ಮಗುವಿನ ಬೆಳವಣಿಗೆಗೆ ಏಳು ಸಲಹೆಗಳು

0
432

✍️ ರೆಹನಾ ಏ.ಎನ್.

ಮಗುವಿನ ಬದುಕಿಗೆ ಒಂದು ಉತ್ತಮ ಆರಂಭವನ್ನು ನೀಡಲು, ಮಗು ಜನಿಸಿದ ಪ್ರಾರಂಭದ ದಿನದಿಂದಲೇ ಅದನ್ನು ಸಂತೋಷವಾಗಿಡಲು, ಪ್ರೀತಿಯಿಂದ ಲಾಲನೆ ಪಾಲನೆಗೆ ಬೇಕಾದ ಎಲ್ಲ ಸುಖ-ಸೌಕರ್ಯಗಳನ್ನು ಒದಗಿಸಲು ಪ್ರತಿಯೊಬ್ಬ ತಾಯಿಯೂ ಹಂಬಲಿಸುತ್ತಾಳೆ. ಆದುದರಿಂದಲೇ, ಒಬ್ಬ ತಾಯಿಗೆ ತನ್ನ ಮಗುವಿಗೆ ಯಾವುದು ಉತ್ತಮ ಮತ್ತು ಯಾವುದು ಕೆಟ್ಟದ್ದು ಎಂಬುದನ್ನು ನಿಖರವಾಗಿ ಗುರುತಿಸುವ ಜ್ಞಾನವಿರಬೇಕಾದುದು ಅತ್ಯಗತ್ಯವಾಗಿದೆ.
ತಜ್ಞರ ಪ್ರಕಾರ, ಪ್ರತಿಯೊಂದು ಮಗುವಿನ ಬೆಳವಣಿಗೆಯೂ ಒಂದಕ್ಕಿಂತ ಭಿನ್ನವಾಗಿರುತ್ತದೆ. ಕೆಲವು ಮಕ್ಕಳು ಕೆಲವೊಂದು ಕೌಶಲಗಳನ್ನು ಬೇಗನೇ ಕರಗತ ಮಾಡಿಕೊಳ್ಳುತ್ತಾರೆ. ಆದರೆ, ಇನ್ನು ಕೆಲವು ಮಕ್ಕಳು ಅವುಗಳನ್ನು ತಡವಾಗಿ ಕಲಿಯ ಬಹುದು. ಉದಾಹರಣೆಗೆ, ಕೆಲವು ಮಕ್ಕಳು ಬೇಗನೆ ಮಾತನಾಡಲು ಆರಂಭಿಸಬಹುದು ಆದರೆ ನಡೆಯಲು ತಡವಾಗಬಹುದು; ಅಥವಾ ಇದಕ್ಕೆ ತದ್ವಿರುದ್ಧವಾಗಿಯೂ ಸಂಭವಿಸಬಹುದು.

ಸAಕ್ಷಿಪ್ತವಾಗಿ ಹೇಳುವುದಾದರೆ, ಮಗು ಜನಿಸಿದ ಪ್ರಾರಂಭದ ವರ್ಷ ಅತ್ಯಂತ ಪ್ರಮುಖವಾದುದು. ಇತರ ಕೌಶಲಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವ ಮೂಲಭೂತ ಸಾಮರ್ಥ್ಯಗಳನ್ನು ಮಗು ಈ ಹಂತದಲ್ಲೇ ಪಡೆದುಕೊಳ್ಳುತ್ತದೆ. ಬಿಬಿಸಿ (BBC) ವರದಿಯ ಪ್ರಕಾರ, ಮಕ್ಕಳು ಸ್ಪಷ್ಟವಾಗಿ ಮಾತನಾಡಲು ಕಲಿಯುವ ಮುನ್ನವೇ, ಮುಂದೆ ಪದಗಳಾಗಿ ಬದಲಾಗಬೇಕಾದ ಧ್ವನಿಗಳನ್ನು ಗುರುತಿಸಲು ಮತ್ತು ಕಲಿಯಲು ಈ ಅವಧಿಯಲ್ಲೇ ಪ್ರಾರಂಭಿಸುತ್ತದೆ.

