ರಾಹುಲ್ ಗಾಂಧಿ ಸ್ಟ್ರಾಟಜಿ ಬದಲಿಸಿಕೊಳ್ಳಬೇಕೆ?

0
2793

✍️ ಅರಫಾ ಮಂಚಿ

ಭಾರತ್ ಜೋಡೊ ನ್ಯಾಯ್ ಯಾತ್ರೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಬಿಶ್ವ ಶರ್ಮರಿಗೆ ರಾಹುಲ್ ಗಾಂಧಿ ಮರ್ಮಾಘಾತ ನೀಡಿದ್ದಾರೆ. ಭಾರತದಲ್ಲೇ ಅವರ ಸರಕಾರ ಅತ್ಯಂತ ಭ್ರಷ್ಟ ಸರಕಾರ ಎಂದು ನಿರಾತಂಕದಿಂದ ಹೇಳಿದ್ದಾರೆ.

ಭಾರತದ ಅತೀದೊಡ್ಡ ಭ್ರಷ್ಟಾಚಾರಿ ಸರಕಾರ ಅಸ್ಸಾಮಿನದ್ದಾಗಿದೆ. ಹೋಗುವಲ್ಲೆಲ್ಲ ಭಾರತ್ ಜೋಡೊ ನ್ಯಾಯ್ ಯಾತ್ರೆಯಲ್ಲಿ ನಾವು ಅಸ್ಸಾಂನ ಸಮಸ್ಯೆಗಳನ್ನು ಎತ್ತುತ್ತೇವೆ. ಬಿಜೆಪಿ, ಆರೆಸ್ಸೆಸ್ ದ್ವೇಷ ಪ್ರಚಾರ ಹರಡಿ ಒಂದು ಸಮುದಾಯವನ್ನು ಇತರರ ವಿರುದ್ಧ ಎತ್ತಿ ಕಟ್ಟುತ್ತಿದೆ. ಬಿಶ್ವ ಶರ್ಮರು ಸಾರ್ವಜನಿಕ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಿಜ ಇದೇ, ಹೇಮಂತ ಶರ್ಮ ಕಾಂಗ್ರೆಸ್ಸಿನಲ್ಲಿದ್ದಾಗ ಅವರನ್ನು ಇಡಿ ಹುಡುಕುತ್ತಿತ್ತು. ಇದೀಗ ರಾಹುಲ್ ಗಾಂಧಿ ವಿರುದ್ಧ ನ್ಯಾಯ್ ಯಾತ್ರೆ ಹೋಗುವ ರೂಟ್ ಬದಲಿಸಿದ ನೆಪದಲ್ಲಿ ಅಸ್ಸಾಂ ಸರ್ಕಾರ ಕೇಸು ದಾಖಲಿಸಿದೆ.

ರಾಮಮಂದಿರ ಉದ್ಘಾಟನೆಗೊಳ್ಳುವ ದಿನ ಮನೆಯಲ್ಲಿ ದೀಪ ಹಚ್ಚಿದರೆ ಬಡತನವನ್ನು ಓಡಿಸಬಹುದು ಎಂದು ಸೋಲಾಪುರದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ದೀಪ ಹಚ್ಚಿ ಬಡತನ ಓಡಿಸುವುದು, ಕೊರೋನವನ್ನು ಪಾತ್ರೆ ಬಡಿದು ಓಡಿಸುವುದು ಇತ್ಯಾದಿ ಮೋಡಿ ಮಾಡುವ ಮಾತುಗಳನ್ನು ಆಗಾಗ ಅವರು ಉದುರಿಸುತ್ತಿರುತ್ತಾರೆ.

