ಕೇರಳ ಆದಿವಾಸಿ ಸಮುದಾಯದಲ್ಲಿ ಐಎಎಸ್ ಪಾಸ್ ಮಾಡಿದವರಲ್ಲಿ ಮೊದಲಿಗರಾದ ಶ್ರೀಧನ್ಯಾ ಸುರೇಶ್- ಕೋಝಿಕ್ಕೋಡ್‌ನ ಅಸಿಸ್ಟೆಂಟ್ ಜಿಲ್ಲಾಧಿಕಾರಿಯಾದ ಕತೆ

0
507

ಸನ್ಮಾರ್ಗ ವಾರ್ತೆ

ವಯನಾಡ್,ಮೇ,7: ಮನಸ್ಸಿದ್ದರೆ ಮಾರ್ಗ ಅನ್ನೋ ಮಾತಿಗೆ ಉದಾಹರಣೆಯಂತಿದೆ ಓರ್ವ ಸಾಮಾನ್ಯ ಕುಟುಂಬದ ಹುಡುಗಿಯ ಸಾಧನೆ. ಅಂದುಕೊಂಡಿದ್ದ ಕನಸನ್ನು ನನಸು ಮಾಡಿ, ಇಡೀ ಜಿಲ್ಲೆಗೆ ಹೆಸರು ತಂದ ಆದಿವಾಸಿ ಸಮುದಾಯದ ಶ್ರೀಧನ್ಯಾ ಸುರೇಶ್ ರವರ ಕಥೆ ಇದು.

ಕೇರಳದ ಹಚ್ಚ ಹಸಿರಿನ ಜಿಲ್ಲೆಗಳ ಪೈಕಿ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ, ಕೃಷಿಕರು, ಸಾಮಾನ್ಯ ಜನರು ಮತ್ತು ಆದಿವಾಸಿ ಜನಾಂಗದವರು ವಾಸಿಸುವ ವಯನಾಡ್ ಜಿಲ್ಲೆಯ ಉತ್ತರ ಭಾಗದ ಪೊಝುತಾನ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಇಟ್ಟಿಯಂವಯಲ್ ಗ್ರಾಮದ ಅಂಬಾಲಕೊಲ್ಲಿ ಕಾಲನಿಯ ನಿವಾಸಿ ಶ್ರೀಧನ್ಯಾ ಸುರೇಶ್, ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿ, ಇದೀಗ ಕೋಝಿಕ್ಕೋಡ್‌ನ ಅಸಿಸ್ಟೆಂಟ್ ಜಿಲ್ಲಾಧಿಕಾರಿಯಾಗಿ ಹುದ್ದೆ ಅಲಂಕರಿಸಿದ್ದಾರೆ.

ಆ ಮೂಲಕ ತೀರಾ ಹಿಂದುಳಿದ ಬುಡಕಟ್ಟು ಜನಾಂಗದವರಾದ ಕುರಿಚಿಯಾದಿಂದ ಮೊದಲ ಐಎ ಸ್ ಪಾಸ್ ಮಾಡಿದ ಸಾಧನೆ ಇವರಿಗೆ ಲಭಿಸಿದೆ.

ದೈನಂದಿನ ಜೀವನ ಸಾಗಿಸಲು ಬಿಲ್ಲು ಮತ್ತು ಬಾಣಗಳನ್ನು ಮಾಡಿ ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ತಂದೆ ಸುರೇಶ್, ದಿನಗೂಲಿ ಕೆಲಸ ಮಾಡುವ ತಾಯಿ ಕಮಲಾ, ತಮ್ಮ ಶ್ರೀರಾಗ್ ಹಾಗೂ ಸಹೋದರಿ ಸುಶಿತಾಳೊಂದಿಗೆ ಬದುಕು ಸಾಗಿಸುತ್ತಿದ್ದಾಗ ಐಎಎಸ್ ಕನಸಿನೊಂದಿಗೆ ಓದಿ, ಅದರಲ್ಲಿ ಮೂರನೆಯ ಪ್ರಯತ್ನದಲ್ಲಿ ಸಫಲಗೊಂಡು ಇದೀಗ ಕೋಝಿಕ್ಕೋಡ್‌ನ ಅಸಿಸ್ಟೆಂಟ್ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ವಯನಾಡ್ ಜಿಲ್ಲೆಯಲ್ಲಿರುವ ಕಾಡಿನ ಮಧ್ಯದಲ್ಲಿರುವ ಅವರ ಮನೆಗೆ ತೆರಳಲು ಸರಿಯಾದ ರಸ್ತೆಯೂ ಇಲ್ಲ. ಈಗಲೂ ಅರ್ಧ ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಬೇಕು. IAS ಮುಖ್ಯ ಸಂದರ್ಶನಕ್ಕೆಂದು ದೆಹಲಿಗೆ ಹೊರಟಾಗ ಶ್ರೀಧನ್ಯಾರಲ್ಲಿ ದುಡ್ಡೇ ಇರಲಿಲ್ಲ. ಊರವರು, ಹಿತೈಷಿಗಳೆಲ್ಲ ಸೇರಿ 40,000 ಒಟ್ಟು ಸೇರಿಸಿ ಕೊಟ್ಟಿದ್ದನ್ನು ನೆನಪಿಸುತ್ತಾರೆ ಈ ಸಾಧಕಿ.

