ಹಿಂದಿ ಹೇರಿಕೆ ಬಗ್ಗೆ ಹೇಳಿಕೆ: ಕ್ಷಮೆಯಾಚಿಸಿದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ

0
843

ಸನ್ಮಾರ್ಗ ವಾರ್ತೆ

ಬೆಂಗಳೂರು: ಮುಂಬರಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಜನಪ್ರಿಯ ಕವಿ ದೊಡ್ಡರಂಗೇಗೌಡ ಹಿಂದಿ ಹೇರಿಕೆಯ ಕುರಿತಂತೆ ನೀಡಿದ್ದ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸಿದ್ದಾರೆ.

ಬುಧವಾರ ಬೆಳಗ್ಗೆ ಅವರು ಕೈ ಬರಹದ ಹೇಳಿಕೆಯೊಂದನ್ನು ಎಲ್ಲಾ ಮಾಧ್ಯಮಗಳಿಗೆ ಕಳುಹಿಸಿಕೊಟ್ಟಿದಾರೆ.

ಅವರ ಕ್ಷಮೆಯಾಚನೆ ಪತ್ರದಲ್ಲಿ, “ನಾನೇನೂ ಯಾವುದೇ ಭಾಷೆಯನ್ನು ನನ್ನ ತಲೆಯ ಮೇಲೆ ಹೊತ್ತು ಮೆರೆಸುತ್ತಿಲ್ಲ. ನಾನು ಭಕ್ತಿಪೂರ್ವಕವಾಗಿ ನನ್ನ ಅಂತರಾಳದಿಂದ ಕನ್ನಡವನ್ನು ಆರಾಧಿಸುತ್ತೇನೆ, ಕನ್ನಡವನ್ನೇ ನನ್ನ ತಲೆಯ ಮೇಲೆ ಹೊತ್ತು ಮೆರೆಸುತ್ತೇನೆ” ಎಂದು ಹೇಳಿದ್ದಾರೆ.

“ಕನ್ನಡಿಗರ ಮೇಲೆ ಹಿಂದಿ ಭಾಷೆಯ ಹಾಗೂ ಇಂಗ್ಲಿಷ್ ಹೇರಿಕೆಯ ರೀತಿ ನೀತಿಯನ್ನು ನಾನು ಸಹಿಸುವುದಿಲ್ಲ. ನನ್ನ ಮಾತುಗಳು ಕನ್ನಡ ಜನರ ಮನಸ್ಸನ್ನು ನೋಯಿಸಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ ” ಎಂದು ಈ ಪತ್ರದಲ್ಲಿ ಬರೆದಿದ್ದಾರೆ.

ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ದೊಡ್ಡ ರಂಗೇಗೌಡರವರು ನೀಡಿದ್ದ ಹೇಳಿಕೆಗೆ ಕರ್ನಾಟಕದ ಎಲ್ಲಾ ಮೂಲೆಗಳಿಂದ ಕಟು ಟೀಕೆ ವ್ಯಕ್ತವಾಗಿತ್ತು.

ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಸಹಿತ ಹಲವರು ದೊಡ್ಡರಂಗೇಗೌಡರ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದರು.

ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೆ ಅವರ ಹೇಳಿಕೆಯ ಕರಿ ನೆರಳು ಬಿದ್ದಿತ್ತು. ಹಾವೇರಿಯಲ್ಲಿ ಪ್ರತಿಭಟನೆ ಮಾಡುವುದಾಗಿ ಹಲವು ಸಾಹಿತಿಗಳು, ಕನ್ನಡ ಪರ ಸಂಘಟಗಳು ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ನೀಡಿ, ಕ್ಷಮೆ ಯಾಚಿಸಿದ್ದಾರೆ.