ಲಂಕಾ ಪತನಕ್ಕೆ ಏನು ಕಾರಣ?

0
379

ಕೆ ಕುಕ್ಕಿಲ

ಸನ್ಮಾರ್ಗ ವಿಶೇಷ ಲೇಖನ

2009ರಲ್ಲಿ ಎಲ್‌ಟಿಟಿಇಯನ್ನು ಮಣಿಸುವ ಮೂಲಕ ದೀರ್ಘ ರಕ್ತಸಿಕ್ತ ಹೋರಾಟಕ್ಕೆ ಶ್ರೀಲಂಕಾದ ಅಧ್ಯಕ್ಷ ಮಹೀಂದ್ರ ರಾಜಪಕ್ಸೆ ಅಂತಿಮ ಪರದೆ ಎಳೆದರು. ಶ್ರೀಲಂಕಾದ ಒಟ್ಟು ಜನಸಂಖ್ಯೆಯಲ್ಲಿ 70%ರಷ್ಟಿರುವ ಸಿಂಹಳೀಯರು ಈ ಗೆಲುವನ್ನು ಅಭಿಮಾನದಿಂದ ಆಚರಿಸಿದರು. ರಾಜಪಕ್ಸೆ ಲಂಕಾದ ಹೀರೋ ಆದರು. ಆದರೆ ಈ ಹೋರಾಟಕ್ಕೆ ಶ್ರೀಲಂಕಾ ಅಪಾರ ಪ್ರಮಾ ಣದ ಹಣ ವ್ಯಯ ಮಾಡಿತ್ತು. ಅಭಿವೃದ್ಧಿಯ ಕಡೆಗೆ ಗಮನ ಕೊಡುವುದಕ್ಕಿಂತ ಹೆಚ್ಚು ದೇಶ ಸುರಕ್ಷತೆಯನ್ನು ಮುಂಚೂಣಿ ವಿಷಯವಾಗಿ ಪರಿಗಣಿಸಿತ್ತು. ದೇಶದ ಒಟ್ಟು ಆದಾಯದ ಬಹುದೊಡ್ಡ ಭಾಗವನ್ನು ಶಸ್ತ್ರಾಸ್ತ್ರಕ್ಕೆ ಖರ್ಚು ಮಾಡಬೇಕಿತ್ತು. ಶ್ರೀಲಂಕಾವು ಪ್ರತಿಯೊಂದು ಶಸ್ತಾಸ್ತ್ರಕ್ಕೂ ವಿದೇಶವನ್ನೇ ಅವಲಂಬಿಸಿರುವುದರಿಂದ ಆಮದಿಗಾಗಿ ಅಪಾರ ಹಣ ಮೀಸಲಿಡುವುದು ಅನಿವಾರ್ಯವೂ ಆಗಿತ್ತು. ಆದರೆ ಎಲ್‌ಟಿಟಿಇ ಪರಾಜಯಗೊಳ್ಳುವುದರೊಂದಿಗೆ ಜನರ ಗಮನ ಮೊದಲ ಬಾರಿ ದೇಶದ ಅಭಿವೃದ್ಧಿ, ಮೂಲ ಸೌಲಭ್ಯಗಳು, ಶಿಕ್ಷಣ, ಉದ್ಯೋಗಗಳ ಕಡೆಗೆ ಸಹಜವಾಗಿಯೇ ಹರಿಯ ತೊಡಗಿತು.
ಇದೇ ವೇಳೆ,