ವೈಜ್ಞಾನಿಕ ಮತ್ತು ವೈದ್ಯಕೀಯ ಸಂಶೋಧನೆಗಳ ಆಧಾರದ ಮೇಲೆ, ಮಗು ಜನಿಸಿದ ಮೊದಲ ದಿನದಿಂದಲೇ ಅದರ ಸರಿಯಾದ ಪಾಲನೆ ಮತ್ತು ಬೆಳವಣಿಗೆಗೆ ಸಹಾಯಕವಾಗುವ ತಾಯಂದಿರು ಖಂಡಿತವಾಗಿಯೂ ಗಮನಿಸಬೇಕಾದ ಏಳು ಪ್ರಮುಖ ಮಾರ್ಗಸೂಚಿಗಳು ಇಲ್ಲಿವೆ:

ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯದ ಮಾತು ಮತ್ತು ಭಾಷಾ ಅಭಿವೃದ್ಧಿ (Speech and Language Development)) ಸಂಶೋಧಕಿ ಡಾ. ಐಲಿಮ್ ಅಲ್ತುಂತಾಶ್ ಅವರ ಸಂಶೋಧನೆಯ ಬೆಳಕಿನಲ್ಲಿ, ಮಗು ತನ್ನ ತಾಯಿಯನ್ನು ಮತ್ತು ಸುತ್ತಮುತ್ತಲಿನವರನ್ನು ಸೂಕ್ಷ್ಮವಾಗಿ ಗಮನಿಸುವುದು ಕೇವಲ ಕುತೂಹಲಕ್ಕಲ್ಲ; ಬದಲಿಗೆ ಶಬ್ದಗಳನ್ನು ಗ್ರಹಿಸಲು ಮತ್ತು ಅವುಗಳನ್ನು ಹೇಗೆ ಉಚ್ಚರಿಸಬೇಕೆಂದು ಕಲಿಯಲು ಪ್ರಯತ್ನಿಸುವ ಭಾಗವಾಗಿದೆ ಎಂದು ತಿಳಿದುಬರುತ್ತದೆ.

ಮಗು ತನ್ನ ನಾಲ್ಕನೇ ತಿಂಗಳಿನಲ್ಲೇ ಮಾತನಾಡಲು ಕಲಿಯುವ ಆರಂಭಿಕ ಹಂತಗಳನ್ನು ತಲುಪುತ್ತದೆ. ತಾವು ಕೇಳುವ ಶಬ್ದಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು, ಅವುಗಳ ಮೂಲವನ್ನು ಹುಡುಕುವುದು ಮತ್ತು ಅವುಗಳ ಉಚ್ಚಾರಣಾ ಶೈಲಿಯನ್ನು ಅರ್ಥಮಾಡಿಕೊಳ್ಳುವುದು- ಇವೆಲ್ಲವನ್ನೂ ಅವು ಕಣ್ಣಿಗೆ ಕಾಣುವ ವಸ್ತುಗಳನ್ನು ಕಿವಿಗೇಳುವ ಧ್ವನಿಯೊಂದಿಗೆ ಜೋಡಿಸುವ ಮೂಲಕ ಮಾಡುತ್ತವೆ. ಆದುದರಿಂದ, ಮಗುವಿಗೆ ಏನೂ ಕೇಳಿಸುವುದಿಲ್ಲ
ಅಥವಾ ಅರ್ಥವಾಗುವುದಿಲ್ಲ ಎಂಬ ಭ್ರಮೆಯಲ್ಲಿ ಅದನ್ನು ನಿರ್ಲಕ್ಷಿಸ ಬೇಡಿ. ಬದಲಾಗಿ, ಅವರೊಂದಿಗೆ ನಿರಂತರವಾಗಿ ಮಾತನಾಡುವುದು ಮತ್ತು ಅವರನ್ನು ಸಂತೋಷವಾಗಿಡುವುದು ಅತ್ಯಗತ್ಯ.