ಇಲ್ಲಿ ರಾಹುಲ್ ಮತ್ತು ಮೋದಿಯನ್ನು ಹೋಲಿಸುವುದಾದರೆ ಭಾವನೆ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸವನ್ನು ನೀವು ಗುರುತಿಸುತ್ತೀರಿ. ಮೋದಿ ಮಂದಿರ ಸುತ್ತುತ್ತಾರೆ. ರಾಹುಲ್ ಜನರ ಬಳಿಗೆ ತೆರಳಿ ಅವರ ಸುಖ ದುಃಖಗಳನ್ನು ಆಲಿಸುತ್ತಿದ್ದಾರೆ. ಇಷ್ಟೆಲ್ಲ ಜನರ ಮಮತೆ ಗಳಿಸಿ ಕೊಂಡರೂ ರಾಹುಲ್‌ಗೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಸಾಧ್ಯವಾಗಿಲ್ಲ ಎಂಬುದು ವಾಸ್ತವವೇ. 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಪಕ್ಷದ ಅಧ್ಯಕ್ಷನಾಗಿದ್ದರೂ ಪಾರ್ಟಿ ಹೀನಾಯವಾಗಿ ಸೋತಿತ್ತು. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆದರೆ ಮೋದಿ ವೋಟು ಹೇಗೆ ಪಡೆಯಬೇಕೆಂದು ಗೊತ್ತಿದೆ. ಅವರು ಕೆಲವೊಮ್ಮೆ ಭಕ್ತಿ ರಸ ಮತ್ತು ಮತ್ತೊಮ್ಮೆ ಭಾವನೆಯನ್ನು ಮೀಟುತ್ತಿರುತ್ತಾರೆ.

ಈ ಸಲ ಬಿಜೆಪಿ ಮತ್ತು ಮೋದಿಯನ್ನು ಸೋಲಿಸಬೇಕಾದ ಪ್ರತಿಪಕ್ಷಗಳ ಇಂಡಿಯ ಕೂಟ ಪರಸ್ಪರ ಕೆಸರೆರಚಿಕೊಳ್ಳುತ್ತಿದೆ. ಸೋಲಿಸಬೇಕಾದ್ದು ಮೋದಿಯನ್ನು ಆದರೆ ಕೆಸರು ಎರಚುವುದು ರಾಹುಲ್ ಗಾಂಧಿಗೆ. ಮೊದಲು ಶುರುಮಾಡಿದ್ದು ಮಮತಾ ಬ್ಯಾನರ್ಜಿ. ತಾನು ನ್ಯಾಯ್ ಯಾತ್ರೆ ಭಾಗವಹಿಸುವುದಿಲ್ಲ ಎಂದರು. ಅವರ ನಂತರ ಅಖಿಲೇಶ್ ನಾನೂ ನ್ಯಾಯ್ ಯಾತ್ರೆಗೆ ಬರುವುದಿಲ್ಲ ಎಂದರು. ಎಂಪಿ ಸೀಟುಗಳ ಹಂಚಿಕೆ ವಿಷಯ ಸರಿಯಾಗದೆ ರಾಹುಲ್‌ರ ನ್ಯಾಯ್ ಯಾತ್ರೆಗೆ ತಾನಿಲ್ಲ ಎಂದು ಮಮತಾ ಹೇಳುತ್ತಿದ್ದಾರೆ. ಅಖಿಲೇಶ್ ಯಾದವ್ ನನ್ನನ್ನು ಕಾಂಗ್ರೆಸ್ ಯಾವುದೇ ಕಾರ್ಯಕ್ರಮಕ್ಕೆ ಕರೆಯುವುದಿಲ್ಲ ಎಂದು ಅಖಿಲೇಶ್ ಹೇಳುತ್ತಿದ್ದಾರೆ.

ಆದರೆ, ಕಾಂಗ್ರೆಸ್ಸಿಗರು ಯಾತ್ರೆಗೆ ಕರೆದಿದ್ದೇವೆ ಎಂದು ಹೇಳುತ್ತಾರೆ. ಇಲ್ಲಿ ಹುಟ್ಟಿಕೊಳ್ಳುತ್ತಿರುವ ಪ್ರಶ್ನೆ- ಮೋದಿಯವರನ್ನು ವಿರೋಧಿಸುವವರು ರಾಹುಲ್ ರನ್ನು ಹೆಚ್ಚು ಯಾಕೆ ವಿರೋಧಿಸುತ್ತಾರೆ? ಬಹುಶಃ ಉತ್ತರ ಸ್ಪಷ್ಟ ಇದೆ. ರಾಹುಲ್ ಬಂದರೆ ಎಲ್ಲರೂ ಅವರ ಸುತ್ತ ನೆರೆಯುತ್ತಾರೆ. ಜನರು ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂಬ ಹೆದರಿಕೆ ಇರಬಹುದಾಗಿದೆ.

