ಅಸೂಯೆಯಿಂದ ದೂರವಿರಿ

0
636

ಲೇಖಕಿ: ಖದೀಜ ನುಸ್ರತ್

ಅಲ್ಲಾಹನು ಭೂಮಿಯ ಮೇಲೆ ಎಲ್ಲರಿಗೂ ವಿವಿಧ ರೀತಿಯ ಅನುಗ್ರಹಗಳನ್ನು ನೀಡಿರುವನು. ಎಲ್ಲರಿಗೂ ಒಂದೇ ರೀತಿಯ ಎಲ್ಲಾ ಅನುಗ್ರಹಗಳು ಸಿಗಬೇಕೆಂದಿಲ್ಲ. ಯಾರಿಗೆ ಏನು ನೀಡಬೇಕೆಂಬುದು ಅಲ್ಲಾಹನ ತೀರ್ಮಾನವಾಗಿದೆ. ಇನ್ನೊಬ್ಬರಲ್ಲಿರುವ ಎಲ್ಲಾ ಅನುಗ್ರಹಗಳು ನಮಗೆ ಸಿಗಬೇಕೆಂದು ಬಯಸುವುದು ಅತಿಯಾಸೆಯಾಗಿದೆ. ಈ ಅತಿಯಾಸೆಯು ಮುಂದುವರೆಯುತ್ತಾ ಮನಸ್ಸಿನಲ್ಲಿ ಅಸೂಯೆಯಾಗಿ ಮಾರ್ಪಡುತ್ತದೆ. ಅಸೂಯೆಯು ಸತ್ಯ ವಿಶ್ವಾಸದ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಭಾವನಾತ್ಮಕ ರೋಗವಾಗಿದೆ. ಮನಸ್ಸಿನಲ್ಲಿ ಸತ್ಯ ವಿಶ್ವಾಸ ಮತ್ತು ಅಸೂಯೆ ಒಂದುಗೂಡಲು ಸಾಧ್ಯವಿಲ್ಲ. ಅಲ್ಲಾಹನು ನಮಗೆ ನೀಡಿದುದರಲ್ಲಿ ನಾವು ಸಂತೃಪ್ತಗೊಳ್ಳಲು ಅಸಾಧ್ಯವಾದರೆ ಅದು ಸತ್ಯ ವಿಶ್ವಾಸದ ದೌರ್ಬಲ್ಯದ ಲಕ್ಷಣವಾಗಿದೆ.

ಒಬ್ಬ ವ್ಯಕ್ತಿ ನಿಮಗೆ ಏನೂ ಮಾಡದಿದ್ದರೂ ಅವರ ಬಗ್ಗೆ ನಕಾರಾತ್ಮಕವಾಗಿ ಆಲೋಚಿಸುವುದು. ಇನ್ನೊಬ್ಬರ ಕಷ್ಟದಲ್ಲಿ ಸಂತೋಷಪಡುವುದು. ನನಗೆ ಸಿಗದಿದ್ದರೂ ಪರವಾಗಿಲ್ಲ, ಇನ್ನೊಬ್ಬರಿಗೆ ಸಿಗಬಾರದು ಎಂಬ ಮನೋಭಾವ. ಇನ್ನೊಬ್ಬರ ಸಂತೋಷದಿಂದ ಸಂತೃಪ್ತರಾಗದಿರುವುದು, ಇನ್ನೊಬ್ಬರಲ್ಲಿ ಯಾವುದಾದರೂ ಒಳಿತು, ಅನುಗ್ರಹವನ್ನು ಕಂಡಾಗ ಅದರಲ್ಲಿ ತಪ್ಪು ಕಂಡು ಹಿಡಿಯಲು ಪ್ರತ್ನಿಸುವುದು, ಇನ್ನೊಬ್ಬರಲ್ಲಿರುವ ಅನುಗ್ರಹ ಅವರ ಬಳಿ ಇಲ್ಲದಾಗಲಿ ಎಂದು ಹಾರೈಸುವುದು ಇವೆಲ್ಲಾ ಅಸೂಯೆಯ ಲಕ್ಷಣವಾಗಿದೆ ಎಂದು ವಿದ್ವಾಂಸರು ಮತ್ತು ಮಾನಸಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ಲೌಖಿಕ ಜೀವನದಲ್ಲಿ ಇವರ ಉಪಜೀವನ ಸಾಧನಗಳನ್ನು ನಾವು ಇವರ ನಡುವೆ ಹಂಚಿದ್ದೇವೆ ಮತ್ತು ಇವರು ಪರಸ್ಪರರಿಂದ ಸೇವೆ ಪಡೆಯುವಂತಾಗಲು ನಾವು ಇವರಲ್ಲಿ ಕೆಲವರಿಗೆ ಇನ್ನು ಕೆಲವರಿಗಿಂತ ಅನೇಕ ಮೇಲ್ಮೆ ನೀಡಿರುವೆವು.”(ಪವಿತ್ರ ಕುರ್ ಆನ್ 43: 32)