ಎಲ್‌ಟಿಟಿಇ ವಿರುದ್ಧದ ಹೋರಾಟದ ವೇಳೆ ಲಂಕಾ ಸೇನೆ ಯಿಂದ ಗಂಭೀರ ಯುದ್ಧಾಪರಾಧಗಳು ನಡೆದಿವೆ ಎಂಬ ಕೂಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾಗಿಯೇ ಕೇಳಿಸತೊಡಗಿತು. ವಿಶ್ವಸಂಸ್ಥೆಯೇ ಈ ಬಗ್ಗೆ ತನಿಖೆಗೂ ಮುಂದಾಯಿತು. ಒಂದುಕಡೆ, ಜನರ ಗಮನ ಎಲ್‌ಟಿಟಿಇಯಿಂದ ಅಭಿವೃದ್ಧಿ ಕಡೆಗೆ ಹೊರಳಿದರೆ, ಇನ್ನೊಂದೆಡೆ ಅಂತಾರಾಷ್ಟ್ರೀಯ ಸಮೂಹಗಳ ಗಮನವು ಲಂಕಾದ ಯುದ್ಧಾಪರಾಧಗಳ ಕಡೆಗೆ ಹರಿದುದು ಅಧ್ಯಕ್ಷ ರಾಜಪಕ್ಸೆಯನ್ನು ಆತಂಕಕ್ಕೆ ತಳ್ಳಿತು. ಹೀರೋ ರಾಜಪಕ್ಸೆ ನಿಧಾನಕ್ಕೆ ದೇಶದಲ್ಲಿ ಪ್ರಶ್ನೆಗೆ ಒಳಗಾಗತೊಡಗಿದರು. ಇದು ರಾಜಪಕ್ಸೆಯನ್ನು ಒತ್ತಡಕ್ಕೆ ಸಿಲುಕಿಸತೊಡಗಿತು. ಇಂಥ ಹೊತ್ತಿನಲ್ಲೇ ಬೋದು ಬಾಲ ಸೇನಾ (ಬಿಬಿಎಸ್) ಅಥವಾ ಬೌದ್ಧ ಸೇನೆ ಎಂಬ ಬೌದ್ಧ ಸನ್ಯಾಸಿಗಳ ಸಂಘಟನೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿತು. ತೀವ್ರ ರಾಷ್ಟ್ರವಾದ ಮತ್ತು ತೀವ್ರ ಮುಸ್ಲಿಮ್ ವಿರೋಧಿ ಪ್ರಚಾರಗಳೇ ಅದರ ಮುಖ್ಯ ಅಜೆಂಡಾವಾಗಿತ್ತು. ಹಾಗಂತ,

ಈ ಬಿಬಿಎಸ್ ಅನ್ನು ಮುಂಚೂಣಿಗೆ ತಂದುದು ರಾಜಪಕ್ಸೆ ಹೌದೋ ಅಲ್ಲವೋ, ಆದರೆ ಆ ಬೌದ್ಧ ಸನ್ಯಾಸಿ ಸಂಘಟನೆಯ ಪ್ರಚಾರ ವೈಖರಿಯು ರಾಜಪಕ್ಸೆಯ ಪಾಲಿಗೆ ಊರುಗೋಲಾದುದು ನಿಜ. ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕೆ ಈ ಸಂಘಟನೆಯ ಮುಸ್ಲಿಮ್ ವಿರೋಧಿ ದ್ವೇಷ ಭಾಷಣಗಳು ಪ್ರಯೋಜನಕ್ಕೆ ಬಂದುವು. 2005ರಿಂದ 2015ರ ವರೆಗಿನ ತಮ್ಮ ಅಧಿಕಾರಾವಧಿಯಲ್ಲಿ ಮುಸ್ಲಿಮ್ ವಿರೋಧಿ ದ್ವೇಷವನ್ನು ಈ ರಾಜಪಕ್ಸೆ ಪುಷ್ಕಳವಾಗಿ ಬಳಸಿದ್ದಾರೆ ಎಂಬ ಆರೋಪ ಬಲ ವಾಗಿಯೇ ಇದೆ. 2013 ಜನವರಿಯಲ್ಲಿ ತೀವ್ರವಾದಿ ಬೌದ್ಧ ಸನ್ಯಾಸಿಗಳ ಗುಂಪು ಲಂಕಾದ ಕಾನೂನು ಕಾಲೇಜಿಗೆ ನುಗ್ಗಿತ್ತಲ್ಲದೇ ಪರೀಕ್ಷಾ ಫಲಿತಾಂಶವನ್ನು ಮುಸ್ಲಿಮರ ಪರವಾಗಿ ತಿರುಚಲಾಗಿದೆ ಎಂದು ರಂಪಾಟ ನಡೆಸಿತ್ತು. ಇದೇ ಅವಧಿಯಲ್ಲಿ ಕೊಲಂಬೋದ ಕಸಾಯಿಖಾನೆಗೆ ನುಗ್ಗಿ, ಇಲ್ಲಿ ಕರುಗಳನ್ನು ವಧಿಸಲಾಗುತ್ತಿದೆ ಎಂದು ಹೇಳಿ ಹಾನಿ ಮಾಡಿತ್ತು. ಆದರೆ ಈ ಎರಡೂ ಆರೋಪ ಗಳು ಸುಳ್ಳು ಎಂಬುದು ಆ ಬಳಿಕ ಸ್ಪಷ್ಟವಾಯಿತು ಎಂದು 2013 ಮಾರ್ಚ್ 25ರಂದು ಬಿಬಿಸಿ ಪ್ರಕಟಿಸಿದ ‘ಹಾರ್ಡ್ಲೈನ್ ಬುದ್ದಿಸ್ಟ್ಸ್ ಟಾರ್ಗೆಟಿಂಗ್ ಶ್ರೀಲಂಕನ್ ಮುಸ್ಲಿಮ್ಸ್’ ಎಂಬ ಬರಹದಲ್ಲಿ ಹೇಳಲಾಗಿದೆ. ನಿಜವಾಗಿ,

