ಜನಪರ ಸಂಘಟನೆಗಳ ಪ್ರತಿಭಟನೆಯನ್ನು ಒಂದೇ ವೇದಿಕೆಗೆ ತರುವ ನಿರ್ಧಾರ: ‘ಸತ್ಯಾಗ್ರಹ’ ನೂತನ ಡಿಜಿಟಲ್ ವೇದಿಕೆ

0
252

ಸನ್ಮಾರ್ಗ ವಾರ್ತೆ

ದೇಶಾದ್ಯಂತ ನಡೆಯುತ್ತಿರುವ ವಿವಿಧ ಜನಪರ ಪ್ರತಿಭಟನೆಗಳು ಹಾಗೂ ಹೋರಾಟಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ‘ಸತ್ಯಾಗ್ರಹ’ ಎಂಬ ನೂತನ ಡಿಜಿಟಲ್ ವೇದಿಕೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಅನ್ಯಾಯಗಳ ವಿರುದ್ಧ ಹೋರಾಡುತ್ತಿರುವ ಸಾರ್ವಜನಿಕರು ಮತ್ತು ಯುವಜನರು ತಮ್ಮ ಅನುಭವ ಹಾಗೂ ಮಾಹಿತಿಯನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳಲು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದ ಪ್ರತಿಭಟನೆಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ನಕ್ಷೆಯಲ್ಲಿ ಪ್ರದರ್ಶಿಸುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ಹಾಗೆಯೇ ವಿವಿಧ ಕಾರಣಗಳಿಗಾಗಿ ಹೋರಾಡುತ್ತಿರುವ ಸಮುದಾಯಗಳು ಹಾಗೂ ಜನರು ಪರಸ್ಪರ ಸಂಪರ್ಕ ಸಾಧಿಸಲು ಮತ್ತು ಬೆಂಬಲ ಕೋರಲು ಈ ವೇದಿಕೆ ನೆರವಾಗಲಿದೆ.

ಸಾರ್ವಜನಿಕರ ದೈನಂದಿನ ಹೋರಾಟ ಮತ್ತು ದೂರುಗಳನ್ನು ರಾಷ್ಟ್ರೀಯ ಮಟ್ಟದ ಚರ್ಚೆ ಹಾಗೂ ಸಂಸತ್ತಿನ ಗಮನಕ್ಕೆ ತರುವುದು ‘ಸತ್ಯಾಗ್ರಹ’ ಎಂಬ ನೂತನ ಡಿಜಿಟಲ್ ವೇದಿಕೆಯ ಪ್ರಮುಖ ಗುರಿಯಾಗಿದೆ.

ಗಾಂಧಿ ಜಯಂತಿಯ ಬೆನ್ನಲ್ಲೇ ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಲಾಗಿದ್ದು, ಮಹಾತ್ಮ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದ ತತ್ವಗಳಿಂದ ಇದು ಪ್ರೇರಣೆ ಪಡೆದಿದೆ. ನಿವೇಶನ ಹಕ್ಕು, ಪರೀಕ್ಷಾ ಅಕ್ರಮಗಳು, ವಿದ್ಯಾರ್ಥಿಗಳ ಸಮಸ್ಯೆಗಳು, ರೈತರ ಹೋರಾಟ ಹಾಗೂ ವಿವಿಧ ಅನ್ಯಾಯಗಳ ವಿರುದ್ಧ ಹೋರಾಡುತ್ತಿರುವ ಸಾರ್ವಜನಿಕರು ಮತ್ತು ಯುವಜನರು ತಮ್ಮ ಅನುಭವ ಹಾಗೂ ಮಾಹಿತಿಯನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳಲು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ರಾಹುಲ್ ಗಾಂಧಿ, “ದೇಶದ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧದ ಧ್ವನಿಗಳಿಗೆ ಶಕ್ತಿ ತುಂಬಲು ಮತ್ತು ಸಂಘಟಿಸಲು ಈ ವೇದಿಕೆ ನೆರವಾಗಲಿದೆ” ಎಂದು ತಿಳಿಸಿದ್ದಾರೆ