ಅಸೂಯೆಗೆ ಬಹಳ ಸುದೀರ್ಘವಾದ ಇತಿಹಾಸವಿದೆ. ಪ್ರಪ್ರಥಮವಾಗಿ ಅಲ್ಲಾಹನು ಆದಮ್(ಅ) ರನ್ನು ಸೃಷ್ಟಿಸಿ ಅವರಿಗೆ ಉತ್ತಮ ಸ್ಥಾನಮಾನ ನೀಡಿ ಸಾಷ್ಟಾಂಗವೆರಗಲು ಹೇಳಿದಾಗ ಶೈತಾನನು ಅಸೂಯೆ ಪಟ್ಟು ಅಲ್ಲಾಹನ ಆದೇಶವನ್ನು ನಿರಾಕರಿಸಿದನು. ಭೂಮಿಯ ಮೇಲೆ ಉಂಟಾದ ಪ್ರಥಮ ಕೊಲೆಗೆ ಆದಮ್(ಅ)ರ ಮಕ್ಕಳ ನಡುವಿನ ಅಸೂಯೆಯೇ ಕಾರಣವಾಗಿತ್ತು. ಪ್ರವಾದಿ ಯಾಕೂಬ್(ಅ) ಪುತ್ರರ ನಡುವೆಯಿರುವ ಅಸೂಯೆ ಯೂಸುಫ್ (ಅ)ರನ್ನು ಬಾವಿಗೆ ಎಸೆಯಲು ಕಾರಣವಾಯಿತು.