ನಾಲ್ಕನೇ ತಿಂಗಳಲ್ಲಿ ಮಗು ಶಬ್ದಗಳ ಉಚ್ಚಾರಣಾ ವಿಧಾನವನ್ನು ಕಲಿಯಲು ಪ್ರಾರಂಭಿಸುತ್ತದೆ. 6 ರಿಂದ 12 ತಿಂಗಳ ಅವಧಿಯಲ್ಲಿ, ಅದು ತಾನು ಕೇಳುವ ಶಬ್ದಗಳ ಕಡೆಗೆ ಹೆಚ್ಚು ಗಮನಹರಿಸುತ್ತದೆ; ತಾಯಿ, ತಂದೆ ಮತ್ತು ಇತರ ಜನರ ಧ್ವನಿಗಳನ್ನು ಪ್ರತ್ಯೇಕಿಸಲು ಪ್ರಾರಂಭಿಸುತ್ತದೆ. ಸಾಮಾನ್ಯ ಪದಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಭಾವನೆಗಳು ಅಥವಾ ವಸ್ತುಗಳೊಂದಿಗೆ ಶಬ್ದಗಳನ್ನು ಜೋಡಿಸಲು ಕಲಿಯುತ್ತದೆ. ಮಗುವಿಗೆ ಒಂದು ವರ್ಷ ತುಂಬುವಷ್ಟರಲ್ಲಿ, ತನ್ನ ಮಾತೃಭಾಷೆಯ ಧ್ವನಿಗಳಿಗೆ ಅನುಗುಣವಾಗಿ ತನ್ನ ಶ್ರವಣ ಸಾಮರ್ಥ್ಯವನ್ನು ನಿಖರವಾಗಿ ಹೊಂದಿಸಿಕೊಳ್ಳುತ್ತದೆ. ಮನೋವಿಜ್ಞಾನದಲ್ಲಿ ಈ ಪ್ರಕ್ರಿಯೆಯನ್ನು `ಪರ್ಸೆಪ್ಚುವಲ್ ಅಟ್ಯೂನ್‌ಮೆಂಟ್’ (Perceptual Attunement – ಜ್ಞಾನೇಂದ್ರಿಯಗಳ ಹೊಂದಾಣಿಕೆ) ಎಂದು ಕರೆಯಲಾಗುತ್ತದೆ.

ಮಗುವಿಗೆ ಒಂದು ವರ್ಷ ತುಂಬಿದಾಗ, ಅದು ದೃಷ್ಟಿಯನ್ನು ಕೇಂದ್ರೀಕರಿಸಲು, ಕೈಕಾಲುಗಳನ್ನು ಆಡಿಸಲು, ತನ್ನ ಸುತ್ತಮುತ್ತಲಿನ ವಸ್ತುಗಳನ್ನು ಗುರುತಿಸಲು ಮತ್ತು ಅನ್ವೇಷಿಸಲು ಕಲಿಯುತ್ತದೆ. ಇದರೊಂದಿಗೆ ಭಾಷೆ, ಆಲೋಚನಾ ಶಕ್ತಿ, ಜ್ಞಾಪಕ ಶಕ್ತಿ ಮತ್ತು ಭಾವನೆಗಳನ್ನು ಸಹ ಮಗು ಗಳಿಸಿಕೊಳ್ಳುತ್ತದೆ ಎಂದು ಅಮೆರಿಕದ ‘ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್’ (CDC) ಬಿಡುಗಡೆ ಮಾಡಿದ ವರದಿ ತಿಳಿಸುತ್ತದೆ.