ಇಂಥ ಮುಸ್ಲಿಮ್ ವಿರೋಧಿ ಪ್ರಕ್ರಿಯೆಗಳನ್ನು ಅಲ್ಲಲ್ಲಿ ಆಗಾಗ ಸೃಷ್ಟಿಸುತ್ತಾ ಬರುವ ಮೂಲಕ ಮುಸ್ಲಿಮ್ ವಿರೋಧಿ ದಂಗೆಗೆ ಬೋದು ಬಾಲ ಸೇನೆ ನೆಲವನ್ನು ಹಸನುಗೊಳಿಸುತ್ತಲೇ ಹೋಗುತ್ತಿತ್ತು. ಇದರ ಫಸಲು 2014ರಲ್ಲಿ ಸಿಕ್ಕಿತು. 1990ರಲ್ಲಿ ಉತ್ತರ ಶ್ರೀಲಂಕಾದಿಂದ ಭಾರೀ ಸಂಖ್ಯೆಯಲ್ಲಿ ಮುಸ್ಲಿಮರನ್ನು ವಲಸೆ ಹೋಗುವಂತೆ ನಿರ್ಬಂಧಿಸಲಾದ ಘಟನೆಯ ಬಳಿಕ, ಮುಸ್ಲಿಮರು ದೊಡ್ಡ ಮಟ್ಟದಲ್ಲಿ ಮೊದಲ ಬಾರಿ ಹಿಂಸಾಚಾರಕ್ಕೆ ಗುರಿಯಾದರು. 1990ರ ವಲಸೆಗೆ ಎಲ್‌ಟಿಟಿಇಯ ನಿರ್ದೇಶನ ಕಾರಣವಾಗಿತ್ತು. ಮುಸ್ಲಿಮರೆಲ್ಲ ಇಲ್ಲಿಂದ ತಕ್ಷಣ ತೆರವುಗೊಳ್ಳಬೇಕು ಎಂದು ಎಲ್‌ಟಿಟಿಇ ಮುಸ್ಲಿಮರಿಗೆ ಆದೇಶ ನೀಡಿತ್ತಲ್ಲದೇ ಈ ತೆರವಿಗೆ ತೀರಾ ಸಣ್ಣ ಅವಧಿಯನ್ನಷ್ಟೇ ನೀಡಿತ್ತು. ಆ ಅವಧಿಯಲ್ಲಿ ತಮ್ಮ ಬಟ್ಟೆಬರೆಗಳ ಹೊರತು ಇನ್ನೇನೂ ಕೊಂಡೊಯ್ಯಲಾಗದ ಹತಾಶ ಸ್ಥಿತಿ ಮುಸ್ಲಿಮರಿಗೆ ಬಂದೊದಗಿತ್ತು. ಆ ಬಳಿಕ 2014ರಲ್ಲಿ ಮುಸ್ಲಿಮರು ಪುನಃ ಹಿಂಸೆಗೆ ಗುರಿಯಾದರು. ಮುಸ್ಲಿಮರ ವಿರುದ್ಧ ತೀವ್ರ ಅಪಪ್ರಚಾರಗಳು ನಡೆದುವು. ಹೀಗಿದ್ದೂ 2015ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಪಕ್ಸೆ ಸೋತರು. ಸಿರಿಸೇನಾ ಅಧಿಕಾರಕ್ಕೆ ಬಂದರು. ರಾಜಪಕ್ಸೆಗೆ ಹೋಲಿಸಿದರೆ ಸಿರಿಸೇನಾ ಹೆಚ್ಚು ಸೆಕ್ಯುಲರ್ ಎಂದು ಗುರುತಿಗೀಡಾದವರು. ಅಭಿವೃದ್ಧಿ ರಾಜಕಾರಣವನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಿದವರು. ಆದರೆ, ಬೋದು ಬಾಲ ಸೇನಾ ಮತ್ತು ಸಿಂಹಳ ಇಕೋದಂಥ ತೀವ್ರವಾದಿ ಬೌದ್ಧ ಸಂಘಟನೆಗಳು ತಮ್ಮ ಮುಸ್ಲಿಮ್ ವಿರೋಧಿ ಅಭಿಯಾನವನ್ನು ತೀವ್ರಗೊಳಿಸಿದುವೇ ಹೊರತು ತಗ್ಗಿಸಲಿಲ್ಲ. ಇದರ ಪರಿಣಾಮವೆಂಬಂತೆ 2018 ಮತ್ತು 2019ರಲ್ಲಿ ಎರಡು ಮುಸ್ಲಿಮ್ ವಿರೋಧಿ ದಂಗೆಗಳು ನಡೆದುವು.

