ಇಂದಿಗಿಂತ ನಾಳೆ ಉತ್ತಮ: ವಿಶ್ವಾಸಿಯ ಪ್ರತಿದಿನದ ಗುರಿ 

0
212

✍️ ಅಬ್ದುಲ್ ಲತೀಫ್

ಮನುಷ್ಯನು ಒಂದು ಸ್ಥಿರವಾದ ವಸ್ತುವಲ್ಲ; ಆತ ನಿರಂತರ ಬದಲಾವಣೆಗಳಿಗೆ ಒಳಗಾಗುವ ಪ್ರಕ್ರಿಯೆಯಾಗಿದ್ದಾನೆ. ಈ ಬದಲಾವಣೆಗಳನ್ನು ಗುಣಾತ್ಮಕ ದಿಕ್ಕಿನತ್ತ ಕೊಂಡೊಯ್ಯುವುದೇ ಇಸ್ಲಾಮಿಕ್ ‘ತರ್ಬಿಯತ್'(ಆತ್ಮಸಂಸ್ಕಾರ)ನ ಮುಖ್ಯ ಉದ್ದೇಶವಾಗಿದೆ. ಕೇವಲ ಜ್ಞಾನವನ್ನು ಪಡೆದುಕೊಳ್ಳುವುದಷ್ಟೇ ಅಲ್ಲದೆ, ಆ ಜ್ಞಾನವನ್ನು ಚಿಂತನೆಯೊಂದಿಗೆ ಜೋಡಿಸಿ ಜೀವನವನ್ನು ಸುಧಾರಿಸಿಕೊಳ್ಳಲು ಇಸ್ಲಾಮ್ ವಿಶ್ವಾಸಿಯನ್ನು ಆಗ್ರಹಿಸುತ್ತದೆ.

ಇಸ್ಲಾಮ್ ಚಿಂತನೆಗೆ (ಆಲೋಚನೆಗೆ) ದೊಡ್ಡ ಪ್ರತಿಫಲವನ್ನು ನಿಗದಿಪಡಿಸಿದೆ. ಗುಣಾತ್ಮಕವಾದ ಆಲೋಚನೆಗಳು ನಮ್ಮ ಕಾರ್ಯಚಟುವಟಿಕೆಗಳನ್ನು ಸುಧಾರಿಸುತ್ತವೆ ಮತ್ತು ವೈವಿಧ್ಯಮಯಗೊಳಿಸುತ್ತವೆ. ‘ನೀವು ಚಿಂತಿಸುವುದಿಲ್ಲವೇ?’ (ಅಫಲಾ ತತಫಕ್ಕರೂನ್) ಎಂದು ಕುರ್‌ಆನ್ ಪದೇ ಪದೇ ಪ್ರಶ್ನಿಸುತ್ತದೆ. ಒಬ್ಬ ವಿಶ್ವಾಸಿಯು ಪ್ರತಿಯೊಂದು ದಿನವನ್ನೂ ಕೆಟ್ಟ ಚಿಂತನೆಗಳಿಂದ ಮುಕ್ತಗೊಳಿಸಿ ಆತ್ಮಸಂಸ್ಕಾರಕ್ಕಾಗಿ ಉಪಯೋಗಿಸಿದಾಗ ಮಾತ್ರ ನಿಜವಾದ ‘ತರ್ಬಿಯತ್’ ಸಾಧ್ಯವಾಗುತ್ತದೆ.

ವರ್ತಮಾನದ ಪರಿಸ್ಥಿತಿಗಳಲ್ಲಿ ಅಹಂಕಾರ ಪಡುವುದಾಗಲಿ ಅಥವಾ ಸೋಲುಗಳಲ್ಲಿ ನಿರಾಶೆಗೊಳ್ಳುವುದಾಗಲಿ ಮಾಡಬಾರದು ಎಂದು ಇಸ್ಲಾಮ್ ಕಲಿಸುತ್ತದೆ. ನಾವು ಇಂದು ಎಲ್ಲಿದ್ದೇವೆ ಎನ್ನುವುದಕ್ಕಿಂತ, ಕೊನೆಗೆ ಎಲ್ಲಿ ತಲುಪುತ್ತೇವೆ ಎನ್ನುವುದೇ ಮುಖ್ಯ. 

