ಎಲ್ಲಾ ಧರ್ಮಗಳ ಸಾರ ಜನರ ಉನ್ನತೀಕರಣ: ಅಣ್ಣಾ ವಿನಯಚಂದ್ರ

0
325

ಗಾಂಧಿ ವಿಚಾರ ವೇದಿಕೆಯಿಂದ ಧಾರ್ಮಿಕತೆಯ ಅರಿವು ವಿಚಾರ ಸಂಕಿರಣ

ಸನ್ಮಾರ್ಗ ವಾರ್ತೆ

ಸುಳ್ಯ: ಈ ದೇಶದಲ್ಲಿ ದಿನವೂ 38 ಕೋಟಿ ಜನರು ದಿನನಿತ್ಯ ಅರೆಹೊಟ್ಟೆಯಲ್ಲಿ ಮಲಗುತ್ತಾರೆ ಎಂಬ ಅಂಕಿಅಂಶ ಇದೆ.ಅನೇಕರಿಗೆ ಉದ್ಯೋಗ, ಸೂರಿನ ಕೊರತೆ ಇದೆ. ಭವಿಷ್ಯದ ಆತಂಕ ಅವರಿಗೆ ಇದೆ. ಅದರಲ್ಲಿ ಧರ್ಮ, ಜಾತಿಯ ವಿಭಜನೆಯೇ ಇಲ್ಲ. ಈಗಲೂ ಸಂಘರ್ಷ ಮುಂದುವರಿದರೆ ಈ ಜನರ ಬದುಕು ಸುಧಾರಣೆ ಹೇಗೆ ? ಈ ಬಗ್ಗೆ ಯೋಚನೆ ಆರಂಭವಾಗಬೇಕಿದೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ, ಗಾಂಧಿವಿಚಾರ ವೇದಿಕೆ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ ಹೇಳಿದರು.

ಅವರು ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಐವತ್ತೊಕ್ಲು ಎಣ್ಮೂರು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸ್ಜಿದ್‌ ನ ಸಫಾ ಅಡಿಟೋರಿಯಂನಲ್ಲಿ ಶನಿವಾರ ನಡೆದ ಧಾರ್ಮಿಕತೆಯ ಅರಿವು ವಿಚಾರ ಸಂಕಿರಣದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲಾ ಧರ್ಮಗಳ ಸಾರ ಜನರ ಉನ್ನತೀಕರಣ, ಜೀವನ ಉನ್ನತೀಕರಣ. ಇದಕ್ಕಾಗಿ ವಿವಿಧ ಪೂಜಾ ಪದ್ಧತಿಗಳು. ಹೀಗಾಗಿ ಪೂಜಾ ಪದ್ಧತಿಗಳಲ್ಲಿ ಸಂಘರ್ಷ ಇರಬಾರದಿತ್ತು, ಆದರೆ ಎಲ್ಲೆಡೆಯೂ ಇಂದು ಇದಕ್ಕಾಗಿಯೇ ಸಂಘರ್ಷ ನಡೆಯುತ್ತಿದೆ. ಇದಕ್ಕೆ ಕಾರಣ ಧರ್ಮಗಳ ಅಧ್ಯಯನ ಕೊರತೆ. ವೈಚಾರಿಕತೆಗಳು ಚಿಂತನೆ ಮಾತ್ರಾ ಆಗಬಾರದು, ಅದು ಪ್ರಾಕ್ಟಿಕಲ್‌ ಆಗುವತ್ತ ಹೆಜ್ಜೆಗಳು ಇಡಬೇಕು. ಸಮಾಜದ ಸ್ವಾಸ್ಥ್ಯದ ಕಡೆಗೆ ಎಲ್ಲರ ದೃಷ್ಟಿ ಅಗತ್ಯ ಎಂದು ವಿನಯಚಂದ್ರ ಹೇಳಿದರು.

