ಬಡ ವಿಧವೆಯ ದುರ್ಬಲ ಜೋಪಡಿಯನ್ನು ಸಮತಟ್ಟುಗೊಳಿಸಿ, ಅಂದವಾದ ಮನೆಯಾಗಿ ಪರಿವರ್ತಿಸಿದ ಜಮಾಅತೆ ಇಸ್ಲಾಮೀ ಹಿಂದ್

0
1187

ಸನ್ಮಾರ್ಗ ವಾರ್ತೆ

ಪಾಣೆಮಂಗಳೂರು: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನೆಹರೂನಗರ ಎಂಬಲ್ಲಿ ತೀರಾ ಶಿಥಿಲಾವಸ್ಥೆಯಲ್ಲಿದ್ದ ಬಡ ವಿಧವೆಯ ಹಳೆಯ ಮನೆಯನ್ನು, ಸ್ವತಃ ಜಮಾಅತೆ ಇಸ್ಲಾಮಿಯ ಕಾರ್ಯಕರ್ತರೇ ಶ್ರಮದಾನದ ಮೂಲಕ ಸಮತಟ್ಟುಗೊಳಿಸಿದ್ದರು. ಬಳಿಕ, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ವತಿಯಿಂದ ಸಕಲ ಸವಲತ್ತುಗಳನ್ನೊಳಗೊಂಡ ಅಂದವಾದ ಮನೆ ನಿರ್ಮಿಸಿ, ಮನೆಯ ದಿನಬಳಕೆಗೆ ಬೇಕಾದ ಅಗತ್ಯದ ಸಾಮಗ್ರಿಗಳನ್ನು ಒದಗಿಸಿ, ಸರಳ ಕಾರ್ಯಕ್ರಮದಲ್ಲಿ ಇಂದು ಹಸ್ತಾಂತರಿಸಲಾಯಿತು.

ಬೋಳಂಗಡಿ ಹವ್ವಾ ಜುಮ್ಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಳ್ ಮದನಿಯವರು ಉದ್ಘಾಟಿಸಿ, ಇಂತಹ ಮಾನವೀಯ ಸೇವೆಗಳೂ ಇಸ್ಲಾಮಿನ ದೃಷ್ಟಿಯಲ್ಲಿ ಶ್ರೇಷ್ಠ ಆರಾಧನೆಗಳಾಗಿದ್ದು, ಅಲ್ಲಾಹನ ಬಳಿ ಅತ್ಯುನ್ನತ ಪ್ರತಿಫಲ ಸಿಗಲಿದೆ ಎಂದು ಮಾನವ ಸೇವೆಯ ಮಹತ್ವವನ್ನು ವಿವರಿಸಿದರು.

ನೆಹರೂ ನಗರ ಮಸೀದಿಯ ಅಧ್ಯಕ್ಷರಾದ ಪಿ. ಎಸ್‌. ಅಬ್ದುಲ್‌ ಹಮೀದ್‌ ಹಾಗೂ ಮಾಜಿ ಪಂಚಾಯತ್‌ ಸದಸ್ಯರಾದ ಸುಲೈಮಾನ್‌ರವರೂ ಸಂದರ್ಭೋಚಿತ ಹಿತನುಡಿಗಳನ್ನಾಡಿ, ಜಮಾಅತೆ ಇಸ್ಲಾಮಿಯ ಸೇವಾ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜ ಸೇವಾ ಮಂಗಳೂರು ವಿಭಾಗದ ಉಪಸಂಚಾಲಕರಾದ ಅಮೀರ್‌ ಕುದ್ರೋಳಿ, ಪಾಣೆಮಂಗಳೂರು ಸ್ಥಾನೀಯ ಜಮಾಅತೆ ಇಸ್ಲಾಮೀ ಹಿಂದ್‌ನ ಅಧ್ಯಕ್ಷರಾದ ಅಬ್ದುಲ್ಲಾ ಚೆಂಡಾಡಿಯವರೂ ಅನಿಸಿಕೆಗಳನ್ನು ಮುಂದಿಟ್ಟರು.

ಸಮಾಜ ಸೇವಾ ವಿಭಾಗದ ಸಂಚಾಲಕ ಎಂ. ಎಚ್‌. ಮುಸ್ತಫಾ ಬೋಳಂಗಡಿ, ಆದಮ್ ಇಸ್ಮಾಯಿಲ್ ಅಕ್ಕರಂಗಡಿ, ಹೆಚ್‌. ಆರ್‌. ಎಸ್‌. ಗ್ರೂಪ್‌ ಲೀಡರ್‌ ಸತ್ತಾರ್‌ ಗೂಡಿನ ಬಳಿ, ಸಲೀಮ್‌ ಬೋಳಂಗಡಿ, ಜಮಾಅತೆ ಇಸ್ಲಾಮೀ ಬಂಟ್ವಾಳ ವರ್ತುಲದ ಅಧ್ಯಕ್ಷರಾದ ಇಲ್ಯಾಸ್‌ ಅಹ್ಮದ್‌, ಶಂಶೀರ್‌ ಮೆಲ್ಕಾರ್‌, ಇಬ್ರಾಹೀಂ ಚೆಂಡಾಡಿ ಮತ್ತಿತರರು ಉಪಸ್ಥಿತರಿದ್ದರು.

ಪಾಣೆಮಂಗಳೂರು ಜಮಾಅತೆ ಇಸ್ಲಾಮ್ ನ ಕಾರ್ಯದರ್ಶಿ ಮುಖ್ತಾರ್‌ ಅಹ್ಮದ್‌ ಬೋಳಂಗಡಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವನ್ನರ್ಪಿಸಿದರು.

ಬಡ ವಿಧವೆಗೆ ಅಂದವಾದ ಮನೆ ನಿರ್ಮಿಸಲು ಆರ್ಥಿಕವಾಗಿ ಸಹಕರಿಸಿದ ಸರ್ವರಿಗೂ ಸೃಷ್ಟಿಕರ್ತನು ತಕ್ಕ ಪ್ರತಿಫಲ ನೀಡಲಿ ಎಂದು ಜಮಾಅತೆ ಇಸ್ಲಾಮೀ‌‌ ಹಿಂದ್ ಸಮಾಜ ಸೇವಾ ಘಟಕವು ತಿಳಿಸಿದೆ‌.