2018ರಲ್ಲಿ ಮೂರು ದಿನಗಳ ಕಾಲ ನಡೆದ ಮುಸ್ಲಿಮ್ ವಿರೋಧಿ ದಂಗೆಯಲ್ಲಿ ಮುಸ್ಲಿಮರ ಮನೆ, ಮಸೀದಿ, ವ್ಯಾಪಾರ ಮಳಿಗೆಗಳಿಗೆ ಅಪಾರ ನಾಶ ನಷ್ಟ ಸಂಭವಿಸಿತು. 2018 ಫೆಬ್ರವರಿ 22ರಂದು ಬೌದ್ಧ ಟ್ರಕ್ ಡ್ರೈವರ್ ಮತ್ತು ಮುಸ್ಲಿಮ್ ಯುವಕರ ನಡುವೆ ನಡೆದ ಘರ್ಷಣೆಯಲ್ಲಿ ಕುಮಾರ ಸಿಂಹಳೆ ಎಂಬ ಆ ಡ್ರೈವರ್ ಆಸ್ಪತ್ರೆಯಲ್ಲಿ ಸಾವಿಗೀಡಾದ. ಟ್ರಾಫಿಕ್ ವಿಚಾರಕ್ಕೆ ಸಂಬಂಧಿಸಿ ನಡೆದ ಘರ್ಷಣೆ ಇದಾಗಿತ್ತು. ರಾಜಪಕ್ಸೆ ಅವರ, ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷವು ಈ ಹಿಂಸಾಚಾರದಲ್ಲಿ ಭಾಗಿಯಾಗಿತ್ತು ಎಂಬ ಆರೋಪವೂ ಕೇಳಿಬಂತು. ಶ್ರೀಲಂಕನ್ ಸೆಕ್ರಟರಿಯೇಟ್ ಫಾರ್ ಮುಸ್ಲಿಮ್ಸ್ ಎಂಬ ನಾಗರಿಕ ಗುಂಪಿನ ಪ್ರಕಾರ, 2013ರಿಂದ 18ರ ನಡುವೆ ಮುಸ್ಲಿಮರ ವಿರುದ್ಧ 600ಕ್ಕಿಂತಲೂ ಅಧಿಕ ಕೋಮುದ್ವೇಷಿ ದಾಳಿಗಳು ನಡೆದಿವೆ. ಇದರ ಹಿಂದೆ ಬೋದು ಬಾಲ ಸೇನಾದ ಮುಖ್ಯಸ್ಥ ಬೌದ್ಧ ಸನ್ಯಾಸಿ ಗಲಗಂಡ ಜ್ಞಾನರಸ ಮತ್ತು ಅವರ ಸಂಘಟನೆಯ ದ್ವೇಷ ಪ್ರಚಾರಕ್ಕೆ ಪ್ರಮುಖ ಪಾತ್ರವಿದೆ ಎಂಬುದು ಸ್ಪಷ್ಟ. ಈ ಹಿಂಸಾಚಾರದ ಕುರಿತಂತೆ, ‘ಪೊಲೀಸ್, ಪೊಲಿಟೀಶಿಯನ್ಸ್ ಅಕ್ಯುಸ್‌ಡ್ ಆಫ್ ಜಾಯಿನಿಂಗ್ ಶ್ರೀಲಂಕಾಸ್ ಆಂಟಿ ಮುಸ್ಲಿಮ್ ರಯಟ್ಸ್’ ಎಂಬ ಶೀರ್ಷಿಕೆಯಲ್ಲಿ ರಾಯಿಟರ್ಸ್ ಸುದ್ದಿಸಂಸ್ಥೆ 2018 ಮಾರ್ಚ್ 24ರಂದು ವಿಸ್ತೃತ ತನಿಖಾ ಬರಹವನ್ನು ಪ್ರಕಟಿಸಿದೆ.