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನೇ ಎತ್ತಿಕೊಳ್ಳಿ. ಹಿಂದೂಗಳ ಪ್ರಶ್ನಾತೀತ ಧರ್ಮಾಚಾರ್ಯರಾದ ಶಂಕರಾಚರ್ಯರನ್ನೆ ಎದುರು ಹಾಕಿ ರಾಮ ಮಂದಿರ ಉದ್ಘಾಟನೆಯ ಎಲ್ಲ ಕ್ರೆಡಿಟ್ ಅನ್ನು ಪಡೆಯುವ ಶಕ್ತಿಯನ್ನು ಮೋದಿ ಪ್ರದರ್ಶಿಸುತ್ತಿದ್ದಾರೆ.

ರಾಹುಲ್ ಗಾಂಧಿ ನ್ಯಾಯದ ಮಾತಾಡುತ್ತಾ ಜನರಲ್ಲಿ ಸಂವಾದಿಸುತ್ತಾ ಸುಖಕಷ್ಟ ವಿಚಾರಿಸುತ್ತಾ ಊರೂರು ಯಾತ್ರೆ ಹೋಗುತ್ತಾರೆ. ಆದರೆ ಬಿಜೆಪಿ ಆರೆಸ್ಸೆಸ್ ಸಂಘಪರಿವಾರ ಬಿತ್ತಿ ಬೆಳೆ ತೆಗೆಯುತ್ತಿರುವ ಭಾರತ ವರ್ಷದಲ್ಲಿ ಗಾಂಧಿಯ ಸಾತ್ವಿಕೆಯಿಂದ ವೋಟು ಗಳಿಸುವುದು ಸಾಧ್ಯವಿಲ್ಲ ಎಂದು ಮೋದಿ ಈಗಾಗಲೇ ಸಾಬೀತು ಪಡಿಸಿದ್ದಾರೆ. ಬ್ರಿಟಿಷರ ಕಾಲದಲ್ಲಿ ಗಾಂಧಿಗೆ ಬೆಂಬಲ ಸಿಕ್ಕಿದ್ದು ಅವರು ಹೊರಗಿನವರು ಎಂಬುದಕ್ಕಾಗಿದೆ. ಈಗ ರಾಹುಲ್ ವಿರುದ್ಧ ತೊಡೆ ತಟ್ಟಿದವರೆಲ್ಲ ಒಳಗಿನವರೇ. ಆದ್ದರಿಂದ ಕಾಂಗ್ರೆಸ್‌ಗೆ ಬಹು ದೊಡ್ಡ ಮಟ್ಟದ ಗೆಲುವಿನ ಸ್ಟ್ರಾಟಜಿ ಬೇಕಾಗಿದೆ.