ಪ್ರವಾದಿ (ಸ) ಅವರು ನಮಗೆ ಕಲಿಸಿಕೊಟ್ಟ ಸುಂದರವಾದ ಪ್ರಾರ್ಥನೆ ಹೀಗಿದೆ: اللَّهُمَّ أَحْسِنْ عَاقِبَتَنَا فِي الْأُمُورِ كُلِّهَا، وَأَجِرْنَا مِنْ خِزْيِ الدُّنْيَﺎ وَعَذَابِ الْآخِرَةِ

(ಅಲ್ಲಾಹನೇ, ನಮ್ಮ ಎಲ್ಲಾ ಕಾರ್ಯಗಳ ಅಂತ್ಯವನ್ನು (ಪರಿಣಾಮವನ್ನು) ಉತ್ತಮಗೊಳಿಸು. ಇಹಲೋಕದ ನಿಂದನೆಯಿಂದ ಮತ್ತು ಪರಲೋಕದ ಶಿಕ್ಷೆಯಿಂದ ನಮ್ಮನ್ನು ಕಾಪಾಡು – ಮುಸ್ನದ್ ಅಹ್ಮದ್)

ಈ ಪ್ರಾರ್ಥನೆಯು ನಮ್ಮ ಒಳಗಿರುವ ‘ನಾನು ಈಗ ಪರಿಪೂರ್ಣನಾಗಿದ್ದೇನೆ’ ಎಂಬ ತಪ್ಪು ಕಲ್ಪನೆಯನ್ನು ತಿದ್ದುತ್ತದೆ. ಪ್ರತಿಯೊಂದು ಕಾರ್ಯದ ‘ಆಖಿಬತ್’ (ಅಂತ್ಯ/ಪರಿಣಾಮ) ನ ಬಗ್ಗೆ ನಮಗೆ ಸದಾ ಅರಿವಿರಬೇಕು.

ಇನ್ನಷ್ಟು ಬದಲಾಗುತ್ತಿರಬೇಕು ಎನ್ನುವ ಜಾಗರೂಕತೆಯ ಆಸೆಯೇ ಈ ಪ್ರಾರ್ಥನೆ.

‘ತರ್ಬಿಯತ್’ (ಆತ್ಮಸಂಸ್ಕಾರ) ಎಂಬುದು ಹಂತ-ಹಂತವಾಗಿರುವ (Step-by-step) ಪ್ರಕ್ರಿಯೆಯಾಗಿದೆ. ಒಬ್ಬ ವಿಶ್ವಾಸಿಯ ಎರಡು ದಿನಗಳು ಒಂದೇ ರೀತಿ ಇರಬಾರದು. ಪ್ರತಿಯೊಂದು ದಿನವೂ ಆತನ ಕರ್ಮಗಳಲ್ಲಿ ಮತ್ತು ಸ್ವಭಾವ-ಗುಣಗಳಲ್ಲಿ ಪ್ರಗತಿ ಇರಬೇಕು. ಇದನ್ನೇ ‘ಇಹ್ಸಾನ್’ ಎಂದು ಕರೆಯಲಾಗುತ್ತದೆ.

ತಪ್ಪುಗಳಿಂದ ಪಾಠ ಕಲಿಯುವುದು ಸಂಸ್ಕಾರದ ಮೊದಲ ಮೆಟ್ಟಿಲಾಗಿದೆ. ಪ್ರವಾದಿ(ಸ) ಅವರು ಹೇಳಿದರು: “ಒಬ್ಬ ವಿಶ್ವಾಸಿಯು ಒಂದೇ ಬಿಲದಿಂದ ಎರಡು ಬಾರಿ ಕಚ್ಚಿಸಿಕೊಳ್ಳುವುದಿಲ್ಲ (ಅರ್ಥಾತ್‌:ಎರಡು ಬಾರಿ ಮೋಸಹೋಗುವುದಿಲ್ಲ).” (ಬುಖಾರಿ, ಮುಸ್ಲಿಂ)

ಆರಾಧನೆಗಳಲ್ಲೂ ಮತ್ತು ವ್ಯವಹರಿಸುವುದರಲ್ಲೂ ಶ್ರೇಷ್ಠತೆಯನ್ನು ತರಬೇಕು. ನೆರೆಹೊರೆಯವರಿಗೆ ತೊಂದರೆ ನೀಡದಿರುವುದು, ಮುಗುಳ್ನಗೆಯಿಂದ ಮಾತನಾಡುವುದು ಮುಂತಾದ ಸಣ್ಣ ವಿಷಯಗಳಲ್ಲೂ ನಿರಂತರ ಬದಲಾವಣೆಗಳು ಇರಬೇಕು. ನಿನ್ನೆಗಿಂತ ಇಂದು ಉತ್ತಮವಾಗಿರಬೇಕು ಎಂಬುದೇ ಪ್ರತಿಯೊಬ್ಬ ವಿಶ್ವಾಸಿಯ ಪ್ರತಿದಿನದ ಗುರಿಯಾಗಿರಬೇಕು.