ಅತಿಥಿಯಾಗಿದ್ದ ಲೇಖಕ ಮುಸ್ತಾಕ್‌ ಹೆನ್ನಾಬೈಲು ಮಾತನಾಡಿ, ಇತಿಹಾಸ, ಪುರಾಣಗಳನ್ನು ಗಮನಿಸಿದರೆ ಪ್ರತೀ‌ ಕಾಲಘಟ್ಟದಲ್ಲೂ ಸಂಘರ್ಷ ನಡೆದಿದೆ. ಸಂಘರ್ಷ ಇಲ್ಲದೆಯೇ ಮನುಷ್ಯ ಬದುಕಿದ ಇತಿಹಾಸ ಇಲ್ಲ. ಆದರ್ಶ ಪುರುಷರ ನೆರಳಲ್ಲಿಯೇ ಜಗಳವಾಗಿದೆ.ಪ್ರತೀ ಕಾಲಘಟ್ಟದಲ್ಲೂ ಸರ್ವ ಸಮ್ಮತ ವ್ಯಕ್ತಿ ಸಿಗಲಿಲ್ಲ. ಇದೇ ವೇಳೆಯೇ ಈ ಸಂಘರ್ಷಗಳನ್ನು ತಡೆಯುವ ವ್ತಕ್ತಿಗಳೂ ಹುಟ್ಟಿಕೊಂಡಿದ್ದಾರೆ. ಇಂದು ಧರ್ಮಗಳ ನಡುವಿನ ಹೊಡೆದಾಟ ಇರುವುದು ರಾಜಕೀಯ ಪ್ರೇರಿತ.

ಧರ್ಮ, ದೇವರು ಎರಡು ಎನ್ನುವುದೇ ಅಜ್ಞಾನದ ಆರಾಧನೆ, ವಿವೇಚನೆ ಇದ್ದಾಗ ಯಾವ ಸಂಘರ್ಷವೂ ನಡೆಯದು ಎಂದರು. ಧರ್ಮ ಎನ್ನುವುದು ವಿಸ್ತಾರ, ಅಲ್ಲಿ ಜಗಳಕ್ಕೆ ಆಸ್ಪದವೇ ಇಲ್ಲ, ಇದಕ್ಕೆ ಧರ್ಮ ಕಾರಣ ಅಲ್ಲ, ಧರ್ಮದ ಅರಿವು ಕಾರಣವಾಗಿದೆ. ಧರ್ಮವನ್ನು ಅನುಸರಿಸುವವರು ಧರ್ಮವನ್ನು ವಿಕಾರ ಮಾಡುತ್ತಿರುವುದು ಸಮಸ್ಯೆ ಎಂದರು. ಯಾವತ್ತೂ ಹಿಂದೂಗಳಿಂದ ಮುಸ್ಲಿಮರಿಗೆ, ಮುಸ್ಲಿಮರಿಂದ ಹಿಂದೂಗಳಿಗೆ ಅನ್ಯಾಯಗಳು ನಡೆಯುವುದಿಲ್ಲ. ಆದರೆ ರಾಜಕೀಯ ಶೋಷಣೆಗಳು ಇದನ್ನು ಹುಟ್ಟುಹಾಕುತ್ತವೆ. ಒಂದು ದೇಶದ ಯಾವುದೇ ಆಂತರಿಕ ಗಲಭೆಗೆ ಸರ್ಕಾರವೇ ಕಾರಣ, ಯಾರೇ ಇರಲಿ ಗಲಭೆ ನಡೆದಾಗ ಏಕೆ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಶ್ನಿಸಿದ ಅವರು ಇಂದು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಏನಾದರೂ ಮಾತನಾಡುವುದೇ ಸಮಸ್ಯೆಯಾಗಿದೆ. ಸಂಘರ್ಷಕ್ಕೆ ಕಾರಣವಾಗುತ್ತಿದೆ. ಅದರಿಂದ ಸಾಧನೆಯಾದರೂ ಏನು ಎಂದು ಹೇಳಿದರು.

ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಲೋಕದ ಉಪಯೋಗಕ್ಕೆ ಧರ್ಮ. ಧರ್ಮದ ಮರ್ಮ ಅರಿತರೆ ಹತ್ತು ಜನರಿಗೆ ಉಪಯೋಗ. ಅಹಂಕಾರಿ, ಕ್ರೋಧ, ಲೊಬಿ ,‌ಹುಚ್ಚ ಸೇರಿದಂತೆ ಇಂತಹ ಮನೋವೃತ್ತಿಯವರಿಗೆ ಧರ್ಮದ ತಿರುಳು ಅರಿಯದು, ಅವರಿಗೆ ತಿಳಿಹೇಳಲೂ ಬಾರದು ಎಂದು ಜ್ಞಾನಿಗಳು ಹೇಳಿದ್ದಾರೆ. ಸಕಾರಾತ್ಮಕ ಚಿಂತನೆಯವನಿಗೆ ಧರ್ಮ ಅರಿವು ಸಾಧ್ಯವಾಗುತ್ತದೆ, ಅಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಐವತ್ತೊಕ್ಲು ಎಣ್ಮೂರು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸ್ಜಿದ್‌ ಧರ್ಮಗುರು ಅಹ್ಮದ್ ಕಬೀರ್ ಅಮ್ಜಡಿ ಮಾತನಾಡಿ ಸಮಾಜವು ತಪ್ಪನ್ನು‌ತಪ್ಪಾಗಿಯೇ ನೋಡಬೇಕು. ತಪ್ಪನ್ನು ಸಮರ್ಥನೆಯೂ ಸರಿಯಲ್ಲ. ಉತ್ತಮ ಕಾರ್ಯಕ್ಕೆ ಪ್ರೋತ್ಸಾಹಿಸಬೇಕು. ಧರ್ಮಗಳ ತಿರುಳು ಗೌರವಿಸುವ ಮನೋಭಾವ ಬೆಳೆಯಬೇಕು, ನೋಡುವ ನೋಟಗಳು ಬದಲಾಗಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಗುರುಪ್ರಸಾದ್‌ ಪಂಜ ಮಾತನಾಡಿ ಮನುಷ್ಯರನ್ನು ಅರ್ಥ ಮಾಡಿಕೊಂಡು ಹೆಜ್ಜೆ ಇರಿಸಿದಾಗ ಬದಲಾವಣೆ ಸಾಧ್ಯ ಇದೆ. ಧರ್ಮ ಎನ್ನುವುದು ಅರಿವು, ಈ ಅರಿವು ಪ್ರತಿಯೊಬ್ಬನಲ್ಲೂ ಬೆಳೆದಾಗ ಪರಿವರ್ತನೆ ಸಾಧ್ಯವಿದೆ. ಈ ಜಗದ ಸೃಷ್ಟಿ ಅಂದವಾಗಿದೆ, ಆದರೆ ಅದನ್ನು ವಿರೂಪ ಮಾಡಲಾಗುತ್ತಿದೆ, ಜಗತ್ತನ್ನು ನೋಡುವ ದೃಷ್ಟಿಯ ಕಡೆಗೆ ಗಮನಿಸಬೇಕು ಎಂದರು.

ಪತ್ರಕರ್ತ ಇಕ್ಬಾಲ್‌ ಬಾಳಿಲ ಮಾತನಾಡಿ ರಾಜಕೀಯ ಕಾರಣಕ್ಕಾಗಿ ಧರ್ಮವನ್ನು ಬಳಕೆ ಮಾಡಲಾಗುತ್ತಿದೆ. ಧರ್ಮದ ಆಚರಣೆಯಲ್ಲಿ ಇರುವವರಿಗೆ ಕೋಮುವಾದ ಸಾಧ್ಯವಿಲ್ಲ. ಮಕ್ಕಳ ಹೃದಯಲ್ಲಿ ಗಾಂಧಿ ವಿಚಾರ ಇಂದು ತರಬೇಕಾಗಿದೆ. ಇಂದಿನ ದಿನ ಕ್ಯಾಂಪಸ್ ಒಳಗಡೆ ಗಾಂಧಿ ಚಿಂತನೆಗಳು ಬೆಳೆಯಬೇಕು ಎಂದರು.

ಸಭೆಯಲ್ಲಿ ಗಾಂಧಿ ವಿಚಾರ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ಉಪಸ್ಥಿತರಿದ್ದರು. ಗಾಂಧಿ ವಿಚಾರ ವೇದಿಕೆ ಕೋಶಾಧಿಕಾರಿ ಕರುಣಾಕರ ಪಲ್ಲತ್ತಡ್ಕ, ಸಲಹಾ ಸಮಿತಿ ಸದಸ್ಯ ಪೂವಪ್ಪ ಕಣಿಯೂರು, ಪಂಜ ವಲಯಾಧ್ಯಕ್ಷ ಭೀಷ್ಮಕ್‌ ಜಾಕೆ, ಮೊದಲಾದವರಿದ್ದರು.

ಗಾಂಧಿ ವಿಚಾರ ವೇದಿಕೆ ಸುಳ್ಯ ಘಟಕದ ಅಧ್ಯಕ್ಷ ಲಕ್ಷ್ಮೀಶ ಗಬ್ಲಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ರಫೀಕ್‌ ಐವತ್ತೊಕ್ಲು ನಿರೂಪಿಸಿದರು. ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ವಂದಿಸಿದರು.