ಈಗಲೂ ಪ್ರತಿಪಕ್ಷದವರ ಬಳಿ ಶೇ. 62 ಪರ್ಸೆಂಟು ವೋಟಿದೆ. ಬಿಜೆಪಿಗೆ ದೇಶದ ಶೇ. 38 ಪರ್ಸೆಂಟ್ ಜನ ಮಾತ್ರ ಮತ ಚಲಾಯಿಸುತ್ತಾರೆ. ದಲಿತರು, ಇನ್ನಿತರ ವಿಭಾಗಗಳು ಈಗಲೂ ರಾಮಮಂದಿರದ ಭಕ್ತಿ ರಸವನ್ನೆ ಹರಿಸುತ್ತಿದ್ದರೂ ಸಂವಿಧಾನಕ್ಕೆ ಬದ್ಧತೆ ಹೊಂದಿದ್ದಾರೆ. ಅವರಲ್ಲಿ ಸಂವಿಧಾನ ಬದಲಾಯಿಸುವ ಭೀತಿ ಇದೆ. ಅವರಲ್ಲಿ ಅಂಬೇಡ್ಕರ್ ಧರ್ಮ ನಿರಪಕ್ಷೇತೆಯನ್ನು ಗುಡಿಸಿ ಹಾಕಿ ವರ್ಣಾಶ್ರಮ ಪದ್ಧತಿ ಪುನಃ ಜಾರಿಗೊಳ್ಳುವ ಆತಂಕ ಇದೆ. ಆದರೆ ವಿಪಕ್ಷ ಎಂಬ ಪಕ್ಷದ ಮತಗಳೆಲ್ಲ ಚದುರಿಸುವಲ್ಲಿ ಬಿಜೆಪಿ ಒಮ್ಮೆ ಧರ್ಮ ಇನ್ನೊಮ್ಮೆ ಮುಸ್ಲಿಂ ಕಾರ್ಡ್ ತೆಗೆದು ಯಶಸ್ವಿಯೂ ಆಗುತ್ತದೆ. ಕಳೆದ ಎಂಪಿ ಚುನಾವಣೆಯ ವೇಳೆ ಸರ್ಜಿಕಲ್ ಸ್ಟೈಕ್ ಇತ್ತು. ಪಾಕಿಸ್ತಾನ ಇತ್ತು. ಪೂಲ್ವಾಮ ಇತ್ತು. ಈ ಸಲ ರಾಮ ಮಂದಿರ ಇದೆ. ಜೊತೆ ಇರಾನ್ ಮೂಲಕ ಪಾಕಿಸ್ತಾನದ ಮೇಲೆ ನಾವೇ ವಾಯುದಾಳಿ ನಡೆಸಿದ್ದು ಎಂದು ಕ್ರೆಡಿಟ್ ಎತ್ತುವ ಪ್ರಯತ್ನವೂ ಕೆಲವು ಚಾನೆಲ್ ಗಳಿಂದಾಗುತ್ತಿದೆ. ಇಲ್ಲೆಲ್ಲ ವಿಪಕ್ಷಗಳನ್ನು ಒಂದುಗೂಡಿಸುವುದು ನ್ಯಾಯ್ ಯಾತ್ರೆ ಹೋಗುವುದಕ್ಕಿಂತ ಮುಖ್ಯವೆಂದು ರಾಹುಲ್ ಗಾಂಧಿಗೆ ಅನಿಸಿಲ್ಲ.

ಒಬ್ಬ ಡಿಪ್ಲೊಮೇಟ್ ಚುನಾವಣೆಯನ್ನು ಗೆಲ್ಲುವುದಕ್ಕೆ ಬೇಕಾದ ಸ್ಟ್ರಾಟಜಿ ತಯಾರಿಸುತ್ತಾನೆ. ಮೋದಿಗೆ ಅದು ಗೊತ್ತು ರಾಹುಲ್‌ಗೆ ಅದು ಗೊತ್ತಿಲ್ಲ. ಮೇಲೆ ಹೇಳಿದ 62% ವೋಟು ಇಟ್ಟುಕೊಂಡು ಜನಜಾಗೃತಿಗಿಂತ ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳ ಏಕತೆಗೆ ನ್ಯಾಯ್ ಯಾತ್ರೆಗಿಂತ ಮಾಯಾವತಿ, ಅಖಿಲೇಶ್‌ರನ್ನು ಒಂದು ವೇದಿಕೆಯಲ್ಲಿ ಕೂರಿಸುವುದು, ನಿತೀಶ್ ಕುಮಾರ್-ಲಾಲು ಯಾದವ್‌ರ ಜೊತೆ ಹೆಚ್ಚು ಕೂಡಿ ಕಳೆ ಲೆಕ್ಕ ಹಾಕಿ ಚುನಾವಣೆ ಗೆಲ್ಲುವುದಕ್ಕೆ ಪ್ರಯತ್ನ ಮಾಡುವುದು ರಾಹುಲ್‌ಗೆ ಮುಖ್ಯವಾಗಬೇಕಿತ್ತು. ಗೆಲ್ಲುವ ನಿಟ್ಟಿನಲ್ಲಿ ಒಂದೊಂದು ಅಂಶವೂ ಮುಖ್ಯ ಎಂದು ಮೋದಿ ಶಾ ಈಗಾಗಲೇ ತೋರಿಸಿ ಕೊಟ್ಟಿದ್ದಾರೆ. ಮುನ್ಸಿಪಾಲಿಟಿ ಚುನಾವಣೆಯಲ್ಲಿ ಹೈದರಾಬಾದಿನಲ್ಲಿ ಮೋದಿ ಶಾ ಪ್ರಚಾರ ಮಾಡಿದ್ದನ್ನು ನೋಡಿದ್ದೀರಿ. ಅವರು ಗೆಲ್ಲುವುದಕ್ಕೆ ಅಷ್ಟು ಗಂಭೀರವಾಗಿದ್ದಾರೆ.