ಅಸೂಯೆಯು ಇಂದು ಸಾರ್ವಜನಿಕವಾಗಿ ಎಲ್ಲರಲ್ಲೂ ಕಾಣಸಿಗುವ ಒಂದು ಮಾನಸಿಕ ರೋಗವಾಗಿದೆ. ಓರ್ವ ಪುರುಷನಿಗೆ ಇನ್ನೋರ್ವ ಪುರುಷನ ಸಂಪತ್ ಸೌಕರ್ಯಗಳನ್ನು ಕಂಡರೆ, ಓರ್ವ ಮಹಿಳೆಗೆ ಇನ್ನೋರ್ವ ಸುಂದರಿಯಾದ ಮಹಿಳೆಯ ಸೌಂದರ್ಯವನ್ನು ಕಂಡರೆ, ಓರ್ವ ವ್ಯಾಪಾರಿಗೆ ಇನ್ನೊಬ್ಬ ವ್ಯಾಪಾರಿಯ ಉತ್ತಮವಾದ ವ್ಯಾಪರವನ್ನು ಕಂಡರೆ, ಓರ್ವ ಪಂಡಿತನಿಗೆ ಇನ್ನೋರ್ವ ಪಂಡಿತನ ಪಾಂಡಿತ್ಯವನ್ನು ಕಂಡರೆ, ಒಂದು ಸಂಘಟನೆಗೆ ಮತ್ತು ಅದರ ನಾಯಕನಿಗೆ ಇನ್ನೊಂದು ಸಂಘಟನೆಯು ಮಾಡುವ ಉತ್ತಮ ಕೆಲಸಗಳನ್ನು ಕಂಡರೆ ಅಸೂಯೆಯುಂಟಾಗುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಜನರ ಸಂಪತ್ತು, ಸ್ಥಾನಮಾನ, ಮನೆ, ವಾಹನ, ಸೌಂದರ್ಯ, ವಸ್ತ್ರಾಭರಣ, ಸಂತಾನ, ಉತ್ತಮ ವೈವಾಹಿಕ ಸಂಬಂಧಗಳ ಬಗ್ಗೆ ಅಸೂಯೆ ಯುಂಟಾಗುವುದು ಸಹಜವಾಗಿರುತ್ತದೆ. ಎಲ್ಲರನ್ನೂ ಬೇರೆ ಬೆರೆ ರೀತಿಯಲ್ಲಿ ಸೃಷ್ಟಿಸಲಾಗಿದೆ. ಆಕಾರ, ಶರೀರದ ಆಕೃತಿ, ಬಣ್ಣದಲ್ಲಿ ಯಾರೂ ಸಮಾನರಲ್ಲ. ಅಲ್ಲಾಹನು ನಮಗೆ ನೀಡಿದ ಅನುಗ್ರಹಗಳನ್ನು ಗುರುತಿಸುತ್ತಾ ಅದರಲ್ಲಿ ಸಂಪೂರ್ಣವಾಗಿ ಸಂತೃಪ್ತ ಪಡಬೇಕು ಮತ್ತು ಕೃತಜ್ಞರಾಗಬೇಕು.

