವಣೆಯ ನಂತರದ ದಾಳಿ’ ನಡೆಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಲವು ತೋರಿದ್ದಾರೆ ಎಂದು ಮಾಹಿತಿಗಳು ತಿಳಿಸುತ್ತವೆ.

​​”ಕೆಲವೇ ವಾರಗಳಲ್ಲಿ ನೀವು ಇರಾನ್ ಅನ್ನು ನೋಡುತ್ತೀರಿ” ಎಂದು ಟೆಕ್ಸಾಸ್‌ನ ಲಬ್ಬಕ್‌ನಲ್ಲಿ ಅಕ್ಟೋಬರ್ 27ರಂದು ನಡೆದ ಚುನಾವಣಾ ಪ್ರಚಾರ ರಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಟ್ರಂಪ್ ಹೇಳಿದ್ದರು.

​’ಆಪರೇಷನ್ ಮಿಡ್‌ನೈಟ್ ಹಮ್ಮರ್’ ಮತ್ತು ‘ಆಪರೇಷನ್ ಎಪಿಕ್ ಫ್ಯೂರಿ’ ಮೂಲಕ ಇರಾನ್‌ನ ಪರಮಾಣು ಪುಷ್ಟೀಕರಣ ಸಾಮರ್ಥ್ಯವನ್ನು ತಾವು ಸಂಪೂರ್ಣವಾಗಿ ನಾಶಪಡಿಸಿದ್ದೇವೆ ಹಾಗೂ ಸೈನಿಕವಾಗಿ ಮತ್ತು ಆರ್ಥಿಕವಾಗಿ ಅವರನ್ನು ಸೋಲಿಸಿದ್ದೇವೆ ಎಂದೂ ಅವರು ಹೇಳಿಕೊಂಡಿದ್ದಾರೆ. “ಇದೆಲ್ಲವೂ ಬಹಳ ಬೇಗನೆ ಮುಗಿಯುತ್ತದೆ, ನನಗೆ ಯಾವಾಗ ಬೇಕಾದರೂ ಇದನ್ನು ಮುಗಿಸಬಹುದಿತ್ತು” ಎಂದೂ ಅವರು ಚುನಾವಣಾ ಭಾಷಣದಲ್ಲಿ ಹೇಳಿದ್ದಾರೆ. ಮಧ್ಯಂತರ ಚುನಾವಣೆಗೂ ಮುನ್ನ ಇರಾನ್ ಮೇಲೆ ದಾಳಿ ಮಾಡುವುದಿಲ್ಲ ಎಂದು ಟ್ರಂಪ್ ಈ ಹಿಂದೆ ಸ್ಪಷ್ಟಪಡಿಸಿದ್ದರು.

​ಕಳೆದ ಫೆಬ್ರವರಿ 28 ರಂದು ಅಮೇರಿಕಾ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧವನ್ನು ಆರಂಭಿಸಿದ್ದವು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ವೆಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕನ್ ನೆಲೆಗಳಿಗೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿತ್ತು ಮತ್ತು ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಬಂದ್ ಮಾಡಿತ್ತು. ಇನ್ನೊಮ್ಮೆ ಯುದ್ಧ ಸ್ಪೂರ್ತಿಸಿದರೆ ಜಾಗತಿಕ ತೈಲ ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಲಿದ್ದು, ಭಾರಿ ಬೆಲೆ ಏರಿಕೆಯ ಭಯ ಆವರಿಸಿದೆ.