ಬೌದ್ಧ ಸನ್ಯಾಸಿ ಜ್ಞಾನರಸ ಮೇಲೆ ಹಿಂಸಾಚಾರ ಮತ್ತು ಕೋರ್ಟು ನಿಂದೆಗೆ ಸಂಬಂಧಿಸಿ ನ್ಯಾಯ ಪ್ರಕ್ರಿಯೆ ನಡೆಯಿತಲ್ಲದೇ 2018ರಲ್ಲಿ ನ್ಯಾಯಾಲಯವು 6 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಈ ಸಂದರ್ಭದಲ್ಲಿ ಸಿರಿಸೇನಾ ಲಂಕಾದ ಅಧ್ಯಕ್ಷರಾಗಿದ್ದರು. 2019 ಎಪ್ರಿಲ್‌ನಲ್ಲಿ ಶ್ರೀಲಂಕಾವನ್ನೇ ಬೆಚ್ಚಿಬೀಳಿಸಿದ ಬಾಂಬ್ ಸ್ಫೋಟ ನಡೆಯಿತು. ಮೇಯಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರ ಭುಗಿಲೆದ್ದಿತು. ನೆಗಾಂಬೋ ಎಂಬಲ್ಲಿ 1000 ಮುಸ್ಲಿಮರನ್ನು ಅವರಿರುವ ಬಾಡಿಗೆ ಮನೆಗಳಿಂದ ಒಕ್ಕಲೆಬ್ಬಿಸಲಾಯಿತು. ‘ನೀವಿದ್ದರೆ ತಮ್ಮ ಆಸ್ತಿ-ಪಾಸ್ತಿಗಳ ಮೇಲೆ ದಂಗೆಕೋರರು ದಾಳಿ ಮಾಡುವರೆಂದು’ ಹೇಳಿ ಮನೆ ಮಾಲಿಕ ಮುಸ್ಲಿಮರನ್ನು ಒಕ್ಕಲೆಬ್ಬಿಸಿದ್ದ. 4 ಬಿಲಿಯನ್ ಬೆಲೆಬಾಳುವ ಮುಸ್ಲಿಮ್ ಮಾಲಕತ್ವದ, ರೋಝಾ ಫಾಸ್ಟಾ ಫ್ಯಾಕ್ಟರಿಯನ್ನು ಬೆಂಕಿ ಹಚ್ಚಿ ಧ್ವಂಸ ಮಾಡಲಾಯಿತು. ಇದು ಲಂಕಾದ ಅತಿದೊಡ್ಡ ಪಾಸ್ಟಾ ಫ್ಯಾಕ್ಟರಿಯಾಗಿದ್ದು, 500 ಮಂದಿ ದುಷ್ಕರ್ಮಿಗಳು ಈ ಕಾರ್ಖಾನೆಗೆ ಪ್ರವೇಶಿಸಿ ಬೆಂಕಿ ಹಚ್ಚಿದ್ದರು. ಈ ಹಿಂಸಾಚಾರದಲ್ಲಿ 100ರಷ್ಟು ವಾಹನಗಳು ಧ್ವಂಸವಾದುವು. 540ರಷ್ಟು ಮುಸ್ಲಿಮ್ ಮನೆಗಳು ಧ್ವಂಸಗೊಂಡವು. ಅಧ್ಯಕ್ಷ ಸಿರಿಸೇನಾ ಅವರು ಬಾಂಬ್ ಸ್ಫೋಟ ಮತ್ತು ಕೋಮು ಹಿಂಸಾಚಾರದಿಂದಾಗಿ ತೀವ್ರವಾಗಿ ಕಳೆಗುಂದಿದರು ಮತ್ತು ಇದರ ಲಾಭವನ್ನು ರಾಜಪಕ್ಸೆ ಪಡೆದುಕೊಂಡರು. ಸಿರಿ ಸೇನಾ ಅವರ ಮೇಲೆ ಬೋದು ಬಾಲ ಸೇನಾ ಮತ್ತು ಸಾರ್ವಜನಿಕರ ಒತ್ತಡ ಎಷ್ಟು ಬಲವಾಗಿತ್ತೆಂದರೆ, ತಾನು ನಿರ್ಗಮಿಸುವುದಕ್ಕಿಂತ ಒಂದು ತಿಂಗಳು ಮೊದಲು ಜೈಲಲ್ಲಿದ್ದ ಜ್ಞಾನರಸ ಅವರಿಗೆ ತಮ್ಮ ವಿಶೇಷಾಧಿಕಾರ ಬಳಸಿ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದರು. ಬಳಿಕ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಿರಿಸೇನಾ ಪರಾಜಯಗೊಂಡರಲ್ಲದೇ ರಾಜಪಕ್ಸೆ ಭರ್ಜರಿ ಜಯ ದಾಖಲಿಸಿದರು. ಈ ಜಯದ ಹಿಂದೆ ಬೋದು ಬಾಲ ಸೇನಾ ಸಂಘಟನೆಯ ದೊಡ್ಡ ಪಾತ್ರವಿತ್ತು ಮತ್ತು ಈ ಸಂಘಟನೆಯು ವಿರತ್ತು ಎಂಬ ಮ್ಯಾನ್ಮಾರ್‌ನ ತೀವ್ರವಾದಿ ಬೌದ್ಧ ಸಂಘಟನೆಯೊಂದಿಗೆ ಬಲವಾದ ಸಂಬಂಧವನ್ನೂ ಹೊಂದಿದೆ. ಮ್ಯಾನ್ಮಾರ್‌ನಲ್ಲಿ 7 ಲಕ್ಷ ಮುಸ್ಲಿಮರ ಪಲಾಯನ ಮತ್ತು ಅನೇಕ ಮಂದಿಯ ಸಾವಿನ ಹಿಂದೆ ಈ ಸಂಘಟನೆಯ ಪ್ರಚೋದನೆ ಮತ್ತು ದ್ವೇಷ ಪ್ರಚಾರಕ್ಕೆ ಮಹತ್ವದ ಪಾತ್ರ ಇದೆ. ವಿಶೇಷ ಏನೆಂದರೆ,