ಅಸೂಯೆಯು ಮನುಷ್ಯನ ವೈಯಕ್ತಿಕ, ಸಾಮೂಹಿಕ, ಸಾಮಾಜಿಕ ಜೀವನ ಹಾಗೂ ಕೌಟುಂಬಿಕ ಜೀವನವನ್ನು ಮತ್ತು ಮನಃಸ್ಸಮಾಧಾನವನ್ನು ನಾಶಪಡಿಸುತ್ತದೆ. ಮನುಷ್ಯರ ನಡುವಿನ ಸಂಬಂಧವನ್ನು ಶಿಥಿಲಗೊಳಿಸುತ್ತದೆ. ಮನಸ್ಸಿನಲ್ಲಿ ದ್ವೇಷ ಮತ್ತು ಶತ್ರುತ್ವ ಭಾವನೆಯನ್ನುಂಟು ಮಾಡುತ್ತದೆ. ತಮ್ಮ ವರ್ತನೆಯ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದವರನ್ನಾಗಿ ಮಾಡುತ್ತದೆ. ನಮ್ಮ ಜೀವನ, ನಮ್ಮಲ್ಲಿರುವ ಅನುಗ್ರಹವನ್ನು ನೋಡದೆ ಇನ್ನೊಬ್ಬರಲ್ಲಿರುವುದನ್ನು ನೋಡುವುದು ಮನುಷ್ಯನಲ್ಲಿರುವ ಒಂದು ದೌರ್ಬಲ್ಯವಾಗಿದೆ. ನಿಮ್ಮ ಮೇಲೆ ಏನಾದರೂ ಅನ್ಯಾಯ ಮಾಡಿದಾಗ ಕೋಪಗೊಳ್ಳುವುದು ಮನುಷ್ಯ ಸಹಜವಾಗಿರುತ್ತದೆ. ಆದರೆ ಅದನ್ನು ಕ್ಷಮಿಸಿದಾಗ ಮತ್ತು ನಿಯಂತ್ರಿಸಿದಾಗ ಅದು ಸತ್ಕರ್ಮವಾಗಿ ಮಾರ್ಪಾಡಾಗುತ್ತದೆ. ಆದರೆ ಅಸೂಯೆಯ ವಾಸ್ತವಿಕತೆಯೇ ಬೇರೆಯಾಗಿದೆ. ಹೃದಯದಲ್ಲಿ ಅಸೂಯೆಯ ಅಸ್ತಿತ್ವವು ಪಾಪವಾಗಿದೆ. ಹೃದಯದಲ್ಲಿ ಅಸೂಯೆಯುಂಟಾಗುವುದು ಮಾನವನ ಭಾವನೆಗಳ ದೌರ್ಬಲ್ಯವಾಗಿದೆ. ಉದಾತ್ತ ಮನುಷ್ಯರು ಅದನ್ನು ಅಡಗಿಸುತ್ತಾರೆ. ದುರ್ಬಲ ವಿಶ್ವಾಸಿಗಳಿಗೆ ಅದನ್ನು ಅಡಗಿಸಲು ಸಾಧ್ಯವಾಗುವುದಿಲ್ಲ. ಮಾತಿನ ಮೂಲಕ ಪ್ರದರ್ಶಿಸುತ್ತಾರೆ. ಜನರ ಮಧ್ಯೆ ಇನ್ನೊಬ್ಬರಿಗೆ ಕೆಡುಕಾಗಲು ಹೇಳುತ್ತಾರೆ ಮತ್ತು ಆದಕ್ಕೆ ಬೇಕಾದ ಯೊಜನೆಗಳನ್ನು ಹಾಕುತ್ತಾರೆ. ಸತ್ಯ ವಿಶ್ವಾಸಿಗಳು ಮಾಡುವ ಮತ್ತು ಹೇಳುವ ಪ್ರತಿಯೊಂದು ಮಾತಿಗೆ ಜವಾಬ್ದಾರರಾಗಿರುತ್ತಾರೆ ಮತ್ತು ಅಂತ್ಯ ದಿನದಂದು ಅದರ ಕುರಿತು ವಿಚಾರಣೆ ನಡೆಸಲಾಗುವುದು.

“ಅಸೂಯೆಯಿಂದ ದೂರವುಳಿಯಿರಿ. ಏಕೆಂದರೆ ಬೆಂಕಿಯು ಕಟ್ಟಿಗೆಯನ್ನು ನುಂಗುವಂತೆ ಅಸೂಯೆಯು ಒಳಿತನ್ನು ನುಂಗಿಬಿಡುತ್ತದೆ.”- ಪ್ರವಾದಿ ಮುಹಮ್ಮದ್(ಸ)