ಮನಶಾಸ್ತ್ರದ ವಿಶ್ಲೇಷಣೆಗಳು ಹಲವು ಬಾರಿಯೂ ಮನುಷ್ಯನ ಭವಿಷ್ಯವನ್ನು ಭೌತಿಕ ಲಾಭಗಳಿಗೆ (ಉದ್ಯೋಗ, ಸಂಪತ್ತು, ಅಂತಸ್ತು) ಮಾತ್ರ ಸೀಮಿತಗೊಳಿಸುತ್ತವೆ. ಆದರೆ, ಒಬ್ಬ ಮುಅ್‌ಮಿನ್ (ಸತ್ಯವಿಶ್ವಾಸಿ) ನ ಕಾಲಾವಧಿ ಪರಲೋಕದವರೆಗೂ ವಿಸ್ತರಿಸುತ್ತದೆ. ಭವಿಷ್ಯವು ಅಜ್ಞಾತವಾಗಿದ್ದರೂ ವಿಶ್ವಾಸಿಗೆ ತನ್ನ ಭವಿಷ್ಯದ ದಿಕ್ಕಿನ ಬಗ್ಗೆ ಸ್ಪಷ್ಟ ಅರಿವಿರುತ್ತದೆ. ಇದನ್ನು ‘ಬೆಳಗಾದ ಭವಿಷ್ಯ’ (المستقبل المكشوف) ಎಂದು ಬಣ್ಣಿಸಬಹುದು. ಮರಣ, ಕಬರ್, ವಿಚಾರಣೆ, ಪ್ರತಿಫಲ ಮುಂತಾದವುಗಳ ಬಗೆಗಿನ ದೃಢವಾದ ಅರಿವು ಆತನ ಇಂದಿನ ನಿರ್ಧಾರಗಳನ್ನು ಪ್ರಭಾವಿಸುತ್ತದೆ. ವಿಶ್ವಾಸಿಯ ವರ್ತಮಾನವನ್ನು ರೂಪಿಸುವುದು ಆತನ ಪರಲೋಕದ ಅರಿವೇ ಆಗಿದೆ.

ಕುರ್‌ಆನ್ ಹೇಳುತ್ತದೆ: “ಹೇ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಭಯಪಡಿರಿ. ಪ್ರತಿಯೊಬ್ಬ ವ್ಯಕ್ತಿಯೂ ತಾನು ನಾಳೆಗಾಗಿ (ಪರಲೋಕಕ್ಕಾಗಿ) ಮುಂಚಿತವಾಗಿ ಕಳುಹಿಸಿಕೊಟ್ಟಿರುವುದೇನೆಂದು ನೋಡಿಕೊಳ್ಳಲಿ…” (ಅಲ್-ಹಶ್ರ್: 18)

‘ತರ್ಬಿಯತ್’ ಎಂಬುದು ನಿರ್ದಿಷ್ಟ ಅವಧಿಯಲ್ಲಿ ಮುಗಿದುಹೋಗುವ ಒಂದಲ್ಲ. ಅದು ಮರಣದವರೆಗೆ ಮುಂದುವರಿಯುವ ‘ಕಾರ್ಯ ಪ್ರಗತಿಯಲ್ಲಿದೆ’ (Work in Progress – التربية المستمرة) ಆಗಿದೆ. ನಾವು ಈಗಿರುವುದು ನಮ್ಮ ಕೊನೆಯ ಆವೃತ್ತಿಯಲ್ಲ (Final Version). ಉತ್ತಮ ಬದಲಾವಣೆಗಳಿಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಮನಶಾಸ್ತ್ರವು ಮನುಷ್ಯನ ಬದಲಾವಣೆಗಳನ್ನು ವೀಕ್ಷಿಸುವುದಷ್ಟೇ ಮಾಡಿದರೆ, ಇಸ್ಲಾಮ್ ಆ ಬದಲಾವಣೆಗಳಿಗೆ ನಿಖರವಾದ ದಿಕ್ಕನ್ನು ನೀಡುತ್ತದೆ. ನಮ್ಮ ಇಂದಿನ ಪರಿಸ್ಥಿತಿ ಏನೇ ಆಗಿದ್ದರೂ, ನಮ್ಮ ಅಂತ್ಯವನ್ನು (ಹುಸ್ನುಲ್ ಖಾತಿಮಾ) ಸುಂದರಗೊಳಿಸುವ ಕಠಿಣ ಪರಿಶ್ರಮ ಮತ್ತು ಪ್ರಾರ್ಥನೆಯೇ ನಮ್ಮ ಜೀವನವಾಗಬೇಕು.