ಭಾರತೀಯ ಮುಸ್ಲಿಮರ ವಿರುದ್ಧ ಇಲ್ಲಿನ ಬಲಪಂಥೀಯ ಗುಂಪು ಹೇಗೆ ಅಪಪ್ರಚಾರ ಮಾಡುತ್ತಿದೆಯೋ ಅದೇ ರೀತಿಯ ಅಪಪ್ರಚಾರವನ್ನು ಶ್ರೀಲಂಕನ್ ಮುಸ್ಲಿಮರ ವಿರುದ್ಧವೂ ಮಾಡಲಾಗುತ್ತಿದೆ. ಒಂದು ರೀತಿಯಲ್ಲಿ ಭಾರತದ್ದೇ ಕಾಪಿ ಪೇಸ್ಟ್. ಕೆಲವು ಉದಾಹರಣೆಗಳು ಹೀಗಿವೆ:

1. ಮುಸ್ಲಿಮರು ದೇಶನಿಷ್ಠರಲ್ಲ.

2. ಮುಸ್ಲಿಮರು ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೆ.

3. 2050ಕ್ಕಾಗುವಾಗ ಸಿಂಹಳೀಯರು ಅಲ್ಪಸಂಖ್ಯಾತರಾಗಲಿದ್ದು, ಮುಸ್ಲಿಮರು ಬಹುಸಂಖ್ಯಾತರಾಗುತ್ತಾರೆ.