ನೀವು ಯಾರದೇ ಸಂಪತ್ತು, ಸ್ಥಾನಮಾನ, ಮನೆ, ಉದ್ಯೋಗ, ವಿಜಯ, ವ್ಯಾಪಾರ, ವಾಹನ, ವಸ್ತ್ರಾಭರಣ, ಮಕ್ಕಳನ್ನು ಕಂಡು ಅಸೂಯೆ ಪಡಬೇಡಿರಿ. ನೀವು ಅವರ ಒಂದು ಮುಖವನ್ನು ಮಾತ್ರ ನೋಡುತ್ತಿದ್ದೀರಿ. ಅವರು ಅನುಭವಿಸುವ ನೋವು, ಕಷ್ಟ, ದುಃಖ, ಕೊರತೆ, ಮಾನಸಿಕ ಒತ್ತಡ, ಉದ್ವೇಗ ನಿಮಗೆ ಕಾಣುವುದಿಲ್ಲ. ಅವರು ಆ ಸ್ಥಾನಕ್ಕೆ ತಲುಪಲು ಹಲವಾರು ಕಷ್ಟಗಳನ್ನು ಅನುಭವಿಸಿರುತ್ತಾರೆ. ನೀವು ಅಸೂಯೆಪಡಲು ಕಾರಣವಾದರೂ ಏನು? ಅವರು ನಿಮಗೆ ಮಾಡಿದ ಅನ್ಯಾಯವೇನು? ಅಲ್ಲಾಹನು ಯಾರಿಗಾದರೂ ಏನಾದರೂ ದಯಪಾಲಿಸಿದಾಗ ನೀವೇಕೆ ದುಃಖಿತರಾಗುತ್ತೀರಿ? ಅಲ್ಲಾಹನು ಇನ್ನೊಬ್ಬರಿಗೆ ನೀಡಿದ ಅನುಗ್ರಹವನ್ನು ಅಂಗೀಕರಿಸಿರಿ. ಅಲ್ಲಾಹನಿಗೆ ಸರ್ವಸ್ತುತಿ ಹೇಳಿರಿ. ಇನ್ನೊಬ್ಬರ ಸಂತೋಷ, ವಿಜಯದಲ್ಲಿ ಸಂತೋಷಪಡಿರಿ. ನಿಮಗೆ ಅದು ಬೇಕೆಂದೆನಿಸಿದರೆ ಅಲ್ಲಾಹನಲ್ಲಿ ಪ್ರಾರ್ಥಿಸಿರಿ ಮತ್ತು ನೀವು ಅವುಗಳನ್ನು ಗಳಿಸಲು ಅವಿರತವಾಗಿ ಶ್ರಮ ಪಡಬೇಕು.

“ನಾವು ಇವರ ಪೈಕಿ ನಾನಾ ವಿಧದ ಜನರಿಗೆ ನೀಡುವ ಐಹಿಕ ಭೋಗ ವಿಲಾಸಗಳತ್ತ ಕಣ್ಣೆತ್ತಿಯೂ ನೋಡಬೇಡಿರಿ. ಅವುಗಳನ್ನಂತು ನಾವು ಪರೀಕ್ಷಿಸಲಿಕ್ಕಾಗಿ ಅವರಿಗೆ ಕೊಟ್ಟಿರುತ್ತೇವೆ ಮತ್ತು ನಿನ್ನ ಪ್ರಭು ನೀಡಿರುವ ಧರ್ಮಸಮ್ಮತ ಜೀವನಾಧಾರವೇ ಶ್ರೇಷ್ಠವೂ ಶಾಶ್ವತವೂ ಆಗಿರುತ್ತದೆ.”(ಪವಿತ್ರ ಕುರ್‌ಆನ್ 20:131)

ಅಸೂಯೆಯು ಆಂತರಿಕವಾಗಿ ನಾವು ನಮ್ಮೊಂದಿಗೆ ಮತ್ತು ನಮ್ಮ ಆತ್ಮದ ವಿರುದ್ಧ ಮಾಡುವ ಹೋರಾಟವಾಗಿದೆ. ಯಾರೂ ಅಪರಿಚಿತರೊಂದಿಗೆ ಅಸೂಯೆ ಪಡುವುದಿಲ್ಲ. ತಮ್ಮ ದೈನಂದಿನ ಜೀವನದಲ್ಲಿ ಕಾಣುವ ಮತ್ತು ಮಾತನಾಡುತ್ತಿರುವ ಸಂಬಂಧಿಕರು, ಸ್ನೇಹಿತರೊಂದಿಗೆ ಮಾತ್ರ ಜನರು ಅಸೂಯೆ ಪಡುತ್ತಾರೆ. ಕೆಲವೊಮ್ಮೆ ತಮಗೆ ಯಾವಾಗಲೂ ಉಪಕಾರ ಮಾಡುವವರು ನಮ್ಮ ಅಗತ್ಯದ ಸಂದರ್ಭದಲ್ಲಿ ಸಹಾಯ ಮಾಡದಿದ್ದರೆ ಅವರ ಮೇಲೆ ಅಸೂಯೆಯುಂಟಾಗುತ್ತದೆ. ಅಸೂಯೆಯೆಂಬುದು ನಮಗೇ ನಾವೇ ಮಾಡುವ ನಷ್ಟ ಮತ್ತು ತೊಂದರೆ ಕೊಡುವ ಮೂರ್ಖತನವಾಗಿದೆ. ನಮ್ಮ ಆತ್ಮ ಮತ್ತು ಹೃದಯದ ಮೇಲ್ವಿಚಾರಕರು ನಾವೇ. ಯಾವಾಗಲೂ ಅಸೂಯೆಪಡುವವರ ಆಪತ್ತಿನಿಂದ ರಕ್ಷಣೆಪಡೆಯಲು ದಿನಂಪ್ರತಿ ಹಗಲು ರಾತ್ರಿ ಪ್ರಾರ್ಥಿಸುತ್ತಿರಬೇಕು ಎಂದು ಕುರ್ ಆನ್ ಕಲಿಸುತ್ತದೆ.

