ಸನ್ಮಾರ್ಗ ವಾರ್ತೆ
ಲಕ್ನೋ: ಚಲಿಸುತ್ತಿದ್ದ ಶಾಲಾ ಬಸ್ಸಿನ ತಳಭಾಗ ಕುಸಿದು ಆರು ವರ್ಷದ ಹೆಣ್ಣು ಮಗು ರಸ್ತೆಗೆ ಬಿದ್ದು, ಬಸ್ಸಿನ ಹಿಂಭಾಗದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಮಗು ಅಲಿಘಡದ ಮೌಂಟ್ ದೇವ್ ಇಂಟರ್ನ್ಯಾಷನಲ್ ಸ್ಕೂಲ್ನ ಯುಕೆಜಿ ವಿದ್ಯಾರ್ಥಿನಿಯಾಗಿದ್ದು, ತರಗತಿ ಮುಗಿಸಿ ಮನೆಗೆ ಮರಳುವಾಗ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ, ಚಲಿಸುತ್ತಿದ್ದ ಬಸ್ಸಿನ ತಳಭಾಗವು ಅಚಾನಕ್ಕಾಗಿ ಕಿತ್ತು ಹೋಗಿದೆ. ಆ ತೆರೆದ ಜಾಗದಿಂದ ಅನನ್ಯಾ ರಸ್ತೆಗೆ ಬಿದ್ದಿದ್ದಾಳೆ. ಕ್ಷಣಾರ್ಧದಲ್ಲಿಯೇ ಹಿಂಭಾಗದ ಚಕ್ರವು ಆಕೆಯ ಮೇಲೆ ಹರಿದಿದೆ. ವಿದ್ಯಾರ್ಥಿನಿಯು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದರೂ ಚಾಲಕ ಬಸ್ ನಿಲ್ಲಿಸದೆ ಮುಂದೆ ಚಲಾಯಿಸಿದ್ದಾನೆ. ಬಸ್ಸಿನಲ್ಲಿದ್ದ ಇತರ ವಿದ್ಯಾರ್ಥಿಗಳು ಮತ್ತು ದಾರಿಹೋಕರು ಘಟನೆಯ ಬಗ್ಗೆ ಹೇಳಿದ ಮೇಲಷ್ಟೇ ಬಸ್ ನಿಲ್ಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.