4. ತಮ್ಮ ಉತ್ಪನ್ನಗಳಲ್ಲಿ ರಾಸಾಯನಿಕ ವಸ್ತುಗಳನ್ನು ಸೇರಿಸಿ ಸಿಂಹಳ ಮಹಿಳೆಯರು ಬಂಜೆಯಾಗುವAತೆ ಸಂಚು ರೂಪಿಸಿದ್ದಾರೆ.

5. ಹಲಾಲ್ ಆಹಾರ ಮಾರಾಟದ ಮೂಲಕ ಲಂಕಾವನ್ನು ಇಸ್ಲಾಮೀಕರಣ ಮಾಡುತ್ತಾರೆ.

6. ಮುಸ್ಲಿಮರು ಲಂಕಾದ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದಾರೆ.

7. ಶರಿಯಾ ಕಾನೂನು ಪಾಲಿಸುತ್ತಾರೆ.

8. ಮುಸ್ಲಿಮರು ವಾಣಿಜ್ಯ ಉದ್ದೇಶಕ್ಕಾಗಿ ಭೂಮಿ ಖರೀ ದಿಸುವುದರ ಹಿಂದೆ ಸಂಚಿದೆ.

9. ಮುಸ್ಲಿಮರು ಡ್ರಗ್ಸ್ ಸರಬರಾಜಿನಲ್ಲಿ ಭಾಗಿಯಾಗಿದ್ದಾರೆ.

ಅಂದಹಾಗೆ,

2019ರಲ್ಲಿ ಲಂಕಾವನ್ನು ಬಾಂಬ್ ಸ್ಫೋಟ ನಡುಗಿಸಿದರೆ, 2020ರಲ್ಲಿ ಕೊರೋನಾ ಅಲುಗಾಡಿಸಿತು. 2021 ಎಪ್ರಿಲ್ 12 ರಂದು ಸರ್ಕಾರ ಮಹತ್ವದ ಘೋಷಣೆಯೊಂದನ್ನು ಹೊರಡಿಸಿತು. 1000 ಮದ್ರಸಗಳನ್ನು ಮತ್ತು ಬುರ್ಖಾವನ್ನು ಸರ್ಕಾರ ನಿಷೇಧಿಸಿದೆ ಎಂದು ಸಾರ್ವಜನಿಕ ಸುರಕ್ಷಾ ಸಚಿವ ಶರತ್ ವೀರಸೇಕರ ಘೋಷಿಸಿದರು. ಬುರ್ಖಾವು ಧಾರ್ಮಿಕ ಉಗ್ರವಾದದ ಸಂಕೇತ ಮತ್ತು ದೇಶದ ಸುರಕ್ಷತತೆಗೆ ಅಪಾಯಕಾರಿ ಎಂದವರು ವ್ಯಾಖ್ಯಾನಿಸಿದರು. ಆದರೆ ಈ ಬಗ್ಗೆ ಅಂತಾರಾಷ್ಟ್ರೀಯವಾಗಿ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ, ಈ ಬಗ್ಗೆ ಪರಾಮರ್ಶೆ ನಡೆಯುತ್ತಿದೆ ಎಂದು ಸರ್ಕಾರ ವಿವರಣೆ ನೀಡಿತು. ಇದೇವೇಳೆ, ವಿದೇಶದಿಂದ ಅಮದು ಮಾಡಲಾಗುವ ಎಲ್ಲಾ ಇಸ್ಲಾಮೀ ಪುಸ್ತಕಗಳೂ ರಕ್ಷಣಾ ಸಚಿವಾಲಯದ ಅನುಮತಿಯನ್ನು ಪಡೆದಿರಲೇಬೇಕು ಎಂದು 2021 ಮಾರ್ಚ್ ಆರಂಭದಲ್ಲಿ ಆದೇಶ ನೀಡಲಾಯಿತು. 2020ರ ಕೊರೋನಾದ ಸಮಯದಲ್ಲಿ ಮುಸ್ಲಿಮರು ಸಹಿತ ಎಲ್ಲ ಶವಗಳನ್ನೂ ಸುಡಲು ಸರ್ಕಾರ ಆದೇಶ ಹೊರಡಿಸಿತು. ಇದು ವಿಶ್ವಸಂಸ್ಥೆಯೂ ಸೇರಿದಂತೆ ಎಲ್ಲೆಡೆಯ ಆಕ್ರೋಶಕ್ಕೆ ಒಳಗಾಯಿತು. ಕೊನೆಗೆ 2021ರ ಕೊನೆಯಲ್ಲಿ ಈ ಆದೇಶವನ್ನು ಹಿಂಪಡೆದು ಶವ ದಫನಕ್ಕೂ ಸರ್ಕಾರ ಅವಕಾಶ ಕಲ್ಪಿಸಿತು. ಅಂದಹಾಗೆ,