ವಿಷಯ ಬದಲಿಸೋಣ
ತಮಿಳ್ನಾಡಿನ ಕ್ರೀಡೆ ಮತ್ತು ಯುವಜನ ಸಚಿವ ಉದಯನಿಧಿ ಸ್ಟಾಲಿನ್ ಅವರು ನಮಗೆ ಮಸೀದಿ ಕೆಡವಿ ಮಂದಿರ ಕಟ್ಟಿದ್ದಕ್ಕೆ ಸಹಮತ ಇಲ್ಲ ಎಂದು ಹೇಳಿದ್ದಾರೆ. ಅದು ಅವರ ಪಕ್ಷದ ನಿಲುವು. ಸತ್ಯವನ್ನೋ ಹೇಳಿದ್ದು. ಪ್ರಾಚ್ಯ ವಸ್ತು ಇಲಾಖೆಯು ಬಾಬರಿ ಮಸೀದಿಯಲ್ಲಿ ಅಗೆದು ಅಗೆದು ಸಿಕ್ಕಿದ್ದು ಜೈನರಿಗೆ ಸಂಬಂಧಿಸಿದಂತಹ ಪಳೆಯುಳಿಕೆಗಳು. ಆದ್ದರಿಂದ ಸುಪ್ರೀಮ್ ಕೋರ್ಟು ಬಾಬರಿ ಜಮೀನು ಬಿಟ್ಟು ಕೊಡುವಾಗ, ಅಲ್ಲಿ ಮಂದಿರ ಇರುವ ಪುರಾವೆ ಸಿಕ್ಕಿಲ್ಲ, ರಾಮಭಕ್ತರ ಭಾವನೆ ಗೌರವಿಸಿ ಜಾಗವನ್ನು ಅವರಿಗೆ ಕೊಡುವುದು ಎಂದು ಹೇಳಿತ್ತು. ಈ ನ್ಯಾಯವನ್ನು ಇಂದು ದೇಶದಲ್ಲಿ ಹೇಳುವವರೇ ಇಲ್ಲ. ಡಿಎಂಕೆ ದಿಟ್ಟತನದಿಂದ ಹೇಳಿದೆ. ಸತ್ಯವನ್ನು ಯಾವ ಭಕ್ತಿಗೂ ಅಡಗಿಸಿಡಲು ಬರುವುದಿಲ್ಲ. ಹಾಗೆಯೇ ಮಂದಿರ ಮಸೀದಿ ಇದ್ದ ಸ್ಥಳಕ್ಕೆ ಮೂರು ಕಿಲೋ ಮೀಟರ್ ದೂರದಲ್ಲಿದೆ ಎಂಬ ಮಾತು ಎದ್ದಿದೆ. ಕೆಲವರು ಅದನ್ನು ಮಸೀದಿ ಇದ್ದಲ್ಲಿಯೇ ಕಟ್ಟಲಾಗಿದೆ ಎಂದು ಹೇಳುತ್ತಿದ್ದಾರೆ.
ಮಂದಿರ ಕೆಡವಿದ್ದು ಕರಸೇವಕರಲ್ಲ, ಕಾಂಗ್ರೆಸ್. ಬಾಬರಿ ಮಸೀದಿಯಲ್ಲಿ ರಾಮ ವಿಗ್ರಹವನ್ನು ಫೈಝಾಬಾದ್‌ನ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಾತೋರಾತ್ರಿ ಇಡಲಾಗಿತ್ತು. ಆಗ ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲ. ರಾಜೀವ್ ಗಾಂಧಿ ಶಿಲಾನ್ಯಾಸ ಬೀಗ ತೆಗೆಸಿದ್ದರು. ಮಂದಿರ ಉರುಳುವಾಗ ನರಸಿಂಹರಾವ್ ಪ್ರಧಾನಿಯಾಗಿದ್ದರು.

