ತಂದೆಯ ಹಿಂಸೆಯ ವಿರುದ್ಧ ಮಾತನಾಡಿದ್ದಕ್ಕೆ ಭಯೋತ್ಪಾದನೆ ಆರೋಪ: ಶೆಹ್ಲಾ ರಶೀದ್ ಸ್ಪಷ್ಟನೆ

0
664

ಸನ್ಮಾರ್ಗ ವಾರ್ತೆ

ಶ್ರೀನಗರ,ಡಿ.2: ದೆಹಲಿಯ ಜೆ.ಎನ್‌.ಯು. ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಹೋರಾಟಗಾರ್ತಿ ಶೆಹ್ಲಾ ರಶೀದ್ ವಿರುದ್ಧ ಹಣಕಾಸು ವ್ಯವಹಾರ ಹಾಗೂ ಭಯೋತ್ಪಾದನೆ ಆರೋಪಗಳನ್ನು ಮಾಡಿರುವ ತಂದೆ ಅಬ್ದುಲ್ ರಶೀದ್ ಶೋರ ಹೊರಿಸಿರುವ ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ಶೆಹ್ಲಾ ರಶೀದ್, ಕುಟುಂಬದ ಸದಸ್ಯರ ಮೇಲೆ ತಂದೆ ಮಾಡುತ್ತಿದ್ದ ಹಿಂಸೆಯ ವಿರುದ್ಧ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಭ್ರಮನಿರಸನಗೊಂಡು ಇಂತಹ ಆರೋಪ ಮಾಡಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಶೆಹ್ಲಾ ರಶೀದ್‌ಳ ಸಂಘಟನೆಯ ವಿರುದ್ಧ ತನಿಖೆ ನಡೆಸಬೇಕು. ರಾಜಕೀಯ ಚಟುವಟಿಕೆಗಳಿಗಾಗಿ ಶೆಹ್ಲಾ ಭಾರೀ ಮೊತ್ತವನ್ನು ಇಬ್ಬರಿಂದ ಪಡೆದುಕೊಂಡಿದ್ದಾರೆ ಎಂದು ತಂದೆ ಆರೋಪ ಹೊರಿಸಿದ್ದರು.

ಆದರೆ ತನ್ನ ತಂದೆ ಯಾವಾಗಲೂ ಹೊಡೆಯುವ ಮರ್ಯಾದೆಗೆಟ್ಟ, ಕೆಟ್ಟವರಾಗಿದ್ದು ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಕ್ಕೆ ಪ್ರತೀಕಾರವಾಗಿ ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಶೆಹ್ಲಾ ರಶೀದ್ ಹೇಳಿದ್ದಾರೆ.

ಐ.ಎ.ಎಸ್ ರ‌್ಯಾಂಕ್ ಹೋಲ್ಡರ್ ಶಾ ಫೈಝಲ್ ಸ್ಥಾಪಿಸಿದ್ದ ಜಮ್ಮು-ಕಾಶ್ಮೀರ ಪೊಲಿಟಿಕಲ್ ಮೂವ್‍ಮೆಂಟ್‍ನ ಸ್ಥಾಪಕ ನಾಯಕಿಯಾಗಿರುವ ಶೆಹ್ಲಾ ರಶೀದ್, ಕಳೆದ ವರ್ಷ ಆ ಪಾರ್ಟಿಯಿಂದ ಹೊರ ಬಂದಿದ್ದಾರೆ.

ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿರುವ ಮಾಜಿ ಶಾಸಕ ಇಂಜಿನಿಯರ್ ರಾಷಿದ್, ಬಿಸಿನೆಸ್‍ಮೆನ್ ಝಹೂರ್ ವತಾಲಿಯವರೊಂದಿಗೆ ಸಹಕರಿಸಲು 3 ಕೋಟಿ ರೂಪಾಯಿ ತನಗೆ ನೀಡುವುದಾಗಿ ವಾಗ್ದಾನ ಮಾಡಿದ್ದರು. ಆದರೆ ನಾನದನ್ನು ಸ್ವೀಕರಿಸಲಿಲ್ಲ. ಆದರೆ ಮಗಳು ಶೆಹ್ಲಾ ರಶೀದ್ 3 ಕೋಟಿ ರೂಪಾಯಿ ಅವರಿಂದ ಪಡೆದುಕೊಂಡಿದ್ದಾರೆ ಎಂದು ತಂದೆ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು.

ಇಂಜಿನಿಯರ್ ರಾಷಿದ್ ಮತ್ತು ಝಹೂರ್ ವತಾಲಿ ಭಯೋತ್ಪಾದಕರಿಗೆ ಫಂಡ್ ನೀಡುತ್ತಿದ್ದಾರೆ ಎಂಬ ಆರೋಪದಲ್ಲಿ ಕಳೆದ ವರ್ಷ ಎನ್‍ಐಎ ಬಂಧಿಸಿತ್ತು.

ತನ್ನ ಮನೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದು ಪತ್ನಿ ಮತ್ತು ಹೆಣ್ಣುಮಕ್ಕಳು, ಶೆಹ್ಲಾ ರಶೀದ್ ಳ ಭದ್ರತಾ ಅಧಿಕಾರಿ ಅದರಲ್ಲಿ ಶಾಮೀಲಾಗಿದ್ದಾರೆಂದು ಅಬ್ದುಲ್ ರಶೀದ್ ಶೋರ್ ಹೇಳಿದ್ದಾರೆ.

ಆರೋಪ, ನಿರಾಧಾರವಾದುದೆಂದು ಶೆಹ್ಲಾ ರಶೀದ್ ನಿನ್ನೆ ಟ್ವೀಟ್ ಮಾಡಿದ್ದಾರೆ. ಮನೆಯಲ್ಲಿ ಹಿಂಸೆಗಾಗಿ ನಾನು ಮತ್ತು ಸಹೋದರಿ ತಂದೆಯ ವಿರುದ್ಧ ದೂರು ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ತಂದೆ ಮನೆಗೆ ಬರಬಾರದೆಂದು ಕೋರ್ಟು ತಡೆ ವಿಧಿಸಿದೆ. ಭ್ರಮನಿರಸನಗೊಂಡು ತಂದೆ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಶೆಹ್ಲಾ ರಶೀದ್ ಬಹಿರಂಗಪಡಿಸಿದ್ದು, ತನ್ನ ಟ್ವೀಟ್ ನಲ್ಲಿ ತಂದೆಗೆ ನೀಡಿರುವ ನೋಟಿಸ್ ನ ಪ್ರತಿಯನ್ನು ಕೂಡ ಹಾಕಿದ್ದಾರೆ.