2019ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಪಕ್ಸೆ ಅವರ ಪಕ್ಷದ ಘೋಷಣೆ- ‘ಒಂದು ದೇಶ ಒಂದೇ ಕಾನೂನು’ ಎಂಬುದಾಗಿತ್ತು. ಇದರ ಕಾನೂನು ನಿರ್ಮಾಣ ಸಮಿತಿಯ ಅಧ್ಯಕ್ಷರನ್ನಾಗಿ ಜ್ಞಾನರಸ ಅವರನ್ನೇ ಆಯ್ಕೆ ಮಾಡಿರುವುದೇ ಆ ನೀತಿಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಹಲಾಲ್ ಆಹಾರದ ವಿರುದ್ಧವೂ ಅಲ್ಲಿ ಅಭಿಯಾನ ನಡೆಯಿತು. ಒಂದು ರೀತಿಯಲ್ಲಿ,

ಶ್ರೀಲಂಕಾದ ಇಂದಿನ ಆರ್ಥಿಕ ದುಃಸ್ಥಿತಿಗೆ ಬಾಂಬ್ ಸ್ಫೋಟ ಮತ್ತು ಕೊರೋನಾದಿಂದಾಗಿ ನೆಲ ಕಚ್ಚಿದ ಪ್ರವಾಸೋದ್ಯಮ, 3.87 ಲಕ್ಷ ಕೋಟಿಯಷ್ಟು ಭಾರೀ ಸಾಲದಲ್ಲಿ ಮುಳುಗಿರುವುದು, ತೆರಿಗೆ ನೀತಿಯನ್ನು ಬದಲಾಯಿಸಿದ್ದು, ಹಠಾತ್ತಾಗಿ ಜಾರಿಗೆ ತಂದ ಸಾವಯವ ಕೃಷಿ ನೀತಿ… ಇತ್ಯಾದಿಗಳು ಕಾರಣ ಎಂದು ಹೇಳುವಾಗಲೂ, ಅದು ದಶಕಗಳಿಂದ ಪೋಷಿಸುತ್ತಾ ಬಂದ ಧರ್ಮ ರಾಜಕಾರಣವನ್ನೂ ಕಾರಣಗಳ ಪಟ್ಟಿಯಿಂದ ಹೊರಗಿಟ್ಟು ನೋಡುವ ಹಾಗಿಲ್ಲ. ಇದರಿಂದಾಗಿ ಲಂಕಾಕ್ಕೆ ಬರುವ ಪ್ರವಾಸಿಗರಲ್ಲಿ ತೀವ್ರ ಕೊರತೆ ಉಂಟಾಯಿತು.

ತನ್ನದೇ ಜನರನ್ನು ದ್ವೇಷಿಸುತ್ತಾ ಸಾಗುವ ಯಾವ ದೇಶವೂ ಅಭಿವೃದ್ಧಿಯತ್ತ ಮುಖ ಮಾಡಲು ಸಾಧ್ಯವಿಲ್ಲ. ಒಂದು ಜನಾಂಗವನ್ನು ಭೀತಿಯಲ್ಲಿ ಕೆಡುಹುವುದರಿಂದ ಅಧಿಕಾರವೇನೋ ಸಿಗಬಹುದು, ಅದರ ಜೊತೆಗೇ ದೇಶ ವಿನಾಶದತ್ತಲೂ ಸಾಗಬಹುದು ಎಂಬುದಕ್ಕೆ ಲಂಕಾ ಒಂದು ಉತ್ತಮ ಉದಾಹರಣೆ.