“ಮತ್ತು ಮತ್ಸರಿಯು ಮತ್ಸರ ಪಡುವಾಗ ಅವನ ಕೇಡಿನಿಂದ. (ಅಭಯ ಯಾಚಿಸುತ್ತೇನೆ).” (ಪವಿತ್ರ ಕುರ್ ಆನ್ 113: 5)

ಎಲ್ಲರಿಗೂ ನೀಡುವವನು ಅಲ್ಲಾಹನಾಗಿರುತ್ತಾನೆ, ಅವನು ನೀಡಿದ್ದನ್ನು ತಡೆಯಲು ಮತ್ತು ಅವನು ತಡೆದುದ್ದನ್ನು ನೀಡಲು ಯಾರಿಗೂ ಸಾಧ್ಯವಿಲ್ಲ ಎಂಬ ದೃಢವಾದ ವಿಶ್ವಾಸ ಮನಸ್ಸಿನಲ್ಲಿರಬೇಕು. ನಮಗೆ ನೀಡಲಾಗಿರುವ ಎಲ್ಲಾ ಅನುಗ್ರಹಗಳ ಕುರಿತು ಪರಲೋಕದಲ್ಲಿ ವಿಚಾರಣೆ ನಡೆಯಲಿದೆ ಎಂಬ ಭಯ ಮನಸ್ಸಿನಲ್ಲಿದ್ದರೆ ಅಸೂಯೆಯುಂಟಾಗಲು ಸಾಧ್ಯವಿಲ್ಲ. ಅಲ್ಲಾಹನ ಅಭಯ ಯಾಚಿಸುವುದರಿಂದ, ಕುರ್ ಆನ್ ಪಾರಾಯಣದಿಂದ ಮತ್ತು ಅಲ್ಲಾಹನ ಸ್ಮರಣೆಯಿಂದ ಹೃದಯವನ್ನು ಅಸೂಯೆಯಿಂದ ಶುದ್ಧೀಕರಿಸಬಹುದಾಗಿದೆ. ನಿಮಗೆ ಯಾರದಾದರೂ ಬಗ್ಗೆ ಅಸೂಯೆಯುಂಟಾದರೆ ಅವರ ಒಳಿತಿಗಾಗಿ ಪ್ರಾರ್ಥಿಸಿರಿ. ಮಾಶಾ ಅಲ್ಲಾಹ್, ತಬಾರಕಲ್ಲಾಹ್ ಅವರ ಸಂಪತ್ತು, ಅನುಗ್ರಹದಲ್ಲಿ ಅಲ್ಲಾಹನು ಸಮೃದ್ಧಿಯನ್ನುಂಟು ಮಾಡಲಿ ಎಂದು ಹೇಳಿರಿ. ಅವರಿಗೆ ಅಲ್ಲಾಹನು ಇನ್ನೂ ದಯಪಾಲಿಸಲಿ ಎಂದು ಹಾರೈಸಿರಿ.