ಸನ್ಮಾರ್ಗ ವಾರ್ತೆ
ಗುಜರಾತ್: ರಾಜಕೀಯ ಮುಖಂಡರು ಹಾಗೂ ಕೆಲವು ಸ್ಥಾಪಿತ ಹಿತಾಸಕ್ತಿಗಳು ಇಸ್ಲಾಮ್ ಧರ್ಮದ ಜಿಹಾದ್ ಪದವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಇಲ್ಲಿನ ಅಲ್ಪಸಂಖ್ಯಾತ ಸಮನ್ವಯ ಸಮಿತಿಯು ಗುಜರಾತ್ ರಾಜ್ಯಪಾಲ ಆಚಾರ್ಯ ದೇವ್ರತ್ ಅವರಿಗೆ ಪತ್ರ ಬರೆದಿದೆ.
‘ಜಿಹಾದ್’ ಪದದ ದುರುಪಯೋಗವನ್ನು ನಿಲ್ಲಿಸುವಂತೆ ಒತ್ತಾಯಿಸಿರುವ ಸಮಿತಿಯ ಮುಖಂಡರು, ಮುಸ್ಲಿಂ ಸಮುದಾಯವನ್ನು ಕೆಣಕಲು ಮತ್ತು ವಿವಿಧ ಸಮುದಾಯಗಳಲ್ಲಿ ದ್ವೇಷವನ್ನು ಹರಡಲು ‘ಜಿಹಾದ್’ ಪದವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಜನರು ಮತ್ತು ರಾಜಕೀಯ ಪ್ರತಿನಿಧಿಗಳ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರನ್ನು ಆಗ್ರಹಿಸಿದೆ ಎಂದು ಮುಸ್ಲಿಂ ಮಿರರ್ ಸುದ್ದಿಸಂಸ್ಥೆ ತಿಳಿಸಿದೆ.
ಎನ್ಜಿಓ ನ ಕನ್ವೀನರ್ ಆಗಿರುವ ಮುಜಾಹಿದ್ ನಫೀಸ್, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಭಾನುವಾರ ವಡೋದರಾದಲ್ಲಿ ಮಾಡಿದ ಭಾಷಣದ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿದರು. ಲವ್ ಜಿಹಾದ್ ನ ಹೆಸರಿನಲ್ಲಿ ನಡೆಯುವ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ಅನುಮತಿಸದಿರಲು ಸರ್ಕಾರ ಕಾನೂನು ತರಲಿದೆ ಎಂದು ಹೇಳಿದ್ದರು.
ರೂಪಾನಿ ಅವರು ‘ಜಿಹಾದ್’ ಪದವನ್ನು ಉದ್ದೇಶಪೂರ್ವಕವಾಗಿ ಬಳಸಿರುವುದು ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸಿದೆ ಮತ್ತು ಇದು ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದವರು ಹೇಳಿದ್ದಾರೆ.
“ಜಿಹಾದ್” ಎಂಬ ಪದವನ್ನು ಹಲವಾರು ಇತರ ರಾಜಕಾರಣಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರು ಸಾಂವಿಧಾನಿಕ ಸ್ಥಾನಗಳನ್ನು ಹೊಂದಿದ್ದಾರೆ ಮತ್ತು ಸಂವಿಧಾನದ ಶಕ್ತಿಗಳನ್ನು ಉಳಿಸುವುದು ಅವರ ಪ್ರಮುಖ ಕೆಲಸವಾಗಿದೆ ಎಂದು ನಫೀಸ್ ಹೇಳಿದ್ದಾರೆ.
“ಲವ್ ಜಿಹಾದ್” ಕುರಿತು ನಡೆಯುತ್ತಿರುವ ವಿವಾದ ಗುಜರಾತ್ನಲ್ಲಿ ಮುಂಬರುವ ನಾಗರಿಕ ಚುನಾವಣೆಗಳ ಮೇಲೆ ಪ್ರಭಾವ ಬೀರುವ ಗುರಿಯನ್ನು ಹೊಂದಿದೆ ಎಂದು ಎನ್ ಜಿ ಓ ಹೇಳಿದೆ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಿ, ಅವರು ಜಿಹಾದ್ನ ಅರ್ಥವನ್ನು ತಿಳಿದುಕೊಳ್ಳಲು ಯಾವುದಾದರೂ ಮದರಸಾವನ್ನು ಸಂಪರ್ಕಿಸಬಹುದಿತ್ತು ಮತ್ತು ಇಸ್ಲಾಮಿನಲ್ಲಿ ‘ಹೋರಾಟ’ಕ್ಕೆ ಯಾವ ಪ್ರಾಮುಖ್ಯತೆ ಇದೆ ಎಂದು ಅವರು ತಿಳಿಯಬಹುದಿತ್ತು ಎಂದು ಅಲ್ಪಸಂಖ್ಯಾತ ಸಮನ್ವಯ ಸಮಿತಿಯು ಹೇಳಿದೆ.