ಮಗುವಿನೊಂದಿಗೆ ಮಾತನಾಡುವುದು, ಓದುವುದು, ಕಥೆ ಹೇಳುವುದು ಮತ್ತು ಮಗುವಿನ ಹೆಸರನ್ನು ಹಿಡಿದು ಕರೆಯುವುದು ಇವೆಲ್ಲವೂ ಮಗು ಭಾಷೆಯನ್ನು ಕಲಿಯಲು, ಹೊಸ ಪದಗಳನ್ನು ಗ್ರಹಿಸಲು ಮತ್ತು ಅವುಗಳ ವಿಶಿಷ್ಟತೆಗಳನ್ನು ಅರ್ಥಮಾಡಿಕೊಳ್ಳಲು ದಾರಿಕಲ್ಪಿಸಿಕೊಡುತ್ತವೆ. ಆದ್ದರಿಂದ ಮಗುವಿನೊಂದಿಗಿನ ದಿನನಿತ್ಯದ ಒಡನಾಟದಲ್ಲಿ ಇವು ಅತ್ಯಂತ ಮುಖ್ಯವಾಗಿವೆ.

ಈ ಅವಧಿಯಲ್ಲಿ ಅನೇಕ ತಾಯಂದಿರು ಮಾಡುವಂತೆ, ಮಗುವನ್ನು ಯಾವಾಗಲೂ ಮಕ್ಕಳ ತಳ್ಳುಗಾಡಿಯಲ್ಲಿ (Stroller) ಕೂರಿಸುವ ಬದಲು, ಆಗಾಗ ಪ್ರೀತಿಯಿಂದ ಎತ್ತಿಕೊಂಡು ಎದೆಗೆ ಅಪ್ಪಿಕೊಳ್ಳುವುದು ಅತ್ಯಗತ್ಯ. ಇದು ಮಗುವಿಗೆ ಪ್ರೀತಿ, ರಕ್ಷಣೆ ಮತ್ತು ಸುರಕ್ಷತೆಯ ಭಾವನೆಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ಇತರರೊಂದಿಗಿನ ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸ ಮೂಡಲು, ಹಾಗೆಯೇ ಮಾನಸಿಕ ಸ್ಥಿರತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಶಿಶುಗಳಲ್ಲಿ ಸಂಭವಿಸುವ ಹಠಾತ್ ಮರಣವನ್ನು (SIDS) ತಡೆಗಟ್ಟಲು ಮಗುವನ್ನು ಯಾವಾಗಲೂ ಬೆನ್ನಿನ ಮೇಲೆ (ನೆಲಕ್ಕೆ ಬೆನ್ನು ತಾಗುವಂತೆ ನೇರವಾಗಿ) ಮಲಗಿಸುವುದು ಅತ್ಯಂತ ಮುಖ್ಯವಾಗಿದೆ. ಮಗುವನ್ನು ಎಂದಿಗೂ ಬಲವಂತವಾಗಿ ಅಥವಾ ಜೋರಾಗಿ ಅಲ್ಲಾಡಿಸಬಾರದು. ಮಗುವಿನ ಕತ್ತಿನ ಸ್ನಾಯುಗಳು ಅತ್ಯಂತ ದುರ್ಬಲವಾಗಿರುವುದರಿಂದ, ಹೀಗೆ ಮಾಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮಗುವನ್ನು ಪ್ರೀತಿ ಮತ್ತು ಮೃದುತ್ವದಿಂದ ಉಪಚರಿಸ ಬೇಕೇ ಹೊರತು ಒರಟಾಗಿ ವರ್ತಿಸಬಾರದು. ಏಕೆಂದರೆ, ಅದು ತನ್ನ ಜೀವನದ ಮೊದಲ ವರ್ಷವನ್ನು ಕಳೆಯುತ್ತಿರುವ ಅತ್ಯಂತ ಕೋಮಲವಾದ ಮಗುವಾಗಿದೆ.