ಈ ಎಲ್ಲದರ ನಡುವೆ ಶಂಕರಾಚಾರ್ಯರು ರಾಮ ಮಂದಿರದ ಘನ ಕಾರ್ಯವನ್ನೇ ಬಹಿಷ್ಕರಿಸಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅಧಿಕಾರ ವಹಿಸಿಕೊಂಡ ಕೂಡಲೇ ಲೌಡ್ ಸ್ಪೀಕರ್ ತೆಗೆಸಿದ್ದು ನಿಮಗೆ ಗೊತ್ತು. ಅವರು ಮಸೀದಿ ಮಂದಿರದ ಲೌಡ್ ಸ್ಪೀಕರ್ ತೆಗೆಸಿದ್ದರು. ಆದರೆ ಅವರ ಸ್ವಾಗತ ರ‍್ಯಾಲಿಯಲ್ಲಿ ಡಿಜೆ ಬಜಾಯಿಸಿತ್ತು. ಜನರು ಕುಣಿಯುತ್ತಿದ್ದರು. ಅದಾನ್‌ನ ಶಬ್ದ ಒಂದೈದು ನಿಮಿಷ ಇರುತ್ತಿತ್ತು. ಅವರ ಯಾತ್ರೆ ಗಂಟೆಗಟ್ಟಲೆ ಕವಿಗಡಚುವಂತೆ ಶಬ್ದ ಮಾಡಿತ್ತು.

ವಿಷಯಕ್ಕೆ ಬರೋಣ:
ಹಿಮಂತ ಬಿಶ್ವ ಶರ್ಮ ವಿರುದ್ಧ ರಾಹುಲ್ ಗಾಂಧಿ ಸವಾಲೆಸೆದಿದ್ದಾರೆ. ಅಸ್ಸಾಮಿನಲ್ಲಿ ಕಾಂಗ್ರೆಸ್ ಈಗಲೂ ಎಷ್ಟು ಜನಪ್ರಿಯ ಎಂಬುದನ್ನು ರಾಹುಲ್ ಗಾಂಧಿ ಯಾತ್ರೆ ತೋರಿಸುತ್ತಿತ್ತು. ಬಿಜೆಪಿಗೆ ನಡುಕ ಸೃಷ್ಟಿಸುವಂತಹ ದೃಶ್ಯಗಳೇ ರಾಹುಲ್‌ರಿಗೆ ಸಿಕ್ಕ ಜನಬೆಂಬಲ ತೋರಿಸಿಕೊಡುತ್ತಿದೆ. ಜನರಲ್ಲಿ ದ್ವೇಷವನ್ನು ಅಳಿಸಿ ಪ್ರೀತಿಯನ್ನು ಬೆಳೆಸುವುದು ಚುನಾವಣೆಯ ಹಿತದೃಷ್ಟಿಯಲ್ಲ. ಸಮಾಜದ ಹಿತದೃಷ್ಟಿಯಲ್ಲಿ ಉತ್ತಮ ಕಾರ್ಯವಾಗಿದೆ. ಚುನಾವಣೆ ಗೆಲ್ಲುವುದು ಬೇರೆ ಸ್ಟ್ರಾಟಜಿ. ರಾಹುಲ್ ಕೇಸಿಗೆ ಹೆದರುವವರಲ್ಲ ಇಐಟಿ ಸಿಬಿಐ, ಶಿಕ್ಷೆ ಇವ್ಯಾವುದರಿಂದ ರಾಹುಲ್ ಗಾಂಧಿಯನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಹಿಮಂತ್ ಶರ್ಮರಿಗೂ, ಶಾ, ಮೋದಿ ಯವರಿಗೂ ಅರ್ಥವಾಗಿದೆ.

ಈಗ ನೂರು ಲೋಕಸಭಾ ಕ್ಷೇತ್ರಗಳಲ್ಲಿ ಭಾರತ್ ಜೋಡೊ ನ್ಯಾಯ್ ಯಾತ್ರೆ ಪಯಣಿಸುತ್ತಿದೆ. ಒಟ್ಟು 6713 ಕಿಲೊಮೀಟರ್ ಸಾಗುತ್ತದೆ. 110 ಜಿಲ್ಲೆಗಳ 337 ಅಸೆಂಬ್ಲಿ ಕ್ಷೇತ್ರಗಳಲ್ಲಿ ಯಾತ್ರೆ ಇದೆ. 67 ದಿವಸಗಳ ಈ ಯಾತ್ರೆ ಮಾರ್ಚ್ 20ಕ್ಕೆ ಮುಂಬಯಿಯಲ್ಲಿ ಕೊನೆಗೊಳ್ಳಲಿದೆ.
ಹಾಗಿದ್ದರೂ ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣ ಹೊರತು ಪಡಿಸಿ ಕಾಂಗ್ರೆಸ್‌ಗೆ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಗಡವನ್ನು ಗೆಲ್ಲಿಸಲು ರಾಹುಲ್‌ರಿಗೆ ಯಾತ್ರೆಯಿಂದ ಸಾಧ್ಯವಾಗಿಲ್ಲ ಎಂಬ ಒಂದು ಸತ್ಯ ಇದೆ. ಇದು ಪ್ರತಿಪಕ್ಷಗಳೊಳಗೆ ಗೆಲ್ಲುವ ಕುರಿತು ಸಂದೇಹ ಸೃಷ್ಟಿಸಿದೆ.