ಉತ್ತಮ ಮಾತುಗಾರಿಕೆ ಕಲೆ ಹೊಂದಿರುವ ಶ್ರೀಧನ್ಯಾ, ಕಲಿಕೆ ಮುಗಿದ ಬಳಿಕ ಕುಟುಂಬದ ಮೇಲೆ ಆರ್ಥಿಕ ಹೊರೆಯಾಗದಿರಲೆಂದು ಆದಿವಾಸಿ ಇಲಾಖೆಯ ಅಡಿಯಲ್ಲಿ “ಎನ್ ಊರು” ಎಂಬ ಆದಿವಾಸಿ ಜನಾಂಗದವರ ಬಗೆಗಿನ ಪ್ರೊಜೆಕ್ಟ್ ಒಂದರಲ್ಲಿ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡರು. ಆ ಪ್ರೊಜೆಕ್ಟ್ ನ ಸಮಯದಲ್ಲಿ ಐಎಎಸ್ ಅಧಿಕಾರಿಯೋರ್ವರನ್ನು ಭೇಟಿ ಮಾಡಿದ್ದು ಆಕೆಯಲ್ಲಿ ಕನಸೊಂದು ಬಿತ್ತಿತ್ತು.

ತಾನೂ ಕೂಡ ಐಎಎಸ್ ಪಾಸ್ ಮಾಡಿ, ಸಾಧನೆ ಮಾಡಬೇಕು ಎಂದು ತೀರ್ಮಾನಿಸಿ, ಕುಟುಂಬದ ಆರ್ಥಿಕ ಸಂಕಷ್ಟದ ನಡುವೆಯೂ ಅವರಿವರ ಸಹಕಾರದಿಂದ
ದೆಹಲಿಗೆ ಹೊರಟು, ಅಲ್ಲಿ ವಿವಿಧ ಅಕಾಡೆಮಿಗಳ ಸಹಕಾರದಿಂದ ಕೊನೆಗೂ ಮೂರನೇ ಪ್ರಯತ್ನದಲ್ಲಿ ಸಫಲಗೊಂಡಿತು. ಫಲಿತಾಂಶ ಬಂದಾಗ 410 ನೇ ರ‌್ಯಾಂಕ್ ಗಳಿಸುವ ಮೂಲಕ ಇಡೀ ವಯನಾಡ್ ಜಿಲ್ಲೆ ಅಲ್ಲದೇ, ಆದಿವಾಸಿ ಜನಾಂಗದ ಹೆಸರಿಗೆ ಕೀರ್ತಿ ತಂದಿದ್ದಾರೆ. ಆ ಮೂಲಕ ದೇಶದಲ್ಲಿರುವ ಆದಿವಾಸಿಗಳ ಪೈಕಿ 4 ನೇ ವ್ಯಕ್ತಿಯಾಗಿ ಶ್ರೀಧನ್ಯಾ ಸುರೇಶ್ ಗುರುತಿಸಿಕೊಂಡಿದ್ದಾರೆ.

3ನೇ ಪ್ರಯತ್ನದಲ್ಲಿ IAS ಪೂರ್ಣಗೊಳಿಸಿ, ಈಗ ಮಸ್ಸೂರಿಯಲ್ಲಿ ತರಬೇತು ಮುಗಿಸಿ ಬಂದು ಅಧಿಕಾರ ಸ್ವೀಕರಿಸಿದರು. ಓದಿದ್ದು ಮಲಯಾಳಂ ಮಾಧ್ಯಮ ಶಾಲೆಯಲ್ಲಿ. ಪ್ರಾಣಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮಲಯಾಳಂನಲ್ಲೇ IAS ಬರೆದು ಪಾಸ್ ಆಗಿದ್ದಾರೆ.

ಈ ಸಾಧನೆಯ ಮೂಲಕ ಶ್ರೀಧನ್ಯಾ ಸುರೇಶ್, I.A.S. ಕೇವಲ ಉಳ್ಳವರ ಸೊತ್ತಲ್ಲ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸದಿಂದ ಯಾವ ಸಾಧನೆಯನ್ನು ಕೂಡಾ ಮಾಡಬಹುದು ಎಂದು ತೋರಿಸಿಕೊಟ್ಟು ಯುವ ಜನರಿಗೆ ಮಾದರಿಯಾಗಿದ್ದಾರೆ‌.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.