ಜಮ್ಮು ಮತ್ತು ಕಾಶ್ಮೀರದಲ್ಲಿ ಖುತ್ಬಾ ವಿಷಯವನ್ನು ಏಕರೂಪಗೊಳಿಸುವ ಕ್ರಮ; ವಿಭಜನೆಯನ್ನು ತಪ್ಪಿಸುವುದೇ ಗುರಿ ಎಂದ ವಕ್ಫ್ ಮಂಡಳಿ

0
139

ಸನ್ಮಾರ್ಗ ವಾರ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಸೀದಿಗಳು, ದರ್ಗಾಗಳು, ಶುಕ್ರವಾರದ ಪ್ರಾರ್ಥನೆಗಳು ಮತ್ತು ಇತರ ಧಾರ್ಮಿಕ ಸಂದರ್ಭಗಳಲ್ಲಿ ನೀಡಲಾಗುವ ಧರ್ಮೋಪದೇಶಗಳಿಗೆ ಸಾಮಾನ್ಯ ವಿಷಯಗಳನ್ನು ನಿರ್ಧರಿಸಲು ಕೋರ್ ಸಮಿತಿಯನ್ನು ರಚಿಸಲು ಜಮ್ಮು ಮತ್ತು ಕಾಶ್ಮೀರ ವಕ್ಫ್ ಮಂಡಳಿ ನಿರ್ಧರಿಸಿದೆ. ಈ ಸಮಿತಿಯಲ್ಲಿ ಇಮಾಮ್‌ಗಳು ಮತ್ತು ಇಸ್ಲಾಮಿಕ್ ವಿದ್ವಾಂಸರು ಇರುತ್ತಾರೆ ಎಂದು ವರದಿಯಾಗಿದೆ.

ಶನಿವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಕ್ಫ್ ಮಂಡಳಿಯ ಅಧ್ಯಕ್ಷೆ ಡಾ. ಸೈಯದ್ ದರಕ್ಷಾನ್ ಅಂದ್ರಬಿ ‘ದಿ ಟೈಮ್ಸ್ ಆಫ್ ಇಂಡಿಯಾ’ಗೆ ತಿಳಿಸಿದ್ದಾರೆ. ಇಮಾಮ್‌ಗಳು ಮತ್ತು ಧಾರ್ಮಿಕ ವಿದ್ವಾಂಸರ ಸಲಹೆಗಳನ್ನು ಪರಿಗಣಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು, ಹಾಗೂ ಸಭೆಯಲ್ಲಿ ಸುಮಾರು 1,500 ಮುಫ್ತಿಗಳು, ಇಮಾಮ್‌ಗಳು ಮತ್ತು ಇಸ್ಲಾಮಿಕ್ ವಿದ್ವಾಂಸರು ಭಾಗವಹಿಸಿದ್ದರು.

ಏಕರೂಪದ ಪ್ರವಚನಗಳಲ್ಲಿ ಸೇರಿಸಬೇಕಾದ ವಿಷಯಗಳನ್ನು ನಿರ್ಧರಿಸುವ ಸಂಪೂರ್ಣ ಜವಾಬ್ದಾರಿಯನ್ನು ಈ ಸಮಿತಿಯು ಹೊಂದಿರುತ್ತದೆ ಮತ್ತು ಈ ವಿಷಯದಲ್ಲಿ ಸರ್ಕಾರಿ ಅಧಿಕಾರಿಗಳ ಯಾವುದೇ ಪಾತ್ರವಿರುವುದಿಲ್ಲ ಎಂದು ಅವರು ತಿಳಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಚಲಿತದಲ್ಲಿರುವ ವಿವಿಧ ಸಾಮಾಜಿಕ ಸಮಸ್ಯೆಗಳ ವಿರುದ್ಧ, ವಿಶೇಷವಾಗಿ ಮಾದಕ ದ್ರವ್ಯ ದುರುಪಯೋಗ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂರುಪದಿಸುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ಧರ್ಮಗಳು ಮತ್ತು ಚಿಂತನಾ ಧಾರೆಯ ಜನ ವಾಸಿಸುತ್ತಿದ್ದಾರೆ ಹಾಗೂ ಪ್ರತಿಯೊಬ್ಬರ ನಂಬಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಮಂಡಳಿಗಿಲ್ಲ ಎಂದು ಡಾ. ಸೈಯದ್ ದರಕ್ಷಾನ್ ಸ್ಪಷ್ಟಪಡಿಸಿದರು. ಪಂಥೀಯತೆಯ ಆಧಾರದ ಮೇಲೆ ಸಮಾಜದಲ್ಲಿ ವಿಭಜನೆಯಾಗುವುದನ್ನು ತಪ್ಪಿಸುವುದೇ ಹೊಸ ವ್ಯವಸ್ಥೆಯ ಗುರಿಯಾಗಿದೆ ಎಂದು ಅವರು ಹೇಳಿದರು.

ಮಸೀದಿಗಳು ಧಾರ್ಮಿಕ ಜ್ಞಾನ ಮತ್ತು ಕಲಿಕೆಯನ್ನು ನೀಡುವ ಕೇಂದ್ರಗಳಾಗಬೇಕು ಮತ್ತು ಸಾಮಾನ್ಯ ವಿಷಯಗಳ ಕುರಿತಾದ ಉಪನ್ಯಾಸಗಳು ಈ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ವಕ್ಫ್ ಮಂಡಳಿ ಅಧ್ಯಕ್ಷರು ಹೇಳಿದರು. ಆದಾಗ್ಯೂ, ಸಾಮಾನ್ಯ ವಿಷಯಗಳನ್ನು ಸೂಚಿಸುವ ಈ ಕ್ರಮವು ನಂತರ ಧಾರ್ಮಿಕ ಉಪನ್ಯಾಸಗಳ ವಿಷಯವನ್ನು ನಿಯಂತ್ರಿಸುವ ವಿನ್ಯಾಸವಾಗಿ ಬದಲಾಗಬಹುದು ಎಂಬ ಕಳವಳಗಳೂ ವ್ಯಕ್ತವಾಗಿವೆ.