ಇಂಡಿಯ ಕೂಟದೊಳಗೆ ಒಗ್ಗಟ್ಟಿನ ಜೊತೆಗೆ ಅವರು ಬಿಕ್ಕಟ್ಟಿನ ಮಾತು ಆಡುತ್ತಿದ್ದಾರೆ. ಮಮತಾ ಬ್ಯಾನಜಿ, ಅಖಿಲೇಶ್ ತಮ್ಮ ಶಕ್ತಿಯಲ್ಲಿ ಹೆಚ್ಚು ನಂಬಿಕೆ ಪ್ರದರ್ಶಿಸುತ್ತಿದ್ದಾರೆ. ಹಿಂದೆಯೇ ಹೇಳಿದಂತೆ ರಾಹುಲ್ ಮತ್ತು ಕಾಂಗ್ರೆಸ್ ಪ್ರಬಲವಾಗುವ ಹೆದರಿಕೆಯೂ ಅವರಲ್ಲಿದೆ. ಮಾಯಾವತಿ ಅಖಿಲೇಶ್ ರನ್ನೇ ಬೆಟ್ಟು ಮಾಡಿ ಇಂಡಿಯ ಕೂಟದಿಂದ ದೂರ ಉಳಿದರು. ಇದು ಇಂಡಿಯ ಕೂಟವನ್ನು ಗೆಲ್ಲಿಸುವ ಲೆಕ್ಕಾಚಾರ ಅಲ್ಲ. ಅಖಿಲೇಶ್‌ರಿಂದಾಗಿ ಮಾಯಾವತಿ ಹಿಂದಿರುವ ಶೇ. 40ರಷ್ಟು ದಲಿತ ಮತಗಳನ್ನು ಇಂಡಿಯ ಕೂಟ ಕಳಕೊಂಡಿದೆ. ಅಖಿಲೇಶ್ ಇಂಡಿಯ ಕೂಟಕ್ಕೆ ಮಾಡಿದ ಉಪಕಾರ ಇದು. ಈಗ ರಾಹುಲ್‌ರನ್ನೇ ದೂರ ಇಡುವ ಲೆಕ್ಕಾಚಾರ ಮಾಡಿದ್ದಾರೆ. ಕೆಲವರ ಪ್ರಕಾರ ಅಖಿಲೇಶ್ ಬಿಜೆಪಿಯ ಪಾಳಯ ಸೇರುತ್ತಿದ್ದರು. ಆದರೆ ಅವರ ಕೈಯಲ್ಲಿರುವ ಮುಸ್ಲಿಂ ಮತಗಳು ಹಾಗೆ ಮಾಡದಂತೆ ತಡೆದಿದೆ ಎನ್ನುತ್ತಾರೆ. ಉತ್ತರ ಪ್ರದೇಶದಲ್ಲಿ ಶೇ. 40ರಷ್ಟು ಮುಸ್ಲಿಂ ಮತಗಳಿವೆ.

ಇಂಡಿಯ ಕೂಟ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಇವಿಎಂ ದೂರ ಆಗಬೇಕು. ಚುನಾವಣಾ ಆಯೋಗ ಪ್ರಾಮಾಣಿಕವಾಗಬೇಕು. ರಾಹುಲ್‌ರಂತಹ ಪ್ರಾಮಾಣಿಕತೆಯನ್ನೇ ಸ್ಟ್ರಾಟಜಿ ಎಂದು ತಿಳ್ಕೊಂಡವರಿಗೆ ಗೆಲುವು ಸಿಗುವುದು ಸದ್ಯದ ವಾತಾವರಣದಲ್ಲಿ ಕಷ್ಟ ಇದೆ ಅಂತನಿಸುತ್ತದೆ.